Bengaluru Cyber Crime New Idea: ನಿಮ್ಮ ಮಗ ಅರೆಸ್ಟ್ ಆಗಿದ್ದಾನೆಂದು ತಾಯಿಗೆ ಕರೆ ಮಾಡಿ ₹1.25 ಲಕ್ಷ ವಂಚನೆ!

Published : Jun 21, 2026, 10:05 PM IST
Bengaluru Cber Crime

ಸಾರಾಂಶ

ಬೆಂಗಳೂರಿನಲ್ಲಿ 'ನಿಮ್ಮ ಮಗ ರೇ*ಪ್ ಕೇಸಲ್ಲಿ ಬಂಧಿತನಾಗಿದ್ದಾನೆ' ಎಂದು ಪೊಲೀಸ್ ಸೋಗಿನಲ್ಲಿ ಕರೆ ಮಾಡಿದ ಸೈಬರ್ ವಂಚಕರು, ಮಹಿಳೆಯೊಬ್ಬರಿಂದ 1.25 ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾರೆ. ಕ್ಯೂಆರ್ ಕೋಡ್ ಮೂಲಕ ಹಣ ಪಡೆದು ಈ ವಂಚನೆ ಎಸಗಲಾಗಿದೆ.

ಬೆಂಗಳೂರು (ಜೂ.21): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೈಬರ್ ವಂಚಕರ (Bengaluru Cyber Crime New Idea) ಅಬ್ಬರ ದಿನೇ ದಿನೇ ಮಿತಿ ಮೀರುತ್ತಿದೆ. ಜನರಲ್ಲಿ ಭಯ ಹುಟ್ಟಿಸಿ ಹಣ ಲೂಟಿ ಮಾಡುವ ಹೊಸ ತಂತ್ರಕ್ಕೆ ಇದೀಗ ಎಚ್‌ಎಎಲ್ (HAL) ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. 'ನಿಮ್ಮ ಮಗ ಅ*ತ್ಯಾ*ಚಾರ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ' ಎಂದು ಸುಳ್ಳು ಹೇಳಿ ಬೆದರಿಸಿದ ವಂಚಕರು, ಮಹಿಳೆಯಿಂದ ಬರೋಬ್ಬರಿ 1.25 ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾರೆ.

ಘಟನೆಯ ಹಿನ್ನೆಲೆ:

ಜೂನ್ 18ರಂದು ಸಂತ್ರಸ್ತ ಮಹಿಳೆಗೆ ಅಂತರರಾಷ್ಟ್ರೀಯ ಸಂಖ್ಯೆಯೊಂದರಿಂದ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ತನ್ನನ್ನು ತಾನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. 'ನಿಮ್ಮ ಮಗ ಗ್ಯಾಂಗ್‌ರೇ*ಪ್ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಾನೆ, ಆತನನ್ನು ನಾವು ವಶಕ್ಕೆ ಪಡೆದಿದ್ದೇವೆ' ಎಂದು ಹೇಳಿ ಮಹಿಳೆಗೆ ಶಾಕ್ ನೀಡಿದ್ದ. ಅಷ್ಟೇ ಅಲ್ಲದೆ, ಮತ್ತೊಬ್ಬ ವ್ಯಕ್ತಿ ಮಹಿಳೆಯ ಮಗನಂತೆಯೇ ಧ್ವನಿ ಬದಲಿಸಿ ಮಾತನಾಡಿ, ತಾನು ಸಂಕಷ್ಟದಲ್ಲಿರುವುದಾಗಿ ನಂಬಿಸಿದ್ದನು.

ಪರಿಶೀಲಿಸಲು ಹೋದಾಗ ಕೈಕೊಟ್ಟ ಅದೃಷ್ಟ:

ವಂಚಕರ ಮಾತಿನಿಂದ ಗಾಬರಿಗೊಂಡ ಮಹಿಳೆ, ಕೂಡಲೇ ತನ್ನ ಮಗನಿಗೆ ಕರೆ ಮಾಡಿ ಸತ್ಯಾಸತ್ಯತೆ ತಿಳಿಯಲು ಪ್ರಯತ್ನಿಸಿದ್ದರು. ಆದರೆ, ಮಗನ ಮೊಬೈಲ್ ಸೈಲೆಂಟ್ ಮೋಡ್‌ನಲ್ಲಿದ್ದ ಕಾರಣ ಆತ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಗಾಬರಿಗೊಂಡ ಮಹಿಳೆ, ತನ್ನ ಮಗ ನಿಜವಾಗಿಯೂ ಸಂಕಷ್ಟದಲ್ಲಿದ್ದಾನೆ ಎಂದು ನಂಬಿಬಿಟ್ಟರು.

ಹಂತ ಹಂತವಾಗಿ ಹಣ ಸುಲಿಗೆ:

ಮಗನ ವಿರುದ್ಧ ಎಫ್‌ಐಆರ್ (FIR) ದಾಖಲಾಗದಂತೆ ತಡೆಯಲು ಮತ್ತು ಆತನನ್ನು ಹಾಗೂ ಬೈಕ್ ಅನ್ನು ಬಿಡುಗಡೆ ಮಾಡಲು ಹಣ ನೀಡಬೇಕು ಎಂದು ವಂಚಕರು ಒತ್ತಾಯಿಸಿದ್ದರು. ಮಗನ ಭವಿಷ್ಯ ಹಾಳಾಗುತ್ತದೆ ಎಂಬ ಆತಂಕದಲ್ಲಿದ್ದ ಮಹಿಳೆ, ವಂಚಕರು ಕಳುಹಿಸಿದ ಕ್ಯೂಆರ್ ಕೋಡ್‌ಗಳಿಗೆ (QR Codes) ಹಂತ ಹಂತವಾಗಿ 1.25 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದರು. ಅಷ್ಟಕ್ಕೆ ಸುಮ್ಮನಾಗದ ವಂಚಕರು, ವೈದ್ಯಕೀಯ ಪರೀಕ್ಷೆಯ ಹೆಸರಿನಲ್ಲಿ ಮತ್ತೆ 2 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟರು.

ಪೊಲೀಸ್ ದೂರು:

ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಮಹಿಳೆಗೆ ಅನುಮಾನ ಬಂದು ವಿಚಾರಿಸಿದಾಗ ಇದು ಸೈಬರ್ ವಂಚನೆ ಎಂಬುದು ಅರಿವಿಗೆ ಬಂದಿದೆ. ಕೂಡಲೇ ಅವರು ಎಚ್‌ಎಎಲ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

PREV
Read more Articles on
click me!

Recommended Stories

'Useless Fellows': ಡಿಕೆಶಿ ಘೋಷಣೆಗೆ ಸಿಟ್ಟಾದ ಖರ್ಗೆ: ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಗುಡುಗು!
ಬೆಂಗಳೂರಿನಲ್ಲಿ ಡಿ-ಮಾರ್ಟ್ ಸಾಮ್ರಾಜ್ಯ ವಿಸ್ತರಣೆ: ₹106 ಕೋಟಿ ವೆಚ್ಚದಲ್ಲಿ ಬೃಹತ್ ಕಟ್ಟಡ ಖರೀದಿ!