'ಮಸೀದಿಯಲ್ಲಿ ಮದ್ದು, ಗುಂಡುಗಳ ಮಾಹಿತಿ ಇದ್ದರೆ ದೂರು ನೀಡಿಲ್ಲ ಯಾಕೆ?'

By Kannadaprabha NewsFirst Published Jan 25, 2020, 10:27 AM IST
Highlights

ಮಸೀದಿಗಳಲ್ಲಿ ಮದ್ದು, ಗುಂಡುಗಳನ್ನು ಸಂಗ್ರಹಿಸಲಾಗಿದೆ ಎಂಬ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ತೀವ್ರ ಆಕ್ರೋಶ| ರೇಣುಕಾಚಾರ್ಯ ತಕ್ಷಣ ಕ್ಷಮೆ ಕೇಳಲಿ| ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ಆಗ್ರಹ| 

ಬಾಗಲಕೋಟೆ(ಜ.25): ಮಸೀದಿಗಳಲ್ಲಿ ಮದ್ದು, ಗುಂಡುಗಳನ್ನು ಸಂಗ್ರಹಿಸಲಾಗಿದೆ ಎಂಬ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ, ಮಸೀದಿಗಳಲ್ಲಿ ಮದ್ದು, ಗುಂಡುಗಳನ್ನು ಸಂಗ್ರಹಿಸಿರುವ ಕುರಿತು ನಿಮಗೆ ಮಾಹಿತಿ ಇದ್ದರೆ ಯಾಕೆ ಈವರೆಗೆ ಪೊಲೀಸರಿಗೆ ಹಾಗೂ ತನಿಖಾ ಸಂಸ್ಥೆಗಳಿಗೆ ದೂರು ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೇಣುಕಾಚಾರ್ಯ ಇರುವ ಬಿಜೆಪಿ ಆಡಳಿತದಲ್ಲಿವೆ. ಇಂತಹ ಗಂಭೀರ ವಿಷಯ ಗೊತ್ತಿದ್ದರೆ ಯಾಕೆ ದೂರು ನೀಡಿಲ್ಲ? ಜೊತೆಗೆ ಆಯಾ ಮಸೀದಿಗಳಲ್ಲಿನ ಮದ್ದು, ಗುಂಡುಗಳನ್ನು ಪೊಲೀಸರಿಗೆ ಏಕೆ ತೋರಿಸಿಲ್ಲ ಎಂದು ಪ್ರಶ್ನಿಸಿರುವ ಅವರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಂತಹ ಹುದ್ದೆಯಲ್ಲಿರುವ ರೇಣುಕಾಚಾರ್ಯ ಹೇಳಿಕೆ ಸಮಾಜವನ್ನು ಕಲುಷಿತಗೊಳಿಸುವ ಪ್ರಯತ್ನವಾಗಿದ್ದು, ಸಮಾಜದ ಸಾಮರಸ್ಯ ಕದಡುವ ಬೇಜವಾಬ್ದಾರಿ ಹೇಳಿಕೆಗಳನ್ನು ಜನಪ್ರತಿನಿಧಿ​ಯಾದ ನೀವು ತಕ್ಷಣವೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಕಾನೂನು ಕ್ರಮದ ಎಚ್ಚರಿಕೆ:

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿ​ಧಿಯಾಗಿ ಜಾತಿಗಳ ವಿಷಯದಲ್ಲಿ ಸಂವಿಧಾನ ವಿರೋಧಿ ​ಹೇಳಿಕೆಗಳನ್ನು ನೀಡುತ್ತಿರುವ ರೇಣುಕಾಚಾರ್ಯ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸದಿದ್ದರೆ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ರೇಣುಕಾಚಾರ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಈ ದೇಶದಲ್ಲಿ ಮಂದಿರ, ಮಸೀದಿ, ಚರ್ಚ್‌ಗಳ ಬಗ್ಗೆ ಜನರಲ್ಲಿ ಭಗವಂತನ ನಂಬಿಕೆಯನ್ನು ಕಂಡುಕೊಂಡಿದ್ದಾರೆ. ಅವರ ಭಾವನೆಗಳನ್ನು ಗೌರವಿಸುವುದನ್ನು ಬಿಟ್ಟು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ರೇಣುಕಾಚಾರ್ಯ ಅವರು ತಮ್ಮ ಮತಕ್ಷೇತ್ರದಲ್ಲಿಯೂ ಅನೇಕ ಹುಚ್ಚಾಟಗಳನ್ನು ಮಾಡುತ್ತಿದ್ದಾರೆ. ಪ್ರಯಾಣಿಕರ ಬಸ್‌ ಏರಿ ಚಲಾವಣೆ ಮಾಡಿದ್ದು, ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಮಾಡಿದ ಹುಚ್ಚಾಟವನ್ನು ಮಾಡುವ ಮೂಲಕ ವಿದೂಷಕನ ರೀತಿಯಲ್ಲಿ ವರ್ತಿಸುವುದನ್ನು ಇನ್ನಾದರೂ ಕೈಬಿಟ್ಟು ಜನಪ್ರತಿನಿಧಿ​ಯಂತೆ ವರ್ತಿಸುವುದನ್ನು ಕಲಿಯಲಿ ಎಂದು ಸಲಹೆ ನೀಡಿದರು.

ರಾವತ್‌ ಹೇಳಿಕೆಗೆ ಆಕ್ಷೇಪ:

ಮಹಾರಾಷ್ಟ್ರದ ಶಿವಸೇನೆ ನಾಯಕ ಸಂಜಯ ರಾವತ್‌ ಬೆಳಗಾವಿ ಗಡಿ ವಿಷಯದಲ್ಲಿ ಅನಗತ್ಯವಾಗಿ ನೀಡುತ್ತಿರುವ ಹೇಳಿಕೆಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ ನಂಜಯ್ಯನಮಠ, ಮಹಾಜನ್‌ ವರದಿಯಂತೆ ಉಭಯ ರಾಜ್ಯಗಳಲ್ಲಿ ಅನ್ಯೋನತೆ ಇರುವ ಸಂದರ್ಭದಲ್ಲಿ ಅನಗತ್ಯವಾಗಿ ವಿವಾದ ಹುಟ್ಟಿಸುವುದನ್ನು ಬಿಡಬೇಕು ಎಂದು ಎಚ್ಚರಿಸಿದರು.

ಮತ್ತೊಂದು ವಿವಾದ ಮೈಮೇಲೆಳೆದುಕೊಂಡ ರೇಣುಕಾಚಾರ್ಯ ವಿರುದ್ಧ ಸಿಡಿದೆದ್ದ ಮುಸ್ಲಿಮರು

ರಾಜ್ಯದ ನೆಲ, ಜಲ, ಭಾಷೆ ವಿಷಯದಲ್ಲಿ ಎಂದೂ ರಾಜಿ ಸಾಧ್ಯವಿಲ್ಲ. ಸಂಜಯ ರಾವತ್‌ ತಮ್ಮ ಹೇಳಿಕೆಗಳನ್ನು ನೀಡುವುದನ್ನು ಬಿಡದೆ ಹೋದರೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಬೆಂಬಲದೊಂದಿಗೆ ಸರ್ಕಾರ ನಡೆಸುತ್ತಿರುವ ಶಿವಸೇನೆಗೆ ನೀಡಿರುವ ಬೆಂಬಲವನ್ನು ವಾಪಸ್‌ ಪಡೆಯಬೇಕೆಂದು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರನ್ನು ಒತ್ತಾಯಿಸಬೇಕಾದಿತು ಎಂದು ಹೇಳಿದರು.

ಪಕ್ಷದ ಸಂಘಟನೆಯ ದೃಷ್ಟಿಯಿಂದ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆಯನ್ನು ಬೇಗ ಮಾಡಬೇಕು ಎಂದು ಮನವಿ ಮಾಡಿದ ಅವರು ಸಂಘಟನೆಗೆ ಒಳ್ಳೆಯದಾಗುತ್ತದೆ ಎನ್ನುವುದಾದರೆ ಕಾರ್ಯಾಧ್ಯಕ್ಷ ಹುದ್ದೆಗಳು ತಪ್ಪಲ್ಲ ಎಂದು ಸಮರ್ಥಿಸಿಕೊಂಡರು.

ಕಳೆದ 18 ವರ್ಷಗಳ ಹಿಂದೆ ಅಡಿಗಲ್ಲು ಹಾಕಲಾದ ನವನಗರದ ಎಲ್‌ಐಸಿ ಬಳಿ ಇರುವ ಕಾಂಗ್ರೆಸ್‌ ನಿವೇಶನದಲ್ಲಿ ಕಾಂಗ್ರೆಸ್‌ ಕಚೇರಿ ಕಟ್ಟಡ ಕಟ್ಟಲು ನಿರ್ಧರಿಸಿದ್ದು ಬರುವ ಒಂದು ವರ್ಷದಲ್ಲಿ ಕಟ್ಟಡ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ನಾಗರಾಜ ಹದ್ಲಿ, ಅನೀಲ ದಡ್ಡಿ, ರಾಜು ಮೇಲಿನಕೇರಿ ಉಪಸ್ಥಿತರಿದ್ದರು.

ಅಂಗಿ, ಚಡ್ಡಿ ಬದಲಿಸಿದಂತಲ್ಲ

ಬಿಜೆಪಿಯವರು ನೀಡುತ್ತಿರುವ ಅತಿರೇಕದ ಹೇಳಿಕೆಗಳು ಸಮಾಜದ ಸ್ವಾಸ್ಥ್ಯ ಕದಡುತ್ತಿವೆ. ಸಂಸದ ಅನಂತಕುಮಾರ ಹೆಗಡೆ ನೀಡಿರುವ ಸಂವಿಧಾನ ಬದಲಾವಣೆ ಹೇಳಿಕೆಯನ್ನು ಸಹ ಉಲ್ಲೇಖಿಸಿದ ಎಸ್‌.ಜಿ.ನಂಜಯ್ಯನಮಠ, ಸಂವಿಧಾನವನ್ನು ಬದಲಿಸುದೆಂದರೆ ಅಂಗಿ, ಚಡ್ಡಿ ಬದಲಿಸಿದಂತಲ್ಲ ಎಂದು ಲೇವಡಿ ಮಾಡಿದರು.

ಸ್ವಾತಂತ್ರ್ಯನಂತರ ಸಂವಿಧಾನಕ್ಕೆ 356 ಸೇರಿದಂತೆ ಇಂದಿರಾ, ರಾಜೀವ್‌, ಮನಮೋಹನ ಸಿಂಗ್‌ ಕಾಲದಲ್ಲಿ ಅನೇಕ ತಿದ್ದುಪಡಿಗಳನ್ನು ಮಾಡಲಾಗಿದೆ. ಆದರೆ ಸಂಸದ ಅನಂತ ಕುಮಾರರಂತಹ ಸಂವಿಧಾನ ಬದಲಾವಣೆ ಹೇಳಿಕೆಗಳು ದೇಶದ ಮೇಲೆ ಬೀರುವ ಪರಿಣಾಮವನ್ನು ಅರ್ಥಮಾಡಿಕೊಳ್ಳಬೇಕು ಎಂದರು.
 

click me!