
ಬೆಂಗಳೂರು (ಜು.31): ಸುಪ್ರೀಂಕೋರ್ಚ್ ನಿರ್ದೇಶನದಂತೆ ರಾಜ್ಯ ಸರ್ಕಾರವು ಏಳು ದಿನದ ಒಳಗೆ ಬಿಬಿಎಂಪಿ ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟಿಸಿ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ಎಚ್ಚರಿಸಿದರು. ಶನಿವಾರ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಅಬ್ದುಲ್‌ವಾಜೀದ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ಸುಪ್ರೀಂ ಕೋರ್ಚ್ ತೀರ್ಪಿನಿಂದ ಜಯ ಸಿಕ್ಕಂತಾಗಿದೆ. ಪ್ರತಿ ಬಾರಿ ರಾಜ್ಯ ಸರ್ಕಾರ ಚುನಾವಣೆಯನ್ನು ಮುಂದೂಡುತ್ತಲೇ ಬಂದಿದ್ದು, ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂದು ಹೇಳಿದರು. ಎರಡು ವರ್ಷಗಳಿಂದ ಸರ್ಕಾರವು ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಲೇ ಇದೆ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಚ್ 7 ದಿನಗಳ ಒಳಗಾಗಿ ಮೀಸಲಾತಿ ಪಟ್ಟಿಪ್ರಕಟಿಸಿ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು ಎಂದು ನಿರ್ದೇಶಿಸಿದೆ. ಆದರೆ ಸಚಿವರೊಬ್ಬರು ಕೆಲಹಿರಿಯ ನ್ಯಾಯವಾದಿಗಳೊಂದಿಗೆ ಸಭೆ ನಡೆಸಿ ಚುನಾವಣೆ ಮುಂದೂಡಲು ಏನು ಮಾಡಬೇಕೆಂದು ಸಲಹೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಾರಿ ಸರ್ಕಾರ ಚುನಾವಣೆ ಮುಂದೂಡುವ ಪ್ರಯತ್ನ ಮಾಡಿದರೆ ನ್ಯಾಯಾಂಗ ನಿಂದನೆಯಾಗಲಿದೆ ಎಂದು ತಿಳಿಸಿದರು.
ಬಿಬಿಎಂಪಿಗೆ ಜನಪ್ರತಿನಿಧಿಗಳ ಅಗತ್ಯವಿದೆ. ಸ್ಥಳೀಯ ಸಂಸ್ಥೆಗಳನ್ನು ಉತ್ತೇಜಿಸಿ ಅವುಗಳನ್ನು ಬಲಪಡಿಸುವ ಯೋಚನೆ ಸರ್ಕಾರಕ್ಕಿಲ್ಲ. ಇವರಿಗೆ ಸ್ಥಳೀಯ ಸಂಸ್ಥೆಗಳ ಬಲಪಡಿಸುವ ಇಚ್ಛೆ ಇದ್ದಿದ್ದರೆ ಈ ಚುನಾವಣೆ ಮಾಡಲು ಎರಡು ವರ್ಷ ಬೇಕಾಗಿರಲಿಲ್ಲ. 2006-2010ರ ವರೆಗೆ ಬಿಜೆಪಿ ಆಡಳಿತದಲ್ಲಿ ಪಾಲಿಕೆ ಚುನಾವಣೆಯು ನಡೆಸಿರಲಿಲ್ಲ. ಆಗಲೂ ಕಾಂಗ್ರೆಸ್ ನ್ಯಾಯಾಲಯದ ಮೊರೆ ಹೋಗಿತ್ತು. ಈಗ ಈ ಸರ್ಕಾರ ನ್ಯಾಯಾಲಯದಲ್ಲಿ 8 ವಾರಗಳ ಕಾಲಾವಕಾಶ ಕೇಳಿತ್ತು. ಅದರಂತೆ ನ್ಯಾಯಾಲಯ ಕಾಲಾವಕಾಶ ನೀಡಿ ಚುನಾವಣೆ ನಡೆಸುವಂತೆ ತಿಳಿಸಿತ್ತು. ಆದರೆ ನ್ಯಾಯಾಲಯದ ಆದೇಶಕ್ಕೆ ಗೌರವ ಕೊಟ್ಟಿಲ್ಲ ಎಂದು ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಹುಚ್ಚಪ್ಪ, ಗಂಗಾಬಿಕೆ ಮಲ್ಲಿಕಾರ್ಜುನ, ಮಾಜಿ ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ, ಮೋಹನ್ ಉಪಸ್ಥಿತರಿದ್ದರು.
ಚುನಾವಣೆ ಮುಂದೂಡಲು ಸರ್ಕಾರ ಯತ್ನ: ವಾಜೀದ್
ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮಾತನಾಡಿ, ಮೀಸಲಾತಿ ಪಟ್ಟಿಪ್ರಕಟಕ್ಕೆ ಸುಪ್ರೀಂ ಕೋರ್ಚ್ ಏಳು ದಿನ ಕಾಲಾವಕಾಶ ನೀಡಿ ಮೂರು ದಿನ ಕಳೆದಿದೆ. ಮೀಸಲಾತಿ ಪಟ್ಟಿಪ್ರಕಟಿಸಿದ ಬಳಿಕ ಚುನಾವಣೆ ಪ್ರಕ್ರಿಯೆ ನಡೆಸುವಂತೆ ಆಯುಕ್ತರಿಗೆ ಸೂಚನೆ ನೀಡಿದೆ. ಆದರೆ ಸರ್ಕಾರ ಚುನಾವಣೆ ಮುಂದೂಡಲು ಪ್ರಯತ್ನ ಪಡುತ್ತಿದೆ ಎಂದು ಆರೋಪಿಸಿದರು.
ಅಭಿವೃದ್ಧಿಗಾಗಿ ಶೀಘ್ರ ಬಿಬಿಎಂಪಿ ಚುನಾವಣೆ: ಸಿಎಂ ಬೊಮ್ಮಾಯಿ
ಬೆಂಗಳೂರಿನಲ್ಲಿ ಏಳು ಸಚಿವರಿದ್ದು, ಮನಸೋಇಚ್ಛೆ ಅವೈಜ್ಞಾನಿಕವಾಗಿ ವಾರ್ಡ್ ಮರು ವಿಂಗಡಣೆ ಮಾಡಲಾಗಿದೆ. ಶಾಸಕರು ಹೇಳಿದಂತೆ ಮೀಸಲಾತಿ ಆಗಬಾರದು. ಮಾರ್ಗಸೂಚಿ ಅನುಗುಣವಾಗಿ ಮೀಸಲಾತಿ ನೀಡಬೇಕು. ಮಹಾರಾಷ್ಟ್ರ ವಿಚಾರದಲ್ಲಿ ನ್ಯಾಯಾಲಯ ಈ ಪ್ರಕ್ರಿಯೆಯಲ್ಲಿ ಶಾಮೀಲಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದು, ಇಲ್ಲಿ ಕೂಡ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿದಂತೆ ಆಗಲಿದೆ ಎಂದರು.
ಬಿಬಿಎಂಪಿ ವ್ಯಾಪ್ತಿಯ ಮತದಾರ ಪಟ್ಟಿ ಪರಿಷ್ಕರಣೆ ಆರಂಭ
ಬಿಜೆಪಿಯವರೇ ಮೀಸಲಾತಿ ಪಟ್ಟಿಸಿದ್ಧಪಡಿಸ್ತಾರೆ: ರೆಡ್ಡಿ
ಬಿಬಿಎಂಪಿಯ ವಾರ್ಡ್ ಮರುವಿಂಗಡಣೆಯನ್ನು ಹೇಗೆ ಬಿಜೆಪಿಯವರೇ ಮಾಡಿದರೋ ಅದರೇ ರೀತಿ ಈಗ ಮೀಸಲಾತಿ ಪಟ್ಟಿಯನ್ನೂ ಅವರೇ ತಯಾರಿಸುತ್ತಿದ್ದಾರೆ. ಈ ಕೆಲಸ ಮಾಡಬೇಕಾದ ಅಧಿಕಾರಿಗಳು ಏನೂ ನಾಡುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬಿಜೆಪಿಯವರು ಅಧಿಕಾರ ದುರುಪಯೋಗ ಪಡಿಸಿಕೊಂಡು ತಮಗೆ ಬೇಕಾದ ಹಾಗೆ ವಾರ್ಡ್ ಮರು ವಿಂಗಡಣೆ ಮಾಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷ, ಸಾರ್ವಜನಿಕ ಸಂಘಟನೆಗಳು ಆಕ್ಷೇಪಣೆ ಸಲ್ಲಿಸಿದರೂ ಪರಿಗಣಿಸಿಲ್ಲ. ಈಗ ಮೀಸಲಾತಿ ವಿಚಾರದಲ್ಲೂ ಇದನ್ನೇ ಮಾಡುತ್ತಿದ್ದಾರೆ. ಕಾಂಗ್ರೆಸ್ ಸೋಲಿಸಲು ಏನು ಮಾಡಬೇಕು ಎಂದು ಲೆಕ್ಕಾಚಾರ ಹಾಕಿಕೊಂಡು ಎಲ್ಲವನ್ನೂ ಅವರೇ ಮಾಡುತ್ತಿದ್ದಾರೆ. ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದಾರೆ ಎಂದರು.
ಬಿಜೆಪಿಯವರು ಏನೇ ಮಾಡಲಿ ಕಾಂಗ್ರೆಸ್ ಚುನಾವಣೆಗೆ ಸಿದ್ಧವಿದೆ. ಎಲ್ಲ ತಯಾರಿ ಮಾಡಿಕೊಳ್ಳುತ್ತಿದೆ. ಬಿಬಿಎಂಪಿಯಲ್ಲಿ ಅಷ್ಟೇ ಅಲ್ಲ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಮರಳಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.