ಬಳ್ಳಾರಿ ಬಂದ್ ಬಹುತೇಕ ಯಶಸ್ವಿ| ಬಸ್ ಸಂಚಾರ ಸ್ಥಗಿತ, ಅಂಗಡಿಗಳು ಬಂದ್| ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಆನಂದ ಸಿಂಗ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ| ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು| ಹೋಟೆಲ್‌ಗಳು, ಅಂಗಡಿ ಮುಂಗಟ್ಟುಗಳು, ಚಿತ್ರಮಂದಿರ, ಪೆಟ್ರೋಲ್ ಬಂಕ್‌ಗಳ ಸೇವೆ ಸ್ಥಗಿತವಾಗಿತ್ತು| ಬಹುತೇಕ ಶಾಲಾ- ಕಾಲೇಜುಗಳು ಬಂದ್ ಆಗಿದ್ದವು|
ಬಳ್ಳಾರಿ:(ಅ.2): ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡಿ ವಿಜಯನಗರ(ಹೊಸಪೇಟೆ) ಜಿಲ್ಲೆ ರಚಿಸುವುದನ್ನು ಖಂಡಿಸಿ ಮಂಗಳವಾರ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಕರೆ ನೀಡಿದ್ದ ಬಳ್ಳಾರಿ ಬಂದ್ ಬಹುತೇಕ ಯಶಸ್ವಿಯಾಗಿದೆ.
ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಬಂದ್‌ಗೆ ಕರೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಅಲ್ಲಲ್ಲಿ ಆಟೋಗಳ ಸಂಚಾರ ಇತ್ತು. ಹೋಟೆಲ್‌ಗಳು, ಅಂಗಡಿ ಮುಂಗಟ್ಟುಗಳು, ಚಿತ್ರಮಂದಿರ, ಪೆಟ್ರೋಲ್ ಬಂಕ್‌ಗಳ ಸೇವೆ ಸ್ಥಗಿತವಾಗಿತ್ತು. ಬಹುತೇಕ ಶಾಲಾ- ಕಾಲೇಜುಗಳು ಬಂದ್ ಆಗಿದ್ದವು.
ಅಲ್ಲಲ್ಲಿ ಕೆಲವು ಸರ್ಕಾರಿ ಶಾಲೆಗಳು ತೆರೆದಿದ್ದವು
ಸರ್ಕಾರಿ ಕಚೇರಿಗಳು ತೆರೆದಿದ್ದವಾದರೂ ಸಾರ್ವಜನಿಕರು ಇಲ್ಲದೆ ಬಿಕೋ ಎನ್ನುತ್ತಿದ್ದವು. ಬಂದ್ ಬೆಂಬಲಿಸಿ ಹೋಟೆಲ್ ಮಾಲೀಕರ ಸಂಘ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ, ತುಂಗಭದ್ರಾ ರೈತ ಸಂಘ, ಬಳ್ಳಾರಿ ವಕೀಲರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.
ನೂರಾರು ಯುವಕರು ನಗರದಲ್ಲಿ ಬೈಕ್ ರ‍್ಯಾಲಿ ನಡೆಸಿದರು
ವಿವಿಧ ಸಂಘಟನೆಗಳು ಮೆರವಣಿಗೆ ಮೂಲಕ ಗಡಗಿ ಚನ್ನಪ್ಪ ವೃತ್ತ ತಲುಪಿ ಮುಖ್ಯಮಂತ್ರಿ ಯಡಿಯೂರಪ್ಪ, ಹೊಸಪೇಟೆ ಅನರ್ಹ ಶಾಸಕ ಆನಂದಸಿಂಗ್ ವಿರುದ್ಧ ಘೋಷಣೆ ಕೂಗಿದರು. ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆನಂದ ಸಿಂಗ್ ಹಾಗೂ ಕಂಪ್ಲಿ ಶಾಸಕ ಗಣೇಶ್ ಬ್ಯಾನರ್ ಸುಟ್ಟು ಹಾಕಿದರು. ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ ಹಾಗೂ ಕೆ.ಸಿ.ಕೊಂಡಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಸ್ತೆಯಲ್ಲೇ ಅಡುಗೆ, ಕಬಡ್ಡಿ ಆಟ:
ತುಂಗಭದ್ರಾ ರೈತ ಸಂಘ ಪದಾಧಿಕಾರಿಗಳು ರಸ್ತೆಯಲ್ಲಿ ಅಡುಗೆ ಮಾಡುವ ಮೂಲಕ ಗಮನ ಸೆಳೆದರು. ಟಪಾಲ್ ಗಣೇಶ್, ದರೂರು ಪುರುಷೋತ್ತಮಗೌಡ, ಕುಡಿತಿನಿ ಶ್ರೀನಿವಾಸ್ ಮತ್ತಿತರರು ಕಬಡ್ಡಿ ಆಡಿದರು. ಬಂದ್‌ನಲ್ಲಿ ಮಾಜಿ ಸಚಿವ ಎಂ.ದಿವಾಕರ ಬಾಬು ಭಾಗವಹಿಸುವ ಮೂಲಕ ಹೋರಾಟವನ್ನು ಬೆಂಬಲಿಸಿದರು. ನಗರದೆಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಂಜೆ ವೇಳೆಗೆ ಸಹಜ ಸ್ಥಿತಿಗೆ ಬಂದಿದ್ದು, ಸಾರಿಗೆ ವ್ಯವಸ್ಥೆ ಓಡಾಟ ಆರಂಭಿಸಿತ್ತು.