ಬೆಳಗಾವಿಯಲ್ಲಿ ಶಾಂತಿಯುತ ಗಣೇಶೋತ್ಸವ: 'ಮೈ ಹೂಂ ಡಾನ್' ಎಂದು ಹೆಜ್ಜೆ ಹಾಕಿದ ಎಸಿಪಿ ಭರಮಣಿ..!

By Girish Goudar  |  First Published Sep 10, 2022, 10:45 PM IST

ಬೆಳಗಾವಿಯಲ್ಲಿ ಶಾಂತಿಯುತವಾಗಿ ಜರುಗಿದ ಗಣೇಶೋತ್ಸವಕ್ಕೆ ಅದ್ಧೂರಿ ತೆರೆ, 24 ಗಂಟೆಗಳ ಕಾಲ 370ಕ್ಕೂ ಹೆಚ್ಚು ಸಾರ್ವಜನಿಕ ಗಣಪನ ವಿಸರ್ಜನೆ 


ವರದಿ: ಮಹಾಂತೇಶ ಕುರಬೇಟ, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ(ಸೆ.10):  ಐತಿಹಾಸಿಕ ಬೆಳಗಾವಿ ಗಣೇಶೋತ್ಸವ ಎರಡು ವರ್ಷಗಳ ಬಳಿಕ ಅದ್ಧೂರಿಯಾಗಿ ನೆರವೇರಿದೆ. ಅದರಲ್ಲೂ ಕೊನೆಯ ದಿನವಾದ ನಿನ್ನೆ(ಶುಕ್ರವಾರ) ಸಂಜೆ ನಾಲ್ಕು ಗಂಟೆಗೆ ಆರಂಭವಾಗಿದ್ದ ಗಣಪತಿ ವಿಸರ್ಜನೆ ಮೆರವಣಿಗೆ ಇಂದು(ಶನಿವಾರ) ಸಂಜೆ ಮುಕ್ತಾಯವಾಯಿತು. ಬೆಳಗಾವಿ ನಗರವೊಂದರಲ್ಲೇ 370ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಯಾಗಿದ್ದು 11 ದಿನಗಳ ಕಾಲ ಪೊಲೀಸರು ನೀಡಿದ ಭದ್ರತೆ ನಿಜಕ್ಕೂ ಮೆಚ್ಚುವಂತದ್ದು. ಸಾಕಷ್ಟು ಬಂದೋಬಸ್ತ್ ನಡುವೆ ಡಿಜೆ ಸಾಂಗ್‌ಗೆ ಯುವಕರು ಹೆಜ್ಜೆ ಹಾಕುತ್ತಾ ವಿವಿಧ ಕಲಾ ತಂಡಗಳು, ಸಾಂಪ್ರದಾಯಿಕ ನೃತ್ಯದ ನಡುವೆ ವಿಘ್ನೇಶ್ವರನಿಗೆ ಬಿಳ್ಕೋಟ್ಟರು.

Latest Videos

undefined

ಬೆಳಗಾವಿಯಲ್ಲಿ ವರ್ಷಕ್ಕೆ ಮೂರು ಅತ್ಯದ್ಭುತ ಐತಿಹಾಸಿಕ ಉತ್ಸವಗಳು ನಡೆಯುತ್ತೆ‌. ಒಂದು ನವೆಂಬರ್ ಒಂದು ಕರ್ನಾಟಕ ರಾಜ್ಯೋತ್ಸವ ಮತ್ತೊಂದು ಶಿವಜಯಂತಿ ಮೆರವಣಿಗೆ ಅದು ಬಿಟ್ರೆ ಐತಿಹಾಸಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ. ಬೆಳಗಾವಿಯಲ್ಲಿ ನಡೆಯುವ ಗಣೇಶ ವಿಸರ್ಜನೆ ಮೆರವಣಿಗೆ ನೋಡಲು ಎರಡು ಕಣ್ಣು ಸಾಲದು. ಬೆಳಗಾವಿ ಅಷ್ಟೇ ಅಲ್ಲ ನೆರೆಯ ಮಹಾರಾಷ್ಟ್ರ ಗೋವಾ ಗಡಿಯಿಂದಲೂ ಸಹ ಜನ ಬರುತ್ತಾರೆ. ಬೆಳಗಾವಿ ಗಣೇಶೋತ್ಸವ ಬಂದ್ರೇ ಸಾಕು ಒಂದು ತಿಂಗಳ ಹಿಂದಿನಿಂದಲೂ ಭರ್ಜರಿ ತಯಾರಿ ಮಾಡಿ ಹನ್ನೊಂದು ದಿನಗಳ ಕಾಲ ಗಣಪತಿಯನ್ನ ಪ್ರತಿಷ್ಠಾಪನೆ ಮಾಡಿ ನಂತರ ಅದ್ದೂರಿಯಾಗಿ ಗಣಪತಿ ಬಪ್ಪಾ ಮೋರಯಾ ಮುಂದಿನ ವರ್ಷ ಬೇಗ ಬಾ ಎಂದು ಕುಣಿಯುತ್ತ ಗಣಪತಿ ವಿಸರ್ಜನೆ ಮಾಡಲಾಗುತ್ತೆ. ಅನಂತ ಚತುರ್ದಶಿ ದಿನದಂದು ಗಣಪತಿ ವಿಸರ್ಜನೆ ಮೆರವಣಿಗೆ ಅದ್ದೂರಿಯಾಗಿ ನಡೆಯುತ್ತೆ. ನಿನ್ನೆ ಸಂಜೆ ನಾಲ್ಕು ಗಂಟೆಗೆ ನಗರದ ಹುತಾತ್ಮ ಚೌಕ್ ಬಳಿ ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಮಹಾಂತೇಶ ಕವಟಗಿಮಠ ಹಾಗೂ ಅಧಿಕಾರಿಗಳು ಗಣಪತಿ ವಿಸರ್ಜನೆ ಮೆರವಣಿಗೆಗೆ ಚಾಲನೆಯನ್ನ ನೀಡಿದ್ದರು. ಗಣಪತಿಗಳನ್ನ ವಿಶೇಷವಾಗಿ ಅಲಂಕರಿಸಿ ವಾಹನದಲ್ಲಿ ಮೆರವಣಿಗೆ ಮೂಲಕ ಕಲರ್ ಕಲರ್ ಲೈಟಿಂಗ್ ಜತೆಗೆ ಲೇಸರ್ ಕೂಡ ಬಳಿಸಿ ನೋಡುಗರ ಕಣ್ಣು ಸೆಳೆಯುವಂತೆ ಗಣಪತಿಯನ್ನ ಸಿಂಗರಿಸಿಕೊಂಡು ತರಲಾಗಿತ್ತು. ಅದ್ದೂರಿ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು. ಇತ್ತ ರಾತ್ರಿಯಿಡೀ ನಿದ್ದೆಯಿಲ್ಲದೇ ಯುವಕರು ಕುಣಿದು ಕುಪ್ಪಳಿಸಿದ್ರೇ ಇತ್ತ ಇಂದು ಸಂಜೆ ವರೆಗೂ ಕುಟುಂಬ ಸಮೇತ ಮಹಿಳೆಯರು ಮಕ್ಕಳು ಗಣಪತಿ ಮೆರವಣಿಗೆ ವೀಕ್ಷಣೆ ಮಾಡಿ ಗಣಪನಿಗೆ ಅದ್ಧೂರಿಯಾಗಿ ಬಿಳ್ಕೊಟ್ಟರು‌. ಬೆಳಗಾವಿ ನಗರದಲ್ಲಿ ಪ್ರತಿಷ್ಠಾಪನೆ ಮಾಡಿದ್ದ 370ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ  ಸುಮಾರು 20 ಸಾವಿರಕ್ಕೂ ಹೆಚ್ಚು ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಕಪಿಲೇಶ್ವರ ಹೊಂಡದಲ್ಲಿ ಕ್ರೇನ್ ಮೂಲಕ ವಿಸರ್ಜನೆ ಮಾಡಲಾಯಿತು. 

Belagavi Rain: ಮನೆಯಲ್ಲಿ ಸಿಲುಕಿದ್ದ 12 ದಿನದ ಹಸುಗೂಸು, ಬಾಣಂತಿ ರಕ್ಷಿಸಿದ ಯುವಕರು!

ಸತತ 33 ಗಂಟೆ ಅಲರ್ಟ್ ಆಗಿ ಭದ್ರತೆ ಒದಗಿಸಿದ ಬೆಳಗಾವಿ ಪೊಲೀಸರು

ಇನ್ನು ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಪೊಲೀಸರು ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು‌. ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ನೇತೃತ್ವದ ತಂಡ ನಗರದ ಕಪಿಲೇಶ್ವರ ಹೊಂಡದಲ್ಲಿ ಗಣಪತಿ ಮೂರ್ತಿಗಳ ವಿಸರ್ಜನೆಗೆ ಸಕಲ ವ್ಯವಸ್ಥೆ ಮಾಡಿದ್ದರು. ಇನ್ನು ಮೆರವಣಿಗೆಗೆ ಬಂದೋಬಸ್ತ್ ಗೆ ಅಂತಾ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ 7 ಜನ ಎಸ್ ಪಿ, 28 ಜನ ಡಿವೈಎಸ್ ಪಿ, 68 ಪಿಐ, 104 ಪಿಎಸ್ ಐ, 164 ಎಎಸ್ ಐ, 3000 ಸಾವಿರ ಪೊಲೀಸ್ ಪೇದೆಗಳು, 10 ಕೆಎಸ್ ಆರ್ ಪಿ, 7 ಸಿಎಆರ್ ಒಂದು ರ‌್ಯಾಪಿಡ್ ಆ್ಯಕ್ಸನ್ ಪೋರ್ಸ್ ನಿಯೋಜನೆ ಮಾಡಲಾಗಿತ್ತು. ಇದರ ಜತೆಗೆ ಇಡೀ ನಗರದಾದ್ಯಂತ 20 ಡ್ರೋಣ್ ಹಾಗೂ ಪ್ರಮುಖ ಸ್ಥಳಗಳಲ್ಲಿ 700 ಸಿಸಿ ಕ್ಯಾಮರಾಗಳ ಅಳವಡಿಸಿ ತೀವ್ರ ನಿಗಾ ಇಡಲಾಗಿತ್ತು. ಒಂದು ವಾಟರ್ ಜೆಟ್ ವಾಹನ, ವಜ್ರ ವಾಹನ, 100 ಸ್ಕೈ ಸೆಂಟ್ರಿಗಳು, 15 ವಾಚ್ ಟವರ್, 5 ಕ್ಯೂ ಆರ್‌ಟಿ ಟೀಮ್ ನಿಯೋಜನೆ ಮಾಡಲಾಗಿತ್ತು. ರಾತ್ರಿಯಿಡೀ ನಡೆದ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ರಾತ್ರಿ ಎರಡು ಗಂಟೆ ಸುಮಾರಿಗೆ ಮಳೆ ಬಂದರೂ ಯುವಕರು ಮಳೆಯ ಮಧ್ಯೆಯೇ ಭರ್ಜರಿ ಸ್ಟೆಪ್ಸ್ ಹಾಕುತ್ತಾ ವಿನಾಯಕನಿಗೆ ವಿದಾಯ ಹೇಳಿದರು.

ಕೊನೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು, ಪೊಲೀಸರಿಂದ ಭರ್ಜರಿ ಸ್ಟೆಪ್ಸ್

ಇನ್ನು ಸತತ 24 ಗಂಟೆಗೂ ಹೆಚ್ಚು ಕಾಲ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕೊನೆಯ ಗಣಪ ಇದ್ದಿದ್ದು ಬೆಳಗಾವಿ ಮಹಾನಗರ ಪಾಲಿಕೆಯ ಕಚೇರಿ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗಣಪ. ಇಂದು ಸಂಜೆ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಅಂತಿಮ ಪೂಜೆ ನೆರವೇರಿಸಿದರು. ಇದಕ್ಕೂ ಮುನ್ನ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ, ಮಾರ್ಕೆಟ್ ಎಸಿಪಿ ನಾರಾಯಣ ಭರಮನಿ, ಮಹಾನಗರ ಪಾಲಿಕೆ ಉಪ ಆಯುಕ್ತೆ ಭಾಗ್ಯಶ್ರೀ ಹುಗ್ಗಿ, ಲಕ್ಷ್ಮೀ ನಿಪ್ಪಾಣಿಕರ್ ಸೇರಿದಂತೆ  ಇನ್ನಿತರ ಅಧಿಕಾರಿಗಳು ಕುಣಿದು ಸಂಭ್ರಮಿಸಿದರು. ಅದರಲ್ಲೂ ಬಾಲಿವುಡ್ ಶೆಹನ್‌ಷಾ ಅಮಿತಾಬ್ ಬಚ್ಚನ್ ಅಭಿನಯದ ಡಾನ್ ಚಿತ್ರದ 'ಮೈ ಹೂ ಡಾನ್' ಗೀತೆಗೆ ಎಸಿಪಿ ನಾರಾಯಣ ಭರಮಣಿ, ಸಿಪಿಐ ದಯಾನಂದ ಶೇಗುಣಸಿ, ಪಿಎಸ್ಐಗಳಾದ ವಿಠ್ಠಲ್ ಹಾವನ್ನವರ್, ಹೊನ್ನಪ್ಪ ತಳವಾರ್ ಸಖತ್ ಸ್ಟೆಪ್ ಹಾಕಿದ್ರು‌. ಈ ವೇಳೆ ನೆರೆದ ಸಾರ್ವಜನಿಕರು ಬೆಳಗಾವಿ‌ ಪೊಲೀಸರು ಯಾವ ಡಾನ್‌ಗೂ ಕಮ್ಮಿ ಇಲ್ಲ ಅಂತಾ ಸೆಲ್ಯೂಟ್ ಹೊಡೆದರು.
ಒಟ್ಟಾರೆ ಬೆಳಗಾವಿಯಲ್ಲಿ ಐತಿಹಾಸಿಕ ಅದ್ದೂರಿ ಗಣೇಶೋತ್ಸವ ಶಾಂತಿಯುತವಾಗಿ ನಡೆಯಲು ಶ್ರಮಿಸಿದ ಪೊಲೀಸರು, ಮಹಾನಗರ ಪಾಲಿಕೆ ಅಧಿಕಾರಿಗಳ ಕಾರ್ಯ ನಿಜಕ್ಕೂ ಅನನ್ಯ.
 

click me!