ಹೊಸವರ್ಷದಂದು ಪಾಶ್ಚಾತ್ಯ ನೃತ್ಯ ಆಚರಣೆಗೆ ಭಜರಂಗದಳ ವಿರೋಧ

By Ravi JanekalFirst Published Dec 27, 2022, 8:29 PM IST
Highlights

ಹೊಸವರ್ಷದಂದು ಜನರು ಹೋಂಸ್ಟೇ, ರೆಸಾರ್ಟ್ ಮತ್ತು ಹೋಟೆಲ್‍ಗಳಲ್ಲಿ ಹಾಡು, ನೃತ್ಯ ಮತ್ತು ಪಾರ್ಟಿ ಮಾಡಿ ಎಂಜಾಯ್ ಮಾಡಿ ಹೊಸ ವರ್ಷಾಚರಣೆ ಮಾಡುವುದಕ್ಕೆ ಕೊಡಗಿನಲ್ಲಿ ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣನ್ಯೂಸ್  

ಕೊಡಗು (ಡಿ.27) : ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಗೆಂದೇ ಪ್ರವಾಸಿಗರು ಆಗಮಿಸುತ್ತಾರೆ. ಸಾಕಷ್ಟು ಜನರು ಪ್ರಾಕೃತಿಕ ಸೌಂದರ್ಯ ನೋಡಿ ಪ್ರಕೃತಿ ಮಡಿಲಲ್ಲಿ ಹೊಸ ವರ್ಷ ಬರಮಾಡಿಕೊಂಡರೆ, ಇನ್ನೂ ಸಾಕಷ್ಟು ಜನರು ಹೋಂಸ್ಟೇ, ರೆಸಾರ್ಟ್ ಮತ್ತು ಹೋಟೆಲ್‍ಗಳಲ್ಲಿ ಹಾಡು, ನೃತ್ಯ ಮತ್ತು ಪಾರ್ಟಿ ಮಾಡಿ ಎಂಜಾಯ್ ಮಾಡಿ ಹೊಸ ವರ್ಷಾಚರಣೆ ಮಾಡುತ್ತಾರೆ. ಇದಕ್ಕೆ ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 

ಭಜರಂಗದಳದ ಹೊಸ ತಗಾದೆ: ನ್ಯೂ ಇಯರ್ ಪಾರ್ಟಿಯಲ್ಲಿ ಮುಸ್ಲಿಮರಿಗೆ ನೋ ಎಂಟ್ರಿ!

2022ನೇ ವರ್ಷಕ್ಕೆ ಗುಡ್ ಬೈ ಹೇಳಿ ಹೊಸವರ್ಷ(New year)ವನ್ನು ಒಬ್ಬೊಬ್ಬರು ಒಂದೊಂದು ರೀತಿ ಬರಮಾಡಿಕೊಳ್ಳುತ್ತಾರೆ. ಲಕ್ಷಾಂತರ ಜನರು ಕೊಡಗು(Kodagu)ನ ಪ್ರಕೃತಿ(Nature)ಯನ್ನು ಸವಿದು ಸಂತೋಷಪಟ್ಟು ಹೊಸ ವರ್ಷವನ್ನು ಬರಮಾಡಿಕೊಂಡರೆ ಇನ್ನು ಸಾವಿರಾರು ಜನರು ಕೊಡಗಿನ ಪ್ರಕೃತಿಯೊಳಗಿರುವ ಹೋಂಸ್ಟೇ(Homestay)ರೆಸಾರ್ಟ್‍ಗಳಲ್ಲಿ ಪಾರ್ಟಿ, ನೃತ್ಯ ಅಂತ ವಿವಿಧ ಕಾರ್ಯಕ್ರಮಗಳನ್ನು ಮಾಡಿ ಎಂಜಾಯ್ ಮಾಡಿ ಹಳೆ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. 

ಇದು ಕೊಡಗಿನ ಪ್ರವಾಸೋದ್ಯಮ(Kodagu (Coorg) Tourism)ಗಳಿಗೆ ದೊಡ್ಡ ಆದಾಯದ ಮೂಲ ಕೂಡ ಹೌದು. ಆದರೆ ಇದಕ್ಕೆ ಹಿಂದೂಪರ ಸಂಘಟನೆಗಳಲ್ಲಿ ಒಂದಾದ ಭಜರಂಗದಳ(Bhajarangadala)ವು ತೀವ್ರ ವಿರೋಧ ವ್ಯಕ್ತಪಡಿಸಿದೆ. ಹೋಂಸ್ಟೇ, ರೆಸಾರ್ಟ್ ಮತ್ತು ಹೊಟೇಲ್‍ಗಳಲ್ಲಿ ಅನಪೇಕ್ಷಿತ ನೃತ್ಯದ ಜೊತೆಗೆ ಮಾದಕ ವಸ್ತುಗಳನ್ನು ಬಳಕೆ ಮಾಡುವ ಸಾಧ್ಯತೆಗಳಿವೆ. ಜೊತೆಗೆ ಸೆಕ್ಸ್ ಜಿಹಾದ್(Sex jihad) ಕೂಡ ನಡೆಯುತ್ತದೆ. ಇದು ನಮ್ಮ ಭಾರತೀಯ ಸಂಸ್ಕತಿಗೆ ಸಂಪೂರ್ಣ ತದ್ವಿರುದ್ಧವಾಗಿದ್ದು, ನಮ್ಮ ಸಂಸ್ಕತಿಯನ್ನು ಹಾಳು ಮಾಡುತ್ತವೆ. ಹೀಗಾಗಿ ಅಂತ ಕಾರ್ಯಕ್ರಮಗಳಿಗೆ ಪೊಲೀಸ್ ಇಲಾಖೆ(Police depertment) ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಿದ್ದಾರೆ. 

ಇಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡಿದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಹೊಸ ವರ್ಷಾಚರಣೆ ಸಂದರ್ಭ ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ಹಲವು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತದೆ. ಆ ಮೂಲಕ ಪ್ರವಾಸಿಗರನ್ನು ತಣಿಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತವೆ. ಇದಕ್ಕಾಗಿ ಈಗಾಗಲೇ ಕೊಡಗಿನ ಪ್ರವಾಸೋದ್ಯಮಿಗಳು ಎಲ್ಲಾ ಸಿದ್ಧತೆ ಮಾಡಿಕಕೊಂಡಿದ್ದಾರೆ. ಇದರ ನಡುವೆ ಹೊಸ ವರ್ಷಾಚರಣೆಗೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಹೊಟೇಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ನಾಗೇಂದ್ರ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ. 

ಕಳೆದ ನಾಲ್ಕು ವರ್ಷಗಳಿಂದ ಕೊಡಗಿನ ಪ್ರವಾಸೋದ್ಯಮಿಗಳು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಮೊದಲ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಭೀಕರವಾದ ಭೂಕುಸಿತ ಮತ್ತು ಪ್ರವಾಹದಿಂದಾಗಿ ಇಡೀ ಪ್ರವಾಸೋದ್ಯಮ ಕುಸಿದು ಹೋಗಿತ್ತು. ನಂತರದ ಎರಡು ವರ್ಷಗಳಲ್ಲಿ ಕೋವಿಡ್(Covid) ನಿಂದಾಗಿ ಎಲ್ಲವೂ ಸಂಪೂರ್ಣ ಸ್ಥಗಿತವಾಗಿದ್ದವು. ಹೀಗಾಗಿ ಹೊಟೇಲ್(Hotel) ಮತ್ತು ರೆಸಾರ್ಟ್(resort) ಉದ್ಯಮಿಗಳು ಭಾರೀ ನಷ್ಟ ಅನುಭವಿಸಿದರು. ಈ ವರ್ಷ ಒಂದಷ್ಟು ಸುಧಾರಿಸಿಕೊಳ್ಳುತ್ತಿದ್ದೆವು. ಈಗಾಗಲೇ ಪ್ರವಾಸಿಗರಿಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡು ಅವರಿಗಾಗಿ ಕಾಯುತ್ತಿದ್ದೇವೆ. ಆದರೆ ಕೆಲವು ಸಂಘಟನೆಗಳು ವಿವಿಧ ಕಾರ್ಯಕ್ರಮಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಬೇಸರದ ಸಂಗತಿ. ಪ್ರವಾಸೋದ್ಯಮದಿಂದ ಲಾಭವಾದರೆ ಅದರ ಶೇಕಡ 30 ಆದಾಯವು ಸರ್ಕಾರಕ್ಕೆ ಟ್ಯಾಕ್ಸ್ ರೂಪದಲ್ಲಿ ಹೋಗುತ್ತದೆ. ಜೊತೆಗೆ ಪ್ರವಾಸೋದ್ಯಮವನ್ನು ನಂಬಿಕೊಂಡಿರುವ ಒಂದುವರೆ ಲಕ್ಷಕ್ಕೂ ಹೆಚ್ಚು ಕುಟುಂಬಗಳ ಜೀವನ ಸುಧಾರಣೆಯಾಗುತ್ತದೆ. ಇಷ್ಟೆಲ್ಲಾ ಇದ್ದರೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ಏಕೆ ಎಂದಿದ್ದಾರೆ. 

New Year 2023: ಮಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿ ನಿಲ್ಲಿಸುವಂತೆ ಭಜರಂಗದಳ ಒತ್ತಾಯ

ಒಟ್ಟಿನಲ್ಲಿ ಕೊಡಗಿನಲ್ಲಿ ಹೊಸ ವರ್ಷದ ಆಚರಣೆಗೆ ಬರುವ ಪ್ರವಾಸಿಗರಿಗಾಗಿ ಜಿಲ್ಲೆಯ ಪ್ರವಾಸೋದ್ಯಮಿಗಳು ಸಕಲ ಸಿದ್ಧತೆ ನಡೆಸುತ್ತಿದ್ದರೆ, ಇತ್ತ ಹಿಂದೂಪರ ಸಂಘಟನೆಗಳು ಅನಪೇಕ್ಷಿತ ಕಾರ್ಯಕ್ರಮಗಳಿಗೆ ತಡೆಯೊಡ್ಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದು ಹೊಸ ವರ್ಷಾಚರಣೆ ಮೇಲೆ ತೂಗುಗತ್ತಿ ನೇತಾಡುವಂತೆ ಮಾಡಿದೆ.

click me!