ಗ್ರೀನ್‌ ಝೋನ್‌ಗಾಗಿ ಪತ್ರ ಬರೆದ ಬಿಬಿಎಂಪಿ: ಮೋದಿ ಸರ್ಕಾರದಿಂದ ನೋ ರಿಪ್ಲೈ..!

By Kannadaprabha NewsFirst Published May 8, 2020, 8:11 AM IST
Highlights

ಹಸಿರು ವಲಯಕ್ಕಾಗಿ ಬರೆದ ಪತ್ರಕ್ಕೆ ಉತ್ತರಿಸದ ಕೇಂದ್ರ| ಕೆಂಪು ಪಟ್ಟಿಯಿಂದ ಕೈಬಿಡುವಂತೆ ಕೋರಿದ್ದ ಬಿಬಿಎಂಪಿ| 150 ವಾರ್ಡ್‌ಗಳಲ್ಲಿ ಕೊರೋನಾ ಕಾಣಿಸಿಕೊಂಡಿಲ್ಲ| ಕೊರೋನಾ ಕಾಣಿಸಿಕೊಂಡ 27 ವಾರ್ಡ್‌ಗಳಲ್ಲಿ 28 ದಿನಗಳಿಂದ ಹೊಸ ಪ್ರಕರಣ ದೃಢಪಟ್ಟಿಲ್ಲ| 21 ವಾರ್ಡ್‌ಗಳ 23 ಪ್ರದೇಶಗಳನ್ನು ಮಾತ್ರ ಕಂಟೈನ್ಮೆಂಟ್‌ ಮಾಡಲಾಗಿದೆ|

ಬೆಂಗಳೂರು(ಮೇ.08): ಕೊರೋನಾ ಸೋಂಕು ಇಲ್ಲದ ವಾರ್ಡ್‌ಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಿ ಹಸಿರು ವಲಯ ಎಂದು ಘೋಷಿಸುವಂತೆ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.

150 ವಾರ್ಡ್‌ಗಳಲ್ಲಿ ಕೊರೋನಾ ಕಾಣಿಸಿಕೊಂಡಿಲ್ಲ. ಕೊರೋನಾ ಕಾಣಿಸಿಕೊಂಡ 27 ವಾರ್ಡ್‌ಗಳಲ್ಲಿ 28 ದಿನಗಳಿಂದ ಹೊಸ ಪ್ರಕರಣ ದೃಢಪಟ್ಟಿಲ್ಲ. ಇನ್ನು 21 ವಾರ್ಡ್‌ಗಳ 23 ಪ್ರದೇಶಗಳನ್ನು ಮಾತ್ರ ಕಂಟೈನ್ಮೆಂಟ್‌ ಮಾಡಲಾಗಿದೆ. ಹಾಗಾಗಿ, ಇಡೀ ನಗರವನ್ನು ಕೆಂಪು ವಲಯ ಎಂದು ಪರಿಗಣಿಸಿ ವ್ಯಾಪಾರ, ವಹಿವಾಟು, ಕೈಗಾರಿಕೆ ಸ್ಥಗಿತಗೊಳಿಸುವುದರಿಂದ ಆರ್ಥಿಕ ಸಂಕಷ್ಟ ಹೆಚ್ಚಾಗಲಿದೆ. ಸೋಂಕು ಇಲ್ಲದ ವಾರ್ಡ್‌ಗಳನ್ನು ಹಸಿರು ವಲಯ ಎಂದು ಪರಿಗಣಿಸುವಂತೆ ಬಿಬಿಎಂಪಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಪ್ರಸ್ತಾವನೆ ಸಲ್ಲಿಸಿ ನಾಲ್ಕೈದು ದಿನ ಕಳೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌, ಕೇಂದ್ರಕ್ಕೆ ಸಲ್ಲಿಸಿದ ಪ್ರಸ್ತಾವನೆಗೆ ಪ್ರತಿಕ್ರಿಯೆ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಕೊರೋನಾ ವಿರುದ್ಧ ಹೋರಾಟ: ಅಧಿಕಾರಿಗಳ ಜತೆ ಭಾಸ್ಕರ್‌ ರಾವ್‌ ವಿಡಿಯೋ ಕಾನ್ಪೆರನ್ಸ್‌

ಕಂಟೈನ್ಮೆಂಟ್‌ ವಾರ್ಡ್‌ ಸಂಖ್ಯೆ 21ಕ್ಕೆ ಇಳಿಕೆ

ಕಳೆದ 28 ದಿನಗಳಿಂದ ಹೊಸದಾಗಿ ಕೊರೋನಾ ಸೋಂಕು ಪ್ರಕರಣ ಕಾಣಿಸಿಕೊಳ್ಳದ ಹೊಸಹಳ್ಳಿ, ಕರಿಸಂದ್ರ ಹಾಗೂ ರಾಮಸ್ವಾಮಿ ಪಾಳ್ಯ ವಾರ್ಡ್‌ಗಳು ಕಂಟೈನ್ಮೆಂಟ್‌ ವಾರ್ಡ್‌ ಪಟ್ಟಿಯಿಂದ ಕೈಬಿಡಲಾಗಿದೆ. ಒಂದು ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾರ ಮಲ್ಲೇಶ್ವರ ವಾರ್ಡ್‌ ಅನ್ನು ಕಂಟೈನ್ಮೆಂಟ್‌ ವಾರ್ಡ್‌ ಎಂದು ಘೋಷಿಸಲಾಗಿದೆ. ಒಟ್ಟಾರೆ ಕಂಟೈನ್ಮೆಂಟ್‌ ವಾರ್ಡ್‌ ಸಂಖ್ಯೆ 24ರಿಂದ 21ಕ್ಕೆ ಇಳಿಕೆಯಾಗಿದೆ. ಹೊಂಗಸಂದ್ರ ಹಾಗೂ ಸುಧಾಮನಗರ ವಾರ್ಡ್‌ಗಳಲ್ಲಿ ತಲಾ ಎರಡು ಪ್ರದೇಶಗಳನ್ನು ಕಂಟೈನ್ಮೆಂಟ್‌ ಮಾಡಲಾಗಿದೆ. ಹಾಗಾಗಿ, ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆ 23 ಆಗಿದೆ.

ಬಾಪೂಜಿ ನಗರ ಸೀಲ್‌ ತೆರವು

ತಬ್ಲಿಘಿ ಜಮಾತ್‌ ಸಂಪರ್ಕ ಹೊಂದಿದ ಇಬ್ಬರು ಕೊರೋನಾ ಸೋಂಕಿತರು ಪತ್ತೆ ಹಾಗೂ ಹೆಚ್ಚಿನ ಜನಸಂಖ್ಯೆ, ಮನೆಗಳ ಒತ್ತತ್ತಾಗಿ ಇರುವ ಹಿನ್ನೆಲೆಯಲ್ಲಿ ಏ.8ರಿಂದ ಸೀಲ್‌ಡೌನ್‌ ಆಗಿದ್ದ ಬಾಪೂಜಿ ನಗರ ವಾರ್ಡ್‌ನಲ್ಲಿ 28 ದಿನಗಳಿಂದ ಹೊಸದಾಗಿ ಸೋಂಕು ಪತ್ತೆಯಾದ ಕಾರಣ ಮೇ 6ರಂದು ಸಾಮಾನ್ಯ ವಾರ್ಡ್‌ ಎಂದು ಘೋಷಿಸಲಾಗಿದೆ.

ಬಾಪೂಜಿ ನಗರ ವಾರ್ಡನ್ನು ಕಂಟೈನ್ಮೆಂಟ್‌ ಪಟ್ಟಿಯಿಂದ ಕೈಬಿಡಲಾಗಿದೆ. ಬಂದ್‌ ಮಾಡಿದ್ದ ರಸ್ತೆಗಳನ್ನು ತೆರೆಯಲಾಗಿದ್ದು, ಲಾಕ್‌ಡೌನ್‌ ನಿಯಮ ಮುಂದುವರಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

click me!