Waste Disposal: ಇದೊಮ್ಮೆ ಕರುಣೆ ತೋರಿಸಿ, ಹೈಕೋರ್ಟ್‌ಗೆ ಕ್ಷಮೆ ಕೇಳಿದ ಬಿಬಿಎಂಪಿ

By Kannadaprabha NewsFirst Published Mar 6, 2022, 5:25 AM IST
Highlights

*  ನ್ಯಾಯಾಲಯ ನಿರ್ಬಂಧಿಸಿದ್ದರೂ ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ತ್ಯಾಜ್ಯ ವಿಲೇವಾರಿ
*  ಕೋರ್ಟ್‌ ಆದೇಶ ಉಲ್ಲಂಘಿಸಿದ್ದಕ್ಕೆ ಪಾಲಿಕೆ ಆಯುಕ್ತರ ವಿರುದ್ಧ ಕೆಂಡಾಮಂಡಲ
*  ಅಧಿಕಾರಿಗೆ ಹೈಕೋರ್ಟ್‌ ಎಂದರೇನು?, ಆದೇಶ ಎಂದರೇನೆಂದು ಅರ್ಥ ಮಾಡಿಸಬೇಕೆಂದು ಗರಂ
 

ಬೆಂಗಳೂರು(ಮಾ.06): ನ್ಯಾಯಾಲಯದ ನಿರ್ಬಂಧದ ಹೊರತಾಗಿಯೂ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಿರುವ ಸಂಬಂಧ ಬಿಬಿಎಂಪಿ(BBMP) ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta) ಹೈಕೋರ್ಟ್‌ಗೆ ಬೇಷರತ್‌ ಕ್ಷಮೆಯಾಚಿಸಿದರು.

ಬೆಂಗಳೂರಿನಲ್ಲಿ(Bengaluru) ಘನ ತ್ಯಾಜ್ಯ ವಿಲೇವಾರಿಗೆ(Solid Waste Disposal) ಸಂಬಂಧಿಸಿದಂತೆ 2012ರಲ್ಲಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಶನಿವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್‌ ಅವರಿದ್ದ ಪೀಠ, ಪದೇ ಪದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತಿರುವ ಪಾಲಿಕೆಯ ಕಾರ್ಯ ವೈಖರಿಯನ್ನು ತೀವ್ರವಾಗಿ ಖಂಡಿಸಿತು.
ಶನಿವಾರ ವಿಚಾರಣೆ ವೇಳೆ ಹಾಜರಾಗಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಹಾಗೂ ಪಾಲಿಕೆ ಪರ ವಕೀಲರು, ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ಕೆಲ ತಪ್ಪುಗಳು ನಡೆದಿವೆ. ಆದ್ದರಿಂದ, ಈ ಬಾರಿ ಕರುಣೆ ತೋರಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿ, ಬೇಷರತ್‌ ಕ್ಷಮೆಯಾಚಿಸುತ್ತಿರುವುದಾಗಿ ಹೇಳಿದರು.

BBMP Corruption: ತ್ಯಾಜ್ಯದ ಹಣವನ್ನೂ ತಿಂದು ತೇಗಿದ ಪಾಲಿಕೆ ಭ್ರಷ್ಟರು!

ಕಾನೂನು ಅರ್ಥ ಮಾಡಿಸುತ್ತೇವೆ:

ಹೈಕೋರ್ಟ್‌(High Court) ನಿರ್ಬಂಧಿಸಿದ್ದರೂ ಮಿಟ್ಟಗಾನಹಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಿರುವ ಬಿಬಿಎಂಪಿ ಕ್ರಮಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ಕಾನೂನಿಗಿಂತ ಮೇಲಿದ್ದೇವೆಂದು ಭಾವಿಸುತ್ತಿರುವ ಪಾಲಿಕೆ ಅಧಿಕಾರಿಗಳಿಗೆ ಹೈಕೋರ್ಟ್‌ ಎಂದರೇನು, ಅದರ ಆದೇಶ ಪಾಲನೆ ಮಾಡುವುದು ಹೇಗೆ, ಕಾನೂನು ಎಂದರೇನು ಎಂಬ ಬಗ್ಗೆ ಅರ್ಥ ಮಾಡಿಸುವುದಾಗಿ ಎಚ್ಚರಿಕೆ ನೀಡಿತು.

ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ನಗರದ ಘನತ್ಯಾಜ್ಯ ಸುರಿಯದಂತೆ ನ್ಯಾಯಾಲಯದ ಸ್ಪಷ್ಟಆದೇಶವಿದ್ದರೂ ಉಲ್ಲಂಘಿಸಲಾಗಿದೆ. ತ್ಯಾಜ್ಯ ಸುರಿಯುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ(KSPCB) ಪಾಲಿಕೆಗೆ ಅನುಮತಿಸಿರಲಿಲ್ಲ. ಹೀಗಿದ್ದರೂ, ತ್ಯಾಜ್ಯ ಸುರಿಯುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗಿದೆ. ಪ್ರತಿದಿನ ಬಿಬಿಎಂಪಿಯದ್ದು ಇದೇ ಸಮಸ್ಯೆಯಾಗಿದೆ. ನಮಗೂ ಇದನ್ನೆಲ್ಲ ನೋಡಿ ಸಾಕಾಗಿದೆ. ಘನ ತ್ಯಾಜ್ಯ ಸುರಿಯುವ ವಿಚಾರದಲ್ಲಿ ನ್ಯಾಯಾಲಯದ ಆದೇಶ ಸರಿಯಾಗಿದೆ. ಅದನ್ನು ಉಲ್ಲಂಘಿಸುವ ಮೂಲಕ ಅಧಿಕಾರಿ ದುರ್ನಡತೆ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿತು.

ACB Raids: ಕಟ್ಟಡಗಳಿಂದ ತೆರಿಗೆ ಸಂಗ್ರಹಿಸದ ಬಿಬಿಎಂಪಿಗೆ 500 ಕೋಟಿ ನಷ್ಟ

ಹೇಳಲು ಏನೂ ಉಳಿದಿಲ್ಲ:

ವಿಚಾರಣೆ ವೇಳೆ ಪಾಲಿಕೆ ಪರವಾಗಿ ವಾದಿಸಲು ಮುಂದಾದ ವಕೀಲರಿಗೆ, ಇಂಥ ವ್ಯಕ್ತಿಗಳನ್ನು(ಅಧಿಕಾರಿಗಳನ್ನು) ನೀವು ಸಮರ್ಥಿಸಿಕೊಳ್ಳುತ್ತಿರುವುದು ವಿಷಾದನೀಯ. ಹೀಗಾದರೆ ನಾವು ಹೇಳಲು ಏನೂ ಉಳಿದಿಲ್ಲ. ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದು, ಇದಕ್ಕಿಂತ ದೊಡ್ಡ ಅಗೌರವ ಮತ್ತೊಂದು ಇರಲು ಸಾಧ್ಯವೇ ಇಲ್ಲ. ಕೋರ್ಟ್‌ ಆದೇಶಕ್ಕಿಂತ ಮೇಲಿನದು ಯಾವುದೂ ಇಲ್ಲ. ಒಂದು ವೇಳೆ ಆದೇಶ ಪಾಲನೆ ಮಾಡಲಾಗದಿದ್ದರೆ ಕೋರ್ಟ್‌ ಮುಂದೆ ಬಂದು ಸಮಯ ವಿಸ್ತರಣೆ ಕೇಳಬೇಕಿತ್ತು. ನ್ಯಾಯಾಲಯದ ಅನುಮತಿ ಇಲ್ಲದೆ ನಿಮ್ಮಷ್ಟಕ್ಕೆ ನೀವು ಏನೂ ಮಾಡಲಾಗದು. ಆದರೆ, ಈ ಪ್ರಕ್ರಿಯೆ ಅನುಸರಿಸದೆ ಮಾಡದೆ ಪ್ರಮಾದ ಎಸಗಲಾಗಿದೆ. ಆದ್ದರಿಂದ, ಅಧಿಕಾರಿಯನ್ನು ಜೈಲಿಗೆ ಕಳುಹಿಸಬೇಕು. ಐಎಎಸ್‌ ಅಧಿಕಾರಿಯಾಗಿರುವ ಗುಪ್ತಾ ಅವರಿಗೆ ನ್ಯಾಯಾಲಯ ಮತ್ತು ನ್ಯಾಯಾಲಯದ ಆದೇಶ ಎಂದರೇನು ಎಂಬ ಬಗ್ಗೆ ಅರ್ಥ ಮಾಡಿಸಬೇಕಿದೆ ಎಂದು ಕಟುವಾಗಿ ನುಡಿಯಿತು. ಪಾಲಿಕೆ ಅಧಿಕಾರಿಗಳು ದಪ್ಪ ಚರ್ಮದವರಾಗಿದ್ದಾರೆ, ಕೆಲ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಸಮಯ ಬಂದಿದೆ. ಅವರಿಗೆ ತಪ್ಪು-ಸರಿಯ ಅನುಭವವಾಗುವಂತೆ ಮಾಡಬೇಕಿದೆ ಎಂದು ನ್ಯಾಯಪೀಠ ತಿಳಿಸಿತು.

ಪ್ರಮಾಣಪತ್ರ ಸಲ್ಲಿಸಲು ತಾಕೀತು

ಕೋರ್ಟ್‌ ಆದೇಶ ಪಾಲನೆ ಮಾಡದೆ ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿರುವ ಆಯುಕ್ತರನ್ನು ಯಾವುದೇ ನಿಯಮ ಅಥವಾ ಕಾನೂನುಗಳು ರಕ್ಷಿಸುವುದಿಲ್ಲ ಎಂದು ತೀಕ್ಷ್ಣವಾಗಿ ನುಡಿದ ಪೀಠ, ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ತಮ್ಮ ವರ್ತನೆಯ ಬಗ್ಗೆ ವಿವರಣೆ ನೀಡಿ ವೈಯಕ್ತಿಕ ಪ್ರಮಾಣಪತ್ರ ಸಲ್ಲಿಸಲು 10 ದಿನಗಳ ಕಾಲಾವಕಾಶ ನೀಡುತ್ತೇವೆ. ಪ್ರಮಾಣಪತ್ರ ಪರಿಶೀಲಿಸಿದ ಬಳಿಕ, ಅವರ ಮೇಲೆ ಕರುಣೆ ತೋರಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುವುದಾಗಿ ತಿಳಿಸಿ, ವಿಚಾರಣೆಯನ್ನು ಮಾ.17ಕ್ಕೆ ಮುಂದೂಡಿತಲ್ಲದೆ, ಮುಂದಿನ ವಿಚಾರಣೆ ವೇಳೆ ಮುಖ್ಯ ಆಯುಕ್ತರು ಖುದ್ದು ಹಾಜರಿರಬೇಕು ಎಂದು ನಿರ್ದೇಶಿಸಿತು.
 

click me!