ಬೆಂಗಳೂರಲ್ಲಿ ಪ್ರತಿನಿತ್ಯ 4 ಸಾವಿರದಿಂದ 5 ಸಾವಿರ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರಲ್ಲಿ 1 ಸಾವಿರ ಟನ್‌ಗೂ ಹೆಚ್ಚಿನ ತ್ಯಾಜ್ಯ ನಗರದ ಹೊರಭಾಗದಲ್ಲಿನ ಸಂಸ್ಕರಣಾ ಘಟಕಗಳಲ್ಲಿ ಸಂಸ್ಕರಣೆ.
ಬೆಂಗಳೂರು(ನ.03): ರಾಜಧಾನಿ ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಅಥವಾ ಭೂ ಭರ್ತಿ ಕೇಂದ್ರ ಸ್ಥಾಪಿಸಬೇಕೆಂಬ ಬಿಬಿಎಂಪಿಗೆ ಸೂಕ್ತ ಜಮೀನು ದೊರೆಯದೇ ಪರದಾಡುವಂತಾಗಿದೆ. ನಗರದಲ್ಲಿ ಪ್ರತಿನಿತ್ಯ 4 ಸಾವಿರದಿಂದ 5 ಸಾವಿರ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರಲ್ಲಿ 1 ಸಾವಿರ ಟನ್‌ಗೂ ಹೆಚ್ಚಿನ ತ್ಯಾಜ್ಯ ನಗರದ ಹೊರಭಾಗದಲ್ಲಿನ ಸಂಸ್ಕರಣಾ ಘಟಕಗಳಲ್ಲಿ ಸಂಸ್ಕರಿಸಲಾಗುತ್ತಿದೆ. ಉಳಿದ ತ್ಯಾಜ್ಯವನ್ನು ಮಿಟ್ಟಗಾನಹಳ್ಳಿಯಲ್ಲಿನ ಭೂ ಭರ್ತಿ ಕೇಂದ್ರಕ್ಕೆ ಸಾಗಿಸಲಾಗುತ್ತಿದೆ.
ನಗರದ ಎಲ್ಲ ತ್ಯಾಜ್ಯವನ್ನು ಒಂದೇ ಕಡೆ ಇರುವ ಭೂ ಭರ್ತಿ ಕೇಂದ್ರಕ್ಕೆ ತ್ಯಾಜ್ಯ ಸಾಗಿಸುವುದರಿಂದ ಸಾರಿಗೆ ವೆಚ್ಚ ಸೇರಿದಂತೆ ಸಾಕಷ್ಟುಸಮಸ್ಯೆಗಳು ಎದುರಾಗುತ್ತಿವೆ. ಅದನ್ನು ತಪ್ಪಿಸಲು ವಲಯಕ್ಕೊಂದು ಭೂಭರ್ತಿ ಕೇಂದ್ರ ಸ್ಥಾಪಿಸುವ ಬಗ್ಗೆ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ನಿರ್ಧರಿಸಿದ್ದರು. ಅದಕ್ಕಾಗಿ ವಲಯ ಮಟ್ಟದಲ್ಲಿ ಜಾಗ ಗುರುತಿಸಲೂ ಮುಂದಾಗಿದ್ದರು. ಅದರೆ, ಸೂಕ್ತ ಜಾಗ ಸಿಗದೆ ಭೂ ಭರ್ತಿ ಕೇಂದ್ರಗಳ ಸ್ಥಾಪನೆ ಆಗುತ್ತಿಲ್ಲ.
ಹಸಿ ಕಸ ವಾಸನೆ ತಡೆಗೆ ಹೊಸ ತಂತ್ರಜ್ಞಾನ: ಸಿಎಂ ಬೊಮ್ಮಾಯಿ
ವಲಯ ಮಟ್ಟದಲ್ಲಿ ಭೂಭರ್ತಿ ಕೇಂದ್ರ ಸ್ಥಾಪನೆ ಮಾಡುವುದೆಂದರೆ ನಗರದ ಒಳಭಾಗದಲ್ಲಿಯೇ ತ್ಯಾಜ್ಯವನ್ನು ಸುರಿಯುವ ಕ್ರಮವಾಗಿದೆ. ಈ ಕ್ರಮಕ್ಕಾಗಿ ಖಾಸಗಿ ಜಾಗ ನೀಡುವುದು ಅನುಮಾನ. ಹೀಗಾಗಿಯೇ ಬಿಬಿಎಂಪಿ ವಲಯ ಮಟ್ಟದಲ್ಲಿ ವಸತಿ ಪ್ರದೇಶದಿಂದ ಕೊಂಚ ದೂರವಿರುವ, ಸರ್ಕಾರಕ್ಕೆ ಸೇರಿದ 2 ಎಕರೆ ಜಾಗಕ್ಕಾಗಿ ಹುಡುಕಲಾಗಿತ್ತು. ಆದರೆ, ಆ ರೀತಿಯ ಜಾಗ ಈವರೆಗೆ ಸಿಕ್ಕಿಲ್ಲ.
ಇನ್ನು ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ. ಸದ್ಯ ಬಿಬಿಎಂಪಿ ಅಡಿ 7 ಸಂಸ್ಕರಣಾ ಘಟಕಗಳಿದ್ದು, 6 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಪರಶುರಾಮ್ ಶಿನ್ನಾಳ್‌ಕರ್, ವಲಯಕ್ಕೊಂದು ಭೂಭರ್ತಿ ಕೇಂದ್ರ ಸ್ಥಾಪನೆಗೆ ಜಾಗದ ಕೊರತೆಯಿದೆ. ವಲಯಗಳಲ್ಲಿ ಕನಿಷ್ಠ 2 ಎಕರೆ ಸರ್ಕಾರಿ ಜಾಗ ಹುಡುಕಲಾಗಿತ್ತು. ಆದರೆ, ಸೂಕ್ತ ಜಾಗ ಸಿಗದ ಕಾರಣ ಯೋಜನೆ ಜಾರಿಗೆ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಸಮಸ್ಯೆ ಏನು?
*ನಗರದ ತ್ಯಾಜ್ಯವನ್ನು ವಲಯದಲ್ಲೇ ಸಂಸ್ಕರಿಸಲು ಯೋಜನೆ
*ಇದಕ್ಕೆ ವಸತಿ ಪ್ರದೇಶದಿಂದ ದೂರ ಇರುವ 2 ಎಕರೆ ಜಾಗ ಬೇಕು
*ಅಂತಹ ಸ್ಥಳ ಸರ್ಕಾರದ ಬಳಿ ಇಲ್ಲ, ಖಾಸಗಿಯವರು ಕೊಡಲ್ಲ