ಬಳ್ಳಾರಿ ಬಳಿಕ ಬೀದರ್‌ ನಲ್ಲೂ ಬ್ಯಾನರ್ ಪೈಟ್: ಸಚಿವ ರಹೀಂ ಖಾನ್ ಭಾವಚಿತ್ರವಿದ್ದ ಬ್ಯಾನರ್ ಕಿತ್ತು ಬಿಸಾಡಿದ ದಲಿತರು

Published : Jan 22, 2026, 01:32 PM IST
Bidar banner controversy

ಸಾರಾಂಶ

ಬೀದರ್‌ನಲ್ಲಿ, ಡಾ. ಅಂಬೇಡ್ಕರ್ ಅವರ ಭಾವಚಿತ್ರವಿದ್ದ ಬ್ಯಾನರ್ ಮೇಲೆ ಸಚಿವ ರಹೀಂ ಖಾನ್ ಅವರ ಬ್ಯಾನರ್ ಅಳವಡಿಸಿದ್ದಕ್ಕೆ ದಲಿತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವೆಂದು ಪರಿಗಣಿಸಿ, ಸಚಿವರ ಬ್ಯಾನರ್‌ನ್ನು ಮುಖಂಡರು ಕಿತ್ತುಹಾಕಿದ್ದಾರೆ.

ಬೀದರ್ : ರಾಜ್ಯದಲ್ಲಿ ಬ್ಯಾನರ್‌ಗಳ ವಿಚಾರವಾಗಿ ಉದ್ಭವಿಸುತ್ತಿರುವ ವಿವಾದಗಳು ಒಂದರ ನಂತರ ಒಂದಾಗಿ ತೀವ್ರವಾಗುತ್ತಿದ್ದು, ಬಳ್ಳಾರಿ ಬಳಿಕ ಇದೀಗ ಬೀದರ್‌ನಲ್ಲೂ ಬ್ಯಾನರ್ ಜಟಾಪಟಿ ಭುಗಿಲೆದ್ದಿದೆ. ಸಚಿವ ರಹೀಂ ಖಾನ್ ಭಾವಚಿತ್ರ ಹೊಂದಿದ್ದ ಬ್ಯಾನರ್‌ನ್ನು ದಲಿತ ಮುಖಂಡರು ಕಿತ್ತು ಬಿಸಾಡಿರುವ ಘಟನೆ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದಿದೆ.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಹೊಂದಿದ್ದ ಬ್ಯಾನರ್‌ ಮೇಲೆಯೇ ಸಚಿವ ರಹೀಂ ಖಾನ್ ಅವರ ಬ್ಯಾನರ್ ಅಳವಡಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಲಿತಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಗಣರಾಜ್ಯೋತ್ಸವದ ಅಂಗವಾಗಿ “ಪ್ರಜಾಪ್ರಭುತ್ವದ ಉಳಿವಿಗಾಗಿ” ಎಂಬ ಘೋಷಣೆಯೊಂದಿಗೆ ಬೃಹತ್ ಬಹಿರಂಗ ಸಭೆಗೆ ಸಂಬಂಧಿಸಿದಂತೆ ದಲಿತಪರ ಸಂಘಟನೆಗಳು ಅಂಬೇಡ್ಕರ್ ವೃತ್ತದಲ್ಲಿ ಬ್ಯಾನರ್‌ಗಳನ್ನು ಅಳವಡಿಸಿದ್ದವು.

 ಸಚಿವ ರಹೀಂ ಖಾನ್  ಭಾವಚಿತ್ರ ಹೊಂದಿರುವ ಬ್ಯಾನರ್

ಆದರೆ, ಆ ಬ್ಯಾನರ್‌ಗಳ ಮೇಲೆಯೇ ಆರ್‌.ಕೆ. ಫೌಂಡೇಷನ್ ವತಿಯಿಂದ ಪುಟ್‌ಬಾಲ್ ಟೂರ್ನಮೆಂಟ್ ಪ್ರಚಾರಕ್ಕಾಗಿ ಸಚಿವ ರಹೀಂ ಖಾನ್ ಅವರ ಭಾವಚಿತ್ರ ಹೊಂದಿರುವ ಬ್ಯಾನರ್ ಹಾಕಲಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ. ಇದನ್ನು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವೆಂದು ಪರಿಗಣಿಸಿದ ದಲಿತ ಮುಖಂಡರು ಹಾಗೂ ಕಾರ್ಯಕರ್ತರು, ಸಚಿವರ ಭಾವಚಿತ್ರ ಇದ್ದ ಬ್ಯಾನರ್‌ನ್ನು ಕಿತ್ತು ಬಿಸಾಡಿದರು.

ರಹೀಂ ಖಾನ್ ಪದೇಪದೇ ಈ ರೀತಿಯ ವರ್ತನೆ: ದಲಿತ ನಾಯಕ

ಘಟನೆಯ ವೇಳೆ ಮಾತನಾಡಿದ ದಲಿತ ನಾಯಕರು, “ಸಚಿವ ರಹೀಂ ಖಾನ್ ಪದೇಪದೇ ಈ ರೀತಿಯ ವರ್ತನೆ ತೋರುತ್ತಿದ್ದಾರೆ. ಇದರಿಂದ ಅಂಬೇಡ್ಕರ್ ಅವರ ಬಗ್ಗೆ ಅವರಿಗೆ ಎಷ್ಟು ಗೌರವ ಮತ್ತು ಪ್ರೀತಿ ಇದೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ಕಟುವಾಗಿ ಟೀಕಿಸಿದರು. ಈ ಘಟನೆಯ ನೇರ ಹೊಣೆಗಾರಿಕೆ ಸಚಿವ ರಹೀಂ ಖಾನ್ ಅವರದ್ದೇ ಎಂದು ಅವರು ಆರೋಪಿಸಿದರು.

ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸಚಿವರು ಎಚ್ಚರ ವಹಿಸಬೇಕು ಎಂದು ದಲಿತಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. “ಈಗಲಾದರೂ ಸಚಿವ ರಹೀಂ ಖಾನ್ ಎಚ್ಚರಗೊಂಡಿಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳು ಗಂಭೀರವಾಗಿರಬಹುದು” ಎಂದು ದಲಿತ ಮುಖಂಡರು ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ, ರಾಜ್ಯದಲ್ಲಿ ನಿಲ್ಲದ ಬ್ಯಾನರ್ ವಾರ್ ಇದೀಗ ಬೀದರ್‌ನಲ್ಲಿ ಹೊಸ ತಿರುವು ಪಡೆದಿದ್ದು, ಈ ಘಟನೆ ಮುಂದಿನ ದಿನಗಳಲ್ಲಿ ರಾಜಕೀಯ ಹಾಗೂ ಸಾಮಾಜಿಕ ಮಟ್ಟದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

PREV
Read more Articles on
click me!

Recommended Stories

ಧಾರವಾಡ ಯುವತಿ ಝಕಿಯಾ ಕೊಲೆ ಕೇಸಿಗೆ ಬಿಗ್ ಟ್ವಿಸ್ಟ್; ಮದುವೆ ಆಗಬೇಕಿದ್ದವನೇ ಮಸಣ ಸೇರಿಸಿದ!
ಒಂದೇ ದಿನ 22,900 ರೂ ಕುಸಿದ ಚಿನ್ನದ ಬೆಲೆ, ಗ್ರೀನ್‌ಲ್ಯಾಂಡ್, ತೆರಿಗೆ ನೀತಿ ಬದಲಾವಣೆ ಎಫೆಕ್ಟ್