8 ತಿಂಗಳ ಬಳಿಕ ಪತ್ತೆಯಾದ ಬೆಂಗಳೂರ ವಿದ್ಯಾರ್ಥಿನಿಯರು: ಒಬ್ಬಾಕೆ ಗರ್ಭಿಣಿ! ಸಿನಿಮಾ ಮೀರಿಸೋ ಸ್ಟೋರಿ ಇವರದ್ದು

Published : Sep 09, 2026, 06:37 PM IST
Tejaswini and Tanishka

ಸಾರಾಂಶ

ಜನವರಿಯಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ಎಂಟು ತಿಂಗಳ ಬಳಿಕ ಪತ್ತೆಯಾಗಿದ್ದಾರೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ನಡೆಸಿದ ಸಿಐಡಿ, ಯುವತಿಯೊಬ್ಬಳು ಹೊಸ ಸಿಮ್ ಕಾರ್ಡ್‌ಗಾಗಿ ನೀಡಿದ ಆಧಾರ್ ಕಾರ್ಡ್ ಮಾಹಿತಿಯನ್ನು ಆಧರಿಸಿ ಅವರನ್ನು ಪತ್ತೆಹಚ್ಚಿದೆ. ಕನಕಪುರದ ಯುವಕನೊಬ್ಬನೊಂದಿಗೆ ವಾಸವಿದ್ದ ಇವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ಕಳೆದ ಜನವರಿಯಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರದಿಂದ ಇಬ್ಬರು ಕಾಲೇಜಿನ ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದು, ಈ ವಿಷ್ಯ ಭಾರಿ ಸದ್ದು ಮಾಡಿತ್ತು. ಪಿಯುಸಿ ಓದುತ್ತಿದ್ದ ಈ ವಿದ್ಯಾರ್ಥಿನಿಯರನ್ನು ಎಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ. ಇವರ ಇರುವಿಕೆಯ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಫೋನ್​ ಕೂಡ ಸಿಕ್ಕಿರಲಿಲ್ಲ. ಹೀಗಾಗಿ ಪೊಲೀಸರಿಗೆ ಇವರ ಪತ್ತೆ ವಿಚಾರ ಈಗ ದೊಡ್ಡ ಸವಾಲಾಗಿತ್ತು. ಇವರ ಪತ್ತೆಗಾಗಿ ಪೊಲೀಸ್ ಇಲಾಖೆ 10ಜನರ ವಿಶೇಷ ತಂಡವನ್ನು ರಚಿಸಿತ್ತು. ಈ ತಂಡವೂ ಈ ಇಬ್ಬರು ಬಾಲಕಿಯರಿಗಾಗಿ ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ. ಇವರನ್ನು ಅರಸಿ ಪೊಲೀಸರು ಹೋಗದಿರೋ ಜಾಗವಿಲ್ಲ, ಹುಡುಕಾಡದ ಸ್ಥಳವಿಲ್ಲ. ಆದರೂ ಈ ಹುಡುಗಿಯರು ಎಲ್ಲಿ ಹೋದರು ಏನಾದರೂ ಎಂಬ ಬಗ್ಗೆ ಯಾವುದೇ ಸುಳಿವು ಸಿಗದೇ ಇರೋದು ಪೊಲೀಸರು ಸೇರಿದಂತೆ ಕುಟುಂಬಸ್ಥರನ್ನು ಕಂಗಾಲಾಗುವಂತೆ ಮಾಡಿತ್ತು.

ಹೀಗೆ ನಾಪತ್ತೆಯಾದ ವಿದ್ಯಾರ್ಥಿನಿಯರಾದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ. ಕೊನೆಗೂ ಈಗ ಎಂಟು ತಿಂಗಳ ಬಳಿಕ ಸಿಐಡಿ (CID) ಅಧಿಕಾರಿಗಳು ಇವರನ್ನು ಪತ್ತೆಹಚ್ಚಿದ್ದಾರೆ! ಇವರಿಗಾಗಿ ಮುಂಬೈ, ಚೆನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ, ಚಾಮರಾಜನಗರ, ಮೈಸೂರು ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾದವರು ಈಗ ಸಿಕ್ಕಿಬಿದ್ದಿದ್ದಾರೆ! ನಾಪತ್ತೆಯಾದ ಈ ಇಬ್ಬರು ವಿದ್ಯಾರ್ಥಿನಿಯರು ಪೋನ್ ಬಳಸ್ತಿಲ್ಲ, ಎಟಿಎಂ ಕಾರ್ಡ್ ಕೂಡ ಬಳಸಿಲ್ಲ, ಸ್ನೇಹಿತರು ಹಾಗೂ ಕುಟುಂಬದ ಸಂಪರ್ಕವನ್ನು ಮಾಡಿಲ್ಲ, ಇವರು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದವರೆಗೂ ಹೋಗಿದ್ದ ಸುಳಿವು ಸಿಕ್ಕಿತ್ತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಇವರು ಅಲ್ಲಿಂದಲೂ ನಾಪತ್ತೆಯಾಗಿದ್ದರು. ಅಲ್ಲಿಂದ ಎಲ್ಲಿ ಹೋದ್ರು ಅನ್ನೋದೇ ಈಗ ಯಕ್ಷ ಪ್ರಶ್ನೆಯಾಗಿದೆ. ಕುಟುಂಬಸ್ಥರು ಕೊಟ್ಟ ಮಾಹಿತಿ ಆಧರಿಸಿಯೇ ಬಾಲಕಿಯರ ಎಲ್ಲಾ ಇಷ್ಟದ ಜಾಗಗಳಲ್ಲಿ ಪೊಲೀಸರು ತಲಾಶ್ ನಡೆಸಿದ್ದರು.

ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಪಾಲಕರು

ಪೊಲೀಸರು ಪತ್ತೆ ಹಚ್ಚದ ಹಿನ್ನೆಲೆಯಲ್ಲಿ, ಈ ವಿದ್ಯಾರ್ಥಿನಿಯರ ಪಾಲಕರು ಹೈಕೋರ್ಟ್​ ಮೆಟ್ಟಿಲೇರಿದ್ದರು. ಹೈಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಇಬ್ಬರೂ ಯುವತಿಯರನ್ನು ಪತ್ತೆಹಚ್ಚಿದ್ದಾರೆ. ​ಸ್ಥಳೀಯ ಪೊಲೀಸರ ಆರಂಭಿಕ ತನಿಖೆಯಲ್ಲಿ ಇಬ್ಬರೂ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವಿಷಯ ಬೆಳಕಿಗೆ ಬಂದಿತ್ತು. ಅಲ್ಲಿ ಮಗುವೊಂದರ ಜೊತೆ ಇವರು ಆಟವಾಡುತ್ತಿದ್ದಾಗ, ಮಗುವಿನ ತಾಯಿ ಇವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಇದಾದ ನಂತರ ಇವರ ಸುಳಿವು ಸಿಕ್ಕಿರಲಿಲ್ಲ. ಆದರೆ, ಬೆಟ್ಟದ ಆವರಣದಲ್ಲೇ ಇವರಿಗೆ ಕನಕಪುರ ಮೂಲದ ಯುವಕನೊಬ್ಬನ ಪರಿಚಯವಾಗಿದೆ.

ಸುಳ್ಳು ಹೇಳಿದ್ದ ವಿದ್ಯಾರ್ಥಿನಿಯರು

​ಮನೆಯಲ್ಲಿದ್ದ ಕೌಟುಂಬಿಕ ಒತ್ತಡಕ್ಕೆ ಹೆದರಿದ್ದ ತನಿಷ್ಕಾ, "ನಾವಿಬ್ಬರೂ ಅಕ್ಕ-ತಂಗಿ, ನಮಗೆ ತಂದೆ-ತಾಯಿ ಯಾರೂ ಇಲ್ಲ, ಅನಾಥರು" ಎಂದು ಯುವಕನಿಗೆ ಸುಳ್ಳು ಹೇಳಿದ್ದಾರೆ. ಯುವತಿಯರ ಮಾತು ನಂಬಿದ ಆ ಯುವಕ, ಇಬ್ಬರನ್ನೂ ತನ್ನೊಂದಿಗೆ ಕರೆದೊಯ್ದಿದ್ದನು. ಬಳಿಕ ಆ ಯುವಕ ತನಿಷ್ಕಾಳನ್ನು ಮದುವೆಯಾಗಿದ್ದು, ತೇಜಸ್ವಿನಿಯನ್ನು ತಂಗಿ ಎಂದು ಮನೆಯಲ್ಲೇ ಜೊತೆಯಲ್ಲಿಟ್ಟುಕೊಂಡಿದ್ದನು. ಇತ್ತೀಚೆಗೆ ತನಿಷ್ಕಾ ಹೊಸ ಸಿಮ್ ಕಾರ್ಡ್ ಖರೀದಿಸಲು ತನ್ನ ಮೂಲ ಆಧಾರ್ ಕಾರ್ಡ್ ನೀಡಿದ್ದಳು. ಸಿಐಡಿ ಅಧಿಕಾರಿಗಳು ಈಗಾಗಲೇ ಈ ಆಧಾರ್ ಸಂಖ್ಯೆಯ ಮೇಲೆ ನಿಗಾ ಇರಿಸಿದ್ದರಿಂದ, ಟೆಲಿಕಾಂ ಸರ್ವಿಸ್ ಪ್ರೊವೈಡರ್ ಮೂಲಕ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ರವಾನೆಯಾಯಿತು. ​ಆಧಾರ್ ಮಾಹಿತಿ ಹಾಗೂ ನೆಟ್‌ವರ್ಕ್ ಸ್ಥಳವನ್ನು ಬೆನ್ನತ್ತಿದ ಸಿಐಡಿ ತಂಡ, ಇಬ್ಬರೂ ಯುವತಿಯರು ಇರುವ ಜಾಗವನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ. ತನಿಷ್ಕಾ ಪ್ರಸ್ತುತ ಗರ್ಭಿಣಿಯಾಗಿದ್ದು, ಸಿಐಡಿ ಪೊಲೀಸರು ಇಬ್ಬರನ್ನೂ ಇಂದು ಹೈಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.

PREV
Read more Articles on
click me!

Recommended Stories

Supreme Court: ಮಾಡಾಳು ವಿರೂಪಾಕ್ಷಪ್ಪನಿಗೆ ಮತ್ತೆ ಕಾನೂನು ಸಂಕಷ್ಟ? ಕ್ಲೀನ್‌ಚಿಟ್ ನೀಡಿದ ಹೈ ಕೋರ್ಟ್‌ಗೆ ಸುಪ್ರೀಂ ಚಾಟಿ!
ವಿಶ್ವದ ಅತ್ಯುತ್ತಮ ನೈಟ್‌ಲೈಫ್ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರು, ಭಾರತದ ಏಕೈಕ ನಗರ ಎಂಬುದೇ ಹೆಮ್ಮೆ!