ಸ್ವಚ್ಛ ಸರ್ವೇಕ್ಷಣ್‌ ಜನಾಭಿಪ್ರಾಯ ಸಂಗ್ರಹ: ಬಿಬಿಎಂಪಿ ವಿಫಲ!

By Kannadaprabha NewsFirst Published Feb 3, 2020, 10:35 AM IST
Highlights

ಜ.31ಕ್ಕೆ 50 ಸಾವಿರ ಮಂದಿಯಿಂದ ಅಭಿಪ್ರಾಯ ಸಂಗ್ರಹ| 1 ಲಕ್ಷ ಜನರು ಪ್ರತಿ ನೀಡಿದ್ದರೆ 1,500 ಅಂಕ ಸಿಗ್ತಿತ್ತು| ಜಾಗೃತಿ ಮೂಡಿಸಿದರೂ ಬೆಂಗಳೂರು ಜನರ ನಿರಾಸಕ್ತಿ| 

ಬೆಂಗಳೂರು(ಫೆ.03): ಸ್ವಚ್ಛ ಸರ್ವೇಕ್ಷಣ್‌ ಅಭಿಯಾನದಲ್ಲಿ ಈ ಬಾರಿ ಉತ್ತಮ ರಾರ‍ಯಂಕ್‌ ಪಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಬಿಬಿಎಂಪಿ ಮಾಡುತ್ತಿರುವ ನಾನಾ ಕಸರತ್ತುಗಳು ವಿಫಲವಾಗಿದ್ದು, ಜ.31ಕ್ಕೆ ನಗರದ 50 ಸಾವಿರ ಮಂದಿ ಮಾತ್ರ ತಮ್ಮ ಅಭಿಪ್ರಾಯವನ್ನು ಸಲ್ಲಿಸಿದ್ದಾರೆ.

ಸ್ವಚ್ಛ ಸರ್ವೇಕ್ಷಣ್‌ ಅಭಿಯಾನದಲ್ಲಿ ನಗರದ ಒಂದು ಲಕ್ಷ ಮಂದಿ ತಮ್ಮ ಅಭಿಪ್ರಾಯವನ್ನು ಸಲ್ಲಿಕೆ ಮಾಡಿದರೆ ನಗರಕ್ಕೆ 1,500 ಅಂಕ ಸಿಗಲಿವೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಜಾಗೃತಿ ಜಾಥಾ ಕಾರ್ಯಕ್ರಮಗಳು, ಟ್ವೀಟರ್‌, ಫೇಸ್‌ಬುಕ್‌ ಪೇಜ್‌ಗಳಲ್ಲಿ ಸಾಕಷ್ಟು ಜಾಗೃತಿ ಮಾಡುವ ಪ್ರಯತ್ನವನ್ನು ನಡೆಸಲಾಗಿತ್ತು. ಆದರೆ, ಜ.31ಕ್ಕೆ ಕೇವಲ 50,672 ಮಂದಿ ಭಾಗವಹಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್‌, ನಗರದಲ್ಲಿ ಒಂದು ಕೋಟಿಗೂ ಅಧಿಕ ಜನರಿದ್ದಾರೆ. ಆದರೆ, ಒಂದು ಲಕ್ಷ ಜನ ಸಹ ಸರ್ವೇಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ದಾಖಲಿಸಿಲ್ಲ. ಉತ್ತಮ ಅಂಕ ಗಳಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಸರ್ವೇಯಲ್ಲಿ ಭಾಗವಹಿಸುವುದು ಒಂದು ಮಹತ್ವದ ಭಾಗವಾಗಿತ್ತು. ಸಾರ್ವಜನಿಕರು ಇದರಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ದಾಖಲು ಮಾಡಿದ್ದರೂ, ಅದು ಗಣನೆಗೆ ಬರುತ್ತಿತ್ತು. 1.3 ಲಕ್ಷ ಜನ ಇದರಲ್ಲಿ ಭಾಗವಹಿಸುವಂತೆ ಮಾಡುವ ಉದ್ದೇಶದಿಂದ ಜಾಹೀರಾತು, ಹಾಡು ಹಾಗೂ ಜಾಗೃತಿ ಜಾಥಾಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ನಿರೀಕ್ಷೆಯಷ್ಟು ಮಂದಿ ಭಾಗವಹಿಸಿಲ್ಲ ಎಂದರು.

ಕಡಿಮೆ ಜನಸಂಖ್ಯೆ ಇರುವ ನಗರಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಜನ ಭಾಗವಹಿಸಿದ್ದಾರೆ. ಮೈಸೂರಿನಲ್ಲಿ ಒಂದು ಲಕ್ಷ ಜನ ಭಾಗವಹಿಸಿದ್ದು, ತುಮಕೂರಿನಂತಹ ಸಣ್ಣ ಜಿಲ್ಲೆಯಲ್ಲೇ ಬೆಂಗಳೂರಿಗಿಂತ ಹೆಚ್ಚು ಜನ ಭಾಗವಹಿಸಿದ್ದಾರೆ. ಸಮಾಧಾನಕರ ಸಂಗತಿ ಎಂದರೆ ಕಳೆದ ಬಾರಿಗಿಂತ ಹೆಚ್ಚು ಜನ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದರು.
 

click me!