ಮೇಯರ್‌- ಉಪಮೇಯರ್‌ ಚುನಾವಣೆ : ಚುಕ್ಕಾಣಿ ಹಿಡಿಯಲು ಕಾರ‍್ಯತಂತ್ರ

By Kannadaprabha NewsFirst Published Oct 1, 2019, 7:30 AM IST
Highlights

ಕಾನೂನು ನಿಯಮಗಳಿಗೆ ಕಟ್ಟುಬಿದ್ದ ಪ್ರಾದೇಶಿಕ ಆಯುಕ್ತರು ಇಂದು ಬೆಳಗ್ಗೆ 11.30ಕ್ಕೆ ಬಿಬಿಎಂಪಿ ಮೇಯರ್‌, ಉಪಮೇಯರ್‌ ಹಾಗೂ 4 ಸ್ಥಾಯಿ ಸಮಿತಿಗಳ ಚುನಾವಣೆ ನಡೆಸುವುದಾಗಿ ಘೋಷಿಸಿದ್ದಾರೆ.

ಬೆಂಗಳೂರು (ಅ.01]:  ಬಿಬಿಎಂಪಿ ಮೇಯರ್‌-ಉಪ ಮೇಯರ್‌ ಚುನಾವಣೆ ಮುಂದೂಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ, ಕಾನೂನು ನಿಯಮಗಳಿಗೆ ಕಟ್ಟುಬಿದ್ದ ಪ್ರಾದೇಶಿಕ ಆಯುಕ್ತರು ಇಂದು ಬೆಳಗ್ಗೆ 11.30ಕ್ಕೆ ಬಿಬಿಎಂಪಿ ಮೇಯರ್‌, ಉಪಮೇಯರ್‌ ಹಾಗೂ 4 ಸ್ಥಾಯಿ ಸಮಿತಿಗಳ ಚುನಾವಣೆ ನಡೆಸುವುದಾಗಿ ಘೋಷಿಸಿದ್ದಾರೆ.

ಈ ಮೂಲಕ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌- ಉಪಮೇಯರ್‌ ಚುನಾವಣೆ ನಡೆಯಲಿದೆಯೇ ಅಥವಾ ಮತ್ತೊಮ್ಮೆ ಮುಂದೂಡಲ್ಪಡುವುದೇ ಎಂಬ ಗೊಂದಲ ಹಾಗೂ ರಾಜಕೀಯ ಹೈಡ್ರಾಮಾಗಳಿಗೆ ತೆರೆ ಬಿದ್ದಿದ್ದು, ಚುನಾವಣೆ ನಡೆಯುವುದು ಖಚಿತವಾಗಿದೆ.

ಹೀಗಾಗಿ, ಎಲ್ಲರ ಕಣ್ಣು ಚುನಾವಣೆಯ ಅನಿಶ್ಚಿತತೆಯಿಂದ ಮೇಯರ್‌ ಹಾಗೂ ಉಪ ಮೇಯರ್‌ ಹುದ್ದೆ ಯಾರ ಪಾಲಾಗಲಿದೆ ಎಂಬ ಕಡೆಗೆ ನೆಟ್ಟಿದ್ದು, ಶತಾಯಗತಾಯ ಮೇಯರ್‌ ಪಟ್ಟಉಳಿಸಿಕೊಳ್ಳಲು ಸೋಮವಾರ ಸಂಜೆ ತುರ್ತು ಸಭೆ ನಡೆಸಿದ ಕಾಂಗ್ರೆಸ್‌ ಅಳೆದು ತೂಗಿ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ಮತ್ತೊಂದೆಡೆ ಬಿಜೆಪಿ, ಜೆಡಿಎಸ್‌ ಹಾಗೂ ಪಕ್ಷೇತರರು ತಡರಾತ್ರಿವರೆಗೆ ರಾಜಕೀಯ ತಂತ್ರಗಳನ್ನು ಹೆಣೆಯುವುದರಲ್ಲಿ ನಿರತರಾಗಿದ್ದಾರೆ. ಹೀಗಾಗಿ ಬಿಬಿಎಂಪಿ ಅಧಿಕಾರದ ಚುಕ್ಕಾಣಿ ಯಾರ ಪಾಲಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಬಿಬಿಎಂಪಿಯ ಹಾಲಿ ಮೇಯರ್‌-ಉಪಮೇಯರ್‌ ಅವಧಿಯು 2019ರ ಸೆ.28ಕ್ಕೆ ಮುಗಿದಿದೆ. ಹೀಗಾಗಿ ಸೆ.27ರಂದು ಬಿಬಿಎಂಪಿ ಮೇಯರ್‌-ಉಪಮೇಯರ್‌ ಚುನಾವಣೆ ನಿಗದಿ ಮಾಡಲಾಗಿತ್ತು. ಆದರೆ, 2018ರ ಡಿಸೆಂಬರ್‌ನಲ್ಲಿ ನೇಮಕಗೊಂಡಿದ್ದ 12 ಸ್ಥಾಯಿ ಸಮಿತಿಗಳ ಅವಧಿ ಮುಗಿಯದ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿರುವ ಪ್ರಕರಣದ ನೆಪವೊಡ್ಡಿ ಬಿಬಿಎಂಪಿ ಮೇಯರ್‌- ಉಪಮೇಯರ್‌ ಚುನಾವಣೆ ಮುಂದೂಡುವಂತೆ ರಾಜ್ಯ ಸರ್ಕಾರ ಸೆ.23ರಂದು ಆದೇಶಿಸಿತ್ತು. ಇದರಂತೆ ನಗರ ಪ್ರಾದೇಶಿಕ ಆಯುಕ್ತರು ಸೆ.27ರಂದು ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಿ ಅ.1ಕ್ಕೆ ದಿನಾಂಕ ನಿಗದಿ ಮಾಡಿದ್ದರು.

ಸೆ.30ರಂದು ಮತ್ತೆ ಚುನಾವಣೆ ಮುಂದೂಡುವಂತೆ ನಗರಾಭಿವೃದ್ಧಿ ಇಲಾಖೆಯು ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿದೆ. ಸ್ಥಾಯಿ ಸಮಿತಿಗಳ ಚುನಾವಣೆ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗಿಲ್ಲ. ಹೀಗಾಗಿ ಸ್ಥಾಯಿ ಸಮಿತಿಗಳ ಚುನಾವಣೆ ನಡೆಯುವ ದಿನದವರೆಗೂ ಮೇಯರ್‌-ಉಪಮೇಯರ್‌ ಚುನಾವಣೆಯನ್ನೂ ಮುಂದೂಡುವಂತೆ ಸೂಚನೆ ನೀಡಿತ್ತು. ಆದರೆ ಬೆಂಗಳೂರು ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ, ನಿಯಮಾನುಸಾರ ಬಿಬಿಎಂಪಿ ಮೇಯರ್‌-ಉಪಮೇಯರ್‌ ಹುದ್ದೆಯ ಅವಧಿ ಮುಗಿದ ತಕ್ಷಣ ಚುನಾವಣೆ ನಡೆಸಬೇಕು. ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಮೇಯರ್‌-ಉಪಮೇಯರ್‌ ಹಾಗೂ ಗೊಂದಲವಿಲ್ಲದ 4 ಸ್ಥಾಯಿ ಸಮಿತಿಗಳ ಚುನಾವಣೆ ಅ.1ರಂದೇ ಮಾಡಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆಗೆ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಗೊಂದಲಗಳಿಗೆ ತೆರೆ ಬಿದ್ದಿದೆ.

ಬಾಕ್ಸ್‌...ಬಿಬಿಎಂಪಿ ಅಧಿಕಾರ ಚುಕ್ಕಾಣಿ ಯಾರಿಗೆ?

ಕಳೆದ ವರ್ಷದ ಮೇಯರ್‌- ಉಪಮೇಯರ್‌ ಚುನಾವಣೆಯಿಂದ ಈವರೆಗೆ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟುಬದಲಾವಣೆ ಉಂಟಾಗಿದೆ. ದೋಸ್ತಿ ಸರ್ಕಾರ ಪತನಗೊಂಡು ಮಿತ್ರಪಕ್ಷಗಳಾಗಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬದ್ಧ ವೈರಿಗಳಾಗಿ ಬದಲಾಗಿವೆ. ಕಾಂಗ್ರೆಸ್‌- ಜೆಡಿಎಸ್‌ನ 5 ಮಂದಿ ಶಾಸಕರು ಅನರ್ಹತೆ ಶಿಕ್ಷೆಗೆ ಗುರಿಯಾಗಿದ್ದಾರೆ. ಹೀಗಾಗಿ ಬಿಬಿಎಂಪಿಯಲ್ಲಿ ಮೈತ್ರಿ ಮುಂದುವರಿಸಿರುವ ಕಾಂಗ್ರೆಸ್‌-ಜೆಡಿಎಸ್‌ ಸಂಖ್ಯಾಬಲ ಕುಸಿದಿದೆ.

ಕಳೆದ ಬಾರಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಗೆ ಬೆಂಬಲ ಸೂಚಿಸಿದ್ದ ಏಳು ಮಂದಿ ಪಕ್ಷೇತರ ಸದಸ್ಯರು ರಾಜ್ಯಮಟ್ಟದಲ್ಲಿ ಸರ್ಕಾರ ಬದಲಾಗಿದ್ದರಿಂದ ಬಿಬಿಎಂಪಿಯ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಿಂದ ಹೊರ ಬಂದು ಬಿಜೆಪಿ ನಾಯಕರೊಂದಿಗೂ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಐದು ಮಂದಿ ಅನರ್ಹ ಶಾಸಕರ ಬೆಂಬಲಿಗ ಸದಸ್ಯರ ಅಂತಿಮ ನಡೆಯೂ ಮಂಗಳವಾರ ನಡೆಯಲಿರುವ ಮೇಯರ್‌ ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆಯೇ ಅಥವಾ ಕಾಂಗ್ರೆಸ್‌- ಜೆಡಿಎಸ್‌ ಅಭ್ಯರ್ಥಿಗೆ ಪಟ್ಟಒಲಿಯಲಿದೆಯೇ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

12 ಸಮಿತಿಗಳಲ್ಲಿ ಕೇವಲ 4ಕ್ಕೆ ಮಾತ್ರ ಚುನಾವಣೆ

12 ಸ್ಥಾಯಿ ಸಮಿತಿಗಳ ಪೈಕಿ 8 ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹೈಕೋರ್ಟ್‌ ಮೊರೆ ಹೋದ ಹಿನ್ನೆಲೆಯಲ್ಲಿ ಕೋರ್ಟ್‌ 8 ಸ್ಥಾಯಿ ಸಮಿತಿಗೆ ಚುನಾವಣೆ ನಡೆಸುವುದಕ್ಕೆ ತಡೆ ನೀಡಿದೆ. ಹಾಗಾಗಿ, ಅ.1ರಂದು ನಾಲ್ಕು ಸ್ಥಾಯಿ ಸಮಿತಿಗೆ ಮಾತ್ರ ಚುನಾವಣೆ ನಡೆಯಲಿದೆ.

ಬೆಳಗ್ಗೆ 8ರಿಂದ 9.30ರವರೆಗೆ ಮೇಯರ್‌, ಉಪಮೇಯರ್‌ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಮಾರುಕಟ್ಟೆಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿ ಹಾಗೂ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ನಡೆಯಲಿದೆ. 9.30ರಿಂದ 11.30ರ ವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

11.30ಕ್ಕೆ ಬಿಬಿಎಂಪಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಪ್ರಾದೇಶಿಕ ಚುನಾವಣಾ ಆಯುಕ್ತರ ಅಧ್ಯಕ್ಷತೆಯಲ್ಲಿ ಮೇಯರ್‌, ಉಪಮೇಯರ್‌ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಮೊದಲು ಸಭಾಂಗಣದಲ್ಲಿ ಹಾಜರಿರುವ ಸದಸ್ಯರ ಹಾಜರಾತಿ ಪಡೆಯಲಾಗುತ್ತದೆ. ಬಳಿಕ ಮೇಯರ್‌ ಸ್ಥಾನದ ಚುನಾವಣೆ ಪ್ರಾರಂಭವಾಗಲಿದ್ದು, ಮೇಯರ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದವರಿಗೆ ನಾಮಪತ್ರ ವಾಪಾಸ್‌ ಪಡೆಯುವುದಕ್ಕೆ 2 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಈ ವೇಳೆ ಒಂದಕ್ಕಿಂತ ಹೆಚ್ಚು ನಾಮಪತ್ರಗಳಿದ್ದಲ್ಲಿ ಮಾತ್ರ ಚುನಾವಣೆ ನಡೆಸಲಾಗುತ್ತದೆ. ಅದೇ ರೀತಿ ಉಪಮೇಯರ್‌ ಚುನಾವಣೆ ನಡೆಯಲಿದೆ. ಬಳಿಕ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಲಿದೆ.

11ಕ್ಕಿಂತ ಹೆಚ್ಚು ನಾಮಪತ್ರವಿದ್ದರೆ ಮಾತ್ರ ಸಮಿತಿಗೆ ಚುನಾವಣೆ:

ಮಂಗಳವಾರ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಪ್ರತಿ ಸ್ಥಾಯಿ ಸಮಿತಿಗೆ 11 ಜನ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. 11ಕ್ಕಿಂತ ಹೆಚ್ಚು ನಾಮಪತ್ರ ಬಂದಲ್ಲಿ ಮಾತ್ರ ಚುನಾವಣೆ ನಡೆಸಲಾಗುತ್ತದೆ. ಇಲ್ಲವಾದರೆ ಅವಿರೋಧ ಆಯ್ಕೆ ಎಂದು ಘೋಷಿಸಲಾಗುತ್ತದೆ.

ಹರ್ಷಗುಪ್ತರಿಂದ ಕೌನ್ಸಿಲ್‌ ಸಭಾಂಗಣ ಪರಿಶೀಲನೆ

ಮಂಗಳವಾರ ಬೆಳಗ್ಗೆ 11.30ಕ್ಕೆ ಮೇಯರ್‌, ಉಪಮೇಯರ್‌ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪ್ರಾದೇಶಿಕ ಆಯುಕ್ತರಾದ ಹರ್ಷಗುಪ್ತಾ ಅವರು ಕೌನ್ಸಿಲ್‌ ಸಭಾಂಗಣ ಪರಿಶೀಲನೆ ನಡೆಸಿದರು. ಇದೇ ವೇಳೆ 12 ಸ್ಥಾಯಿ ಸಮಿತಿಗಳ ಪೈಕಿ 8 ಸ್ಥಾಯಿ ಸಮಿತಿ ಚುನಾವಣೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಉಳಿದ ನಾಲ್ಕು ಸ್ಥಾಯಿ ಸಮಿತಿಗೆ ಮಂಗಳವಾರ ಚುನಾವಣೆ ನಡೆಯಲಿದೆ ಎಂದು ಸ್ಪಷ್ಟಣೆ ನೀಡಿದರು.

ಚುನಾವಣೆ ಪ್ರಕ್ರಿಯೆ

ನಾಮಪತ್ರ ಸಲ್ಲಿಕೆ- ಬೆಳಗ್ಗೆ 8 ರಿಂದ 9.30

ನಾಮಪತ್ರ ಪರಿಶೀಲನೆ- 9.30 ರಿಂದ 11.30

ಚುನಾವಣೆ ಪ್ರಕ್ರಿಯೆ ಆರಂಭ- 11.30 ಗಂಟೆ


ಮತದಾರರ ಲೆಕ್ಕಾಚಾರ:

ಒಟ್ಟು ಮತದಾರರು: 257

ಮ್ಯಾಜಿಕ್‌ ಸಂಖ್ಯೆ: 129

ದೋಸ್ತಿ ಪಕ್ಷಗಳ ಒಟ್ಟು ಸಂಖ್ಯಾಬಲ: 125

ಕಾಂಗ್ರೆಸ್‌-104

ಜೆಡಿಎಸ್‌-21

ಮೇಯರ್‌- ಉಪಮೇಯರ್‌ ಸಂಭಾವ್ಯ ಅಭ್ಯರ್ಥಿಗಳು

ಕಾಂಗ್ರೆಸ್‌ ಸಂಭಾವ್ಯ ಮೇಯರ್‌ ಅಭ್ಯರ್ಥಿ: ದತ್ತಾತ್ರೇಯ ದೇವಸ್ಥಾನ ವಾರ್ಡ್‌ನ ಸದಸ್ಯ ಆರ್‌.ಎಸ್‌. ಸತ್ಯನಾರಾಯಣ.

ಜೆಡಿಎಸ್‌ ಉಪಮೇಯರ್‌ ಅಭ್ಯರ್ಥಿ-ಪಾದರಾಯಪುರ ವಾರ್ಡ್‌ನ ಜೆಡಿಎಸ್‌ ಸದಸ್ಯ ಇಮ್ರಾನ್‌ ಪಾಷಾ / ಶಕ್ತಿಗಣಪತಿ ನಗರ ವಾರ್ಡ್‌ನ ಗಂಗಮ್ಮ.

ಬಿಜೆಪಿಯಿಂದ ಸಂಭಾವ್ಯ ಮೇಯರ್‌ ಅಭ್ಯರ್ಥಿ

ಕಾಡು ಮಲ್ಲೇಶ್ವರ ವಾರ್ಡ್‌ ಜಿ.ಮಂಜುನಾಥರಾಜು, ಕುಮಾರಸ್ವಾಮಿ ಬಡಾವಣೆ ಎಲ್‌.ಶ್ರೀನಿವಾಸ್‌, ಜಕ್ಕೂರು ವಾರ್ಡ್‌ ಕೆ.ಎ.ಮುನೀಂದ್ರಕುಮಾರ್‌, ಕಾಚರಕನಹಳ್ಳಿ ವಾರ್ಡ್‌ ಪದ್ಮನಾಭರೆಡ್ಡಿ.

ಜೆಡಿಎಸ್‌ನ ಮೂರು ಮತ ಬಿಜೆಪಿಗೆ?

ಬಿಬಿಎಂಪಿಯ 14 ಮಂದಿ ಜೆಡಿಎಸ್‌ ಸದಸ್ಯರ ಪೈಕಿ ಲಗ್ಗೆರೆ ಮಂಜುಳಾ ನಾರಾಯಣಸ್ವಾಮಿ, ಬಿಟಿಎಂ ಬಡಾವಣೆ ವಾರ್ಡ್‌ನ ಕೆ.ದೇವದಾಸ್‌ ಬಿಜೆಪಿ ಜತೆ ಸಖ್ಯ ಬೆಳೆಸಿಕೊಂಡಿದ್ದಾರೆ. ಇನ್ನು ಅನರ್ಹ ಶಾಸಕ ಕೆ.ಗೋಪಾಲಯ್ಯ ಪತ್ನಿ ಹೇಮಲತಾ ಗೋಪಾಲಯ್ಯ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಆದರೆ, ಜೆಡಿಎಸ್‌ ಪಕ್ಷವು ತನ್ನೆಲ್ಲಾ ಸದಸ್ಯರಿಗೆ ವಿಪ್‌ ಜಾರಿ ಮಾಡಿದೆ.

ಅನರ್ಹ ಶಾಸಕರ ಬೆಂಬಲಿಗರ ನಡೆ ನಿಗೂಢ

ಬಿಬಿಎಂಪಿಯ ವ್ಯಾಪ್ತಿಯ 28 ಶಾಸಕರ ಪೈಕಿ ಕಾಂಗ್ರೆಸ್‌ನ ನಾಲ್ವರು ಮತ್ತು ಜೆಡಿಎಸ್‌ ಓರ್ವ ಶಾಸಕರನ್ನು ಸ್ಪೀಕರ್‌ ಅನರ್ಹಗೊಳಿಸಿದ್ದಾರೆ. ಹೀಗಾಗಿ, ದೋಸ್ತಿ ಪಕ್ಷಗಳ ಸಂಖ್ಯೆಬಲ 130 ರಿಂದ 125ಕ್ಕೆ ಇಳಿದಿದೆ. ಜತೆಗೆ ಈ ಐವರು ಶಾಸಕರ ಬೆಂಬಲಿತ ಪಾಲಿಕೆ ಸದಸ್ಯರು ಮಂಗಳವಾರ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರ ಮತ ಹಾಕುತ್ತಾರೋ ಅಥವಾ ಪಕ್ಷದ ಅಭ್ಯರ್ಥಿ ಪರವಾಗಿ ನಿಲ್ಲುತ್ತಾರೋ ಎಂಬುದು ನಿಗೂಢವಾಗಿ ಉಳಿದಿದೆ.

ಪಕ್ಷ ಶಾಸಕರು ಸಂಸದರು ವಿಧಾನಪರಿಷತ್‌ ಸದಸ್ಯರು ರಾಜ್ಯಸಭಾ ಸದಸ್ಯರು ಪಾಲಿಕೆ ಸದಸ್ಯರು ಪಕ್ಷೇತರರು ಒಟ್ಟು

ಬಿಜೆಪಿ 11 04 07 02 101 125

ಕಾಂಗ್ರೆಸ್‌ 11 01 10 06 76 104

ಜೆಡಿಎಸ್‌ 01 - 05 01 14 21

ಪಕ್ಷೇತರರು - - - - 07

click me!