‘ಆರೋಗ್ಯಕರ ಬೆಂಗಳೂರು‘ ಯೋಜನೆಯಡಿ ಬಿಬಿಎಂಪಿ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ ಹೆಚ್ಚಿಸುವುದು, ಉಚಿತ ರೋಗ ಪತ್ತೆ, ದಂತ ಚಿಕಿತ್ಸೆ ಆರಂಭಿಸುವುದು ಸೇರಿದಂತೆ ನಗರದ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಮುಂದಿನ ಎರಡು ವರ್ಷದಲ್ಲಿ 412 ಕೋಟಿ ರು. ವೆಚ್ಚ ಮಾಡಲು ಉದ್ದೇಶಿಸಲಾಗಿದೆ.
ಬೆಂಗಳೂರು (ಮಾ.30): ‘ಆರೋಗ್ಯಕರ ಬೆಂಗಳೂರು‘ ಯೋಜನೆಯಡಿ ಬಿಬಿಎಂಪಿ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ ಹೆಚ್ಚಿಸುವುದು, ಉಚಿತ ರೋಗ ಪತ್ತೆ, ದಂತ ಚಿಕಿತ್ಸೆ ಆರಂಭಿಸುವುದು ಸೇರಿದಂತೆ ನಗರದ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಮುಂದಿನ ಎರಡು ವರ್ಷದಲ್ಲಿ 412 ಕೋಟಿ ರು. ವೆಚ್ಚ ಮಾಡಲು ಉದ್ದೇಶಿಸಲಾಗಿದೆ.
19 ಆಸ್ಪತ್ರೆಗಳ ಹಾಸಿಗೆ ಸಂಖ್ಯೆಯನ್ನು 852 ರಿಂದ 1,122ಕ್ಕೆ ಹೆಚ್ಚಿಸುವುದು, ಆಸ್ಪತ್ರೆಗಳಲ್ಲಿ 60 ಮಾದರಿಯ ರೋಗ ಪರೀಕ್ಷೆಗಳನ್ನು ಉಚಿತಗೊಳಿಸುವುದು, 26 ಹೊಸ ಕೇಂದ್ರಗಳಲ್ಲಿ ದಂತ ಚಿಕಿತ್ಸಾ ಸೇವೆ ಆರಂಭಿಸುವುದು, ಆರೋಗ್ಯ ಸೇವೆಯನ್ನು ಮನೆ ಬಾಗಿಲಿಗೆ ನೀಡಲು ಪ್ರತಿ ಆಸ್ಪತ್ರೆಗೆ ತಲಾ ಒಂದರಂತೆ ಒಟ್ಟು144 ಇವಿ ಬೈಕ್ ನೀಡಿಕೆ, ಹೃದಯಾಘಾತ ಹಾಗೂ ಇತರ ತುರ್ತು ಆರೈಕೆಗೆ ಬಿಎಲ್‌ಎಸ್ ಸೌಲಭ್ಯದ 26 ಆ್ಯಂಬುಲೆನ್ಸ್ ಖರೀದಿ, ವಿಶೇಷಚೇತನ ಮಕ್ಕಳಿಗೆ ಹೆಚ್ಚುವರಿ 7 ಫಿಸಿಯೋಥೆರಪಿ ಸೇವೆ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ.
ಬೆಂಗಳೂರಿನ ಸುಗಮ ಸಂಚಾರಕ್ಕೆ 73,600 ಕೋಟಿಯ ಬೃಹತ್ ಗಾತ್ರದ ಯೋಜನೆ!
2 ಆಸ್ಪತ್ರೆಗಳಲ್ಲಿ ‘ಸೇವ್ ಮಾಮ್’ ಆರಂಭ: ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಸಮಗ್ರ, ಸಮರ್ಪಕ, ನಿರಂತರ ಆರೈಕೆಗಾಗಿ ವಿನೂತನವಾದ ಎಐ ತಂತ್ರಜ್ಞಾನದೊಂದಿಗೆ ‘ಸೇವ್ ಮಾಮ್’ ಎಂಬ ತಾಯಿ ಮತ್ತು ಮಕ್ಕಳ ಆರೈಕೆ ವೇದಿಕೆಯನ್ನು ಪಾಲಿಕೆ ಪ್ರಾರಂಭಿಸಲಿದೆ. ಪ್ರಾಯೋಗಿಕವಾಗಿ ನಗರದ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸುಮಾರು 200 ತಾಯಂದಿರ ಆರೈಕೆಯನ್ನು ಪ್ರಾರಂಭಿಸಲಾಗಿದೆ. ಭವಿಷ್ಯದಲ್ಲಿ ಗಂಭೀರ ಸಮಸ್ಯೆ ಎದುರಿಸುವ ಗರ್ಭಿಣಿಯರನ್ನು ದಿನದ 24 ಗಂಟೆ ಪರೀಕ್ಷಿಸಲು ‘ಸೇವ್ ಮಾಮ್’ ಎಐ ಆಧಾರಿತ ತಾಯಿ ಮತ್ತು ಮಕ್ಕಳ ಆರೈಕೆ ವೇದಿಕೆ ಸ್ಥಾಪಿಸಲಾಗುವುದು.
ವೈದ್ಯಕೀಯ ಕಾಲೇಜು ಆರಂಭಕ್ಕೆ ಪ್ರಸ್ತಾವನೆ: 300 ಹಾಸಿಗೆ ಸಾಮರ್ಥ್ಯ ಇರುವ ಬಿಬಿಎಂಪಿಯ ಎಂ.ಸಿ.ಲೇಔಟ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿವಿಧ ತಜ್ಞ ಸೇವೆಗಳನ್ನು ನೀಡಲಾಗುತ್ತಿದ್ದು, ಇಲ್ಲಿ ಹೊಸದಾಗಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಸುಮಾರು 633 ಕೋಟಿ ಅಗತ್ಯವಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.
6 ಪಶು ವೈದ್ಯಕೀಯ ಚಿಕಿತ್ಸಾಲಯ: ಪಾಲಿಕೆಯ ಆರು ವಲಯಗಳಲ್ಲಿ ಪಶುವೈದ್ಯಕೀಯ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಸಂತಾನ ನಿಯಂತ್ರಣ (ಎಬಿಸಿ) ಕಾರ್ಯಕ್ರಮದಡಿಯಲ್ಲಿ 75 ಸಾವಿರ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಉದ್ದೇಶಿಸಲಾಗಿದೆ. 1.8 ಲಕ್ಷಕ್ಕೂ ಹೆಚ್ಚು ನಾಯಿಗಳಿಗೆ ಸಂಯುಕ್ತ ಲಸಿಕೆಯನ್ನು ನೀಡಲಾಗುವುದು. ಜೊತೆಗೆ, ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯಗಳಲ್ಲಿ 7.5 ಕೋಟಿ ವೆಚ್ಚದಲ್ಲಿ ಎರಡು ಹೊಸ ಎಬಿಸಿ ಕೇಂದ್ರಗಳ ಸ್ಥಾಪನೆ, ಯಲಹಂಕದಲ್ಲಿ ಪದೇ ಪದೇ ಕಚ್ಚುವ ನಾಯಿಗಳಿಗೆ ವೀಕ್ಷಣಾ ಕೇಂದ್ರ ಸ್ಥಾಪನೆ, ಮೂರು ವಲಯಗಳಲ್ಲಿ ಕಾಯಿಲೆ ಮತ್ತು ಅಪಘಾತಕ್ಕೊಳಗಾದ ನಾಯಿ ಆಶ್ರಯ ಕೇಂದ್ರ ಮತ್ತು ಪ್ರಾಣಿಗಳ ಚಿತಾಗಾರ ಸ್ಥಾಪನೆಗೆ ನಿರ್ಧರಿಸಲಾಗಿದೆ.
ದಾಖಲೆಯ 19,927 ಕೋಟಿ ಬಿಬಿಎಂಪಿ ಬಜೆಟ್ ಮಂಡನೆ: ಶೇ.60ರಷ್ಟು ಹೆಚ್ಚಳ
ಕಸಾಯಿಖಾನೆ ನವೀಕರಣ: ನಗರದಲ್ಲಿರುವ ಕಸಾಯಿಖಾನೆಗಳನ್ನು 5 ಕೋಟಿ ರು.ವೆಚ್ಚದಲ್ಲಿ ನವೀಕೃತ ತಂತ್ರಜ್ಞಾನ ಬಳಸಿ ಆಧುನೀಕರಿಸಲು ಉದ್ದೇಶಿಸಲಾಗಿದೆ. ಹೊಸ ಕಸಾಯಿಖಾನೆ ನಿರ್ಮಾಣಕ್ಕೆ 10 ಕೋಟಿ ರು. ಹಾಗೂ ನಿರ್ವಹಣೆಗೆ 2 ಕೋಟಿ ರು.ಮೀಸಲಿಡಲಾಗಿದೆ.