ಬಳ್ಳಾರಿ: ಕೊರೋನಾ ಅಟ್ಟಹಾಸ, ಅರ್ಧಶತಕದ ಸನಿಹವಾಗುತ್ತಿದೆ ಸಾವಿನ ಸಂಖ್ಯೆ!

By Kannadaprabha NewsFirst Published Jul 5, 2020, 9:10 AM IST
Highlights

ಜಿಂದಾಲ್‌ನಲ್ಲಿ 457 ಪಾಸಿಟೀವ್‌ ಪ್ರಕರಣ| ಬಳ್ಳಾರಿಯಲ್ಲಿ ಅತಿ ಹೆಚ್ಚು ಪ್ರಕರಣಗಳು| ಮೃತಪಟ್ಟ ಕೊರೋನಾ ಸೋಂಕಿತರ ಪೈಕಿ ಜಿಂದಾಲ್‌ನವರು ಯಾರೂ ಇಲ್ಲ: ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌| ಕೊರೋನಾ ದಾಳಿಗೆ ತತ್ತರಿಸಿದ ಗಣಿ ಜಿಲ್ಲೆ| ಸಾರ್ವಜನಿಕರಲ್ಲಿ ಹೆಚ್ಚಿದ ಭೀತಿ| ಹೊರಗಡೆ ಬರಲು ಹಿಂದೇಟು| ಸೋಂಕು ನಿಯಂತ್ರಣ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲು|

ಬಳ್ಳಾರಿ(ಜು. 06): ಜಿಲ್ಲಾದ್ಯಂತ ಕೊರೋನಾ ವೈರಸ್‌ ದಾಳಿ ಮುಂದುವರಿದಿದ್ದು, ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲೂ ಆವರಿಸಿಕೊಳ್ಳುತ್ತಿದೆ. ಜೊತೆಗೆ ಸಾವಿನ ಸಂಖ್ಯೆಯಲ್ಲೂ ಏರುಮುಖಗೊಂಡಿದೆ. ಇದು ಜಿಲ್ಲೆಯ ಜನರನ್ನು ಆತಂಕಕ್ಕೆ ಗುರಿ ಮಾಡಿದ್ದು ಇದು ಹೀಗೆಯೇ ಮುಂದುವರಿದರೆ ಗತಿ ಏನು ಎಂಬ ಭೀತಿ ಜನರಲ್ಲಿ ಆವರಿಸಿದೆ.

ಆರಂಭದಲ್ಲಿ ಪೂರ್ಣ ನಿಯಂತ್ರಣಕ್ಕೆ ಬಂದಂತೆ ಕಂಡು ಬಂದ ಜಿಲ್ಲೆಯಲ್ಲಿ ಜಿಂದಾಲ್‌ನಲ್ಲಿ ಏರಿಕೆಗೊಂಡ ವೈರಸ್‌ ಪ್ರಕರಣಗಳಿಂದ ಬಹುವಾಗಿ ವ್ಯಾಪಿಸಿತು. ಜಿಂದಾಲ್‌ಗೆ ಜಿಲ್ಲೆಯ ನಾನಾ ಭಾಗಗಳಿಂದ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಕೆಲಸಕ್ಕೆ ಹೋಗುತ್ತಿರುವುದರಿಂದ ಸೋಂಕು ಎಲ್ಲ ಕಡೆ ಹಬ್ಬಲಾರಂಭಿಸಿತು. ಕಾರ್ಖಾನೆ ನೌಕರರು ಹಾಗೂ ಸಿಬ್ಬಂದಿಗೆ ಸೋಂಕು ಹರಡದಂತೆ ಜಿಂದಾಲ್‌ ಆಡಳಿತ ಮಂಡಳಿ ಅನೇಕ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡರೂ ವೈರಾಣು ದಾಳಿಯನ್ನು ನಿಯಂತ್ರಿಸಲು ಸಾಧ್ಯವಾಗಲೇ ಇಲ್ಲ. ಸಂಡೂರು, ಹೊಸಪೇಟೆ ಹಾಗೂ ಬಳ್ಳಾರಿ ತಾಲೂಕಿನ ನೂರಾರು ಜನರು ಸೋಂಕಿಗೆ ತುತ್ತಾದರು. ಒಂದು ತಿಂಗಳು ಮಗುವಿನಿಂದ ಹಿಡಿದು 78 ವರ್ಷದ ವೃದ್ಧೆ ವರೆಗೆ ಕೊರೋನಾ ವೈರಸ್‌ ತನ್ನ ಅಸ್ತಿತ್ವವನ್ನು ಪ್ರತಿಪಾದಿಸಿತು.

ಕಾಂಗ್ರೆಸ್ಸಿನಲ್ಲಿ ಮತ್ತೆ ಭಿನ್ನಮತ ಸ್ಫೋಟ..!

ಏತನ್ಮಧ್ಯೆ ನಾನಾ ಕಾಯಿಲೆಯಿಂದ ಬಳಲುತ್ತಿದ್ದವರಿಗೂ ಸೋಂಕು ಹಬ್ಬಿದ್ದು, ಸಾವಿನ ಕದ ತೆರೆಯಲು ಅವಕಾಶ ಕಲ್ಪಿಸಿತು. ಜಿಲ್ಲೆಯಲ್ಲಿ ಈ ವರೆಗೆ ಮೃತ ಪಟ್ಟ34 ಜನರ ಪೈಕಿ ಹೆಚ್ಚಿ​ನ​ವ​ರು ನಾನಾ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಆದರೆ, ಸತ್ತ ಎಲ್ಲರಿಗೂ ಸೋಂಕು ಇತ್ತು ಎಂಬುದು ಸಹ ಅಷ್ಟೇ ಸತ್ಯ!

ಅರ್ಧಶತಕ ಸಮೀಪಿಸುತ್ತಿದೆ ಸಾವಿನ ಸಂಖ್ಯೆ!

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ನಡುವೆ ಸೋಂಕಿತರ ಸಾವಿನ ಸಂಖ್ಯೆಯೂ ಹೆಚ್ಚುತ್ತಿದ್ದು ಅರ್ಧಶತಕದ ಸನಿಹದಲ್ಲಿದೆ. ಜುಲೈ 4ರ ವರೆಗೆ ಜಿಲ್ಲೆಯಲ್ಲಿ 1168 ಸೋಂಕಿತರು ಇರುವುದು ಖಚಿತವಾಗಿದೆ. 34 ಜನರು ಸಾವಿಗೀಡಾಗಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವ್ಯಾಪಿಸಿಕೊಳ್ಳುತ್ತಿರುವ ವೈರಾಣು ಸಾರ್ವಜನಿಕರನ್ನು ಭಯಭೀತರನ್ನಾಗಿಸಿದೆ. ಕುಟುಂಬ ಸದಸ್ಯರು ಮನೆಗೆ ಬಂದರೂ ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾವಿನ ಸಂಖ್ಯೆಯ ಏರಿಕೆಯ ಭೀತಿ ಶುಭ ಸಮಾರಂಭಗಳಿಗೂ ಹೋಗದಂತೆ ತಡೆಯೊಡ್ಡಿದೆ. ದಿನಸಿ, ಕಾಯಿಪಲ್ಯೆ ಮತ್ತಿತರ ವಸ್ತುಗಳನ್ನು ಖರೀದಿಸುವಾಗಲೂ ಜನರು ಅತ್ಯಂತ ಸೂಕ್ಷ್ಮವಾಗಿ ವರ್ತಿಸುತ್ತಿರುವುದು ಕಂಡು ಬರುತ್ತಿದೆ. ಕೊರೋನಾ ಆವರಿಸುವ ಜೀವಭಯದಲ್ಲಿರುವ ಜನರು, ಮಾಸ್ಕ್‌ ಇಲ್ಲದೆ ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಜಿಂದಾಲ್‌ನಿಂದಾಗಿಯೇ ಜಿಲ್ಲೆಯಲ್ಲಿ ಸೋಂಕು!

‘ಜಿಂದಾಲ್‌ ಕಾರ್ಖಾನೆಯಿಂದಾಗಿಯೇ ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಸೋಂಕು ಹಬ್ಬಲು ಕಾರಣ. ಇಷ್ಟಾಗಿಯೂ ಸರ್ಕಾರ ಜಿಂದಾಲ್‌ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಜಿಂದಾಲ್‌ ಕಾರ್ಖಾನೆಯ ಸ್ಥಗಿತದ ಬಗ್ಗೆ ಯಾವುದೇ ನಿಲುವು ತೆಗೆದುಕೊಳ್ಳುತ್ತಿಲ್ಲ. ಎಲ್ಲರೂ ಜಿಂದಾಲ್‌ ಹಿತ ಕಾಯಲು ನಿಂತಿದ್ದಾರೆ!’ ಈ ರೀತಿಯ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಸಾಮಾಜಿಕ ಜಾಲತಾಣದಲ್ಲೂ ಜಿಂದಾಲ್‌ ವಿರುದ್ಧ ಹರಿಹಾಯುತ್ತಿರುವ ಜನರು, ರಾಜ್ಯ ಸರ್ಕಾರಕ್ಕೆ ಬಳ್ಳಾರಿ ಜಿಲ್ಲೆಯ ಜನರ ಜೀವಕ್ಕಿಂತಲೂ ಕಾರ್ಖಾನೆ ನಡೆಸುವುದು ಮುಖ್ಯವಾಯಿತೇ ಎಂದು ಪ್ರಶ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸೋಂಕು ಹರಡದಂತೆ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಯಶಸ್ವಿಯಾಗಿದ್ದರು. ಆದರೆ, ಜಿಂದಾಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದ ಸೋಂಕು ನಿಯಂತ್ರಣ ಮೀರಿತು.

ಆತಂಕದ ಮಧ್ಯೆ ಕೆಲ​ಸ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿನಿಂದ ಅನೇಕರು ಮನೆಯಿಂದ ಹೊರಗಡೆ ಬರಲು ಹಿಂದೇಟು ಹಾಕಿದರೆ, ದಿನಗೂಲಿಯ ಮೇಲೆಯೇ ಬದುಕು ಕಟ್ಟಿಕೊಂಡವರು ಹಾಗೂ ವಿವಿಧ ವ್ಯಾಪಾರ ಮಾಡಿಕೊಂಡು ಜೀವನ ನಡೆಸುವವರು ಆತಂಕದ ನಡುವೆಯೂ ಕೆಲಸಕ್ಕೆ ಹೋಗುವ ಅನಿವಾರ್ಯತೆ ಇದೆ. ಸಾಮಾಜಿಕ ಅಂತರ, ಸ್ಯಾನಿಟೈಸರ್‌ಗೆ ಒತ್ತು ನೀಡುತ್ತಿದ್ದು, ಮಾಸ್ಕ್‌ ಹಾಕದೆ ಹೊರ ಬಂದ ಕೆಲವರಿಗೆ ಸಾರ್ವಜನಿಕರೇ ಛೀಮಾರಿ ಹಾಕಿ ಮಾಸ್ಕ್‌ ಹಾಕಿಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಏತನ್ಮಧ್ಯೆ ಜಿಲ್ಲೆಯಲ್ಲಿ ಏರಿಕೆಯಾಗುತ್ತಿರುವ ಸೋಂಕು ನಿಯಂತ್ರಿಸುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಿತ್ಯ 50ರ ಗಡಿದಾಟುತ್ತಿರುವ ಸೋಂಕಿತರ ಪ್ರಮಾಣ ಒಮ್ಮೆಮ್ಮೆ ಶತಕ ಬಾರಿಸುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.

50 ಪಾಸಿಟಿವ್‌ ಪ್ರಕರಣ ಪತ್ತೆ

ಜಿಲ್ಲೆಯಲ್ಲಿ ಶನಿವಾರ 50 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1168ಕ್ಕೇರಿದೆ. ಬಳ್ಳಾರಿ 37, ಹಡಗಲಿ 1, ಹೊಸಪೇಟೆ 7, ಕೂಡ್ಲಿಗಿ 1, ಸಂಡೂರು 3, ಕೊಪ್ಪಳ 1 ಪ್ರಕರಣ ಪತ್ತೆಯಾಗಿವೆ. ಬಳ್ಳಾರಿ ನಗರದಲ್ಲಿ ಅತಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಜಿಲ್ಲೆಯಲ್ಲಿ ಈ ವರೆಗೆ 1168 ಪಾಸಿಟೀವ್‌ ಪ್ರಕರಣ ದೃಢಪಟ್ಟಿವೆ. ಈ ಪೈಕಿ 524 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು 610 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 34 ಜನರು ಸಾವನ್ನಪ್ಪಿದ್ದಾರೆ. ಶನಿವಾರ ಒಟ್ಟು 283 ಜನರ ಗಂಟಲುದ್ರವ ವೈದ್ಯಕೀಯ ಪರೀಕ್ಷೆಗೆ ಕಳಿಸಲಾಯಿತು. ಇನ್ನು 477 ಜನ​ರ ವೈದ್ಯಕೀಯ ವರದಿ ಬರಬೇಕಾಗಿದ್ದು, 1870 ಜನರು ಮನೆಯ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಂದಾಲ್‌ನಲ್ಲಿ 457 ಪಾಸಿಟಿವ್‌ ಪ್ರಕರಣ

ಜಿಲ್ಲೆಯಲ್ಲಿ ಈ ವರೆಗೆ ದೃಢಗೊಂಡಿರುವ 1168 ಕೊರೋನಾ ಪಾಸಿಟೀವ್‌ ಪ್ರಕರಣಗಳ ಪೈಕಿ ಜಿಂದಾಲ್‌ಗೆ ಸೇರಿದ 457 ಪ್ರಕರಣಗಳು ಇವೆ. ಮೃತಪಟ್ಟ ಕೊರೋನಾ ಸೋಂಕಿತರ ಪೈಕಿ ಜಿಂದಾಲ್‌ನವರು ಯಾರೂ ಇಲ್ಲ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಮಾಹಿತಿ ನೀಡಿದ್ದಾರೆ.
 

click me!