ಬಳ್ಳಾರಿಯಲ್ಲಿ ಹಗಲು ಕುಡುಕರ ಹಾವಳಿಯಿಂದ ಬೇಸತ್ತ ಜನತೆ!

By Web Desk  |  First Published Nov 25, 2019, 8:53 AM IST

ಪಾಳುಬಿದ್ದ ಉದ್ಯಾನಗಳು, ಆಟದ ಮೈದಾನಗಳು ಕುಡುಕರ ತಾಣಗಳು|ಪಾನಮತ್ತರಾಗಿ ವಾಹನ ಚಲಾಯಿಸುವವರಿಂದ ಹೆಚ್ಚಾಗುತ್ತಿವೆ ಅವಘಡಗಳು| ಹಗಲು ಕುಡುಕರ ಸಂಖ್ಯೆ ಏರಿಕೆಯಾಗಿರುವುದರಿಂದ ಶಾಲಾ ವಾಹನಗಳ ಚಾಲಕರು, ಮಕ್ಕಳನ್ನು ಕರೆದೊಯ್ಯುವ ಆಟೋ ಚಾಲಕರನ್ನು ಆಗಾಗ್ಗೆ ತಪಾಸಣೆ ಮಾಡಬೇಕು|


ಕೆ.ಎಂ. ಮಂಜುನಾಥ್‌

ಬಳ್ಳಾರಿ(ನ.25): ನಗರದಲ್ಲಿ ಹಗಲು ಕುಡುಕರ ಹಾವಳಿ ದಿನದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಇವರ ನಿಯಂತ್ರಣ ನಮಗೂ ಕಷ್ಟ ಸಾಧ್ಯವಾಗಿಸಿದೆ’! ಇದು ಪಾನಮತ್ತ ಚಾಲಕರಿಂದ ರೋಸಿ ಹೋಗಿರುವ ಸಂಚಾರಿ ಪೊಲೀಸರ ನಿತ್ಯದ ಗೊಣಗಾಟ.

Tap to resize

Latest Videos

ದಿನ ದಿನಕ್ಕೆ ಕುಡುಕರ ಹಾವಳಿ ನಿಯಂತ್ರಣ ಮೀರುತ್ತಿದೆ. ಇದರ ನಿಯಂತ್ರಣ ಹೇಗೆ ಎಂಬುದೇ ಗೊತ್ತಾಗುತ್ತಿಲ್ಲ. ವಿದ್ಯಾವಂತರಂತೆ ಕಾಣುವವರೇ ಪಾನಮತ್ತರಾಗಿ ವಾಹನ ಓಡಿಸುತ್ತಾರೆ. ಹೀಗಾದರೆ, ಹಗಲುಕುಡುಕರ ಹಾವಳಿಯಿಂದ ಮುಕ್ತಿ ಸಿಗುವುದಾದರೂ ಹೇಗೆ? ಎಂಬುದು ಸಂಚಾರಿ ಪೊಲೀಸರ ಅಸಹಾಯಕ ನುಡಿ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಿರ್ವಹಣೆಯಿಲ್ಲದೆ ಪಾಳು ಬಿದ್ದಿರುವ ಉದ್ಯಾನವನಗಳು, ನಗರದ ಆಟದ ಮೈದಾನಗಳು, ಕಾಂಪೌಂಡ್‌ ಇಲ್ಲದ ಶಾಲೆಗಳ ಆವರಣ ಕುಡುಕರ ತಾಣಗಳಾಗಿ ಬದಲಾಗುತ್ತಿವೆ. ಹಗಲುರಾತ್ರಿ ಎನ್ನದೆ ಮದ್ಯಸೇವನೆಗೆ ಮುಂದಾಗಿರುವ ಪಾನಪ್ರಿಯರಿಂದಾಗಿಯೇ ನಗರದಲ್ಲಿ ನಾನಾ ಅವಘಡಗಳು ಸಂಭವಿಸುತ್ತಿವೆ ಎಂಬುದು ವಾಸ್ತವ.

ಅಪಘಾತಗಳ ಸಂಖ್ಯೆ ಹೆಚ್ಚಳ

ಪೊಲೀಸ್‌ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ ಅಪಘಾತ ಪ್ರಕರಣಗಳ ಪೈಕಿ ಶೇ. 30ರಷ್ಟುಹಗಲು ಕುಡುಕರಿಂದ ಸಂಭವಿಸುತ್ತಿವೆ. ನಿಯಂತ್ರಣ ಮೀರಿದ ಚಾಲನೆಯೇ ಇದಕ್ಕೆ ಪ್ರಮುಖ ಕಾರಣ. ಮಧ್ಯಾಹ್ನ 3ರಿಂದ ಸಂಜೆ 6 ಗಂಟೆಯೊಳಗೆ ಹೆಚ್ಚಿನ ಪ್ರಮಾಣದಲ್ಲಿ ಕುಡಿದು ವಾಹನ ಚಲಾಯಿಸುವವರು ಸಿಕ್ಕಿ ಬೀಳುತ್ತಿದ್ದು ಪೊಲೀಸರ ‘ದಂಡ’ ಪ್ರಯೋಗದ ಬಳಿಕವೂ ಇವರು ಎಚ್ಚೆತ್ತುಕೊಂಡಿಲ್ಲ.

ನಗರ ಹೊರ ವಲಯದ ನಿರ್ಜನ ಪ್ರದೇಶದಲ್ಲಿ ಮಧ್ಯಾಹ್ನ 12 ಗಂಟೆಯೊಳಗೆ ಸೇರಿಕೊಳ್ಳುವ ಈ ಮಂದಿ ಮಧ್ಯಾಹ್ನವರೆಗೆ ಕುಡಿದು ನಗರ ಸೇರುತ್ತಾರೆ. ಇನ್ನು ಅನೇಕರು ನಗರದ ಪಾಳು ಬಿದ್ದಿರುವ ನಿರ್ಜನ ಪ್ರದೇಶದ ಉದ್ಯಾನವನಗಳು ಹಾಗೂ ಆಟದ ಮೈದಾನಗಳನ್ನು ನೋಡಿಕೊಂಡಿದ್ದಾರೆ. ಇನ್ನು ಬಾರ್‌ ಆ್ಯಂಡ್‌ ವೈನ್‌ ಶಾಪ್‌ಗಳ ಮುಂದೆಯೇ ಬೆಳ್ಳಂಬೆಳಗ್ಗೆಯೇ ಮದ್ಯಪ್ರಿಯರು ಮುಗಿ ಬೀಳುವ ದೃಶ್ಯಗಳು ಕಂಡು ಬರುತ್ತವೆ. ಕೆಲವರು ವೈನ್‌ಶಾಪ್‌ ಮುಂದೆಯೇ ಮದ್ಯ ಗಂಟಲಿಗಿಳಿಸಿ ವಾಹನ ಚಲಾಯಿಸಿಕೊಂಡು ಹೋಗುವ ದೃಶ್ಯಗಳು ನಿತ್ಯ ಕಂಡು ಬರುತ್ತವೆ.

ಸುಸ್ತಾಗಿ ಹೋದ ಪೊಲೀಸರು...

ನಗರದಲ್ಲಿ ಸಂಚಾರಿ ದಟ್ಟಣೆ ಹೆಚ್ಚಾಗಿರುವುದರಿಂದ ಇದರ ನಿಯಂತ್ರಣಕ್ಕೆ ನಾವು ಸುಸ್ತಾಗಿ ಹೋಗುತ್ತೇವೆ. ಇನ್ನು ಕುಡುಕರನ್ನು ತಪಾಸಣೆ ಮಾಡುವ ಕೆಲಸಕ್ಕೆ ನಿಂತರೆ ನಮ್ಮರ್ಧ ಆಯುಷ್ಯ ರಸ್ತೆಯ ಮೇಲೆಯೇ ಕಳೆದುಹೋಗುತ್ತದೆ. ಬಿಸಿಲು-ಧೂಳಿನಲ್ಲಿ ಕೆಲಸ ಮಾಡುವ ನಮಗೆ ಟ್ರಾಫಿಕ್‌ ಸಮಸ್ಯೆ ನೀಗಿಸಲು ಹೆಚ್ಚು ಸಮಯ ಕಳೆಯುತ್ತೇವೆ. ಏತನ್ಮಧ್ಯೆ ವಾಹನಗಳ ತಪಾಸಣೆ ಕಾರ್ಯ ನಡೆದರೂ ಕುಡುಕರನ್ನೇ ಪ್ರಮುಖವಾಗಿಸಿಕೊಂಡು ತಪಾಸಣೆ ಮಾಡಲು ಎಲ್ಲಿ ಸಾಧ್ಯ ಎನ್ನುವ ಪೊಲೀಸರು, ವಿದ್ಯಾವಂತರೇ ಕುಡಿದು ವಾಹನ ಚಲಾಯಿಸುತ್ತಿರುವುದು ನಮಗೆ ತೀವ್ರ ಬೇಸರ ಮೂಡಿಸಿದೆ ಎಂದು ಗೊಣಗಾಡುತ್ತಾರೆ.

ಚಾಲನಾ ಪರವಾನಗಿ ರದ್ದು ಪಡಿಸಲಿ

ಹಗಲು ಕುಡುಕರ ಸಂಖ್ಯೆ ಏರಿಕೆಯಾಗಿರುವುದರಿಂದ ಶಾಲಾ ವಾಹನಗಳ ಚಾಲಕರು, ಮಕ್ಕಳನ್ನು ಕರೆದೊಯ್ಯುವ ಆಟೋ ಚಾಲಕರನ್ನು ಆಗಾಗ್ಗೆ ತಪಾಸಣೆ ಮಾಡಬೇಕು. ಒಂದು ವೇಳೆ ಅವರು ಕುಡಿದು ವಾಹನ ಚಲಾಯಿಸುವುದು ಕಂಡು ಬಂದರೆ ಕೂಡಲೇ ಅವರ ಚಾಲಕ ಪರವಾನಗಿ ರದ್ದತಿಗೆ ಕ್ರಮ ಕೈಗೊಳ್ಳಬೇಕು. ನಾವು ಗಮನಿಸಿದಂತೆ ಶಾಲಾ ವಾಹನ ಚಾಲಕರನ್ನು ತಪಾಸಣೆ ಮಾಡುವುದು ಎಲ್ಲೂ ಕಂಡು ಬಂದಿಲ್ಲ. ಇನ್ನು ಆ್ಯಂಬುಲೆನ್ಸ್‌ ಚಾಲಕರು ಸಹ ಕುಡಿದು ವಾಹನ ಓಡಿಸುತ್ತಾರೆ ಎಂಬ ದೂರುಗಳಿದ್ದು, ಇದನ್ನು ಸಂಚಾರಿ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಸಾರ್ವಜನಿಕರ ದೂರು.

ಹಗಲು ಹೊತ್ತಿನಲ್ಲಿ ವೈನ್‌ ಸ್ಟೋರ್‌ ಹಾಗೂ ಬಾರ್‌ಗಳ ಮುಂದೆಯೇ ವಾಹನ ನಿಲ್ಲಿಸಿಕೊಂಡು ಕಾರಲ್ಲಿಯೇ ಕುಡಿವ ದೃಶ್ಯಗಳಿಗೆ ಕಡಿಮೆಯಿಲ್ಲ. ಯಾವ ವೈನ್‌ ಸ್ಟೋರ್‌ ಮಾರಾಟಗಾರ ಸಿಬ್ಬಂದಿ ಹೊರಗಡೆ ಸರ್ವೀಸ್ ನೀಡುವುದಿಲ್ಲ. ಆದರೆ, ವಾಹನ ಮಾಲೀಕರು ಅಥವಾ ಚಾಲಕರೇ ಬಂದು ಖರೀದಿಸಿ ಕಾರಲ್ಲಿಯೇ ಕುಡಿಯುತ್ತಾರೆ. ಇದು ನಿಯಂತ್ರಣ ಹೇಗೆ ಎಂಬುದೇ ಪೊಲೀಸರಿಗೂ ಸವಾಲಾದ ಸಂಗತಿ.

ನಗರದ ಹೊರ ವಲಯದ ಜಮೀನುಗಳಲ್ಲಿ ಮದ್ಯಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ. ಪೊಲೀಸರು ಆಗಾಗ್ಗೆ ದಾಳಿ ಮಾಡಬೇಕು. ಹಗಲುವೇಳೆ ಕುಡುಕರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ವಿಶಾಲನಗರ ನಿವಾಸಿ ಸಿ.ಆರ್‌. ರಾಮಕೃಷ್ಣ ಅವರು ಹೇಳಿದ್ದಾರೆ. 
 

click me!