ಪಿಂಕ್ ಮತಗಟ್ಟೆ ಮಾದರಿಯಲ್ಲಿ ಎರಡು ಹೊಸ ಪ್ರಯೋಗ, ಬಿಬಿಎಂಪಿ ಚುನಾವಣಾ ವಿಭಾಗದ ಪ್ಲ್ಯಾನ್, ಕನಿಷ್ಠ ಶೇ.75 ಮತದಾನದತ್ತ ಚಿತ್ತ.
ಗಿರೀಶ್ ಗರಗ
ಬೆಂಗಳೂರು(ಏ.26): ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿ ಮತದಾನದ ಪ್ರಮಾಣ ಹೆಚ್ಚಿಸಲು ಹಲವು ಕಾರ್ಯಕ್ರಮ ಆಯೋಜಿಸುತ್ತಿರುವ ಬಿಬಿಎಂಪಿ ಚುನಾವಣಾ ವಿಭಾಗ, ಇದೀಗ ಮತಗಟ್ಟೆಗಳ ಸ್ವರೂಪ ಬದಲಿಸುವ ಕೆಲಸಕ್ಕೆ ಮುಂದಾಗಿದೆ. ಕಳೆದ ಬಾರಿ ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡು ನಿರ್ಮಿಸಿದ್ದ ಪಿಂಕ್ ಮತಗಟ್ಟೆ ಮಾದರಿಯಲ್ಲಿಯೇ ಈ ಬಾರಿ ಹಸಿರು ಮತಗಟ್ಟೆ ಹಾಗೂ ಯುವ ಮತದಾರರ ಮತಗಟ್ಟೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ.
ಪ್ರತಿ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣದಲ್ಲಿ ಬೆಂಗಳೂರು ನಗರ ಜಿಲ್ಲೆ ಹಿಂದೆ ಬೀಳುತ್ತಿದೆ. 2013ರಲ್ಲಿ ಶೇಕಡ 57.33ರಷ್ಟುಮತದಾರರು ಮಾತ್ರ ಮತದಾನ ಮಾಡಿದ್ದರು. 2018ರಲ್ಲಿ ಆ ಪ್ರಮಾಣ ಮತ್ತಷ್ಟುಕುಸಿದು ಶೇ.54.77ರಷ್ಟುಮತದಾನವಾಗಿತ್ತು. ಹೀಗೆ ಪ್ರತಿ ಚುನಾವಣೆಗೂ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ಈ ಬಾರಿ ಕನಿಷ್ಠ ಶೇ 75ರಷ್ಟುಮತದಾರರಿಂದ ಮತ ಚಲಾಯಿಸುವಂತೆ ಮಾಡಬೇಕೆಂದು ಕೇಂದ್ರ ಚುನಾವಣಾ ಆಯೋಗವು ಬೆಂಗಳೂರು ನಗರ ಜಿಲ್ಲಾ ಚುನಾವಣಾ ವಿಭಾಗಕ್ಕೆ ಸೂಚಿಸಿದೆ. ಅದಕ್ಕಾಗಿ ಮತದಾರರನ್ನು ಮತದಾನದ ದಿನದಂದು ಮತಗಟ್ಟೆಗಳತ್ತ ಬರುವಂತೆ ಮಾಡಲು ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಸೋಶಿಯಲ್ ಮೀಡಿಯಾ ಸ್ಟಾರ್ಸ್‌ಗೆ ಬಿಬಿಎಂಪಿ ಆಫರ್: ರೀಲ್ಸ್ ಮಾಡಿ 10 ಸಾವಿರ ಗೆಲ್ಲಿ!
ಯುವ ಮತಗಟ್ಟೆ ಸ್ಥಾಪನೆ:
ಕಳೆದ ಬಾರಿ ಮಹಿಳಾ ಮತದಾರರಿಗಾಗಿ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅದೇ ಮಾದರಿಯಲ್ಲಿ ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಹೊಸದಾಗಿ ಮತಪಟ್ಟಿಗೆ ಸೇರ್ಪಡೆಯಾದ ಯುವ ಮತದಾರರನ್ನು ಮತದಾನದತ್ತ ಸೆಳೆಯಲು ಯುವ ಮತದಾರರ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಅದಕ್ಕಾಗಿ ಯುವ ಮತದಾರರು ಹೆಚ್ಚಿರುವ ಮತಗಟ್ಟೆಗಳನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. 28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ತಲಾ ಒಂದು ಯುವ ಮತದಾರರ ಮತಗಟ್ಟೆಸ್ಥಾಪಿಸಲಾಗುತ್ತದೆ. ಆ ಮತಗಟ್ಟೆಯಲ್ಲಿ ಕೆಲಸ ಮಾಡುವ ಚುನಾವಣಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಸೇರಿ ಎಲ್ಲರೂ 30 ವರ್ಷದೊಳಗಿನವರಾಗಿರಲಿದ್ದಾರೆ. ನಗರದಲ್ಲಿ 1.47 ಲಕ್ಷ ಯುವ ಮತದಾರರಿದ್ದಾರೆ.
ಹಸಿರು ಮತಗಟ್ಟೆ
ಪರಿಸರ ಸಂರಕ್ಷಣೆ ಹಾಗೂ ನವೀಕರಿಸಬಹುದಾದ ಇಂಧನದ ಬಳಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಬಾರಿ ಬೆಂಗಳೂರಿನಲ್ಲಿ ಹಸಿರು ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಈ ಮತಗಟ್ಟೆಗಳ ಕಟ್ಟಡದ ಬಣ್ಣ ಹಸಿರಿನಿಂದ ಇರಲಿದ್ದು, ಸೋಲಾರ್ ಇಂಧನದೊಂದಿಗೆ ಮತಗಟ್ಟೆಯ ಕಾರ್ಯ ಚಟುವಟಿಕೆ ನಡೆಯುವಂತೆ ಮಾಡಲಾಗುತ್ತದೆ. ಇದಕ್ಕಾಗಿ ಇಂಧನ ಇಲಾಖೆ ಜತೆಗೂ ಚರ್ಚಿಸಲಾಗಿದೆ.
ಮೊಬೈಲ್ ಆ್ಯಪ್ ಸಿದ್ಧ
ಮತದಾನ ಮಾಡಲು ಬರುವವರರು ಮತಗಟ್ಟೆಗಳಲ್ಲಿ ಹೆಚ್ಚಿನ ಸಮಯ ಕಾಯುವುದನ್ನು ತಡೆಯಲು ಬೆಂಗಳೂರು ನಗರ ಜಿಲ್ಲೆ ಚುನಾವಣಾ ವಿಭಾಗ ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ. ಈ ಮೊಬೈಲ್ ಆ್ಯಪ್‌ನಲ್ಲಿ ಮತಗಟ್ಟೆಗಳಲ್ಲಿನ ಸರತಿ ಸಾಲಿನ ವಿವರ, ಎಷ್ಟುಜನ ಮತದಾನ ಮಾಡಲು ಕಾಯುತ್ತಿದ್ದಾರೆ ಹಾಗೂ ಮತಗಟ್ಟೆಗಳ ಬಳಿಯಲ್ಲಿನ ವಾಹನ ನಿಲುಗಡೆ ಸ್ಥಳದಲ್ಲಿರುವ ಅವಕಾಶಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಆ ಆ್ಯಪ್ ಗಮನಿಸಿ ಮತದಾರರು ಮತದಾನ ಮಾಡಲು ಬರಬಹುದಾಗಿದೆ. ಆ್ಯಪ್ ಸಿದ್ಧವಾಗಿದ್ದು, ಅದನ್ನು ಪರೀಕ್ಷಿಸಲಾಗುತ್ತಿದೆ. ಈ ವೇಳೆ ಏನಾದರೂ ಲೋಪಗಳು ಕಂಡು ಬಂದರೆ ಅದನ್ನು ಸರಿಪಡಿಸಿ ಮತದಾರರ ಬಳಕೆಗೆ ಬಿಡುಗಡೆ ಮಾಡಲಾಗುತ್ತದೆ.
ಮತದಾರರ ವಿವರ: (ಮಾ.28ರವರೆಗೆ)
ಪುರುಷ: 49.26 ಲಕ್ಷ
ಮಹಿಳೆ: 45.85 ಲಕ್ಷ
ತೃತೀಯ ಲಿಂಗಿಗಳು: 1,736
ಒಟ್ಟು: 95.13 ಲಕ್ಷ
8,615 ಮತಗಟ್ಟೆಗಳು
ಬೆಂಗಳೂರು: ಗುತ್ತಿಗೆದಾರರಿಗೆ ಬಿಬಿಎಂಪಿ ಅಡ್ವಾನ್ಸ್ ಪೇಮೆಂಟ್..!
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 8,615 ಮತಗಟ್ಟೆಗಳಿವೆ. ಆ ಪೈಕಿ ಕಳೆದ ಚುನಾವಣೆಯಲ್ಲಿ ಶೇ.90ರಷ್ಟುಮತದಾನವಾಗಿ ಅದರಲ್ಲಿ ಶೇ.75ರಷ್ಟುಮತ ಒಂದೇ ಅಭ್ಯರ್ಥಿಗೆ ಹಾಕಲಾದ ಅಂಶ ಗಮನಿಸಿ 2,217 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಮತದಾನದ ಪ್ರಮಾಣ ಹೆಚ್ಚಿಸಲು ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಅದರಲ್ಲೂ ಯುವ ಮತದಾರರನ್ನು ಮತದಾನದತ್ತ ಸೆಳೆಯಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಯುವ ಮತದಾರರ ಮತಗಟ್ಟೆಸ್ಥಾಪಿಸಲಾಗುತ್ತಿದೆ. ಅದರ ಜತೆಗೆ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಹಸಿರು ಮತಗಟ್ಟೆಗಳನ್ನು ಸಿದ್ಧಪಡಿಸಲಾಗುವುದು ಅಂತ ಬಿಬಿಎಂಪಿ ಚುನಾವಣಾ ವಿಭಾಗದ ಸಹಾಯಕ ಆಯುಕ್ತ ಉಮೇಶ್ ತಿಳಿಸಿದ್ದಾರೆ.