ಭೂ ಸ್ವಾಧೀನ ಕೈಬಿಟ್ರೆ ನಾನೇ ಸಿಎಂಗೆ ಸನ್ಮಾನ ಮಾಡುತ್ತೇನೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Published : Jun 09, 2026, 10:28 PM IST
Basanagouda Patil Yatnal

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಆ ದೇವರು ಅಜ್ಜಯ್ಯ ರೈತರ ಜಮೀನು ಉಳಿಸುಂತಹ ಬುದ್ಧಿ ಕೊಡಲೆಂದು ನಾನು ಪ್ರಾರ್ಥನೆ ಮಾಡುವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದರು.

ರಾಮನಗರ (ಜೂ.09): ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಆ ದೇವರು ಅಜ್ಜಯ್ಯ ರೈತರ ಜಮೀನು ಉಳಿಸುಂತಹ ಬುದ್ಧಿ ಕೊಡಲೆಂದು ನಾನು ಪ್ರಾರ್ಥನೆ ಮಾಡುವೆ. ಭೂ ಸ್ವಾಧೀನ ಕೈಬಿಟ್ಟರೆ ಮುಖ್ಯಮಂತ್ರಿಗಳಿಗೆ ನಾನೇ ಸನ್ಮಾನ ಮಾಡುತ್ತೇನೆ. ಇಲ್ಲದಿದ್ದರೆ ನಾನೂ ಆಹೋರಾತ್ರಿ ಧರಣಿ ಕೂರುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದರು.

ಬಿಡದಿ ಹೋಬಳಿಯ ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಧರಣಿಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ ಯೋಜನೆ ವಿಷಯವನ್ನು ನಾನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ. ಈ ಭಾಗದ ಶಾಸಕರು ಮಾತನಾಡಲಿ. ಅದಕ್ಕೆ ಸರಿಯಾಗಿ ಉತ್ತರ ಕೊಟ್ಟು ಮುಖ್ಯಮಂತ್ರಿಗಳು ದೊಡ್ಡ ಮನಸ್ಸು ಮಾಡಿ ಭೂ ಸ್ವಾಧೀನ ಕೈಬಿಡಲಿ. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸೋಣ ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ತಮ್ಮ ಸ್ವ ಕ್ಷೇತ್ರಕ್ಕೆ ಹೋಗಿ, ಅಲ್ಲಿ ಯಾವ ರೈತರು ಜಮೀನು ಮಾರಾಟ ಮಾಡಬೇಡಿ. ನೀರಾವರಿ ಮಾಡುತ್ತೇನೆ ಅನ್ನುತ್ತಾರೆ. ಆದರೆ, ಅವರದ್ದೇ ಜಿಲ್ಲೆಯ ಬಿಡದಿ ರೈತರ ಜಮೀನನ್ನು ಬಲವಂತವಾಗಿ ಕಸಿದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ಟೌನ್ ಶಿಪ್ ಹೆಸರಿನಲ್ಲಿ ಸರ್ಕಾರ ಬಲವಂತದಿಂದ 9600 ಎಕರೆ ರೈತರ ಫಲವತ್ತಾದ ಭೂಮಿ ಕಸಿದುಕೊಳ್ಳಲು ಮುಂದಾಗಿದೆ. ಈ ಹಿಂದೆ ವರದಿ ನೀಡಿದಾಗ 2700 ಎಕರೆ ಸರ್ಕಾರಿ ಗೋಮಾಳ ಇತ್ತು. ಈಗ 750 ಎಕರೆ ಮಾತ್ರ ಎಂದು ದಾಖಲೆ ತೋರಿಸುತ್ತಿದ್ದಾರೆ. ಇಷ್ಟು ದೊಡ್ಡ ಕೃಷಿ ಪ್ರದೇಶವನ್ನು ವಿಧಾನಸಭೆಯಲ್ಲಿ ಬರಡು ಭೂಮಿ ಅಂತ ವಾದಿಸುತ್ತಿದ್ದಾರೆ.

ಇದು ಕೃಷಿಗೆ ಯೋಗ್ಯವಿಲ್ಲ ಅಂತ ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ನಾನು ಬೆಳಗ್ಗೆಯಿಂದ ಎಲ್ಲೆಡೆ ವೀಕ್ಷಣೆ ಮಾಡಿದ್ದೇನೆ. ಬೆಂಗಳೂರಿನ ಪಕ್ಕದಲ್ಲಿರುವ ಈ ಬಿಡದಿ ಭಾಗ ದೊಡ್ಡ ಮಲೆನಾಡು, ಕಾಶ್ಮೀರದಂತೆ ಇದೆ. ಇಲ್ಲಿ ರೈತರು ಮಿಶ್ರ ಬೆಳೆ, ತೋಟಗಾರಿಕೆ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಹೈನುಗಾರಿಕೆ ಮೂಲಕ 40 ರಿಂದ 50 ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದಾರೆ‌. ಇಂತಹ ಭೂಮಿಯಲ್ಲಿ ಟೌನ್ ಶಿಪ್ ಮಾಡುವುದು ಸರಿಯಲ್ಲ. ಸ್ವತಃ ಸಿಎಂ ಬಂದು ಬಿಡದಿ ಸ್ವರ್ಗವನ್ನು ನೋಡಲಿ ಎಂದು ಸಲಹೆ ನೀಡಿದರು.

ದ್ವಂದ್ವ ನೀತಿ ಬೇಡ

ಟೌನ್ ಶಿಪ್ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನವರು ಏನು ಮಾಡುತ್ತಾರೆ. ಯಾರು ರೈತರ ಪರವಾಗಿ ಇದ್ದಾರೆ ಎಂಬುದು ಗೊತ್ತಿಲ್ಲ. ರೈತರ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡಿ ಮೊಸಳೆ ಕಣ್ಣೀರು ಸುರಿಸುವ ನಾಯಕರು ಇದ್ದಾರೆ. ಇಲ್ಲಿ ರೈತರಿಗೆ ಒಂದು ಹೇಳುತ್ತಾರೆ, ವಿಧಾನಸಭೆಯೊಳಗೆ ಇನ್ನೊಂದು ಹೇಳುತ್ತಾರೆ. ಇಂತಹ ದ್ವಂದ್ವ ನೀತಿ ಬೇಡ. ವಿಪಕ್ಷ ನಾಯಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು.

ಈ ಯೋಜನೆಯಲ್ಲಿ ವಿಪಕ್ಷದವರು ಪಾಲುದಾರರಾಗಿದ್ದಾರೆ ಎನ್ನುವ ಸಂಶಯವೂ ಬರುತ್ತಿದೆ. ಇದು ನೀವು ಮಾಡುತ್ತಿರುವ ಡಬಲ್ ಗೇಮ್. ಸದನದೊಳಗೊಂದು, ಹೊರಗೊಂದು ಮಾತನಾಡಿದರೆ ಜನರು ಒಪ್ಪುವುದಿಲ್ಲ ಎಂದು ವಿಪಕ್ಷಗಳ ವಿರುದ್ಧವೇ ಕಿಡಿಕಾರಿದರು.

ಜುಲೈ 15ರ ನಂತರ ಬೆಳಗಾವಿ ಅಧಿವೇಶನ ಕರೆಯುತ್ತಾರೆಂಬ ಸುದ್ದಿ ಇದೆ. ಅಲ್ಲಿ ಮತ್ತೆ ನಾನು ಈ ವಿಚಾರ ಪ್ರಸ್ತಾಪ ಮಾಡುತ್ತೇನೆ. ಆರ್ ಅಶೋಕ್ ಮತ್ತು ಸನ್ಮಾನ್ಯ ವಿಜಯೇಂದ್ರ ಏನು ಮಾಡುತ್ತಾರೊ ನೋಡೋಣ. ಅವರ ಹೇಳಿಕೆಗೆ ಬರುವ ಕಮೆಂಟ್ಸ್ ನೋಡಿದರೆ, ಅವರು ಮೆಣಸಿನ ಗಿಡಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಯತ್ನಾಳ್ ವ್ಯಂಗ್ಯವಾಡಿದರು.

PREV
Read more Articles on
click me!

Recommended Stories

ವಾಟ್ಸಾಪ್ ಯುನಿವರ್ಸಿಟಿ ಸುದ್ದಿಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ: ಸಂಸದ ಬೊಮ್ಮಾಯಿ
Travel Good News: ಕಲಬುರಗಿ-ಬೆಂಗಳೂರು ವಿಮಾನಯಾನ ಸೇವೆ ಪುನಾರಂಭ: ನಾಳೆಯಿಂದಲೇ ಹಾರಲಿವೆ 'ಲೋಹದ ಹಕ್ಕಿಗಳು'!