ಬಾಗಲಕೋಟೆ ಜಿಲ್ಲೆಯಲ್ಲಿ ವಿಧಿಯಾಟಕ್ಕೆ ಯೋಧ ಬಲಿ/ ಮುಗಿಲು ಮುಟ್ಟಿದ ಆಕ್ರಂದನ/ ಮನೆದೇವರ ದರ್ಶನಕ್ಕೆ ತೆರಳಿದ್ದ ಯೋಧ ಸೇರಿದ್ದು ಸಾವಿನ ಮನೆಗೆ/ ರಸ್ತೆ ಅಪಘಾತದಲ್ಲಿ ಮೃತಪಟ್ಟ ವೀರ ಯೋಧ ನೀಲಕಂಠ/ ಯೋಧನ ಸಾವಿಗೆ ಕಂಬನಿ ಮಿಡಿದ ಗ್ರಾಮಸ್ಥರು/
ಬಾಗಲಕೋಟೆ[ಜು. 16] ಆತ ದೇಶ ಕಾಯುವ ವೀರ ಯೋಧ, ದೇಶ ಸೇವೆಯೇ ಈಶ ಸೇವೆ ಅಂತ ನಂಬಿ ಕಳೆದ 11 ವರ್ಷಗಳ ಹಿಂದೆ ಸೇನೆಗೆ ಸೇರಿ ಭಾರತ ಮಾತೆಯ ಸೇವೆಯಲ್ಲಿ ನಿರತನಾಗಿದ್ದ, ಶತ್ರುಗಳ ವಿರುದ್ಧ ಹೋರಾಡಬೇಕು ಅನ್ನೋ ತವಕದಲ್ಲಿದ್ದ ಯೋಧನ ಬಾಳಲ್ಲಿ ಇಂದು ವಿಧಿಯ ಆಟವೇ ಬೇರೆಯಾಗಿತ್ತು. ರಜೆಗೆಂದು ಮನೆಗೆ ಬಂದಿದ್ದ ಯೋಧ ದುರ್ವಿಧಿಯ ಆಟಕ್ಕೆ ಬಲಿಯಾಗಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಮನೆ ಮಗನನ್ನು ಕಳೆದುಕೊಂಡು ಕಣ್ಣೀರಲ್ಲಿ ಯೋಧನ ಕುಟುಂಬ ಮುಳುಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದ ಯೋಧ ನೀಲಕಂಠ ಘಟನಟ್ಟಿ (29), ಮಧ್ಯಪ್ರದೇಶದ ಸೇನಾ ಶಿಬಿರದಲ್ಲಿ ನಾಯಕ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಕೆಲ ದಿನಗಳ ಹಿಂದೆಯಷ್ಟೇ ರಜೆಯ ಮೇಲೆ ಮನೆಗೆ ಬಂದಿದ್ದ ಯೋಧ ನೀಲಕಂಠ, ಮನೆ ದೇವರಾದ ಹುಲಜಂತಿಗೆ ಹೋಗಿ ವಾಪಸ್ಸಾಗುವ ವೇಳೆ ಕಾರು ಮತ್ತು ಬೈಕ್ ನಡುವೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದಾರೆ.
ಜೀವ ಪಣಕ್ಕಿಟ್ಟು 14 ವರ್ಷದ ಬಾಲಕಿಯನ್ನು ಕಾಪಾಡಿದ CRPF ಯೋಧ!
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಮಂಗಳವೇಡ್ ಎಂಬ ಗ್ರಾಮದ ಬಳಿ ಅಪಘಾತ ನಡೆದಿದ್ದು ಬೈಕ್ ನಲ್ಲಿದ್ದ ಯೋಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನೀಲಕಂಠ ಅವರಿಗೆ ತಂದೆ, ತಾಯಿ, ಹೆಂಡತಿ ಹಾಗೂ ಎರಡು ಮುದ್ದಾದ ಮಕ್ಕಳಿವೆ. ಯೋಧನ ಪಾರ್ಥಿವ ಶರೀರ ಸ್ವಗ್ರಾಮ ಮಧುರಖಂಡಿಗೆ ತರಲಾಗಿದ್ದು, ಗ್ರಾಮ ಪಂಚಾಯತಿ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯ ರಾಜಕೀಯ ನಾಯಕರು ವಿವಿಧ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಯೋಧನ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.