ನಿಯಮ ಉಲ್ಲಂಘಿಸಿ ಕೋಟ್ಯಂತರ ರೂ. ಬಿಡುಗಡೆ: ಬಿಬಿಎಂಪಿ ಕಚೇರಿ ಸೀಲ್‌

By Kannadaprabha NewsFirst Published Oct 4, 2020, 7:23 AM IST
Highlights

ನಿಯಮ ಉಲ್ಲಂಘಿಸಿ 28.36 ಕೋಟಿ ಗುತ್ತಿಗೆದಾರರಿಗೆ ಬಿಡುಗಡೆ|  ಜೇಷ್ಠತೆ ಪರಿಗಣಿಸದೇ, ಸಾಫ್ಟ್‌ವೇರ್‌ ಬಳಸದೆ ಹಣ ಬಿಡುಗಡೆ ಮಾಡಿದ ಗೋವಿಂದರಾಜು| ಮಾತೃ ಇಲಾಖೆಗೆ ವರ್ಗ| ಅದಕ್ಕಾಗಿ ಉನ್ನತ ಮಟ್ಟದ ತನಿಖಾ ತಂಡ ರಚನೆ| 

ಬೆಂಗಳೂರು(ಅ.04): ನಿಯಮ ಉಲ್ಲಂಘಿಸಿ ಗುತ್ತಿಗೆದಾರರಿಗೆ 28.36 ಕೋಟಿ ಬಿಡುಗಡೆ ಮಾಡಿದ ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಆರ್‌.ಗೋವಿಂದರಾಜು ಅವರ ಕೊಠಡಿಗೆ ಹಠಾತ್ತಾಗಿ ಬೀಗ ಮುದ್ರೆ (ಸೀಲ್‌) ಹಾಕಿ ತನಿಖೆಗೆ ಆದೇಶಿಸುವ ಜೊತೆಗೆ ಅವರನ್ನು ಪಾಲಿಕೆಯ ಸೇವೆಯಿಂದ ಬಿಡುಗಡೆ ಮಾಡಲಾಗಿದೆ.

ಗುತ್ತಿಗೆದಾರರಿಗೆ ಬಿಡುಗಡೆ ಜೇಷ್ಠತೆ ನಿಯಮ ಅನುಸರಿಸಿ ಹಣ ಬಿಡುಗಡೆ ಮಾಡಬೇಕೆಂಬ ನಿಯಮ ಉಲ್ಲಂಘಿಸಿರುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಮತ್ತು ಆಯುಕ್ತರ ನಿರ್ದೇಶನದ ಮೇಲೆ ಅ.2ರ ಗಾಂಧಿ ಜಯಂತಿಯ ರಜೆ ದಿನವಾದ ಶುಕ್ರವಾರ ಮುಖ್ಯ ಲೆಕ್ಕಾಧಿಕಾರಿ ಕಚೇರಿಯನ್ನು ಸೀಲ್‌ ಮಾಡಲಾಗಿದೆ.

ನಗರೋತ್ಥಾನ ಯೋಜನೆ, ಬಜೆಟ್‌ ಹಾಗೂ 14ನೇ ಹಣಕಾಸು ಆಯೋಗದ ಅನುದಾನ ಸೇರಿದಂತೆ ಎಲ್ಲವನ್ನೂ ನಿರ್ದಿಷ್ಟಉದ್ದೇಶಕ್ಕೆ ಮಾತ್ರ ಬಳಸಬೇಕೆಂಬ ಸರ್ಕಾರ ಸಹ ನಿರ್ದೇಶನ ನೀಡಿದೆ. ಆದರೆ, ಮುಖ್ಯಲೆಕ್ಕಾಧಿಕಾರಿ ಗೋವಿಂದರಾಜು ಅವರು ಈ ನಿಯಮಾವಳಿಯನ್ನು ಉಲ್ಲಂಘಿಸಿ ಸೆ.1ರಿಂದ ಸೆ.15ರ ಅವಧಿಯಲ್ಲಿ ಸುಮಾರು .28.36 ಕೋಟಿಯನ್ನು ಬಿಡುಗಡೆ ಮಾಡಿದ್ದಾರೆ.

‘ಕಸ ರಸ್ತೆಗೆ ಎಸೆದರೆ ಅರೆಸ್ಟ್ : ವಿಂಗಡಿಸದಿದ್ದರೆ ಭಾರೀ ದಂಡ'

ಶನಿವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌, ಇಂಟಿ ಗ್ರೇಟೆಡ್‌ ಫೈನಾನ್ಸಿಯಲ್‌ ಮ್ಯಾನೇಜ್‌ಮೆಂಟ್‌ (ಐಎಫ್‌ಎಂಎಸ್‌) ಸಾಫ್ಟ್‌ವೇರ್‌ನ ಮುಖಾಂತರವೇ ಹಣ ಮಾಡಬೇಕು. ಆದರೆ, ಮುಖ್ಯ ಲೆಕ್ಕಾಧಿಕಾರಿ ಗೋವಿಂದ ರಾಜು ಅವರು ಈ ಸಾಫ್ಟ್‌ ವೇರ್‌ ಬಳಸದೆ ಆಫ್‌ಲೈನ್‌ನಲ್ಲಿ ಜೇಷ್ಠತೆ ನಿಯಮ ಉಲ್ಲಂಘಿಸಿ ಕಾಮಗಾರಿಯ ಬಿಲ್‌ ಪಾವತಿ ಮಾಡಿದ್ದಾರೆ. ಬಿಬಿಎಂಪಿಯ ಕಾಮಗಾರಿಗೆ ಸರ್ಕಾರದ ಅನುದಾನ, ಸರ್ಕಾರದ ಕಾಮಗಾರಿ ಹಣಕಾಸು ಆಯೋಗದ ಹಣವನ್ನು ನಿಯಮ ಉಲ್ಲಂಘಿಸಿ ಬಿಡುಗಡೆ ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಕಚೇರಿ ಸೀಜ್‌ ಮಾಡಲಾಗಿದೆ ಎಂದು ತಿಳಿಸಿದರು.ಅಲ್ಲದೇ ಗೋವಿಂದರಾಜು ಅವರನ್ನು ಬಿಬಿಎಂಪಿ ಸೇವೆಯಿಂದ ತಕ್ಷಣ ಬಿಡುಗಡೆ ಮಾಡಿ, ರಾಜ್ಯ ಸರ್ಕಾರದ ಹಣಕಾಸು ಇಲಾಖೆಗೆ ವಾಪಾಸು ಕಳಿಸಲು ಆದೇಶಿಸಲಾಗಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ತನಿಖಾ ತಂಡ ರಚನೆ:

ಪಾಲಿಕೆ ಆರ್ಥಿಕ ಸಂಕಷ್ಟದಲ್ಲಿದ್ದು, ಪ್ರತಿ ರೂಪಾಯಿಯನ್ನು ಲೆಕ್ಕಹಾಕಿ ಬಳಸಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಕೆಲವು ಅಂಶಗಳು ಬೆಳಕಿಗೆ ಬಂದಿವೆ. ಈ ಸಂಬಂಧ ಸಂಪೂರ್ಣ ತನಿಖೆ ನಡೆಸಲಾಗುವುದು. ಅದಕ್ಕಾಗಿ ಉನ್ನತ ಮಟ್ಟದ ತನಿಖಾ ತಂಡ ರಚನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಿಯಮ ಉಲ್ಲಂಘಿಸಿ ಪಾವತಿಸಿ ಬಿಲ್‌ ವಿವರ

*ಸೆ.11ರಂದು ಸಾಮಾನ್ಯ ವಿಭಾಗದ ಅಡಿಯಲ್ಲಿ 7.86 ಕೋಟಿ ಮೊತ್ತದ ಬಿಲ್‌ಅನ್ನು ಆಯುಕ್ತರ ಮತ್ತು ಹಣಕಾಸು ವಿಶೇಷ ಆಯುಕ್ತರ ಗಮನಕ್ಕೆ ತರದೇ ಬಿಡುಗಡೆ.
*ಸೆ.14ರಂದು ರಾಜ್ಯ ಹಣಕಾಸು ಆಯೋಗದ 5.83 ಕೋಟಿ ಅನುದಾನ ಬಿಬಿಎಂಪಿ ಕಾಮಗಾರಿಗೆ ಬಿಡುಗಡೆ
*ಜೇಷ್ಠತೆ ನಿಯಮ ಉಲ್ಲಂಘಿಸಿ 6.96 ಕೋಟಿ ಗುತ್ತಿಗೆದಾರರಿಗೆ ಬಿಡುಗಡೆ
*ಸೆ.14ಕ್ಕೆ ಬಿಬಿಎಂಪಿ ಆಯುಕ್ತರ ವಿವೇಚನೆಯ 7.68 ಕೋಟಿಯನ್ನು ಆಯುಕ್ತರ ಗಮನಕ್ಕೆ ತರದೇ ಬಿಡುಗಡೆ. ಆಯುಕ್ತರ ವಿವೇಚನೆಯಡಿ ಗುತ್ತಿಗೆದಾರರಿಗೆ (ಮದುವೆ, ಆರೋಗ್ಯದ ಪರಿಸ್ಥಿತಿ, ಕೋರ್ಟ್‌ ಪರಿಸ್ಥಿತಿ) ಕೆಲ ಸಂದರ್ಭದಲ್ಲಿ ಮಾತ್ರ 25 ಲಕ್ಷ ಬಿಡುಗಡೆ ಮಾಡಬಹುದು. ಆದರೆ, ಆಯುಕ್ತರ ಗಮನಕ್ಕೂ ತಾರದೆ ಬಿಲ್‌ ಪಾವತಿ.
 

click me!