ಎಲ್ಲೆಂದರಲ್ಲಿ ಕಸ ಹಾಕದಂತೆ ಅದೆಷ್ಟೇ ಹೇಳಿದ್ರೂ ಕ್ಯಾರೇ ಅನ್ನದ ಖಾಸಗಿ ಅಸ್ಪತ್ರೆ ಮುಂದೆ ಕಸ ಸುರಿದ ಪಾಲಿಕೆ

Published : Feb 04, 2026, 11:35 AM IST
Ballari Municipality

ಸಾರಾಂಶ

ಬಳ್ಳಾರಿ ಮಹಾನಗರ ಪಾಲಿಕೆಯು, ಕಸ ವಿಲೇವಾರಿ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ನಿಯಮ ಪಾಲಿಸದ ಪದ್ಮಾವತಿ ಕಿಡ್ನಿಕೇರ್ ಮತ್ತು ದ್ವಾರಕಾ ಆಸ್ಪತ್ರೆಗಳ ಮುಂದೆ ಕಸದ ರಾಶಿಯನ್ನು ಸುರಿದು, ಪಾಲಿಕೆಯು ದಿಟ್ಟ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

ಬಳ್ಳಾರಿ ನಗರದಲ್ಲಿ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂಬ ಸೂಚನೆಗಳನ್ನು ಪದೇಪದೆ ನೀಡಿದರೂ ಕೂಡ, ಕೆಲವು ಖಾಸಗಿ ಆಸ್ಪತ್ರೆಗಳು ನಿಯಮಗಳನ್ನು ಪಾಲಿಸದೆ ಅಜಾಗರೂಕತೆ ತೋರಿಸುತ್ತಿರುವುದು ಮುಂದುವರಿದಿದೆ. ಇದಕ್ಕೆ ಪಾಠ ಕಲಿಸುವ ಉದ್ದೇಶದಿಂದ ಬಳ್ಳಾರಿ ಮಹಾನಗರ ಪಾಲಿಕೆ ದಿಟ್ಟ ಹಾಗೂ ಮಾದರಿ ಕ್ರಮ ಕೈಗೊಂಡಿದ್ದು, ನಿಯಮ ಉಲ್ಲಂಘಿಸಿದ ಆಸ್ಪತ್ರೆಗಳ ಮುಂದೆ ಕಸವನ್ನು ಸುರಿದು ತೀವ್ರ ಎಚ್ಚರಿಕೆ ನೀಡಿದೆ.

ಯಾವ ಆಸ್ಪತ್ರೆಗಳು

ನಗರದ ಪಾರ್ವತಿ ನಗರದಲ್ಲಿರುವ ಪದ್ಮಾವತಿ ಕಿಡ್ನಿಕೇರ್ ಸೆಂಟರ್ ಹಾಗೂ ಮೋಕಾ ರಸ್ತೆಯಲ್ಲಿರುವ ದ್ವಾರಕಾ ಆಸ್ಪತ್ರೆ ವಿರುದ್ಧ ಈ ಕಠಿಣ ಕ್ರಮ ಜರುಗಿಸಲಾಗಿದೆ. ಪಾಲಿಕೆ ಅಧಿಕಾರಿಗಳ ಮಾಹಿತಿ ಪ್ರಕಾರ, ಪದ್ಮಾವತಿ ಕಿಡ್ನಿಕೇರ್ ಆಸ್ಪತ್ರೆ ಸಾಮಾನ್ಯ ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದರೆ, ದ್ವಾರಕಾ ಆಸ್ಪತ್ರೆ ವೈದ್ಯಕೀಯ ತ್ಯಾಜ್ಯವನ್ನು (ಮೆಡಿಕಲ್ ವೆಸ್ಟ್) ಪಾಲಿಕೆ ಕಸದ ವಾಹನದಲ್ಲೇ ಹಾಕುತ್ತಿದ್ದುದಾಗಿ ಪತ್ತೆಯಾಗಿದೆ.

ಈ ಎರಡೂ ಆಸ್ಪತ್ರೆಗಳಿಗೆ ಈ ಹಿಂದೆ ನೋಟಿಸ್ ನೀಡಲಾಗಿತ್ತು. ಅಲ್ಲದೆ ದಂಡ ವಿಧಿಸಲಾಗಿದ್ದರೂ ಸಹ, ಆಸ್ಪತ್ರೆ ಆಡಳಿತವು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ತೋರಿದ್ದು, ದಂಡವನ್ನು ಸರಿಯಾಗಿ ಪಾವತಿಸದೇ ಉಡಾಪೆ ಧೋರಣೆಯನ್ನೇ ಮುಂದುವರಿಸಿದ್ದವು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ ಬೆಳ್ಳಂಬೆಳಿಗ್ಗೆ ಪಾಲಿಕೆ ಸಿಬ್ಬಂದಿ ಪ್ರತಿಭಟನೆ

ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಬೆಳ್ಳಂಬೆಳಿಗ್ಗೆ ಪಾಲಿಕೆ ಸಿಬ್ಬಂದಿ ಆಸ್ಪತ್ರೆಗಳ ಎದುರು ಕಸವನ್ನು ಸುರಿದು, ಸಾರ್ವಜನಿಕವಾಗಿ ಎಚ್ಚರಿಕೆ ನೀಡುವ ಮೂಲಕ ಕಠಿಣ ಸಂದೇಶ ರವಾನಿಸಿದ್ದಾರೆ. ಪಾಲಿಕೆಯ ಈ ಅಪ್ರತಿಮ ಕ್ರಮದಿಂದ ಆಸ್ಪತ್ರೆ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.

ಇದು ಮೊದಲ ಹಂತದ ಕ್ರಮ ಮಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಯಾರೇ ಆಗಲಿ ಕಸವನ್ನು ಎಲ್ಲೆಂದರಲ್ಲಿ ಎಸೆಯುವಂತೆಯೇ ಅಥವಾ ವೈದ್ಯಕೀಯ ತ್ಯಾಜ್ಯವನ್ನು ನಿಯಮಬಾಹಿರವಾಗಿ ವಿಲೇವಾರಿ ಮಾಡಿದರೆ, ಅವರ ವಿರುದ್ಧವೂ ಇದೇ ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಸ್ಪಷ್ಟ ಎಚ್ಚರಿಕೆ ನೀಡಿದೆ.

ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ವಿಶೇಷವಾಗಿ ಆಸ್ಪತ್ರೆಗಳಂತಹ ಸಂಸ್ಥೆಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಪಾಲಿಕೆಯ ಈ ಕ್ರಮವು ಇತರ ಆಸ್ಪತ್ರೆಗಳು ಹಾಗೂ ವ್ಯಾಪಾರ ಸಂಸ್ಥೆಗಳಿಗೆ ಎಚ್ಚರಿಕೆಯ ಸಂದೇಶವಾಗಿದ್ದು, ಕಸ ವಿಲೇವಾರಿಯಲ್ಲಿ ಶಿಸ್ತು ಪಾಲಿಸಲು ಪ್ರೇರಣೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

PREV
Read more Articles on
click me!

Recommended Stories

Snake Video: ಕೊಂಡಗುಳಿಯಲ್ಲಿ ಭೀತಿ ಮೂಡಿಸಿದ್ದ ದೊಡ್ಡ ಹೆಡೆಯ ನಾಗರಹಾವು ರಕ್ಷಣೆ
ಧರ್ಮಸ್ಥಳ 74 ಅಸಹಜ ಸಾವು ಪ್ರಕರಣ: 2 ವಾರದಲ್ಲಿ ವಿವರ ನೀಡುವಂತೆ ಹೈಕೋರ್ಟ್ ಸೂಚನೆ