ಉತ್ತರ ಕನ್ನಡ: ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಬ್ಯಾನ್

By Govindaraj S  |  First Published Jul 28, 2023, 10:32 PM IST

ರಾಜ್ಯದ 65% ಅರಣ್ಯವಿರುವ ಹಾಗೂ ಹೆಚ್ಚು ಜಲಪಾತಗಳನ್ನು ಹೊಂದಿರುವ ಜಿಲ್ಲೆಯಾಗಿರುವ ಉತ್ತರ ಕನ್ನಡದಲ್ಲಿ ಇದೀಗ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ನಿರ್ಬಂಧ ಹಾಕಲಾಗಿದೆ. 


ಉತ್ತರ ಕನ್ನಡ (ಜು.28): ರಾಜ್ಯದ 65% ಅರಣ್ಯವಿರುವ ಹಾಗೂ ಹೆಚ್ಚು ಜಲಪಾತಗಳನ್ನು ಹೊಂದಿರುವ ಜಿಲ್ಲೆಯಾಗಿರುವ ಉತ್ತರ ಕನ್ನಡದಲ್ಲಿ ಇದೀಗ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ನಿರ್ಬಂಧ ಹಾಕಲಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಜತೆ ಅಲ್ಲಲ್ಲಿ ಗುಡ್ಡ ಕುಸಿತಗಳಾಗುತ್ತಿವೆ. ಇದರ ಜತೆ ಜಲಪಾತಗಳಲ್ಲಿ ನೀರಿನ ವೇಗ ಹೆಚ್ಚಾಗುತ್ತಲೇ ಇರುವುದರಿಂದ‌ ಪ್ರವಾಸಿಗರು ನೀರಿಗಿಳಿದರೆ ಅಪಾಯ ತಪ್ಪಿದ್ದಲ್ಲ. ಕೆಲವರಂತೂ ಸೆಲ್ಫಿ, ಫೋಟೊಗ್ರಾಫಿಯ ಹುಚ್ಚಾಟ ನಡೆಸಲು ಹೋಗಿ ಪ್ರಾಣ ತೆತ್ತಂತಹ ಘಟನೆಗಳೂ ನಡೆದಿವೆ. 

ಉಡುಪಿಯಲ್ಲಿ ಇತ್ತೀಚೆಗೆ ನಡೆದ ಘಟನೆಯೂ ಇದಕ್ಕೆ ಸಾಕ್ಷಿಯಾಗಿದ್ದು, ಜಿಲ್ಲೆಯ ಸದ್ಯದ ಪರಿಸ್ಥಿತಿ ಹಿನ್ನೆಲೆ ಎಲ್ಲಾ ಜಲಪಾತಗಳ ವೀಕ್ಷಣೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಹೊರ‌ಜಿಲ್ಲೆಯಿಂದ ಬರುವಂತಹ ಪ್ರವಾಸಿಗರು ಕೂಡಾ ಕೊಂಚ ದಿನಗಳ ಕಾಲ ಭೇಟಿ ನೀಡದಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದು, ಯಾವುದೇ ದುರ್ಘಟನೆಗಳು ನಡೆಯದಂತೆ ಪ್ರಮುಖ ಜಲಪಾತಗಳ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ‌ ನಿಯೋಜನೆ ನಿರ್ಧಾರ ಮಾಡಲಾಗಿದೆ. ಜಿಲ್ಲಾಡಳಿತದ ಈ ನಿರ್ಧಾರದಿಂದ ಪ್ರವಾಸಿಗರಿಲ್ಲದೇ ಜಿಲ್ಲೆಯ ಜಲಪಾತಗಳ ತಾಣ ಬಿಕೋ ಅನ್ನುತ್ತಿದ್ದು, ಮಳೆಯ ನಡುವೆ ಪ್ರಕೃತಿಯ ಸೊಬಗನ್ನು ಅನುಭವಿಸಬೇಕೆಂದಿದ್ದ ಪ್ರವಾಸಿಗರಿಗೆ ಬೇಸರ ಮೂಡಿದೆ.

Tap to resize

Latest Videos

undefined

ಟೊಮೆಟೋಗೆ ಚಿನ್ನದ ದರ: ಸಸಿಗಳಿಗೆ ಹೆಚ್ಚಿದ ಬೇಡಿಕೆ

ಪ್ರವಾಸಿ ತಾಣಗಳಲ್ಲಿ ಮುಂಜಾಗ್ರತೆ ವಹಿಸಿ: ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನಲೆಯಲ್ಲಿ ಜಿಲ್ಲೆಯ ಬಹುತೇಕ ಜಲಾಶಯಗಳು, ಜಲಪಾತಗಳು, ನದಿಗಳು ಉಕ್ಕಿ ಹರಿಯುತ್ತಿವೆ. ಅದರಲ್ಲೂ ಜಿಲ್ಲೆಯ ಪ್ರಕೃತಿ ಸೌಂದರ್ಯ ಮತ್ತಷ್ಟುಹೆಚ್ಚಾಗಿದ್ದು, ಇವುಗಳನ್ನು ವೀಕ್ಷಿಸಲು ಬರುವ ಸಾರ್ವಜನಿಕರು/ ಪ್ರವಾಸಿಗರು ಸೌಂದರ್ಯಕ್ಕೆ ಮನಸೋತು ಬಹಳ ಹತ್ತಿರದಿಂದ ಪೋಟೋ ಅಥವಾ ವಿಡಿಯೋ ತೆಗೆಯುವ, ರೀಲ್ಸ್‌ ಮಾಡುವ ಅನಗತ್ಯ ಸಾಹಸ ಮಾಡದಿರಿ, ಕಲ್ಲು ಬಂಡೆಗಳು, ಒದ್ದೆಯಾಗಿ ಜಾರುತ್ತಿದೆ ಎಂದು ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಎಚ್ಚರಿಸಿದ್ದಾರೆ.

ಪ್ರವಾಸಿಗರಿಗೆ ಹೊಸ ಪರಿಸರದ ಬಗ್ಗೆ ಅರಿವಿರುವುದಿಲ್ಲ. ಸ್ಥಳೀಯರ ಮಾತುಗಳನ್ನು ಗೌರವಿಸಿ, ಪ್ರವಾಸಿ ತಾಣಗಳಲ್ಲಿ ಅನುಸರಿಸಬೇಕಾದ ಕನಿಷ್ಠ ನಿಯಮಗಳ ಅನುಸರಿಸಿ, ಅಲ್ಲದೆ ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ, ಸೂಕ್ತ ಸುರಕ್ಷತೆ ಮತ್ತು ಭದ್ರತೆಯನ್ನು ಕಲ್ಪಿಸುವ ದೃಷ್ಟಿಯಿಂದ ಪ್ರವಾಸಿ ಮಿತ್ರರನ್ನೂ ಸಹ ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆದರೂ ಸಹ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ನೀಡಿರುವ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿ ತಮ್ಮ ಅಮೂಲ್ಯ ಜೀವ ಹಾನಿ ಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕದಂತೆ ಈ ಮೂಲಕ ತಿಳಿಸಲಾಗಿದೆ. 

ಲೋಕಸಭೆ: ರಾಜ್ಯದಲ್ಲಿ 15-20 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು​: ಜಗದೀಶ್‌ ಶೆಟ್ಟರ್‌

ಒಂದು ಸಣ್ಣ ತಪ್ಪು ನಡೆ ಜೀವಕ್ಕೆ ಎರವಾದೀತು ಎಂಬುದನ್ನು ಪ್ರವಾಸಿಗರು ಮನಗಂಡು ಜವಾಬ್ದಾರಿಯಿಂದ ವರ್ತಿಸಬೇಕು ಹಾಗೂ ಹೋಟೆಲ್, ಹೋಂ-ಸ್ಟೇ, ರೆಸಾರ್ಚ್‌ಗಳಲ್ಲಿ ತಂಗುವ ಸಾರ್ವಜನಿಕರಿಗೆ/ ಪ್ರವಾಸಿಗರಿಗೆ ಮಾಲೀಕರು ಅಥವಾ ಸಿಬ್ಬಂದಿ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಜಾಗೃತಿ ಹಾಗೂ ಸುರಕ್ಷತೆಯಿಂದ ಇರುವ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಲಾಗಿದೆ. ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ಪ್ರವಾಸಿಗರು ಸರ್ಕಾರದಿಂದ ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿದಲ್ಲಿ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸದಿದ್ದಲ್ಲಿ ಪ್ರವಾಸಿಗರ ಮೇಲೆ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

click me!