ಟೊಮೆಟೋಗೆ ಚಿನ್ನದ ದರ: ಸಸಿಗಳಿಗೆ ಹೆಚ್ಚಿದ ಬೇಡಿಕೆ
ಕಳೆದ ಒಂದು ತಿಂಗಳಿನಿಂದ ಎಲ್ಲೆಡೆ ಟೊಮೆಟೋ ದರ ಹೆಚ್ಚು ಸದ್ದು ಮಾಡುತ್ತಿದೆ. ಟೊಮೆಟೋ ಬೆಳೆದ ರೈತರಿಗೆ ಒಳ್ಳೆಯ ಆದಾಯ ಸಿಗುತ್ತಿದೆ. ಹೀಗಾಗಿ ಹೆಚ್ಚಿನ ರೈತರು ಟೊಮೆಟೋ ಬೆಳೆಯಲು ಆಸಕ್ತಿ ತೋರುತ್ತಿದ್ದು, ಇದರಿಂದ ನರ್ಸರಿಗಳಲ್ಲಿ ಟೊಮೆಟೋ ಸಸಿಗಳಿಗೆ ಬೇಡಿಕೆ ಶುರುವಾಗಿದೆ. ಜಿಲ್ಲೆಯಲ್ಲಿ ಹಲವು ಕಡೆ ಸಾಕಷ್ಟುನರ್ಸರಿಗಳಿವೆ.
ಚಿಕ್ಕಬಳ್ಳಾಪುರ (ಜು.28): ಕಳೆದ ಒಂದು ತಿಂಗಳಿನಿಂದ ಎಲ್ಲೆಡೆ ಟೊಮೆಟೋ ದರ ಹೆಚ್ಚು ಸದ್ದು ಮಾಡುತ್ತಿದೆ. ಟೊಮೆಟೋ ಬೆಳೆದ ರೈತರಿಗೆ ಒಳ್ಳೆಯ ಆದಾಯ ಸಿಗುತ್ತಿದೆ. ಹೀಗಾಗಿ ಹೆಚ್ಚಿನ ರೈತರು ಟೊಮೆಟೋ ಬೆಳೆಯಲು ಆಸಕ್ತಿ ತೋರುತ್ತಿದ್ದು, ಇದರಿಂದ ನರ್ಸರಿಗಳಲ್ಲಿ ಟೊಮೆಟೋ ಸಸಿಗಳಿಗೆ ಬೇಡಿಕೆ ಶುರುವಾಗಿದೆ. ಜಿಲ್ಲೆಯಲ್ಲಿ ಹಲವು ಕಡೆ ಸಾಕಷ್ಟುನರ್ಸರಿಗಳಿವೆ. ಅವುಗಳಲ್ಲಿ ಟೊಮೆಟೊ ಸಸಿಗೆ ಹೆಚ್ಚು ಬೇಡಿಕೆ ಬಂದಿದೆ. ಟೊಮೆಟೊ ಸಸಿಗಳನ್ನು ಪಡೆಯಲು ನರ್ಸರಿಗಳಿಗೆ ಮುಂಗಡವಾಗಿ ಹಣ ಪಾವತಿಸಲು ರೈತರು ಮುಂದಾಗಿದ್ದಾರೆ.
ವಿವಿಧೆಡೆ ಟೊಮೆಟೋ ಬೆಳೆ ಹಾನಿ: ಏಪ್ರಿಲ್- ಮೇನಿಂದ ಸೆಪ್ಟಂಬರ್ ತಿಂಗಳಲ್ಲಿ ಟೊಮೆಟೋ ಬೆಲೆ ಏರಿಳಿತ ಆಗುವುದು ಸಾಮಾನ್ಯ. ಆದರೆ, ಈ ಬಾರಿ ಅತಿ ಹೆಚ್ಚು ಟೊಮೆಟೋ ಬೆಳೆಯುವ ದೇಶದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಉತ್ತರಪ್ರದೇಶ, ವಿದರ್ಭ, ನಾಸಿಕ್ ಸೇರಿದಂತೆವಿವಿಧ ಕಡೆಗಳಲ್ಲಿ ಮಹಾಮಳೆಯಿಂದ ಟೊಮೆಟೊ ಬೆಳೆ ಸಂಪೂರ್ಣ ನೆಲಕಚ್ಚಿದೆ. ಹೀಗಾಗಿ ಟೊಮೆಟೊ ದರ ಗಗನ ಮುಖಿಯಾಗಿದೆ. ಇದರ ಪರಿಣಾಮ ಈಗ ರೈತರು ಟೊಮೆಟೊ ಬೆಳೆಯಲು ಮುಂದಾಗಿದ್ದಾರೆ.
ರಕ್ತದಾನದ ಬಗ್ಗೆ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ: ಮಾಜಿ ಸಚಿವ ಸುಧಾಕರ್
ಈ ಹಿಂದೆ ಟೊಮೆಟೊ ಸಾಮಾನ್ಯ ದರವಿದ್ದ ಸಮಯದಲ್ಲಿ ಸಸಿಗೆ 10- 20 ಪೈಸೆಯಂತೆ ನರ್ಸರಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈಗ ಟೊಮೆಟೊ ಬಂಗಾರದ ಬೆಳೆಯಾಗಿದೆ. ಹೀಗಾಗಿ ಟೊಮೆಟೊ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ನರ್ಸರಿಗಳಲ್ಲಿ ಸಸಿಗಳಿಗೆ ಬಹಳ ಬೇಡಿಕೆ ಬಂದಿದ್ದು, ಸಸಿ ಸಿಗುವುದು ಕಷ್ಟವಾಗಿದೆ. ಪ್ರತಿ ಸಸಿ 1 ರು.ಗಳಿಗೆ ಮಾರಾಟ ಮಾಡಲಾಗುತ್ತಿದೆ. ನರ್ಸರಿಯಲ್ಲಿ ಟೊಮೆಟೊ ಬೀಜವನ್ನು ಕ್ರೇಟ್‌ಗೆ ಹಾಕಿದ ನಂತರದಲ್ಲಿ ಸುಮಾರು 20 ದಿನಗಳ ನಂತರ ಅದನ್ನು ರೈತರಿಗೆ ವಿತರಿಸಲಾಗುತ್ತಿತ್ತು. ಆದರೆ ದರ ಹೆಚ್ಚಳವಾದ ಕಾರಣ ರೈತರು 15 ದಿನಗಳ ಸಸಿಗಳನ್ನು ಸಹ ಬಿಡದೇ ಅವುಗಳನ್ನು ತೆಗೆದುಕೊಂಡು ಹೋಗಿ ತಮ್ಮ ಜಮೀನಿನಲ್ಲಿ ನೆಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಪಟ್ರೇನಹಳ್ಳಿಯ ನರ್ಸರಿ ಮಾಲಿಕ ದೇವರಾಜ್ ಹೇಳಿದರು.
ಟೊಮೆಟೋ ರಕ್ಷಣೆಯೇ ರೈತರಿಗೆ ಸವಾಲು: ಚಿಕ್ಕಬಳ್ಳಾಪುರ ನಗರದ ಮಾರುಕಟ್ಟೆಯಲ್ಲಿ 15 ಕೆಜಿ ಟೊಮೆಟೊ ಬಾಕ್ಸ್ 1800, ರಿಂದ 2,000 ರೂ ದರಕ್ಕೆ ಮಾರಾಟವಾಗುತ್ತಿದ್ದು, ಟೊಮೆಟೊ ಬೆಳೆದ ರೈತರಲ್ಲಿ ಸಂತಸ ಮನೆ ಮಾಡಿದೆ. ಚಿಕ್ಕಬಳ್ಳಾಪುರದಿಂದ ನೇಪಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿಗೆ ಟೊಮೆಟೊ ರಪ್ತು ಮಾಡಲಾಗುತ್ತಿದೆ. ಟೊಮೆಟೊ ಬೆಲೆ ಏರಿಕೆಯಾಗಿರುವುದರಿಂದ ಫಸಲು ಬಿಟ್ಟಿರುವ ಟೊಮೆಟೊ ಬೆಳೆಯನ್ನು ರಕ್ಷಿಸಿಕೊಳ್ಳಲು ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಕಳ್ಳರ ಕಾಟವನ್ನು ತಪ್ಪಿಸಲು ಹಗಲು ರಾತ್ರಿ ಬೆಳೆಗೆ ಕಾವಲು ಕಾಯುತ್ತಿದ್ದಾರೆ. ಇನ್ನು ಟೊಮೆಟೊ ಬೆಳೆಯಲ್ಲಿ ರೋಗ ಬಾರದಂತೆ ದಿನ ಬಿಟ್ಟು ದಿನ ಔಷಧಿಗಳನ್ನು ಸಿಂಪಡಿಸುತ್ತಿದ್ದಾರೆ. ಕೂಲಿ ಕಾರ್ಮಿಕರನ್ನು ಸಹ ಟೊಮೆಟೊ ಬೆಳೆಯ ರಕ್ಷಣೆಗೆ ತೆಗೆದುಕೊಳ್ಳದೇ ಬೆಳೆಯನ್ನು ಜೋಪಾನವಾಗಿ ಕಾಪಾಡಿಕೊಳ್ಳುವತ್ತ ರೈತರು ಹೆಚ್ಚು ಜಾಗೃತಿ ವಹಿಸಿದ್ದಾರೆಎಂದು ಜಿಲ್ಲೆಯ ಚೇಳೂರು ತಾಲೂಕಿನ ಎಂ.ಬೆಲ್ಲಾಲಂಪಲ್ಲಿ ಗ್ರಾಮದ ಟೊಮೆಟೊ ಬೆಳಗಾರ ನರಸಿಂಹಪ್ಪ ಹೇಳಿದರು.
ಪಿಯು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಉಚಿತ ತರಬೇತಿ: ಶಾಸಕ ಪ್ರದೀಪ್ ಈಶ್ವರ್
ಒಟ್ಟಿಗೇ ಫಸಲು ಬಂದರೆ ದರ ಕುಸಿತ: ಪ್ರಸ್ತುತ ಮಾರುಕಟ್ಟೆಯಲ್ಲಿ ಟೊಮೆಟೊ ದರ ಹೆಚ್ಚಾಗಿರುವುದರಿಂದ ನೀರಾವರಿ ಹೊಂದಿರುವ ಬಹುತೇಕ ರೈತರು ಟೊಮೆಟೊ ಸಸಿಗಳನ್ನು ನಾಟಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಏಕ ಕಾಲದಲ್ಲಿ ಫಲಸು ಕೊಯ್ಲಿಗೆ ಬಂದಲ್ಲಿ ಆ ಸಮಯದಲ್ಲಿ ಟೊಮೆಟೊಗೆ ದರ ಇರುತ್ತೋ, ಇಲ್ಲವೋ ಎಂಬ ಆತಂಕದ ನಡುವೆಯೂ ಬೆಳೆಗಾರರು ಟೊಮೆಟೊ ಸಸಿಗಳನ್ನು ನೆಡಲು ಮುಂದಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಟೊಮೆಟೊ ಬೆಳೆಗೆ ದರವೇ ಸಿಕ್ಕಿರಲಿಲ್ಲ. ಬೆಳೆಗಾರರು ತುಂಬಾ ನಷ್ಟಅನುಭವಿಸಿದ್ದರು. ಈ ಬಾರಿ ಉತ್ತಮ ಬೆಲೆ ಬಂದಿರುವುದರಿಂದ ಹೆಚ್ಚಿನ ರೈತರು ಟೊಮೆಟೊ ಬೆಳೆಯಲು ಮುಂದಾಗಿದ್ದಾರೆ. ನರ್ಸರಿಗಳಲ್ಲಿ ಮುಂಗಡ ಹಣ ಪಾವತಿಸಿ ಸಸಿಗಳನ್ನು ಪಡೆಯಲು ಮುಂದಾಗಿದ್ದಾರೆ ಎಂದು ನರ್ಸರಿ ಮಾಲಿಕ ಗೋವರ್ಧನ್ ಹೇಳಿದರು.