
ಗದಗ (ಜೂ.10): ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಮೇಲ್ನೋಟಕ್ಕೆ ಬಹಳ ಸುಗಮವಾಗಿ ಆಯಿತು ಎನ್ನುವಂತೆ ಕಾಣಿಸುತ್ತಿದೆ. ಆದರೆ, ಒಳಬೇಗುದಿ ಇನ್ನೂ ಕೆಂಡದಂತೆ ಜೀವಂತವಾಗಿದೆ. ಇನ್ನೂ ಎರಡು ವರ್ಷ ರಾಜಕೀಯ ಅಸ್ಥಿರತೆ, ಅಸಮಾಧಾನ, ಆಡಳಿತ ಕುಸಿದುಹೋಗುತ್ತದೆ. ಸಾಮಾನ್ಯ ಜನರ ಬದುಕು ದುಸ್ತರವಾಗುವುದು ಖಚಿತ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಾಯಕತ್ವ ಒಪ್ಪಿಕೊಂಡಂತೆ ಕಾಂಗ್ರೆಸ್ ನ ಶಾಸಕರು, ಮಂತ್ರಿಗಳು ಡಿ.ಕೆ. ಶಿವಕುಮಾರ ಅವರನ್ನು ಒಪ್ಪಿಕೊಂಡಿಲ್ಲ. ಕಾಂಗ್ರೆಸ್‌ನಲ್ಲಿ ಸಚಿವರಾಗಲು ಬಹಳ ಒತ್ತಡ ಇದೆ. ಯಾಕೆಂದರೆ 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಆ ಪಕ್ಷದ ಶಾಸಕರಿಗೆ ಗೊತ್ತಾಗಿದೆ. ಹೀಗಾಗಿ ಈಗಲೇ ಮಂತ್ರಿ ಆಗಬೇಕೆಂದು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಬಹಳ ಸವಾಲುಗಳಿವೆ. ರಾಜಕೀಯವಾಗಿ ಸ್ಥಿರವಾಗಿದ್ದರೆ ಮಾತ್ರ ಒಳ್ಳೆಯ ಆಡಳಿತ ಕೊಡಲು ಸಾಧ್ಯ ಎಂದರು.
ಸಿದ್ದರಾಮಯ್ಯ ಸುಮ್ಮನೆ ಕುಳಿತಿಲ್ಲ. ಮೊದಲ ಹಂತದ ಸಚಿವ ಸಂಪುಟದಲ್ಲಿ ಯಾರ ಪ್ರಭಾವ ಕಾಣುತ್ತಿದೆ, ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ಪ್ರಭಾವ ಮಾತ್ರ ಕಾಣಿಸುತ್ತಿದೆ. ಮುಂದಿನ ಕಂತಿನಲ್ಲಿ ಡಿ.ಕೆ. ಶಿವಕುಮಾರ ನಂಬಿದವರನ್ನು ಮಂತ್ರಿ ಮಾಡಿದರೆ ಅವರ ಛಾಪು ಇದೆ ಎನ್ನಬಹುದು. ಇಲ್ಲವಾದರೆ ಡಿಕೆಶಿ ಛಾಪು ಇಲ್ಲ ಅಂತ ಅರ್ಥ ಎಂದರು.
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ಎರಡು ವಾರದಲ್ಲಿ ಯುದ್ಧ ಮುಗಿಯಲಿದೆ. ಎಲ್ಲವೂ ಸರಿಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬಿಕ್ಕಟ್ಟು ಉಂಟಾಗಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಮಾಡಿ ದರ ಇಳಿಸಬೇಕು. ನಾನು ಸಿಎಂ ಆಗಿದ್ದಾಗ ₹7 ಕಡಿತ ಮಾಡಿದ್ದೆ. ಅದೇ ರೀತಿ ರಾಜ್ಯ ಸರ್ಕಾರ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.