ಬಿಸಿಯೂಟಕ್ಕೆ ತಟ್ಟೆಯ ಬದಲು ಬಾಳೆ ಎಲೆ ಬಳಕೆ!

By Web Desk  |  First Published Jun 6, 2019, 10:46 AM IST

ನೀರಿನ ಕೊರತೆ ಇದೀಗ ಬಿಸಿಯೂಟಕ್ಕೂ ಕೂಡ ತಟ್ಟಿದೆ. ತಟ್ಟೆಯ ಬದಲಿಗೆ ಬಾಳೆ ಎಲೆ ಬಳಕೆ ಮಾಡಲಾಗುತ್ತಿದೆ.


ಹೊನ್ನಾವರ :  ದಿನ ಕಳೆದಂತೆ ಜಿಲ್ಲೆಯಾದ್ಯಂತ ಬರ ಬಿಸಿ ಹೆಚ್ಚಾಗ ತೊಡಗಿದ್ದು, ಶಾಲಾ ಮಕ್ಕಳಿಗೆ ಕೊಡುವ ಬಿಸಿಯೂಟಕ್ಕೆ ಬರದ ತಾಪ ತಟ್ಟಿದೆ. ಶಾಲೆಗಳಲ್ಲಿ ನೀರಿನ ಕೊರತೆಯಿಂದಾಗಿ ಬಿಸಿಯೂಟ ಮಾಡಲು ಮಕ್ಕಳು ತಟ್ಟೆಗಳ ಬದಲು ಬಾಳೆಎಲೆಗಳನ್ನು ಮನೆಯಿಂದಲೇ ಕೊಂಡೊಯ್ಯುವ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಕಡ್ನೀರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭಕ್ಕೂ ಮುನ್ನವೇ ಗ್ರಾಮದಲ್ಲಿನ ಬಾವಿಯಲ್ಲಿನ ನೀರು ಬತ್ತಿ ಹೋಗಿದ್ದು, ಬಿಸಿಯೂಟ ತಯಾರಿಸಲು ನೀರಿನ ಕೊರತೆ ಉಂಟಾಗಿದೆ. ಶಾಲೆಯಲ್ಲಿ ಒಟ್ಟು 50 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಚಂದಾವರ ಗ್ರಾಪಂ ವತಿಯಿಂದ ಎರಡು ದಿನಗಳಿಗೊಮ್ಮೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನೀರು ವಿದ್ಯಾರ್ಥಿಗಳಿಗೆ ಕುಡಿಯಲು ಮತ್ತು ಬಿಸಿಯೂಟಕ್ಕೆ ಮಾತ್ರ ಸಾಲುತ್ತಿದ್ದು, ಊಟ ಮಾಡಿದ ತಟ್ಟೆ. ಲೋಟಗಳ ತೊಳೆಯಲು ಸಾಲದಾಗಿದೆ.

Latest Videos

ಹೀಗಾಗಿ ಇಲ್ಲಿನ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಶಾಲೆಗೆ ಪ್ರತಿನಿತ್ಯ 4ರಿಂದ 5 ಬಾಳೆಎಲೆಗಳನ್ನು ತರುವಂತೆ ಸೂಚಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಸೂಚನೆಯನ್ನು ಶಿಸ್ತಾಗಿ ಪಾಲಿಸುತ್ತಿದ್ದು, ಸ್ಕೂಲ್‌ ಬ್ಯಾಗ್‌ ಜತೆಗೆ ಬಾಳೆಎಲೆಗಳನ್ನು ತರುತ್ತಿದ್ದಾರೆ. ಇದರಿಂದ ಅನಾವಶ್ಯಕ ನೀರಿನ ಬಳಮಕೆ ತಪ್ಪಿದೆ. ಪಾಲಕರು ಸಹ ನಿತ್ಯ ತಮ್ಮ ಮಕ್ಕಳಿಗೆ ಬಾಳೆಎಲೆಗಳನ್ನು ತೆಗೆದುಕೊಂಡು ಹೋಗುವ ಕಾರ್ಯಕ್ಕೆ ಸಾಥ್‌ ನೀಡುತ್ತಿದ್ದಾರೆ. ಕಡ್ನೀರು ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ತಟ್ಟೆಗಳ ಬದಲು ಬಾಳೆಎಲೆಗಳನ್ನು ಬಳಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

click me!