
ಬೆಂಗಳೂರು(ಸೆ.03): ಮುಂಬರುವ ಬಿಬಿಎಂಪಿಯ ಸಾರ್ವತ್ರಿಕ ಚುನಾವಣೆ ವೇಳೆ ಮತದಾನದ ಪ್ರಮಾಣ ಹೆಚ್ಚಿಸಲು ‘ಇ-ವೋಟಿಂಗ್’ ವ್ಯವಸ್ಥೆ ಜಾರಿಗೊಳಿಸುವ ಕುರಿತು ರಾಜ್ಯ ಚುನಾವಣಾ ಆಯೋಗ ಚಿಂತನೆ ನಡೆಸಿದೆ. ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಅಗತ್ಯ ಸಿದ್ಧತೆ ಆರಂಭಿಸಿದ್ದು, ಈಗಾಗಲೆ ಕರಡು ಮತದಾರರ ಪಟ್ಟಿಪ್ರಕಟಿಸಲಾಗಿದೆ. ಸೆ.22ರಂದು ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಶೇ.50ಕ್ಕಿಂತ ಕಡಿಮೆ ಮತದಾನ ನಡೆದ ಹಿನ್ನೆಲೆಯಲ್ಲಿ ಇ ವೋಟಿಂಗ್ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ.
ಈ ಕುರಿತು ರಾಜ್ಯ ಚುನಾವಣಾ ಆಯೋಗವು ಇ-ವೋಟಿಂಗ್ ವ್ಯವಸ್ಥೆಗೆ ಬೇಕಾದ ತಯಾರಿ ಹೇಗೆ, ನಿಗಾ ವಹಿಸುವುದು ಬಗೆ, ಅದರಿಂದ ಮತದಾನದ ಪ್ರಮಾಣ ಹೆಚ್ಚಳವಾಗಲಿದೆಯೇ ಎಂಬುದರ ಬಗ್ಗೆ ಬಿಬಿಎಂಪಿ, ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.
ಬಿಬಿಎಂಪಿಯ ಚುನಾವಣೆಗಾಗಿ ಕಾಂಗ್ರೆಸ್‌ನ ವಿಷನ್ ಡಾಕ್ಯೂಮೆಂಟ್ ರಚನೆಗೆ ನಿರ್ಧಾರ
ಯಾವುದೇ ಅಡೆತಡೆ ಎದುರಾಗದಿದ್ದರೆ ಇನ್ನೆರಡು ತಿಂಗಳಲ್ಲಿ ಬಿಬಿಎಂಪಿ ಚುನಾವಣೆಯ ಮತದಾನ ನಡೆಯಲಿದೆ. ಅಷ್ಟರೊಳಗೆ ಎಲ್ಲ ಸಿದ್ಧತೆ ಮಾಡಿಕೊಂಡು ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಿದೆಯೇ ಎಂಬುದರ ಬಗ್ಗೆಯೂ ಮಾತುಕತೆ ಮಾಡಲಾಗಿದೆ. ಒಂದು ವೇಳೆ ಬಿಬಿಎಂಪಿ ಚುನಾವಣೆಯಲ್ಲಿ ಜಾರಿಗೊಳಿಸಿ ಯಶಸ್ವಿಯಾದರೆ ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲೂ ಈ ವ್ಯವಸ್ಥೆ ಜಾರಿಗೊಳಿಸಬಹುದೇ ಎಂದೂ ಚಿಂತನೆ ನಡೆಸಲಾಗಿದೆ.
ಗುಜರಾತ್‌ನಲ್ಲಿ ನಡೆದಿತ್ತು ಇ-ವೋಟಿಂಗ್
2010ರಲ್ಲಿ ಗುಜರಾತ್‌ನ ಗಾಂಧಿನಗರ, ಜಾಮ್‌ನಗರ, ಬಾವ್‌ನಗರ, ರಾಜಕೋಟ, ಸೂರತ್ ಸೇರಿ ಇನ್ನಿತರ ಕಡೆಗಳಲ್ಲಿನ ಸ್ಥಳೀಯ ಆಡಳಿತದ ಚುನಾವಣೆಗೆ ಇ-ವೋಟಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಆದರೆ, ಅದು ಅಷ್ಟಾಗಿ ಯಶಸ್ವಿಯಾಗಿರಲಿಲ್ಲ. ಅದನ್ನು ಇದೀಗ ಬಿಬಿಎಂಪಿ ಚುನಾವಣೆಯಲ್ಲಿ ಜಾರಿಗೆ ತರಲು ಚಿಂತಿಸಲಾಗಿದೆ.
ಇ-ವೋಟಿಂಗ್ ಹೇಗೆ?
ಮತಗಟ್ಟೆಗೆ ತೆರಳಿ ಮತದಾನ ಮಾಡಲು ಸಾಧ್ಯವಾದವರು ರಾಜ್ಯ ಚುನವಣಾ ಆಯೋಗ ನೀಡುವ ವೆಬ್‌ಸೈಟ್‌ನಲ್ಲಿ ಅಥವಾ ಎಆರ್‌ಒ ಸೇರಿ ಇನ್ನಿತರ ಸಂಬಂಧಪಟ್ಟಅಧಿಕಾರಿಗಳಲ್ಲಿ ಮತದಾರರ ಗುರುತಿನ ಚೀಟಿ ಸೇರಿ ಇನ್ನಿತರ ದಾಖಲೆ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕಿದೆ.
ಬಳಿಕ ಚುನಾವಣಾ ಅಯೊಗ ವಿಶೇಷ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ನೀಡುತ್ತದೆ. ಮತದಾನಕ್ಕಾಗಿ ಅಭಿವೃದ್ಧಿಪಡಿಸಲಾದ ವೆಬ್‌ಸೈಟ್‌ನಲ್ಲಿ ಮತದಾನದ ದಿನ ಲಾಗಿನ್ ಆಗಿ, ಮತದಾನಕ್ಕೆ ಕೋರಿಕೆ ಸಲ್ಲಿಸಬೇಕು. ಅದನ್ನಾಧರಿಸಿ ನೊಂದಾಯಿತ ಮತದಾರರ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಕೋಡ್ ಬರಲಿದೆ. ಕೋಡ್ ನಮೂದಿಸಿದರೆ ಇ-ಬ್ಯಾಲೆಟ್ ಪೇಪರ್ ತೆರೆಯಲಿದೆ. ಅದರಲ್ಲಿ ತಾವು ಮತಚಲಾಯಿಸುವ ಅಭ್ಯರ್ಥಿ ಹೆಸರಿನ ಮೇಲೆ ಕ್ಲಿಕ್ ಮಾಡಿ ಮತವನ್ನು ಚಲಾಯಿಸಬಹುದು.
ಕಳೆದ ಬಿಬಿಎಂಪಿ ಚುನಾವಣೆ ಮತದಾನ ವಿವರ
ವರ್ಷ ಮತದಾನ ಪ್ರಮಾಣ
2010 ಶೇ.44.04
2015 ಶೇ.49.36
ಮೀಸಲು ರದ್ದು ಅರ್ಜಿ ವಿಚಾರಣೆ ಸೆ.12ಕ್ಕೆ ಮುಂದೂಡಿಕೆ
ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸೆ.12ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಚ್ ಸೂಚಿಸಿದೆ.
ಮೀಸಲು ಅಧಿಸೂಚನೆ ರದ್ದು ಕೋರಿ ಈಜಿಪುರ ನಿವಾಸಿ ಕೆ.ಮಹದೇವ ಸಲ್ಲಿಸಿರುವ ಅರ್ಜಿ, ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಬಿಬಿಎಂಪಿ ವ್ಯಾಪ್ತಿಯಲ್ಲಿ 79 ಲಕ್ಷ ಜನರಿಗೆ ಮತದಾನ ಹಕ್ಕು
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ನಿಗದಿಯಲ್ಲಿ ನಿಯಮ ಪಾಲನೆಯಾಗಿಲ್ಲ. ಯಾವ ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯವಿಲ್ಲವೋ ಅಂತಹ ಜಾತಿಗಳಿಗೆ ಮೀಸಲಾತಿ ಕಲ್ಪಿಸಬೇಕಾಗುತ್ತದೆ. ಆದರೆ, ಈವರೆಗೂ ಯಾವ ಯಾವ ಜಾತಿಗಳಿಗೆ ಪ್ರಾತಿನಿಧ್ಯ ಕಲ್ಪಿಸಲಾಗಿದೆ ಎಂಬ ಪಟ್ಟಿಒದಗಿಸಿಲ್ಲ ಎಂದು ತಿಳಿಸಿದರು.
ಅಲ್ಲದೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ಭಕ್ತವತ್ಸಲ ಸಮಿತಿ ನೀಡಿರುವ ವರದಿ ಆಧರಿಸಿ ಮೀಸಲಾತಿ ಕಲ್ಪಿಸಲಾಗಿದೆ ಎಂಬುದಾಗಿ ಸರ್ಕಾರ ಹೇಳಿದೆ. ಆದರೆ, ಕೃಷ್ಣಮೂರ್ತಿ ಹಾಗೂ ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಚ್ ಹೇಳಿರುವ ಮೂರು ಹಂತದ ಪರಿಶೀಲನೆ (ಟ್ರಿಪಲ್ ಟೆಸ್ಟ್) ಅನ್ನು ಭಕ್ತವತ್ಸಲ ಸಮಿತಿಯೇ ಅನ್ವಯಿಸಿಕೊಂಡಿಲ್ಲ. ಸರ್ಕಾರ ಸಹ ಮೀಸಲಾತಿ ಕಲ್ಪಿಸುವಾಗ ಟ್ರಿಪಲ್ ಟೆಸ್ಟ್ ಅನ್ನು ಪರಿಗಣಿಸಿಲ್ಲ. ಆದ್ದರಿಂದ, ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿದರು. ಈ ವಾದ ಆಲಿಸಿದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಸೂಚಿಸಿ ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿತು.