ಬೆಂಗಳೂರಿನ ಕೊಳವೆಬಾವಿ, ನೀರಿನ ಘಟಕದಲ್ಲಿ ಬ್ಯಾಕ್ಟೀರಿಯಾ ಪತ್ತೆ!

By Kannadaprabha NewsFirst Published Jun 12, 2024, 12:39 PM IST
Highlights

ನಗರದ ಕೆಲ ಕೊಳವೆಬಾವಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ, ಆ ಕೊಳವೆಬಾವಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಸಾರ್ವಜನಿಕರಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. 

ಬೆಂಗಳೂರು (ಜೂ.12): ನಗರದ ಕೆಲ ಕೊಳವೆಬಾವಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ, ಆ ಕೊಳವೆಬಾವಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಸಾರ್ವಜನಿಕರಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಈ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಲ್ಕರ್‌ ವಿಕಾಸ್‌ ಕಿಶೋರ್‌, ನಗರದಲ್ಲಿ 1,696 ಕೊಳವೆಬಾವಿ ಹಾಗೂ 1,384 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. 

ಅವುಗಳಲ್ಲಿನ ನೀರು ಶುದ್ಧವಾಗಿಲ್ಲ ಎಂಬ ದೂರಿನ ಆಧಾರದ ಮೇಲೆ 217 ಕೊಳವೆಬಾವಿ ಮತ್ತು 1,218 ಶುದ್ಧ ಕುಡಿಯುವ ನೀರಿನ ಘಟಕದ ನೀರಿನ ಮಾದರಿ ಸಂಗ್ರಹಿಸಿ, ಗುಣಮಟ್ಟ ಪರೀಶಿಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಮಧ್ಯಂತರ ವರದಿ ಬಂದಿದ್ದು, 10 ಕೊಳವೆಬಾವಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿನ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಇರುವುದು ಕಂಡು ಬಂದಿದೆ.

Latest Videos

ಹೀಗಾಗಿ ಆ ಕೊಳವೆಬಾವಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಸಾರ್ವಜನಿಕರಿಗೆ ನೀರು ಪೂರೈಸದಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಸೂಚನೆಯನ್ನು ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಅವು ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು. ಇನ್ನೂ 805 ಘಟಕಗಳ ನೀರಿನ ಮಾದರಿ ಪರೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಅಂತಿಮ ವರದಿ ಬಿಡುಗಡೆಗೆ ಪ್ರಯೋಗಾಲಯದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಂತಿಮ ವರದಿಯ ಬಳಿಕ ಸಮಸ್ಯೆ ಇರುವ ನೀರಿನ ಘಟಕಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. 

ಬಿಬಿಎಂಪಿ 5 ಭಾಗ ಮಾಡಲು ಸರ್ಕಾರದ ಸಿದ್ಧತೆ: ವರ್ಷಾಂತ್ಯದೊಳಗೆ ಚುನಾವಣೆ ಎಂದ ಡಿಕೆಶಿ

ಸಾರ್ವಜನಿಕರಿಗೆ ಕುಡಿಯಲು ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸದ್ಯ ಮಳೆಗಾಲ ಇರುವುದರಿಂದ ನೀರಿನಲ್ಲಿ ಬ್ಯಾಕ್ಟೀರಿಯಾದಂತಹ ಅಪಾಯಕಾರಿ ಅಂಶ ಸೇರಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಸಾರ್ವಜನಿಕರು ತಾವು ಸೇವಿಸುವ ನೀರನ್ನು ಕುದಿಸಿ ಕುಡಿಯುವುದು ಸೂಕ್ತ ಎಂದು ಸಲಹೆ ನೀಡಿದರು.

click me!