ಸಿಎಂ ಯಡಿಯೂರಪ್ಪ ವಿರುದ್ಧ ಮತ್ತೆ ಸಮರ ಸಾರಿದ ಯತ್ನಾಳ..!

By Kannadaprabha NewsFirst Published Mar 28, 2021, 2:57 PM IST
Highlights

ನನ್ನ ವಿರುದ್ಧ ಶಾಸಕರ ಸಹಿ ಸಂಗ್ರಹ ಸುಳ್ಳು ಸುದ್ದಿ| ಈಶ್ವರಪ್ಪನವರ ಗನಮಕ್ಕೆ ತರದೆ ಸಿಎಂ ಗ್ರಾಮೀಣಾಭಿವೃದ್ಧಿ ಇಲಾಖೆಗೆ 1000 ಕೋಟಿ ಬಿಡುಗಡೆ| ಯುವರಾಜ ಹಾಗೂ ಕಂಪನಿಯ ಭ್ರಷ್ಟಾಚಾರ ಕುಟುಂಬ ರಾಜಕಾರಣದಿಂದ ಶಾಸಕರು ಹಾಗೂ ಬಿಜೆಪಿ ಕಾರ್ಯಕರ್ತರು ಬೇಸತ್ತಿದ್ದಾರೆ: ಯತ್ನಾಳ| 

ವಿಜಯಪುರ(ಮಾ.28): ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಅವರ ಕುಟುಂಬದವರ ವಿರುದ್ಧ ಮತ್ತೆ ತಮ್ಮ ಸಮರ ಮುಂದುವರಿಸಿದ್ದು, ಈಗ ಅದು ವೈರಲ್‌ ಆಗಿದೆ.

ತಮ್ಮ ವಿರುದ್ಧ ಶಾಸಕರ ಸಹಿ ಸಂಗ್ರಹ ಮಾಡಿದ್ದಾರೆ ಎಂಬುವುದು ಸುಳ್ಳು ಸುದ್ದಿ ಎಂದು ಹರಿ ಹಾಯ್ದಿದ್ದಾರೆ. ಮಾ.25ರಂದು ನಡೆದ ಶಾಸಕರ ಹಾಗೂ ಸಚಿವರ ಸಭೆ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಜರುಗಿತ್ತು. ಶಾಸಕರ ಕ್ಷೇತ್ರಗಳಿಗೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಆಗದೆ ಇರುವುದು, ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡದಿರುವುದು ಹಾಗೂ ಆಯಾ ಇಲಾಖೆ ಸಚಿವರು ಶಾಸಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ವಿಚಾರವಾಗಿ ಸಭೆ ನಡೆದಿತ್ತು.

ಇದಲ್ಲದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ ಸಚಿವ ಕೆ.ಎಸ್‌.ಈಶ್ವರಪ್ಪನವರ ಗಮನಕ್ಕೆ ತರದೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ನೇರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ 1000 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಯತ್ನಾಳ ಅವರು ಫೇಸ್‌ಬುಕ್‌ನಲ್ಲಿ ಆರೋಪಿಸಿದ್ದಾರೆ. ಆದರೆ ಸಭೆಯಲ್ಲಿ ಭಾಗಿಯಾದ 65 ಶಾಸಕರು ನನ್ನ ವಿರುದ್ಧ ಕ್ರಮ ಜರುಗಿಸಲು ಸಹಿ ಹಾಕಿಲ್ಲ. ಈ ಬಗ್ಗೆ ನಾನು ಶಾಸಕರನ್ನು ವಿಚಾರಿಸಿದ್ದೇನೆ. ಆದರೆ ಶಾಸಕರು ನನ್ನ ವಿರುದ್ಧ ಸಹಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉಪಚುನಾವಣೆ ಸಮರ: ಟಿಕೆಟ್‌ಗಾಗಿ ಬಿಜೆಪಿ, ಜೆಡಿಎಸ್‌ನಲ್ಲಿ ಪೈಪೋಟಿ..!

ಶಾಸಕರ ಗಮನಕ್ಕೂ ತರದೆ ಅನುದಾನ ಪತ್ರದಲ್ಲಿ ಶಾಸಕರ ಸಹಿ ಮಾಡಿಸಿಕೊಂಡಿದ್ದಾರೆ. ಏನೂ ತಿಳಿಯದಂತಾಗಿದೆ. ಇದು ಮೋಸ ಮಾಡಿದಂತಾಗುತ್ತದೆ ಎಂದು ಯತ್ನಾಳ ಅವರು ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ. ಸಿಎಂ ಸಂಬಂಧಿ ಮತ್ತು ಬೆಂಗಳೂರು ನಗರ ಜಿಪಂ ಅಧ್ಯಕ್ಷ ಮರಿಸ್ವಾಮಿಯವರಿಗೆ 82 ಕೋಟಿ ಹಣ ನೇರವಾಗಿ ಬಿಡುಗಡೆ ಮಾಡಲಾಗಿದೆ. ಅಲ್ಲದೆ ತುಂಡು ಗುತ್ತಿಗೆ ಕಾಮಗಾರಿ ನೀಡಲು ಮರಿಸ್ವಾಮಿ ಒತ್ತಡ ಹೇರುತ್ತಿದ್ದಾರೆ. ಆದರೆ ಬಿಜೆಪಿ ಶಾಸಕರಿಗೆ ಸರಿ ಸಮನಾಗಿ ಅನುದಾನ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಕೆಲವು ಮಾಧ್ಯಮಗಳಲ್ಲಿ ಯತ್ನಾಳ ವಿರುದ್ಧ ಶಾಸಕರ ಆಕ್ರೋಶವೆಂದು ಕಪೋಲಕಲ್ಪಿತ ಸುದ್ದಿ ಮಾಡಿಸಲಾಗಿದೆ. ಯುವರಾಜ ಹಾಗೂ ಕಂಪನಿಯ ಭ್ರಷ್ಟಾಚಾರ ಕುಟುಂಬ ರಾಜಕಾರಣದಿಂದ ಶಾಸಕರು ಹಾಗೂ ಬಿಜೆಪಿ ಕಾರ್ಯಕರ್ತರು ಬೇಸತ್ತಿದ್ದಾರೆ. ತಮ್ಮ ಆಪ್ತರು ಹಾಗೂ ನಿಷ್ಠಾವಂತ ಕಾರ್ಯಕರ್ತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಹೊಗಳು ಭಟ್ಟರು, ದಲ್ಲಾಳಿಗಳು ರಾಜ್ಯವನ್ನು ಹಗಲು ದರೋಡೆ ಮಾಡುತ್ತಿದ್ದಾರೆ ಎಂದಿದ್ದಾರೆ. ಒಂದು ವರ್ಷ ಶಾಸಕಾಂಗ ಸಭೆ ಕರೆಯದಿರುವುದು ಕೂಡಾ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಪೋಸ್ಟ್‌ ಮಾಡಿದ ಫೇಸ್‌ಬುಕ್‌ನಲ್ಲಿ ಶಾಸಕ ಯತ್ನಾಳ ಅವರು ಬರೆದುಕೊಂಡು ಕಿಡಿ ಕಾರಿದ್ದಾರೆ.
 

click me!