ರಸ್ತೆ ಗುಂಡಿ ದುರಂತಕ್ಕೆ ಬಿಬಿಎಂಪಿ ಪರಿಹಾರ!

Published : Aug 01, 2019, 08:24 AM IST
ರಸ್ತೆ ಗುಂಡಿ ದುರಂತಕ್ಕೆ ಬಿಬಿಎಂಪಿ ಪರಿಹಾರ!

ಸಾರಾಂಶ

ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿದರೆ ಬಿಬಿಎಂಪಿಯಿಂದಲೇ ಪರಿಹಾರ ನಿಡಲಾಗುತ್ತದೆ. ಈ ಸಂಬಂಧ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 

ಬೆಂಗಳೂರು [ಆ.01]:  ಉತ್ತಮ ಸ್ಥಿತಿಯ ರಸ್ತೆ ಹೊಂದುವುದು ಹಾಗೂ ಅದರಲ್ಲಿ ಸುಗಮವಾಗಿ ಸಂಚರಿಸುವುದು ಜನರ ಮೂಲಭೂತ ಹಕ್ಕು. ಹೀಗಾಗಿ ನಗರದಲ್ಲಿ ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿ ತೊಂದರೆಗೆ ಒಳಗಾದ ನಾಗರಿಕರಿಗೆ ಬಿಬಿಎಂಪಿ ಪರಿಹಾರ ನೀಡಬೇಕು ಎಂಬ ಮಹತ್ವದ ತೀರ್ಪನ್ನು ಹೈಕೋರ್ಟ್‌ ಬುಧವಾರ ನೀಡಿದೆ.

ನಗರದಲ್ಲಿ ರಸ್ತೆ ಗುಂಡಿಗಳಿಂದ ವಾಹನ ಸವಾರರು ಹಾಗೂ ನಾಗರಿಕರು ಅಪಘಾತಕ್ಕೀಡಾಗಿ ಗಾಯಗೊಂಡರೆ ಅದಕ್ಕೆ ಸಂಬಂಧಪಟ್ಟಬಿಬಿಎಂಪಿ ಅಧಿಕಾರಿಗಳನ್ನೇ ಹೊಣೆಯಾಗಿಸಬೇಕು ಹಾಗೂ ಪಾಲಿಕೆ ಪರಿಹಾರ ನೀಡಬೇಕಾಗುತ್ತದೆ ಎಂದು ಮಂಗಳವಾರವಷ್ಟೇ ಇಂಗಿತ ವ್ಯಕ್ತಪಡಿಸಿದ್ದ ಹೈಕೋರ್ಟ್‌, ಆ ಕುರಿತು ಬುಧವಾರ ವಿವರವಾದ ಮಧ್ಯಂತರ ಆದೇಶ ಹೊರಡಿಸಿತು.

ಈ ಕುರಿತಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ಬಿಬಿಎಂಪಿ ಅಥವಾ ಅದರ ಅಧಿಕಾರಿಗಳಿಂದ ಉತ್ತಮ ಸ್ಥಿತಿಯ ರಸ್ತೆ ನಿರ್ಮಾಣವಾಗಿ ಹಾಗೂ ನಿರ್ವಹಣೆಯಾಗದೆ ಯಾವುದೇ ಪ್ರಜೆ ನಷ್ಟಅನುಭವಿಸಿದರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ನಗರದಲ್ಲಿ ರಸ್ತೆಗುಂಡಿಯಿಂದ ಅಪಘಾತ ಸಂಭವಿಸಿ ಗಾಯಗೊಂಡ ಸಾರ್ವಜನಿಕರು ಪರಿಹಾರ ಕೋರಿ ಬಿಬಿಎಂಪಿಗೆ ಮನವಿ ಪತ್ರ ಸಲ್ಲಿಸಬಹುದು. ಸಲ್ಲಿಕೆಯಾದ ಮನವಿ ಪತ್ರಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ಬಳಿಕ ಅವು ನ್ಯಾಯಸಮ್ಮತ ಹಾಗೂ ತೃಪ್ತಿಕರವಾಗಿದ್ದರೆ ಸೂಕ್ತ ಪರಿಹಾರ ನೀಡಲು ಬಿಬಿಎಂಪಿ ಮುಕ್ತವಾಗಿರುತ್ತದೆ ಎಂದ ನ್ಯಾಯಪೀಠ, ಮಧ್ಯಂತರ ಆದೇಶದಲ್ಲಿ ನೀಡಲಾಗಿರುವ ನಿರ್ದೇಶನಗಳ ಪಾಲನಾ ವರದಿಯನ್ನು ಸೆ.30ರೊಳಗೆ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ಸೂಚಿಸಿ ವಿಚರಣೆ ಮೂಂದೂಡಿತು.

ಮೂಲಭೂತ ಹಕ್ಕು:

ಸಂವಿಧಾನದ ಪರಿಚ್ಛೇದ 21 ಪ್ರಕಾರ ವ್ಯಕ್ತಿ ಘನತೆಯಿಂದ ಬದುಕುವುದು ಆತನ ಮೂಲಭೂತ ಹಕ್ಕು. ಆ ವ್ಯಾಖ್ಯಾವನ್ನು ಸುಪ್ರೀಂ ಕೋರ್ಟ್‌ ವಿಸ್ತರಿಸಿ, ಸುಸ್ಥಿತಿಯ ರಸ್ತೆ ಹೊಂದುವುದು ಹಾಗೂ ಅದರಲ್ಲಿ ಸಂಚಾರಿಸುವುದು ಜನರ ಮೂಲಭೂತ ಹಕ್ಕು ಎಂದು ಹೇಳಿದೆ. ಅದರಂತೆ ರಸ್ತೆಗಳು ದುಸ್ಥಿತಿಯಲ್ಲಿದ್ದರೆ ಜನರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಜನ ಸುಗಮವಾಗಿ ಓಡಾಡಲು ಹಾಗೂ ವಾಹನ ಮೂಲಕ ಸಂಚರಿಸಲು ಅನುಕೂಲವಾದ ಉತ್ತಮ ಗುಣಮಟ್ಟದ ಹಾಗೂ ಬೆಳಕಿನ ವ್ಯವಸ್ಥೆ ಹೊಂದಿದ ರಸ್ತೆ ನಿರ್ಮಿಸಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ರಸ್ತೆ ಹಾಳು ಮಾಡಿದವರಿಂದಲೇ ಹಣ ಪಡೆಯಿರಿ!

ಜಲಮಂಡಳಿ, ಕೆಪಿಟಿಸಿಎಲ್‌, ಟೆಲಿಕಾಂ ಸವೀರ್‍ಸ್‌, ಬಿಎಂಆರ್‌ಸಿಎಲ್‌ ನಂತಹ ಸಂಸ್ಥೆಗಳು ನಗರದಲ್ಲಿ ನಡೆಸುವ ಅಭಿವೃದ್ಧಿ ಕಾಮಗಾರಿಗಳಿಂದ ರಸ್ತೆ ಗುಂಡಿಗಳು ಉಂಟಾದರೆ, ಅವುಗಳ ದುರಸ್ತಿಗಾಗಿ ಸಂಸ್ಥೆಗಳಿಂದ ಬಿಬಿಎಂಪಿ ಸದ್ಯ ಶೇ.25ರಷ್ಟುಹಣ ಪಡೆಯುತ್ತಿದೆ. ಆದರೆ, ಯಾವ ಸಂಸ್ಥೆಯಿಂದ ರಸ್ತೆ ಕೆಟ್ಟಿದೆಯೊ, ಅವುಗಳಿಂದಲೇ ರಸ್ತೆ ದುರಸ್ತಿಗೆ ಅಗತ್ಯವಾದ ಸಂಪೂರ್ಣ ಹಣ ಪಡೆಯುವ ನಿಟ್ಟಿನಲ್ಲಿ ಶೀಘ್ರ ನೀತಿ ರೂಪಿಸುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್‌ ಸೂಚಿಸಿದೆ.

PREV
click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಬೆಂಗಳೂರು ಏರ್ಪೋರ್ಟ್ ಹೊಸ ಪಿಕ್‌ಅಪ್‌, ಪಾರ್ಕಿಂಗ್ ರೂಲ್ಸ್; ಪ್ರಯಾಣಿಕರ ಸಮಸ್ಯೆ 30 ದಿನಗಳೊಳಗೆ ನಿವಾರಣೆ