ಆಸ್ಪತ್ರೇಲಿದ್ದಾಗಲೇ ಪತಿ ಸಾವು, ಗೊತ್ತಾದದ್ದು ಮನೆಗೆ ಬಂದಾಗ!| ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪತಿ, ಪತ್ನಿ| ಕೊರೋನಾದಿಂದ ಚೇತರಿಸಿದ ಬಾಗಲಕೋಟೆ ಮಹಿಳೆಯ ವ್ಯಥೆ|
ಬಾಗಲಕೋಟೆ(ಏ.23): ಪಕ್ಕದ ಜಿಲ್ಲೆಯಲ್ಲೇ ಇದ್ದರೂ ಅಪ್ಪನ ಅಂತ್ಯಸಂಸ್ಕಾರಕ್ಕೆ ಹೋಗಲಾಗದೆ ಒದ್ದಾಡಿದ ಪುತ್ರ, ಮಗನ ಅಂತ್ಯಸಂಸ್ಕಾರವನ್ನು ವಿಡಿಯೋ ಮೂಲಕ ನೋಡಿದ ಅಸಹಾಯಕ ತಾಯಿ! ಕೊರೋನಾ ಮಹಾಮಾರಿ ಆವರಿಸಿದ ಬಳಿಕ ದೇಶಾದ್ಯಂತ ಇಂಥ ಕಣ್ಣೀರ ಕತೆಗಳ ಸರಣಿಗಳಿಗೆ ಲೆಕ್ಕವಿಲ್ಲ. ಇಂಥದ್ದೇ ಒಂದು ಹೃದಯಹೃದ್ರಾವಕ ಘಟನೆ ರಾಜ್ಯದ ಬಾಗಲಕೋಟೆಯಲ್ಲೂ ಬೆಳಕಿಗೆ ಬಂದಿದೆ. ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ದಂಪತಿಯಲ್ಲಿ ಪತಿ ಮೃತಪಟ್ಟಿದ್ದರೆ, ಪತ್ನಿ ಗುಣಮುಖರಾಗಿ ಆಸ್ಪತ್ರೆಯಿಂದ ಮಂಗಳವಾರ ಬಿಡುಗಡೆಯಾಗಿದ್ದಾರೆ. ಆದರೆ, ಮಹಿಳೆಗೆ ಪತಿ ಸಾವಿಗೀಡಾಗಿದ್ದ ವಿಚಾರ ಗೊತ್ತಾಗಿದ್ದು ಮನೆಗೆ ಬಂದ ಬಳಿಕವೇ!
ಕೊರೋನಾ ವೀರರ ಮೇಲೆ ದಾಳಿಗೆ 7 ವರ್ಷ ಜೈಲು: ಕೇಂದ್ರದ ಸುಗ್ರೀವಾಜ್ಞೆ!
ಹೌದು, ಈ ಘಟನೆ ನಡೆದದ್ದು ಬಾಗಲಕೋಟೆಯ ಹಳೇನಗರದಲ್ಲಿ. ನಗರದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ 75 ವರ್ಷದ ವ್ಯಕ್ತಿಯೊಬ್ಬ (ಪಿ.125)ರಿಗೆ ಅದು ಹೇಗೋ ಸೋಂಕು ತಗುಲಿತ್ತು. ಕೆಮ್ಮು, ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಇವರಿಗೆ ಏ.2ರಂದು ಸೋಂಕು ಖಚಿತವಾಗಿತ್ತು. ಇದಾದ ಬೆನ್ನಲ್ಲೇ ಇವರ 54 ವರ್ಷದ ಪತ್ನಿ (ಪಿ-161)ಯಲ್ಲೂ ಸೋಂಕು ಕಾಣಿಸಿಕೊಂಡು ಬಾಗಲಕೋಟೆಯ ಜಿಲ್ಲಾಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗಿತ್ತು. ಪತಿ ಏ.3ರ ರಾತ್ರಿಯೇ ಮೃತಪಟ್ಟಿದ್ದರೂ ಈಕೆಗೆ ಚಿಕಿತ್ಸೆಯ ದೃಷ್ಟಿಯಿಂದ ಪತ್ನಿಗೆ ಈ ಕುರಿತು ಸಣ್ಣ ಮಾಹಿತಿಯನ್ನೂ ನೀಡಿರಲಿಲ್ಲ.
ವೈದ್ಯರ ಮೇಲೆ ಹಲ್ಲೆ ಮಾಡಿದ್ದ ಐವರಿಗೆ ಕೊರೋನಾ ಸೋಂಕು!
ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ರಾತ್ರೋರಾತ್ರಿ ಕೋವಿಡ್-19ರ ನಿಯಮಾವಳಿಯಂತೆ ಅಂತ್ಯಕ್ರಿಯೆ ಮಾಡಲಾಗಿತ್ತು. ಸುಮಾರು 18 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮಹಿಳೆ ಗುಣಮುಖರಾಗಿ ಸಂತೋಷದಿಂದಲೇ ಮನೆಗೆ ವಾಪಸಾಗಿದ್ದರು. ಪತಿಯ ಸಾವಿನ ಕುರಿತು ಸಣ್ಣ ಸುಳಿವೂ ನೀಡದ ವೈದ್ಯರು, ಆರೋಗ್ಯ ಸಿಬ್ಬಂದಿ ಸಂತೋಷದಿಂದಲೇ ಈಕೆಯನ್ನು ಮನೆಗೆ ಬೀಳ್ಕೊಟ್ಟಿದ್ದರು. ಇನ್ನೇನು ನನಗೆ ಮರುಜನ್ಮ ಸಿಕ್ಕಿದೆ, ಉಳಿದ ಸಮಯವನ್ನು ಗಂಡ, ಮಕ್ಕಳ ಜತೆಗೆ ನೆಮ್ಮದಿಯಾಗಿ ಕಳೆಯೋಣ ಎಂದು ಖುಷಿಯಿಂದ ಮನೆಗೆ ಬಂದಾಗಲೇ ಈಕೆಗೆ ಪತಿ ಕೋವಿಡ್ ಮಹಾಮಾರಿ ಬಲಿಪಡೆದಿರುವ ವಿಚಾರ ಗೊತ್ತಾದದ್ದು. ಪತಿ ಇನ್ನಿಲ್ಲ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಮಹಿಳೆ ದುಃಖದ ಕಟ್ಟೆಯೊಡೆದಿತ್ತು.