
ಬೆಂಗಳೂರು (ಸೆ.07) ಕರ್ನಾಟಕ ಸೇರಿದಂತೆ ದೇಶದಲ್ಲೇ ಮಳೆ ಕೊರತೆ ತೀವ್ರಗೊಂಡಿದೆ. ಕೆಲೆವೆಡೆ ಪ್ರವಾಹದಿಂದ ಅವಾಂತರಗಳು ಸೃಷ್ಟಿಯಾಗಿದೆ. ಆದರೆ ದೇಶದ ಬಹುತೇಕ ಭಾಗದಲ್ಲಿ ಮಳೆ ಕೊರತೆಯಿಂದ ಬರಗಾಲ ಸೃಷ್ಟಿಯಾಗಿದೆ. ಮುಂಗಾರು ಸಮಯದಲ್ಲೇ ಬಿಸಿಸಿನ ತಾಪ ಹೆಚ್ಚಾಗುತ್ತಿದೆ. ಎಲ್ಲೆಡೆ ಉರಿ ಬಿಸಿಲು ಜನರನ್ನು ಹೈರಾಣು ಮಾಡುತ್ತಿದೆ. ಇಷ್ಟೇ ಅಲ್ಲ ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ಬೇಸಿಗೆ ಕಾಲದ ಅನುಭವವಾಗುತ್ತಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಮಹತ್ವದ ಅಪ್‌ಡೇಟ್ ನೀಡಿದೆ. ಮಳೆ ಕೈಕೊಟ್ಟ ಹಿನ್ನಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ 4 ರಿಂದ 5 ಡಿಗ್ರಿ ಸೆಲ್ಶಿಯಸ್ ತಾಪಮಾನ ಏರಿಕೆಯಾಗಿದೆ. ಮುಂದಿನ ವಾರ ಗರಿಷ್ಠ 37 ಡಿಗ್ರಿ ಸೆಲ್ಶಿಯಸ್‌ಗೆ ಏರಿಕೆಯಾಗಲಿದೆ ಎಂದು ಹವಾಮಾನ ತಜ್ಞ ಸಿ.ಎಸ್ ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇದೀಗ ಉರಿ ಬಿಸಿಲಿನ ಅನುಭವವಾಗುತ್ತಿದೆ. ತಾಪಮಾನದಲ್ಲಿ ಗಣನೀಯ ಏರಿಕೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಮುಂದಿನ ವಾರದಲ್ಲಿ ಬೆಂಗಳೂರಿನಲ್ಲಿ ತಾಪಮಾನ 34 ಡಿಗ್ರಿ ಸೆಲ್ಶಿಯಸ್‌ಗೆ ಏರಿಕೆಯಾಗಲಿದೆ ಎಂದು ಸಿಎಸ್ ಪಾಟೀಲ್ ಹೇಳಿದ್ದಾರೆ. ಭೂಮಿಯ ತೇವಾಂಶವೂ ಕಡಿಮೆಯಾಗುತ್ತಿದೆ. ಇದರಿಂದ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಾಪಮಾನ ಹೀಗೆ ಮುಂದುವರಿದರೆ ಬೆಂಗಳೂರಿನ ಕೆಲ ಭಾಗದಲ್ಲಿ ಈಗಲೇ ನೀರಿನ ಸಮಸ್ಯೆಗಳು ಎದುರಾಗಲಿದೆ. ಈ ವರ್ಷ ತೀವ್ರ ನೀರಿನ ಬರ ಎದುರಾಗುವ ಸಾಧ್ಯತೆ ಇದೆ. ಮಳೆ ಕೊರತೆಯಿಂದ ಕಾವೇರಿ ಉಕ್ಕಿ ಹರಿದಿಲ್ಲ. ಬಂದಿರುವ ಮಳೆಯ ನೀರು ಕೆಆರ್‌ಎಸ್ ಡ್ಯಾಂನಲ್ಲಿ ಶೇಖರಣೆಯಾಗಲು ಪ್ರಾಧಿಕಾರಿಗಳ ಆದೇಶಗಳು ಅಡ್ಡಿಯಾಗಿದೆ. ಪರಿಣಾಮ ತಮಿಳುನಾಡಿಗೆ ನೀರು ಹರಿಸಲೇಬೇಕಾದ ಅನಿವಾರ್ಯತೆಯಿಂದ ಬೆಂಗಳೂರು ಸೇರಿದಂತೆ ಕರ್ನಾಟಕ ತೀವ್ರ ನೀರಿನ ಕೊರತೆ ಎದುರಿಸುವ ಸಾಧ್ಯತೆ ಇದೆ.
ಕಲುಬುರಗಿಯಲ್ಲಿ ಮುಂದಿನ ವಾರದಲ್ಲಿ ತಾಪಮಾನ 36 ರಿಂದ 37 ಡಿಗ್ರಿಗೆ ಏರಿಕೆಯಾಗಲಿದೆ. ಇದು ಸಾಮಾನ್ಯವಾಗಿ ಎಪ್ರಿಲ್ ತಿಂಗಳು ಬಳಿಕ ದಾಖಲಾಗುವ ತಪಾಮಾನ. ಆದರೆ ಈಗಲೇ ಈ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆ ಹಾಗೂ ಮೋಡಗಳು ಕಡಿಮೆಯಾಗಿರುವ ಹಿನ್ನಲೆಯಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ ಎಂದಿದೆ.
ರಾಜ್ಯದ ಹಲವು ಜಿಲ್ಲೆಗಳು ಬರಗಾಲದಿಂದ ತತ್ತರಿಸಿ ಹೋಗಿದೆ. ರಾಜ್ಯದ ಬಹುತೇಕ ಜಲಾಶಗಳು ಭರ್ತಿಯಾಗಿಲ್ಲ. ನೀರಿನ ಶೇಖರಣೆ ನಿಗದಿತ ಪ್ರಮಾಣದಲ್ಲಿಲ್ಲ. ಹೀಗಾಗಿ ಆತಂಕ ಹೆಚ್ಚಾಗುತ್ತಿದೆ. ಜೊತೆಗೆ ಹವಾಮಾನದಲ್ಲಿ ಆಗುತ್ತಿರುವ ತೀವ್ರ ತಾಪಮಾನ ಏರಿಕೆ ಹಿಮಾಲಯ ಗಿರಿ ಶಿಖರಗಳ ಮಂಜು ಕರಗುವಂತೆ ಮಾಡುತ್ತಿದೆ. ಇದು ಮತ್ತಷ್ಟು ಅಪಾಯಕ್ಕೆ ಕಾರಣವಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.