Bangalore University: ಅಪರಿಚಿತರಿಂದ ಬೆಂವಿವಿ ಜಾಗ ಕಬ್ಜ ಯತ್ನ

By Govindaraj SFirst Published Sep 8, 2022, 10:12 AM IST
Highlights

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪರಿಚಿತರ ಗುಂಪಿನಿಂದ ರಾಜಾರೋಷವಾಗಿ ವಿವಿಯ ಭೂಮಿ ಕಬಳಿಕೆ ಯತ್ನ ನಡೆದಿದ್ದು, ವಿವಿಯ ಬಯೋಪಾರ್ಕ್ ವ್ಯಾಪ್ತಿಯ ಎಕರೆಗಟ್ಟಲೆ ಜಾಗದಲ್ಲಿ ಬೆಲೆ ಬಾಳುವ ಗಿಡ ಮರಗಳನ್ನು ಜೆಸಿಬಿಯಿಂದ ತೆರವುಗೊಳಿಸಿ ಒತ್ತುವರಿಗೆ ಪ್ರಯತ್ನಿಸಿರುವ ಘಟನೆ ನಡೆದಿದೆ. 

ವಿಶೇಷ ವರದಿ

ಬೆಂಗಳೂರು (ಸೆ.08): ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪರಿಚಿತರ ಗುಂಪಿನಿಂದ ರಾಜಾರೋಷವಾಗಿ ವಿವಿಯ ಭೂಮಿ ಕಬಳಿಕೆ ಯತ್ನ ನಡೆದಿದ್ದು, ವಿವಿಯ ಬಯೋಪಾರ್ಕ್ ವ್ಯಾಪ್ತಿಯ ಎಕರೆಗಟ್ಟಲೆ ಜಾಗದಲ್ಲಿ ಬೆಲೆ ಬಾಳುವ ಗಿಡ ಮರಗಳನ್ನು ಜೆಸಿಬಿಯಿಂದ ತೆರವುಗೊಳಿಸಿ ಒತ್ತುವರಿಗೆ ಪ್ರಯತ್ನಿಸಿರುವ ಘಟನೆ ನಡೆದಿದೆ. ಈಗಾಗಲೇ ಜ್ಞಾನಭಾರತಿ ಕ್ಯಾಂಪಸ್‌ನ 1,112 ಎಕರೆ ಜಾಗದಲ್ಲಿ ನೂರಾರು ಎಕರೆ ಜಾಗ ಒತ್ತುವರಿಯಾಗಿದೆ. ಈ ಭೂಮಿ ತೆರವಿಗೆ ಸರ್ಕಾರವಾಗಲಿ, ವಿವಿಯಾಗಲಿ ಗಂಭೀರ ಪ್ರಯತ್ನ ಮಾಡದೆ ಕಾಲ ದೂಡುತ್ತಾ ಬರುತ್ತಿವೆ. ಇದರ ಜೊತೆಗೆ ಸುಮಾರು 300 ಎಕರೆ ಜಾಗವನ್ನು ಬೇರೆ ಬೇರೆ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. 

ಇದರ ನಡುವೆ ಹಾಡಹಗಲೇ ವಿವಿ ಜಾಗ ಒತ್ತುವರಿಗೆ ಯತ್ನ ನಡೆದಿರುವುದು ಅಧಿಕಾರಿಗಳು, ವಿದ್ಯಾರ್ಥಿಗಳು, ಬೋಧಕರು ಹಾಗೂ ಸಿಬ್ಬಂದಿ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ವಿಶ್ವವಿದ್ಯಾಲಯದ ಅಧಿಕಾರಿಗಳು ವಿವಿಯ ಜಾಗ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಕೋರಿ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ. ಆಗಸ್ಟ್‌ 30ರಂದು ಜೆಸಿಪಿಯೊಂದಿಗೆ ಬಂದ ಗುಂಪೊಂದು ವಿವಿಯ ಜೀವ ವೈವಿಧ್ಯ ಪಾರ್ಕ್ ಇರುವೆಡೆ ಒಂದಷ್ಟುಜಾಗದಲ್ಲಿದ್ದ ಗಿಡ ಮರಗಳನ್ನೆಲ್ಲಾ ನೆಲಸಮಗೊಳಿಸಿದೆ. ಈ ಪಾರ್ಕ್ನಲ್ಲಿ ಶ್ರೀಗಂಧ, ರಕ್ತಚಂದನ ಸೇರಿದಂತೆ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಮರಗಳೆಲ್ಲಾ ಇದ್ದು ಅಪರಿಚಿತರು ಬೆಳ್ಳಂಬೆಳಗ್ಗೆಯೇ ಅವುಗಳನ್ನು ತೆರವು ಮಾಡಿದ್ದಾರೆ.

Bengaluru: ಸಿಲಿಕಾನ್‌ ಸಿಟಿಯಲ್ಲಿ 51 ಅನಧಿಕೃತ ಖಾಸಗಿ ಶಾಲೆಗಳು?

ಈ ಸುದ್ದಿ ತಿಳಿದು ವಿವಿಯ ಒಂದಷ್ಟು ವಿದ್ಯಾರ್ಥಿಗಳು, ಸಿಬ್ಬಂದಿ ಸ್ಥಳಕ್ಕೆ ತೆರಳಿ ಪ್ರಶ್ನಿಸಿದಾಗ ಅಪರಿಚಿತರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ವಿವಿ ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ವಿವಿಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ತಮ್ಮ ಗಮನಕ್ಕೂ ತಾರದೆ ಅಪರಿಚಿತರು ಈ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಸರ್ಕಾರಕ್ಕೆ ಪತ್ರ ಬರೆದು ವಿವಿ ಜಾಗ ರಕ್ಷಣೆಗೆ ನೆರವು ಕೋರಲಾಗುವುದು ಎಂದು ಹೇಳುತ್ತಿದ್ದಾರೆ.

ಒತ್ತುವರಿ ತೆರವಿಗೆ ಹೋರಾಟ ಸಮಿತಿ ಆಗ್ರಹ: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ ಜಾಗವನ್ನು ಇನ್ನು ಮುಂದೆ ಬೇರೆ ಯಾವುದೇ ಸಂಸ್ಥೆಗಳಿಗೆ ಗುತ್ತಿಗೆಗಾಗಲಿ, ಇನ್ಯಾವುದೇ ಕಾರಣಕ್ಕೂ ನೀಡಬಾರದು. ಒತ್ತುವರಿಯಾಗಿರುವ ಎಲ್ಲ ಜಮೀನು ತೆರವುಗೊಳಿಸಿ ವಿವಿಗೆ ನೀಡುವಂತೆ ‘ಬೆಂ.ವಿವಿ ಉಳಿಸಿ ಹೋರಾಟ ಸಮಿತಿ’ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಈಗಾಗಲೇ ಕ್ಯಾಂಪಸ್‌ನ 1,112 ಎಕರೆಯಲ್ಲಿ ವಿವಿಧೆಡೆ ಒತ್ತುವರಿಯಾಗಿರುವ ಜಮೀನಿನ ತೆರವಿಗೆ ಕ್ರಮ ವಹಿಸಬೇಕು. ವಿವಿಧ ಸಂಸ್ಥೆಗಳಿಗೆ 297 ಎಕರೆ ಜಾಗವನ್ನು ಸರ್ಕಾರವೇ ಗುತ್ತಿಗೆಗೆ ನೀಡಿದೆ. 

ಈಗ ಇನ್ನೂ 18 ಎಕರೆಯಷ್ಟು ಜಾಗವನ್ನು ಅಂತರ್‌ ವಿಶ್ವ ವಿದ್ಯಾಲಯ ಯೋಗ ವಿಜ್ಞಾನ ಕೇಂದ್ರಕ್ಕೆ 15 ಎಕರೆ, ಸಿಬಿಎಸ್‌ಇ ದೆಹಲಿಗೆ 1 ಎಕರೆ, ವಾಸ್ತುಶಿಲ್ಪ ಮತ್ತು ಅಭಿವೃದ್ಧಿ ಮಂಡಳಿಯ ಪ್ರಾದೇಶಿಕ ಕೇಂದ್ರಕ್ಕೆ 2 ಎಕರೆ ನೀಡಲು ವಿವಿ ಮುಂದಾಗಿದೆ ಎಂದು ತಿಳಿದು ಬಂದಿದೆ. ಇದೇ ರೀತಿ ಪ್ರತಿ ವರ್ಷ ಕ್ಯಾಂಪಸ್‌ ಜಾಗವನ್ನು ಬೇರೆ ಸಂಸ್ಥೆಗಳಿಗೆ ನೀಡುತ್ತಾ ಹೋದರೆ ವಿವಿಗೆ ಜಾಗವಿಲ್ಲದಂತಾಗುತ್ತದೆ. ಹಾಗಾಗಿ ಇನ್ನು ಮುಂದೆ ವಿವಿಯ ಜಾಗವನ್ನು ಬೇರೆ ಸಂಸ್ಥೆಗಳಿಗೆ ನೀಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಪ್ರವಾಹ ತಡೆಗೆ ಮಾಸ್ಟರ್‌ ಪ್ಲಾನ್‌: ಸಿಎಂ ಬೊಮ್ಮಾಯಿ

ಕ್ಯಾಂಪಸ್‌ನ ಯಾವುದೇ ಭಾಗದಲ್ಲಿ ಜಾಗ ಪಡೆಯಲು ಅಥವಾ ಮರಗಿಡಗಳ ತೆರವಿಗೆ ಯಾರೂ ಕೂಡ ನಮ್ಮ ಅನುಮತಿ ಪಡೆದಿಲ್ಲ, ನಮ್ಮ ಗಮನಕ್ಕೂ ತಂದಿಲ್ಲ. ಆದರೆ, ಆ.30ರಂದು ಕೆಲ ಅಪರಿಚಿತರು ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಏಕಾಏಕಿ ಮರಗಿಡಗಳನ್ನು ತೆರವುಗೊಳಿಸಿರುವುದು ಗಮನಕ್ಕೆ ಬಂದಿದ್ದು, ಸ್ಥಳ ಪರಿಶೀಲನೆ ನಡೆಸಿದ್ದೇನೆ. ಭಾರೀ ಬೆಲೆ ಬಾಳುವ ಮರಗಳ ತೆರವು ಮಾಡಿದ್ದು, ವಿವಿಗೆ ದೊಡ್ಡ ನಷ್ಟವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ವಿವಿ ಜಾಗ ರಕ್ಷಣೆಗೆ ನೆರವು ನೀಡುವಂತೆ ಕೋರಲಾಗುತ್ತದೆ.
-ಡಾ.ಎಸ್‌.ಎಂ.ಜಯಕರ, ಬೆಂಗಳೂರು ವಿವಿ ಕುಲಪತಿ

click me!