ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಗಂಗಮ್ಮನಗುಡಿ ಸ್ಪಾಂಜ್‌ ಫ್ಯಾಕ್ಟರಿಗೆ ಬೆಂಕಿ

By Sathish Kumar KH  |  First Published Nov 1, 2023, 5:30 PM IST

ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದ್ದು, ಗಂಗಮ್ಮನಗುಡಿ ಬಳಿಯ ಸ್ಪಾಂಜ್ ಫ್ಯಾಕ್ಟರಿಯಲ್ಲಿ ಸಂಗ್ರಹಿಸಿದ್ದ ಸ್ಪಾಂಜ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ.


ಬೆಂಗಳೂರು (ನ.01): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಗಂಗಮ್ಮನಗುಡಿ ಬಳಿಯಿರುವ ಸ್ಪಾಂಜ್ ಫ್ಯಾಕ್ಟರಿಯೊಂದರ ಕಾಂಪೌಂಡ್‌ನಲ್ಲಿ ಸಂಗ್ರಹ ಮಾಡಲಾಗಿದ್ದ ತ್ಯಾಜ್ಯ ಸ್ಪಾಂಜ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದ ಬೆಂಕಿಯ ಕೆನ್ನಾಲಿಗೆ ದೊಡ್ಡ ಮೊಟ್ಟದಲ್ಲಿ ಆವರಿಸಿದ್ದು, ಸ್ಥಳೀಯವಾಗಿ ಸುಮಾರು 200 ಮೀಟರ್‌ ಆವರಣದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ. ಕೆಲವು ಕ್ಷಣಗಳಲ್ಲಿ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.

ಗಂಗಮ್ಮನಗುಡಿ ಬಳಿಯಿರುವ ಸ್ಪಾಂಜ್ ಫ್ಯಾಕ್ಟರಿಯ ಆವರಣದಲ್ಲಿ ಹಾಕಲಾಗಿದ್ದ ಸ್ಪಾಂಜ್‌ನ ತ್ಯಾಜ್ಯಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯು ಹೆಚ್ಚು ವ್ಯಾಪಿಸಿಕೊಂಡಿದೆ. ಆರಂಭದಲ್ಲಿ ಬೆಂಕಿಯನ್ನು ನಂದಿಸಲು ಕಾರ್ಖಾನೆ ಸಿಬ್ಬಂದಿ ಪ್ರಯತ್ನ ಮಾಡಿದರಾದರೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಚರಣೆ ಮಾಡುತ್ತಿವೆ. ಸತತ ನೀರು ಸಿಂಪಡಣೆ ಮೂಲಕ ಬೆಂಕಿಯನ್ನ ಹತೋಟಿಗೆ ತಂದಿದ್ದಾರೆ. 

Latest Videos

undefined

ಬೆಂಗಳೂರು ಆಪರೇಷನ್‌ ಲೆಪರ್ಡ್ ಸಕ್ಸಸ್‌, ಆದ್ರೆ ಚಿರತೆ ಡೆತ್‌

ಆದರೆ, ಕಾರ್ಖಾನೆಯ ಹೊರ ಭಾಗದಲ್ಲಿದ್ದ ಸ್ಪಾಂಜ್‌ಗೆ ಬೆಂಕಿ ತಗುಲಿದ್ದರಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಹಾಗೂ ಇತರೆ ಯಾವುದೇ ವ್ಯಕ್ತಿಗೆ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆ ಗಂಗಮ್ಮನಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಕೂಡ ಸ್ಥಳ ಪರಿಶೀಲನೆಗೆ ತೆರಳಿದ್ದಾರೆ. ಜೊತೆಗೆ, ಕಾರ್ಖಾನೆ ಬಳಿಗೆ ಜನರು ಹೋಗುವುದನ್ನು ನಿಷೇಧಿಸಿದ್ದಾರೆ. ಸ್ಪಾಂಜ್‌ಗೆ ಕಾರ್ಖಾನೆ ಸಿಬ್ಬಂದಿಯೇ ಬೆಂಕಿ ಹಚ್ಚಿದ್ದಾರೆ ಎಂಬ ಆರೋಪವೂ ಕೇಳಿಬಂದಿದ್ದು, ಈ ಘಟನೆಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಒಂದು ತಿಂಗಳಲ್ಲಿ ನಾಲ್ಕನೇ ಬೆಂಕಿ ಅವಘಡ:
ಅಕ್ಟೋಬರ್ 7- ಅತ್ತಿಬೆಲೆ ಪಟಾಕಿ ಮಳಿಗೆ ದುರಂತ (14 ಸಾವು): ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿ ಅಕ್ಟೋಬರ್‌ 7 ರಂದು ಆನೇಕಲ್‌ ತಾಲೂಕಿನ ಅತ್ತಿಬೆಲೆಯ ಪಟಾಕಿ ಮಳಿಗೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ 14 ಮಂದಿ ಸಾವನ್ನಪ್ಪಿದ್ದರು. 

ಅಕ್ಟೋಬರ್ 18- ಮಡ್‌ಕೆಫೆ ಅಗ್ನಿ ದುರಂತ (ಕಟ್ಟಡದಿಂದ ಹಾರಿದ ಕಾರ್ಮಿಕನ ಸ್ಥಿತಿ ಗಂಭೀರ): ಅತ್ತಿಬೆಲೆಯ ಅಗ್ನಿ ದುರಂತ ಮಾಸಿತು ಎನ್ನುವಷ್ಟರಲ್ಲಿಯೇ ಅಕ್ಟೋಬರ್‌ 18 ರಂದು ಕೋರಮಂಗಲದ ಮಡ್‌ಪೈಪ್‌ ಕೆಫೆಯಲ್ಲಿ ಬೆಂಕಿ ಅವಘದ ಸಂಭವಿಸಿತು. ಕೆಫೆಯಲ್ಲಿದ್ದ ಸಿಲಿಂಡರ್‌ ಸ್ಫೋಟಗೊಂಡು ಇಡೀ ಕಟ್ಟಡಕ್ಕೆ ಬೆಂಕಿ ಆವರಿಸಿಕೊಂಡಿತ್ತು. ಈ ವೇಳೆ ಕೆಫೆಯ ಬಾಣಸಿಗ ಬೆಂಕಿ ಹೊತ್ತಿಕೊಂಡ ಕಟ್ಟಡದಲ್ಲಿ ಸಿಲುಕಿದ್ದು, ಪ್ರಾಣ ಉಳಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಜಿಗಿದು ಕೈ-ಕಾಲು ಮುರಿದುಕೊಂಡಿದ್ದನು. 

ಕುಡಿದ ಮತ್ತಿನಲ್ಲಿ ಡಯಾಲಿಸಿಸ್‌ ಮಾಡಿದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ: ಕುಡುಕನ ಯಡವಟ್ಟಿಗೆ ಮಹಿಳೆ ಬಲಿ

ಅಕ್ಟೋಬರ್‌ 30- ಬಸ್‌ ಗ್ಯಾರೇಜ್‌ ಅಗ್ನಿ ಅವಘಡ (19 ಬಸ್‌ಗಳು ಸುಟ್ಟು ಕರಕಲು): ಬೆಂಗಳೂರಿನ ವೀರಭದ್ರ ನಗರದ ಬಸ್‌ ಗ್ಯಾರೇಜ್‌ ಬಳಿ ನಿಲ್ಲಿಸಲಾಗಿದ್ದ 19 ಖಾಸಗಿ ಬಸ್‌ಗಳಿಗೆ ಅ.30ರಂದು ಬೆಂಕಿ ಹತ್ತಿಕೊಂಡು ಸ್ಥಳದಲ್ಲಿಯೇ ಬಸ್‌ಗಳು ಸುಟ್ಟು ಕರಕಲಾಗಿದ್ದವು. ಸುಮಾರು 50ಕ್ಕಿಂತ ಹೆಚ್ಚು ಬಸ್‌ಗಳನ್ನು ಒಂದೇ ಸ್ಥಳದಲ್ಲಿ ನಿಲ್ಲಿಸಲಾಗಿದ್ದರೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಬೇರೆ ಬಸ್‌ಗಳಿಗೆ ಹರಡುವುದನ್ನು ತಡೆಯುವಲ್ಲಿ ಯಶಸ್ವಿ ಆಗಿದ್ದರು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಉಂಟಾಗಿರಲಿಲ್ಲ. 

ನವೆಂಬರ್‌ 1- ಸ್ಪಾಂಜ್‌ ಫ್ಯಾಕ್ಟರಿಗೆ ಬೆಂಕಿ: ಈಗ ಪುನಃ ಗಂಗಮ್ಮನಗುಡಿ ವ್ಯಾಪ್ತಿಯಲ್ಲಿ ಸ್ಪಾಂಜ್‌ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

click me!