ಬೆಂಗಳೂರು: ನಕ್ಷೆ ಉಲ್ಲಂಘಿಸಿದ ಕಟ್ಟಡಗಳ ಮೇಲೆ ಬಿಬಿಎಂಪಿ ಕಣ್ಣು..!

By Kannadaprabha NewsFirst Published Aug 30, 2023, 6:30 AM IST
Highlights

ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಹೊಸ ದಾರಿ ಹುಡುಕಿದ ಬಿಬಿಎಂಪಿ, 2021ರ ನಂತರ ನಕ್ಷೆ ಪಡೆದು ನಿರ್ಮಾಣ ಮಾಡಿರುವ ಕಟ್ಟಡಗಳ ಆಡಿಟ್‌, ನಿಯಮ ಉಲ್ಲಂಘಿಸಿದ್ದರೆ ದಂಡ ವಿಧಿಸಲಿದೆ ಬಿಬಿಎಂಪಿ

ಗಿರೀಶ್‌ ಗರಗ

ಬೆಂಗಳೂರು(ಆ.30):  ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಿಸಲು ನಾನಾ ಕಸರತ್ತು ಪಡುತ್ತಿರುವ ಬಿಬಿಎಂಪಿ ಕಂದಾಯ ವಿಭಾಗ ಇದೀಗ ನಕ್ಷೆ ಮಂಜೂರಾತಿ ಉಲ್ಲಂಘಿಸಿ ನಿರ್ಮಿಸಿದ ವಾಣಿಜ್ಯ ಕಟ್ಟಡಗಳನ್ನು ಪತ್ತೆ ಮಾಡಿ, ಅವುಗಳಿಂದ ದಂಡ ಸಹಿತ ಹೆಚ್ಚುವರಿ ತೆರಿಗೆ ವಸೂಲಿಗೆ ನಿರ್ಧರಿಸಿದೆ.

Latest Videos

ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ನಿಗದಿತ ಗುರಿ ತಲುಪುವ ಸಲುವಾಗಿ ನಾನಾ ಪ್ರಯತ್ನಗಳನ್ನು ಪಡಲಾಗುತ್ತಿದೆ. ಕಂದಾಯ ಅಧಿಕಾರಿಗಳಿಗೆ ಮಾಸಿಕ ಗುರಿ ನಿಗದಿ, ಬೆಸ್ಕಾಂ ಮೂಲಕ ವಾಣಿಜ್ಯ ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕ ಪಡೆದು, ಬಿಬಿಎಂಪಿಗೆ ಮಾತ್ರ ವಸತಿ ಕಟ್ಟಡದ ತೆರಿಗೆ ಪಾವತಿಸುವವರ ಪತ್ತೆ ಹೀಗೆ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಅದರ ಜತೆಗೆ ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿನ ವಸತಿಯೇತರ ಕಟ್ಟಡಗಳು ನಕ್ಷೆ ಉಲ್ಲಂಘಿಸಿರುವುದನ್ನು ಪತ್ತೆ ಮಾಡಿ ಅವುಗಳಿಂದ ನಿಯಮದಂತೆ ತೆರಿಗೆ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಬೆಂಗಳೂರು: ಶೀಘ್ರ ಬಿಡಿಎ ಹುಣ್ಣಿಗೆರೆ ವಿಲ್ಲಾ ಮಾರಾಟ: ಬೆಲೆ ಇಂತಿದೆ

2021-22ರಿಂದೀಚೆಗಿನ ಕಟ್ಟಡಗಳ ಪರಿಶೀಲನೆ:

ಬಿಬಿಎಂಪಿ ಕಂದಾಯ ವಿಭಾಗ ನಿರ್ಧರಿಸಿರುವಂತೆ 2021-22ನೇ ಸಾಲಿನಿಂದೀಚೆಗೆ ನಕ್ಷೆ ಪಡೆದು ನಿರ್ಮಾಣ ಮಾಡಲಾಗಿರುವ ಕಟ್ಟಡಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ 5 ಗುಂಟೆ (5,445 ಚದರ ಅಡಿ)ಗೂ ಕಡಿಮೆ ವಿಸ್ತೀರ್ಣದ ನಿವೇಶನ, ದೊಡ್ಡ ಪ್ರಮಾಣದ ನಿವೇಶಗಳಿಗೆ ನೀಡಲಾಗಿರುವ ಎಲ್ಲ ನಕ್ಷೆ ಮಂಜೂರಾತಿಗಳನ್ನು ಪರಿಶೀಲಿಸಲಾಗುತ್ತದೆ. ಈ ಪರಿಶೀಲನೆ ವೇಳೆ ಕಟ್ಟಡಗಳು ನಕ್ಷೆಗಿಂತ ವಿಭಿನ್ನ ಹಾಗೂ ಹೆಚ್ಚುವರಿಯಾಗಿ ನಿರ್ಮಾಣಗೊಂಡಿರುವುದು ಕಂಡು ಬಂದರೆ ಅದಕ್ಕೆ ತಕ್ಕಂತೆ ತೆರಿಗೆ ವಿಧಿಸಲಾಗುತ್ತದೆ. ಜತೆಗೆ ಕಟ್ಟಡ ನಿರ್ಮಾಣದ ನಂತರದಿಂದ ತೆರಿಗೆ ಪಾವತಿಸದಿರುವ ಬಗ್ಗೆ ಲೆಕ್ಕ ಹಾಕಿ, ಅದನ್ನೂ ವಸೂಲಿ ಮಾಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2.38 ಲಕ್ಷ ಆಸ್ತಿಗಳು

ಬಿಬಿಎಂಪಿ ನಿಗದಿ ಮಾಡಿಕೊಂಡಿರುವಂತೆ ಒಟ್ಟು 2.38 ಲಕ್ಷ ಆಸ್ತಿಗಳನ್ನು ಪರಿಶೀಲನೆಗೆ ಒಳಪಡಿಸಬೇಕಿದೆ. ಅದರಲ್ಲಿ ವಸತಿಯೇತರ ಕಟ್ಟಡಗಳ ಸಂಖ್ಯೆಯೇ 2.13 ಲಕ್ಷವಿದ್ದು, ಅದರಲ್ಲಿ ಈಗಾಗಲೇ 10,886 ಆಸ್ತಿಗಳ ಪರಿಶೀಲನಾ ಕಾರ್ಯ ಪೂರ್ಣಗೊಳಿಸಲಾಗಿದೆ. ಉಳಿದಂತೆ ನಕ್ಷೆ ಮಂಜೂರಾತಿಗೆ ಸಂಬಂಧಿಸಿದಂತೆ 10,845 ಆಸ್ತಿಗಳಿದ್ದು, ಅದರಲ್ಲಿ 39,951 ಯುನಿಟ್‌ಗಳಿವೆ. ಜತೆಗೆ 13,896 ಆಸ್ತಿಗಳು 5 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ನಿವೇಶದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳಾಗಿವೆ. ಇಷ್ಟುಪ್ರಮಾಣದ ಆಸ್ತಿಗಳನ್ನು ಪರಿಶೀಲಿಸಿ ನಕ್ಷೆ ಉಲ್ಲಂಘನೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬೀದಿ ನಾಯಿ ಕಮ್ಮಿ ಆಗಿದೆಯಂತೆ: ಬಿಬಿಎಂಪಿಯಿಂದ ನಾಯಿಗಳ ಗಣತಿ ಪೂರ್ಣ

ಎಸ್ಸೆಂಎಸ್‌ನಲ್ಲೇ ನೋಟಿಸ್‌?

ಆಸ್ತಿ ತೆರಿಗೆ ಬಾಕಿ, ಸ್ವಯಂ ಘೋಷಿತ ಆಸ್ತಿ ತೆರಿಗೆ (ಎಸ್‌ಎಎಸ್‌) ಪದ್ಧತಿ ಅಡಿಯಲ್ಲಿ ತಪ್ಪು ಮಾಹಿತಿ ನೀಡಿ ತೆರಿಗೆ ವಂಚನೆ ಮಾಡಿರುವ ಆಸ್ತಿಗಳು ಸೇರಿದಂತೆ ಮತ್ತಿತರ ಆಸ್ತಿಗಳಿಗೆ ತೆರಿಗೆ ಪಾವತಿಸಲು ಡಿಮ್ಯಾಂಡ್‌ ನೋಟಿಸ್‌ ನೀಡುವುದಕ್ಕೆ ಸ್ವಯಂ ಚಾಲಿತ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಅದರ ಪ್ರಕಾರ ಯಾವ ಆಸ್ತಿಗೆ ತೆರಿಗೆ ಪಾವತಿಸದೆ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವುದು, ತೆರಿಗೆ ವಂಚನೆ ಮಾಡುತ್ತಿರುವ ಆಸ್ತಿಗಳು ಪತ್ತೆಯಾದರೆ ಆ ಆಸ್ತಿ ಮಾಲಿಕರಿಗೆ ಎಸ್‌ಎಂಎಸ್‌ ಮೂಲಕ ತೆರಿಗೆ ಪಾವತಿಗೆ ಸೂಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಸ್‌ಎಂಎಸ್‌ನ್ನೇ ಡಿಮ್ಯಾಂಡ್‌ ನೋಟಿಸ್‌ನ್ನಾಗಿ ಪರಿವರ್ತಿಸುವ ಬಗ್ಗೆಯೂ ಚರ್ಚಿಸಲಾಗಿದೆ.

2,543 ಕೋಟಿ ತೆರಿಗೆ ಸಂಗ್ರಹ

ಬಿಬಿಎಂಪಿ ಕಂದಾಯ ವಿಭಾಗ ಪ್ರಸಕ್ತ ಸಾಲಿನಲ್ಲಿ .4,561 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಿದೆ. ಅದರಲ್ಲಿ ಆಗಸ್ಟ್‌ 26ರವರೆಗೆ .2,543 ಕೋಟಿ ತೆರಿಗೆ ಸಂಗ್ರಹವಾಗಿದ್ದು, ಶೇ.55.76ರಷ್ಟು ತೆರಿಗೆ ಸಂಗ್ರಹವಾದಂತಾಗಿದೆ. ಇನ್ನೂ .2,018 ಕೋಟಿ ತೆರಿಗೆ ಸಂಗ್ರಹ ಬಾಕಿಯಿದ್ದು, ಅದರ ಸಂಗ್ರಹಕ್ಕಾಗಿ ಕಂದಾಯ ವಿಭಾಗ ಹಲವು ಕ್ರಮ ಕೈಗೊಳ್ಳುತ್ತಿದೆ.

click me!