400 ವರ್ಷಗಳ ಇತಿಹಾಸವಿರುವ ಈ ದೇವಸ್ಥಾನದಲ್ಲಿ ಇದೀಗ ದೇವಳದ ಮಹಾರಥದ ಮರು ನಿರ್ಮಾಣ ಕಾರ್ಯ ನಡೆಯುತ್ತಿದೆ
ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರಕನ್ನಡ(ಆ.24): ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಮಧುಕೇಶ್ವರ ದೇವಸ್ಥಾನ ದೇಶದಲ್ಲೇ ಪ್ರಸಿದ್ಧಿ ಹೊಂದಿದೆ. 400 ವರ್ಷಗಳ ಇತಿಹಾಸವಿರುವ ಈ ದೇವಸ್ಥಾನದಲ್ಲಿ ಇದೀಗ ದೇವಳದ ಮಹಾರಥದ ಮರು ನಿರ್ಮಾಣ ಕಾರ್ಯ ನಡೆಯುತ್ತಿದೆ. ಸೋಂದೆ ಅರಸರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಈ ರಥವನ್ನು ಪ್ರಸ್ತುತ ಬದಲಿಸುವ ಕೆಲಸ ನಡೆಯುತ್ತಿದ್ದು, ಮುಂದಿನ ಮಾರ್ಚ್ ತಿಂಗಳಿಗೆ ಹೊಸ ರಥದ ನಿರೀಕ್ಷೆ ಭಕ್ತರಲ್ಲಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ...
undefined
ಹೌದು, ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಪ್ರಸಿದ್ಧ ಬನವಾಸಿ ಮಧುಕೇಶ್ವರ ದೇವಸ್ಥಾನದಲ್ಲಿ ಇದೀಗ ನೂತನ ರಥ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ. 1608ರಲ್ಲಿ ಸೋಂದಾ ರಾಮಚಂದ್ರ ನಾಯಕ ಅವರು ಈ ರಥವನ್ನು ಸಿದ್ಧಪಡಿಸಿ ಮಧುಕೇಶ್ವರ ದೇವಾಲಯಕ್ಕೆ ನೀಡಿದ್ದು, 413 ವರ್ಷಗಳಷ್ಟು ಹಳೆಯದಾದ ಈ ರಥದಲ್ಲಿಯೇ ಪ್ರತೀ ವರ್ಷ ತೇರು ಉತ್ಸವವನ್ನು ನಡೆಸುತ್ತಾ ಬರಲಾಗಿತ್ತು. ಈ ರಥ ನೂರಾರು ವರ್ಷಗಳ ಹಳೇಯದಾಗಿರೋದ್ರಿಂದ ಇದರ ಬದಲಿಗೆ ನವ ರಥ ನಿರ್ಮಾಣ ಮಾಡಲಾಗುತ್ತಿದ್ದು, ಕೋಟೇಶ್ವರದ ಕುಶಲ ಕರ್ಮಿಗಳು ಈ ರಥ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ ರಥದ ಮೂರು ಅಚ್ಚುಗಳು, ನಾಲ್ಕು ಮುಖ್ಯ ಗಾಲಿಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ರಥ ನಿರ್ಮಾಣದ ಅಗತ್ಯ ಕಟ್ಟಿಗೆಗಳನ್ನು ಸ್ಥಳೀಯರು ತಮ್ಮ ಹೊಲ, ಭೂಮಿಯಲ್ಲಿ ಬೆಳೆದದ್ದನ್ನೇ ನೀಡಿದ್ದು, ಕರಿಮತ್ತಿ, ರಂಜ, ಸಾಗುವಾನಿ, ಹೊನ್ನೆ, ಹೆಬ್ಬಲಸು, ಮಾವು ಮುಂತಾದ ಜಾತಿಯ ಮರಗಳನ್ನು ಭಕ್ತರು ಒದಗಿಸಿದ್ದಾರೆ. ರಥದ ಮೂರ್ತಿಗಳು ಮತ್ತು ಮಧ್ಯ ಭಾಗದ ಕೆತ್ತನೆಗಳಿಗಾಗಿ ಸಾಗವಾನಿ ಹಾಗೂ ದೇವರನ್ನು ಕೂರಿಸುವ ಪೀಠ ನಿರ್ಮಾಣಕ್ಕೆ ಹಲಸಿನ ಮರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಳೇಯ ರಥದಂತೇ ನೂತನ ರಥವೂ ಅದ್ಭುತವಾಗಿ ಮೂಡಿಬರಲಿದೆ ಅಂತ ನವ ರಥ ನಿರ್ಮಾಣ ಸಮಿತಿ ಕಾರ್ಯದರ್ಶಿ ಡಿ.ಡಿ.ಭಟ್ ತಿಳಿಸಿದ್ದಾರೆ.
ಶಿರಸಿ ನಾಡಗುಳಿಯಲ್ಲಿ ಓಡಾಡುವ ಕಪ್ಪುಚಿರತೆ; ತಲೆಕೆಡಿಸಿಕೊಳ್ಳದ ಜನ!
ಅಂದಹಾಗೆ, ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆಂದು ನಿರ್ಮಾಣವಾಗುತ್ತಿರುವ ನೂತನ ರಥ ನಿರ್ಮಾಣಕ್ಕೆ 3 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಮುತುವರ್ಜಿ ವಹಿಸಿ ರಥ ನಿರ್ಮಾಣಕ್ಕೆ ಹಣ ಮಂಜೂರು ಮಾಡಲು ಅವಕಾಶ ಇಲ್ಲದಿದ್ದರೂ, ಮುಖ್ಯಮಂತ್ರಿಗಳ ಮಟ್ಟದಲ್ಲಿ ಪ್ರಯತ್ನಿಸಿ ಸರ್ಕಾರದಿಂದ 3 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ. ಇದರ ಜತೆಗೆ ಸಾರ್ವಜನಿಕರೂ ಉದಾರವಾಗಿ ನೀಡಿದ ಹಣ 95 ಲಕ್ಷ ರೂ.ನಷ್ಟು ಸಂಗ್ರಹವಾಗಿದೆ. ಈ ಎಲ್ಲಾ ಹಣವನ್ನು ಬಳಕೆ ಮಾಡಿಕೊಂಡು ಮಾರ್ಚ್ ತಿಂಗಳ ವೇಳೆಗೆ ರಥ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸಲು ಭಕ್ತರು ಹಾಗೂ ದೇವಳದ ರಥ ನಿರ್ಮಾಣ ಸಮಿತಿಯವರು ನಿರ್ಧರಿಸಿದ್ದಾರೆ. ಇದರ ಜತೆ 400 ವರ್ಷಗಳ ಹಿಂದಿನ ರಥವನ್ನೂ ಸ್ವಚ್ಛಗೊಳಿಸುವ ಕೆಲಸವೂ ನಡೆಯುತ್ತಿದ್ದು, ನವರಥ ನಿರ್ಮಾಣವಾದ ನಂತರ ಹಳೇಯ ರಥವನ್ನು ಪ್ರವಾಸಿಗರ ಆಕರ್ಷಣೆಯಾಗಿ ಇಡುವ ಯೋಚನೆ ಆಡಳಿತ ಮಂಡಳಿಯದ್ದಾಗಿದೆ ಅಂತ ನವ ರಥ ಆರ್ಥಿಕ ಸಮಿತಿ ಅಧ್ಯಕ್ಷ ದ್ಯಾಮಣ್ಣ ದೊಡ್ಮನಿ ಹೇಳಿದ್ದಾರೆ.
ಒಟ್ಟಿನಲ್ಲಿ ಬನವಾಸಿ ಮಧುಕೇಶ್ವರ ದೇವಾಲಯದಲ್ಲಿ ಶ್ರೀ ಮಧುಕೇಶ್ವರನಿಗಾಗಿ ನೂತನ ರಥ ನಿರ್ಮಾಣಗೊಳ್ಳುತ್ತಿದ್ದು, ಜನರು ಸಾಕಷ್ಟು ಸಂತೋಷದಲ್ಲಿದ್ದಾರೆ. ಅಲ್ಲದೇ, ಇತಿಹಾಸ ಪ್ರಸಿದ್ಧ ರಥವೂ ಇನ್ನು ಮುಂದೆ ಪ್ರಮುಖ ಆಕರ್ಷಣಾ ಕೇಂದ್ರವಾಗಿ ಸಂರಕ್ಷಿಸಲ್ಪಡಲಿರುವುದರಿಂದ ರಾಜರ ಕಾಲದ ಗತ ವೈಭವಗಳ ಕಥೆಯನ್ನು ಈ ರಥ ಸಾರಲಿದೆ.