ಹೌಸ್‌ ಕೀಪಿಂಗ್‌ ಹುಡುಗನೊಂದಿಗೆ ಸಂಪರ್ಕದಲ್ಲಿದ್ದ ನಾಲ್ವರಿಗೆ ಕೊರೋನಾ ಸೋಂಕು

By Kannadaprabha NewsFirst Published May 8, 2020, 7:48 AM IST
Highlights

ಬೆಂಗಳೂರಿನಲ್ಲಿ ಮತ್ತೆ 19 ಹೊಸ ಕೊರೋನಾ ಕೇಸ್‌| ಸೋಂಕಿತರ ಜೊತೆ ಸಂಪರ್ಕ ಇದ್ದವರ ಪತ್ತೆ ಶುರು| ನಗರದಲ್ಲಿ ಒಟ್ಟು 162 ಪ್ರಕರಣಗಳ ಪೈಕಿ 77 ಜನರು ಗುಣಮುಖ, ಆರು ಜನ ಸಾವು, 78 ಜನ ಸಕ್ರಿಯ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ|

ಬೆಂಗಳೂರು(ಮೇ.08): ಕೋವಿಡ್‌ ಹಾಟ್‌ಸ್ಪಾಟ್‌ ಪಾದರಾಯನಪುರ ಹಾಗೂ ಶಿವಾಜಿನಗರ ಸೇರಿದಂತೆ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಮತ್ತೆ ಎಂಟು ಕೋವಿಡ್‌ 19 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ನಗರದ ಒಟ್ಟು ಸೋಂಕಿತರ ಸಂಖ್ಯೆ 162ಕ್ಕೆ ಏರಿಕೆಯಾಗಿದೆ.

ಶಿವಾಜಿನಗರದ ಹೋಟೆಲ್‌ವೊಂದರ ಹೌಸ್‌ ಕೀಪಿಂಗ್‌ ಹುಡುಗನಿಗೆ ಮಂಗಳವಾರವಷ್ಟೇ ಸೋಂಕು ದೃಢಪಟ್ಟಿತ್ತು. ಈಗ ಅವನ ಸಂಪರ್ಕದಲ್ಲಿದ್ದ ಇನ್ನೂ ನಾಲ್ವರಿಗೆ ಗುರುವಾರ ಕೊರೋನಾ ಸೋಂಕು ದೃಢಪಟ್ಟಿದೆ. ಈ ನಾಲ್ವರು ಕ್ರಮವಾಗಿ 19, 22, 25 ಮತ್ತು 40 ವರ್ಷದವರಾಗಿದ್ದಾರೆ. ಈ ಐವರು ಸೋಂಕಿತರ ಜೊತೆ ಇನ್ನೂ 30 ಜನರ ಜೊತೆ ಸಂಪರ್ಕವಿದ್ದು, ಬಿಬಿಎಂಪಿ ಆರೋಗ್ಯ ಇಲಾಖೆ ಸಿಬ್ಬಂದಿ ಅವರೆಲ್ಲರ ಮಾಹಿತಿ ಸಂಗ್ರಹಿಸಿ ಪತ್ತೆ ಹಚ್ಚಿ ಪರೀಕ್ಷೆಗೊಳಿಸುವ ಹಾಗೂ ಕ್ವಾರಂಟೈನ್‌ ಮಾಡುವ ಕೆಲಸ ಆರಂಭಿಸಿದ್ದಾರೆ.

ಗರ್ಭಿಣಿ, ಪೇದೆಗಿಲ್ಲ ಮಹಾಮಾರಿ ಕೊರೋನಾ: ನಿಟ್ಟುಸಿರು ಬಿಟ್ಟ ಪೊಲೀಸ್‌ ಇಲಾಖೆ..!

ಇನ್ನು, ಪಾದರಾಯನಪುರದಲ್ಲಿ ಮೂರು ಕೊರೋನಾ ಸೋಂಕು ಪ್ರಕರಣ ದೃಢಪಟ್ಟಿವೆ. ಇಲ್ಲಿ ಸೋಂಕು ಸಮುದಾಯಕ್ಕೆ ಹಬ್ಬಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಲ್ಲಿನ ಜನರನ್ನು ರಾರ‍ಯಂಡಮ್‌ ಆಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸುತ್ತಿದೆ. ಈವರೆಗೆ 150 ಜನರ ಪರೀಕ್ಷೆ ನಡೆಸಲಾಗಿದ್ದು, ಆರು ಜನರಿಗೆ ಪಾಸಿಟಿವ್‌ ಬಂದಿದೆ.

77 ಜನ ಗುಣಮುಖ:

ಬೆಂಗಳೂರಿನಲ್ಲಿ ಗುರುವಾರ ಮತ್ತಿಬ್ಬರು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇದರಿಂದ ನಗರದಲ್ಲಿ ಪತ್ತೆಯಾಗಿರುವ ಒಟ್ಟು 162 ಪ್ರಕರಣಗಳ ಪೈಕಿ 77 ಜನರು ಗುಣಮುಖರಾದಂತಾಗಿದೆ.ಆರು ಜನ ಮೃತಪಟ್ಟಿದ್ದು, 78 ಜನ ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 

click me!