
ವಿಜಯಪುರ: ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ಯತ್ನಾಳ್ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರಾ? ಈ ಕುರಿತು ಎದ್ದಿರುವ ಪ್ರಶ್ನೆಗೆ ಉತ್ತರಿಸಿದ್ದಾರೆ. ವಿಜಯಪುರದಲ್ಲಿ ಮಾತನ್ನಾಡಿರುವ ಅವರು, ಸದ್ಯ ನಾನು ಶಾಸಕನಾಗಿದ್ದೇನೆ. ಮುಂದೆ ಕ್ಷೇತ್ರ ಮರು ವಿಂಗಡನೆ ಆದರೂ ಕೂಡ ವಿಜಯಪುರ ನಗರ ಮತಕ್ಷೇತ್ರ ಇದ್ದೇ ಇರುತ್ತದೆ. ಎಂಪಿ ಆಗಿ ಅಲ್ಲಿ ಏನು ಕೆಲಸ ಇಲ್ಲ. ನಾನು ಎಂಪಿ ಆಗಿ 10 ವರ್ಷ ನೋಡಿದ್ದೇನೆ. ಸುಮ್ನೆ ಅಲ್ಲಿಗೆ ಹೋಗೋದು, ಕೈ ಎತ್ತುವುದು ಡಬ್ಬ ಡಬ್ಬ ಬಡಿಯುವುದು ಬರೋದು ಅಷ್ಟೇ ಎಂದು ಹಗುರವಾಗಿ ಮಾತನ್ನಾಡಿದ್ದಾರೆ.
ಯತ್ನಾಳ್ ಮಾಜಿ ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 1 ಜುಲೈ 2002 ರಿಂದ 8 ಸೆಪ್ಟೆಂಬರ್ 2003 ರವರೆಗೆ ಜವಳಿ ಖಾತೆಯ ರಾಜ್ಯ ಸಚಿವರಾಗಿ ಮತ್ತು 8 ಸೆಪ್ಟೆಂಬರ್ 2003 ರಿಂದ 16 ಮೇ 2004 ರವರೆಗೆ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, 2018 ರಿಂದ ಬಿಜಾಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.
ಇದೇ ವೇಳೆ ಲೋಕಸಭಾ ಹಾಗೂ ವಿಧಾನಸಭೆ ಮತಕ್ಷೇತ್ರಗಳ ಮರುವಿಂಗಡನೆ ಬಿಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಲೋಕಸಭಾ ಈಗ ದೊಡ್ಡದಾಗಿದೆ. ಜನಸಂಖ್ಯೆ ಆಧಾರದ ಮೇಲೆ ಕಡಿಮೆ ಆಗಲಿ, ಹೆಚ್ಚಾಗಲಿ. ಮಹಿಳಾ ಮೀಸಲಾತಿ ಕೊಡಬೇಕಾಗಿದೆ. ಎಸ್ಸಿ, ಎಸ್ಟಿ ಸೀಟ್ ಗಳನ್ನು ಹೆಚ್ಚಿಸಬೇಕು. ಅವರವರ ಜನಸಂಖ್ಯೆ ಆಧಾರದ ಮೇಲೆ ಹೆಚ್ಚಾಗಬೇಕು. ಇದರಿಂದ ಎಲ್ಲರಿಗೂ ನ್ಯಾಯ ಸಿಗುತ್ತದೆ. ಮರುವಿಂಗಡನೆ ಆಗಬೇಕು, ಅದರಿಂದ ಅನೂಕೂಲ ಆಗುತ್ತದೆ. ಜನಪ್ರತಿನಿಧಿಗೆ ನೇರವಾಗಿ ಜನರೊಂದಿಗೆ ಕೆಲಸ ಮಾಡಲು ಅನುಕೂಲ ಆಗುತ್ತದೆ ಎಂದರು.
ನನಗೇನು ಹಾರ್ಟ್ ಅಟ್ಯಾಕ್ ಆಗಿದೆಯಾ? ಕೈ ಕಾಲು ಮುರಿದಿದೆಯಾ? ಎಲ್ಲವೂ ಬರೊಬ್ಬರಿ ಇದೆ. ಬ್ಲಡ್ ಚೆಕ್ ಮಾಡಿದಾಗ ರಿಪೊರ್ಟ್ ಸರಿಯಾಗಿ ಬರಲಿಲ್ಲ. ಟೈಮ್ ಬಿಟ್ಟು ಟೈಮ್ ಜ್ವರ ಬರತ್ತಿತ್ತು. ಹೀಗಾಗಿ ಕೆಲ ದಿನ ರೆಸ್ಟ್ ಮಾಡಿದೆ. ನನಗೇನು ಹಾರ್ಟ್ ಅಟ್ಯಾಕ್ ಆಗಿಲ್ಲ, ಲಕ್ವಾ ಆಗಿಲ್ಲ ಗಟ್ಟಿ ಇದ್ದೇನೆ ಎಂದಿದ್ದಾರೆ. ಕೆಲವರಿಗೆ ವಿಜಯಪುರ ಅಭಿವೃದ್ಧಿ ನೋಡಿ ಅವರಿಗೆ ಸಹಿಸಲು ಆಗುತ್ತಿಲ್ಲ. ಇವತ್ತು ಮೈಸೂರು, ಚಾಮರಾಜನಗರ ಎಲ್ಲಿ ಬೇಕಾದರೂ ವಿಜಯಪುರ ಅಂತಾ ಹೇಳಿದರೆ ಯತ್ನಾಳ ಊರಾ ಎನ್ನುತ್ತಿದ್ದರು. ಮೊದಲು ಗೋಳಗುಮ್ಮಟದ ಊರಾ ಅನ್ನೋರು ಈಗ ಯತ್ನಾಳ್ ಊರಾ ಅನ್ನುತ್ತಿದ್ದಾರೆ. ಇದು ವಿರೋಧಿಗಳಿಗೆ ಸಹಿಸಲು ಆಗುತ್ತಿಲ್ಲ ಎಂದಿದ್ದಾರೆ.