ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹೊಸ ದೇಗುಲಕ್ಕೆ ವಿರೋಧ

By Govindaraj SFirst Published Sep 8, 2022, 10:56 AM IST
Highlights

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಹೊಸದಾಗಿ ಗಣೇಶ ದೇವಸ್ಥಾನ ನಿರ್ಮಾಣ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ವಿವಿಯ ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.

ಬೆಂಗಳೂರು (ಸೆ.08): ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಹೊಸದಾಗಿ ಗಣೇಶ ದೇವಸ್ಥಾನ ನಿರ್ಮಾಣ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ವಿವಿಯ ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.

ಜ್ಞಾನಭಾರತಿ ಆವರಣದಲ್ಲಿ ಮಲ್ಲತ್ತಹಳ್ಳಿಗೆ ಹೋಗುವ ಮಾರ್ಗದ ಗೇಟ್‌ ಬಳಿಕ ಪ್ರಸ್ತುತ ಇರುವ ಗಣೇಶ ದೇವಸ್ಥಾನವನ್ನು ಕೆಂಗೇರಿ ಹೊರ ವರ್ತುಲ ರಸ್ತೆ ಅಗಲೀಕರಣ ಕಾರ್ಯಕ್ಕೆ ತೆರವು ಮಾಡಲು ಸರ್ಕಾರ ಗುರುತಿಸಿದೆ. ಈ ಕಾರಣಕ್ಕೆ ಸಮೀಪದಲ್ಲೇ ಹೊಸ ದೇವಸ್ಥಾನ ನಿರ್ಮಿಸಿ ಅಲ್ಲಿನ ಗಣೇಶ ಮೂರ್ತಿಯನ್ನು ಸ್ಥಳಾಂತರಿಸಲು ವಿಶ್ವವಿದ್ಯಾಲಯ ಮುಂದಾಗಿದೆ. ಇದಕ್ಕೆ ಕೆಲ ವಿದ್ಯಾರ್ಥಿಗಳು ಏಕಾಏಕಿ ವಿರೋಧ ವ್ಯಕ್ತಪಡಿಸಿ ದೇವಾಲಯಕ್ಕೆ ಹಾಕುತ್ತಿರುವ ತಳಪಾಯ ನಿರ್ಮಾಣ ಕಾರ್ಯಕ್ಕೆ ಅಡ್ಡಿಪಡಿಸುವ ಪ್ರಯತ್ನ ಮಾಡಿದ್ದಾರೆ.

Bangalore University: ಅಪರಿಚಿತರಿಂದ ಬೆಂವಿವಿ ಜಾಗ ಕಬ್ಜ ಯತ್ನ

ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರೂ ಸಮಾಧಾನಗೊಳ್ಳದೆ ಪೊಲೀಸರೊಂದಿಗೂ ವಾಗ್ವಾದ ನಡೆಸಿದ್ದಾರೆ. ವಿವಿ ಒಳಗೆ ಹೊಸ ದೇವಾಲಯ ನಿರ್ಮಾಣಕ್ಕೆ ಅನುಮತಿ ನೀಡಿದ್ದು ಯಾರು? ಯಾವ ಕಾರಣಕ್ಕೆ ಪೊಲೀಸ್‌ ಭದ್ರತೆಯಲ್ಲಿ ದೇವಾಲಯ ನಿರ್ಮಿಸಲಾಗುತ್ತಿದೆ. ದೇವಾಲಯದ ಬದಲು ಗ್ರಂಥಾಲಯ ನಿರ್ಮಿಸಿ ಎಂದು ಆಗ್ರಹಿಸಿದ್ದಾರೆ. ಬಳಿಕ ಪೊಲೀಸರು ಬಲವಂತವಾಗಿ ಪ್ರತಿಭಟನಾಕಾರರನ್ನು ಸ್ಥಳದಿಂದ ಚದುರಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ.

ವಿವಿಯ ಅಧಿಕಾರಿಗಳು ಹೇಳುವ ಪ್ರಕಾರ, ಸಮ್ಮೇಳನ ಸಭಾಂಗಣಕ್ಕೆ ಹೊಂದಿಕೊಂಡಂತೆ ಕ್ಯಾಂಪಸ್‌ನೊಳಗೆ ಈಗಾಗಲೇ ದೇವಾಲಯವಿದ್ದು, ಉದ್ದೇಶಿತ ರಸ್ತೆ ವಿಸ್ತರಣೆ ಯೋಜನೆಯಲ್ಲಿ ಅದನ್ನು ಕೆಡವಲಾಗುತ್ತದೆ. ಹಾಗಾಗಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಅವರು ಕುಲಪತಿಗಳಾಗಿದ್ದ ಅವಧಿಯಲ್ಲಿ ಹೊಸ ದೇವಾಲಯ ನಿರ್ಮಾಣಕ್ಕೆ ತೀರ್ಮಾನಿಸಿ ಸ್ಥಳವನ್ನು ಅಂತಿಮಗೊಳಿಸಲಾಗಿತ್ತು. ಅದರಂತೆ ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದು ಹೊಸ ದೇವಾಲಯ ಅಲ್ಲ, ವಿದ್ಯಾರ್ಥಿಗಳು ಭಾವಿಸಿಕೊಂಡಿರುವುದು ತಪ್ಪು ಎಂದು ಸ್ಪಷ್ಟಪಡಿಸಿದ್ದಾರೆ.

ಅನಧಿಕೃತ ಖಾಸಗಿ ಶಾಲೆಗಳ ಪತ್ತೆ ಕಾರ್ಯ ಆರಂಭ: ಶಿಕ್ಷಣ ಇಲಾಖೆ ಆದೇಶ

ದೇವಸ್ಥಾನ ನಿರ್ಮಾಣ ಕಾರ್ಯ ನಾನು ಅಧಿಕಾರವಹಿಸಿಕೊಂಡ ಮೇಲೆ ತೆಗೆದುಕೊಂಡ ನಿರ್ಣಯ ಅಲ್ಲ. ಈ ಹಿಂದಿನ ಕುಲಪತಿ ಅವರ ಅವಧಿಯಲ್ಲೇ ಆಗಿದೆ. ಅದರಂತೆ ಇದೀಗ ನಿರ್ಮಾಣ ಕಾರ್ಯ ಆರಂಭವಾಗಿದೆ. ದೇವಸ್ಥಾನ ಕಾರ್ಯದಲ್ಲೂ ವಿದ್ಯಾರ್ಥಿಗಳು ಗಲಾಟೆ ಮಾಡುವುದು ಸರಿಯಲ್ಲ. ಅವರ ಶಿಕ್ಷಣದ ಕಡೆಗೆ ಗಮನ ಹರಿಸಲಿ.
- ಪ್ರೊ.ಎಸ್‌.ಎಂ.ಜಯಕರ, ಬೆಂ.ವಿವಿ ಕುಲಪತಿ

click me!