ಬಿಎಸ್‌ವೈ ಸರ್ಕಾರಕ್ಕೆ ಖಡಕ್‌ ಎಚ್ಚರಿಕೆ ನೀಡಿದ ಸ್ವಾಮೀಜಿ

By Kannadaprabha News  |  First Published Dec 14, 2020, 11:33 AM IST

ಜ. 14ರಿಂದ ಕೂಡಲ ಸಂಗಮದಿಂದ ಬೆಂಗಳೂರಿನ ವಿಧಾನಸೌಧದವರೆಗೂ ಪಾದಯಾತ್ರೆ| 2ಎ ಮೀಸಲಾತಿಯಿಂದ ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ಒಳಿತಾಗಲಿದೆ|  ಬಿ.ಎಸ್‌. ಯಡಿಯೂರಪ್ಪ ಸರ್ಕಾರಕ್ಕೆ ನಮ್ಮ ಬಲ ಏನು ಎನ್ನುವುದನ್ನು ತೋರಿಸಬೇಕಿದೆ: ಬಸವಜಯಮೃತ್ಯುಂಜಯ ಸ್ವಾಮೀಜಿ| 


ಕಾರಟಗಿ(ಡಿ.14): ರಾಜ್ಯದಲ್ಲಿನ ಬಿಜೆಪಿ ಸರ್ಕಾರಕ್ಕೆ ಪಂಚಮಸಾಲಿ ಸಮುದಾಯದ ಬಲ ಏನು ಎನ್ನುವುದನ್ನು ತೋರಿಸಬೇಕಾಗಿದೆ. ಹೋರಾಟ ನಮಗಾಗಿ ಅಲ್ಲ, ನಮ್ಮ ಸಮುದಾಯದ ಏಳ್ಗೆಗಾಗಿ. ಒಗ್ಗಟ್ಟಾಗಿ ಜ. 14ರಿಂದ ಕೂಡಲ ಸಂಗಮದಿಂದ ಬೆಂಗಳೂರಿನ ವಿಧಾನಸೌಧದ ವರೆಗೂ ಪಾದಯಾತ್ರೆ ನಡೆಸಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. 

ಕಾರಟಗಿಯಲ್ಲಿ ಭಾನುವಾರ ಕೊಪ್ಪಳ ಜಿಲ್ಲಾ ಪಂಚಮಸಾಲಿ ಜನಜಾಗೃತಿ ಸಭೆಗೆ ಚಾಲನೆ ನೀಡಿ ಮಾತನಾಡಿ, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ 2ಎ ಮೀಸಲಾತಿ ನೀಡಲು ಆಗ್ರಹಿಸಿ ಜ. 14ರಂದು ಕೂಡಲ ಸಂಗಮ ಪೀಠದಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸಲಾಗುವುದು. 2ಎ ಮೀಸಲಾತಿಯಿಂದ ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ಒಳಿತಾಗಲಿದೆ. ರಾಜ್ಯದಲ್ಲಿ ನಮ್ಮ ಸಮುದಾಯ ಪ್ರಬಲವಾಗಿದ್ದರೂ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ಪಂಚಲಕ್ಷ ಹೆಜ್ಜೆಯ ಪಾದಯಾತ್ರೆ ಅಖಂಡ ಸಮುದಾಯದ ಪಾದಯಾತ್ರೆ. ರಾಜ್ಯದಲ್ಲಿನ ಬಿ.ಎಸ್‌. ಯಡಿಯೂರಪ್ಪ ಅವರ ಸರ್ಕಾರಕ್ಕೆ ನಮ್ಮ ಬಲ ಏನು ಎನ್ನುವುದನ್ನು ತೋರಿಸಬೇಕಿದೆ ಎಂದು ಒತ್ತಿ ಹೇಳಿದರು.

Tap to resize

Latest Videos

ಕಮಲ ಪಾಳಯದಲ್ಲಿ ಅಸಮಾಧಾನದ ಹೊಗೆ: ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆ

ಸಂಸದ ಸಂಗಣ್ಣ ಕರಡಿ, ಸಚಿವ ಸಿ.ಸಿ. ಪಾಟೀಲ್‌, ಶಾಸಕ ಬಸನಗೌಡ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಇತರ ನಾಯಕರೊಂದಿಗೆ ಮತ್ತೊಮ್ಮೆ ಸಭೆ ನಡೆಸಲಾಗುವುದು. ಜ. 14ರಂದು ನಡೆಯುವ ಪಾದಯಾತ್ರೆಯಲ್ಲಿ ಸರ್ವರೂ ಭೇದಭಾವ ಮರೆತು ಭಾಗವಹಿಸಬೇಕು. ಯಲಬುರ್ಗಾ, ದಾವಣಗೆರೆ ಬಳಿಯ ಹರಿಹರ ಪೀಠ, ಚಿತ್ರದುರ್ಗ ಮೂಲಕ ಬೆಂಗಳೂರಿಗೆ ಪಾದಯಾತ್ರೆ ನಡೆಯಲಿದೆ ಎಂದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌ ಮಾತನಾಡಿ, ಅನೇಕ ವರ್ಷಗಳಿಂದ ಹೋರಾಟ ಮಾಡಿದರೂ ಮೀಸಲಾತಿ ಪಡೆಯಲಾಗಿಲ್ಲ. ಇಷ್ಟು ದಿನಗಳ ಕಾಲ ನಮಗೆ ನೀಡಿದ ಭರವಸೆ ಸಾಕು. ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರಿದ್ದರೂ ಯಾವುದೇ ಪ್ರತಿಫಲ ದೊರೆತಿಲ್ಲ. ಸರ್ಕಾರ ಮೀಸಲಾತಿ ನೀಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು ಶತಸಿದ್ಧ. ಪಂಚಮಸಾಲಿಗಳು ಎಲ್ಲ ಮುಖಂಡರ ಮಾತುಗಳನ್ನು ಕೇಳುತ್ತಾರೆ. ಆದರೆ, ಕೊನೆಗೆ ನಮಗೆ ತಿಳಿದಿದ್ದನ್ನು ನಾವು ಮಾಡುತ್ತೇವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಹೇಳಿದ್ದೇನೆ, ನೀವು ಕುರಿ ಕಾಯೋವೂ›, ನಾವು ದನ ಕಾಯೋವ್ರು. ಇಬ್ಬರಲ್ಲಿ ಅಂಥ ವ್ಯತ್ಯಾಸ ಏನಿಲ್ಲ. ನಮಗೂ 2ಎ ಮೀಸಲಾತಿ ನೀಡಿ. ಸಮುದಾಯಕ್ಕೆ ಮೀಸಲಾತಿ ಕೊಡದೆ ವಿಧಾನಸೌಧ ಪ್ರವೇಶಿಸುವುದಿಲ್ಲ ಎಂದರು.

ಮಾಜಿ ಸಂಸದ ಶಿವರಾಮಗೌಡ, ಸಮುದಾಯದ ಪದಾಧಿಕಾರಿಗಳಾದ ಸೋಮಶೇಖರ ಹಳಿಯಾಳ, ಶಿವಾನಂದ ಮೇಟಿ ಮಾತನಾಡಿದರು. ಸಮುದಾಯದ ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ್‌, ರಾಜ್ಯ ದಾಸೋಹ ಸಮಿತಿ ಅಧ್ಯಕ್ಷ ಚೆನ್ನಬಸಪ್ಪ ಸುಂಕದ, ಬಸವಲಿಂಗಪ್ಪ ಭೂತೆ, ವಕೀಲ ಬಿ.ಎಸ್‌. ಪಾಟೀಲ್‌, ಕೆ. ನಾಗಪ್ಪ, ಕಿಶೋರಿ ಬೂದನೂರು ಇದ್ದರು.
 

click me!