ದಸರಾ ಉತ್ಸವದ ಮತ್ತೊಂದು ಆನೆ ಅಶ್ವತ್ಥಾಮ ಸಾವು; ಸೋಲಾರ್ ತಂತಿಬೇಲಿ ತಗುಲಿ ಪ್ರಾಣಬಿಟ್ಟ ಗಜ

By Sathish Kumar KHFirst Published Jun 11, 2024, 5:11 PM IST
Highlights

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಎರಡು ಬಾರಿ ಪಾಲ್ಗೊಂಡಿದ್ದ ಅಶ್ವತ್ಥಾನ ಆನೆ ನಾಗರಹೊಳೆಯ ಭೀಮನಕಟ್ಟೆ ಕ್ಯಾಂಪ್‌ ಬಳಿ ಸೋಲಾರ್ ತಂತಿ ಬೇಲಿ ತಗುಲಿ ಸಾವನ್ನಪ್ಪಿದೆ.

ಬೆಂಗಳೂರು (ಜೂ.11): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಎರಡು ಬಾರಿ ಪಾಲ್ಗೊಂಡಿದ್ದ ಅಶ್ವತ್ಥಾನ ಆನೆ ನಾಗರಹೊಳೆ ಮತ್ತಿಗೋಡು ಬಳಿ ಇರುವ ಭೀಮನಕಟ್ಟೆ ಕ್ಯಾಂಪ್‌ ಬಳಿ ಸೋಲಾರ್ ತಂತಿ ಬೇಲಿ ತಗುಲಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಮೈಸೂರು ಜಿಲ್ಲೆಯ ಹುಣಸೂರು- ಪಿರಿಯಾಪಟ್ಟಣ ತಾಲೂಕಿನ ಗಡಿ ಭಾಗದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿದ್ದ ಅಶ್ವತ್ಥಾಮ ಆನೆಯು, ಮಂಗಳವಾರ ಬೆಳಗ್ಗೆ ಆಹಾರವನ್ನು ಅರಸಿ ಕಾಡಿನತ್ತ ತೆರಳಿತ್ತು. ಈ ವೇಳೆ ಜಮೀನಿಗೆ ಹಾಕಲಾಗಿದ್ದ ಸೋಲಾರ್ ತಂತಿಬೇಲಿ ತಗುಲಿದ ಪರಿಣಾಮ 38 ವರ್ಷದ ಅಶ್ವತ್ಥಾಮ ಆನೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಸೋಲಾರ್ ತಂತಿ ಮೇಲೆ ವಿದ್ಯುತ್ ಲೈನ್ ಬಿದ್ದಿರುವುದೇ ವಿದ್ಯುತ್ ಶಾಕ್ ಉಂಟಾಗಿ ಸಾವನ್ನಪ್ಪಿದೆ ಎಂದೂ ಹೇಳಲಾಗುತ್ತಿದೆ. ಆದರೆ, ಅರಣ್ಯ ಇಲಾಖೆಯ ಮೂಲಗಳು ಅಶ್ವತ್ಥಾನ ಆನೆಗೆ ಹಲವು ದಿನಗಳಿಂದ ಅನಾರೋಗ್ಯವೂ ಕಾಡುತ್ತಿತ್ತು, ಅನಾರೋಗ್ಯದಿಂದಲೇ ಆನೆ ಮೃತಪಟ್ಟಿದೆ ಎಂದು ಹೇಳಲಾಗಿದೆ. 

Latest Videos

ದರ್ಶನ್‌ನಿಂದ ಕೊಲೆಯಾದ ಬಜರಂಗದಳ ಕಾರ್ಯಕರ್ತ ರೇಣುಕಾಸ್ವಾಮಿ ಹೆಂಡ್ತಿ 5 ತಿಂಗಳ ಗರ್ಭಿಣಿ

ದಸರಾದಲ್ಲಿ ಪಾಲ್ಗೊಳ್ಳುವ ಮುನ್ನ ಅಶ್ವತ್ಥಾಮ ಆನೆಯನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ 2017ರಲ್ಲಿ ಸೆರೆ ಹಿಡಿಯಲಾಗಿತ್ತು. ಇದಾದ ನಂತರ ಪಳಗಿಸಿದಾಗ ಶಾಂತ ಹಾಗೂ ಗಾಂಭೀರ್ಯ ಸ್ವಭಾವದಿಂದ ನಡೆದುಕೊಳ್ಳುತ್ತಿದ್ದ ಆಶ್ವತ್ಥಾಮ ಆನೆಯನ್ನು ಸೆರೆಸಿಕ್ಕ ನಾಲ್ಕು ವರ್ಷದಲ್ಲಿಯೇ 2021ರ ದಸರಾ ಮಹೋತ್ಸವಕ್ಕೆ ಕರೆತರಲಾಗಿತ್ತು. ಅದಕ್ಕೆ ನಡಿಗೆ ತಾಲೀಮು ಸೇರಿದಂತೆ ವಿವಿಧ ತಾಲೀಮನ್ನು ನೀಡಲಾಗಿತ್ತು. ನಂತರ, 2022ರ ದಸರಾ ಮಹೋತ್ಸವದಲ್ಲಿಯೂ ಪಾಲ್ಗೊಂಡು ಗಮನ ಸೆಳೆದಿತ್ತು. ಆದರೆ, ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿರಲಿಲ್ಲ.

ಕಳೆದ ವರ್ಷದ ಮೈಸೂರು ದಸರಾ ಜಂಬೂ ಸವಾರಿಯನ್ನು ಹೊತ್ತಿದ್ದ ಅರ್ಜುನ ಆನೆಯು ಹಾಸನದಲ್ಲಿ ಕಾಡಾನೆ ಸೆರೆ ಹಿಡಿಯುವ ವೇಳೆ ಕಾಡಾನೆ ದಾಳಿಗೆ ತುತ್ತಾಗಿ ವೀರಮರಣ ಹೊಂದಿತ್ತು. ಇನ್ನು ಅರ್ಜುನ ಆನೆಯ ಸಾವಿನ ಸುತ್ತ ಹಲವು ಅನುಮಾನಗಳು ಕೂಡ ಹುಟ್ಟಿಕೊಂಡಿದ್ದವು. ಕಾಡಾನೆ ಸೆರೆಯ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ತಪ್ಪೆಸಗಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಆದರೆ, ಇದೆಲ್ಲವನ್ನು ಅಲ್ಲಗಳೆದ ಅರಣ್ಯ ಇಲಾಖೆ ಕಾಡಾನೆ ಏಕಾಏಕಿ ಒಬ್ಬಂಟಿ ಆಗಿದ್ದ ಅರ್ಜುನ ಆನೆಯ ಮೇಲೆ ದಾಳಿ ಮಾಡಿದ್ದರಿಂದ ಸಾವನ್ನಪ್ಪಿದೆ ಎಂದು ಹೇಳಿದ್ದರು.

ಕೊಲೆ ಆರೋಪಿಗಳು ದರ್ಶನ್ ಹೆಸರು ಹೇಳಿದ್ದಕ್ಕೆ ಅರೆಸ್ಟ್ ಮಾಡಲಾಗಿದೆ; ಗೃಹ ಸಚಿವ ಪರಮೇಶ್ವರ

ಅರಣ್ಯ ಇಲಾಖೆ ನಿಯಮಾವಳಿಯಂತೆ ಅರ್ಜುನ ಆನೆಯನ್ನು ಅಂತ್ಯಕ್ರಿಯೆ ಮಾಡಲು ಮುಂದಾಗಿತ್ತು. ಆದರೆ, ಕನ್ನಡಿಗರ ಅಭಿಮಾನ ಹಾಗೂ ವಿಶ್ವ ವಿಖ್ಯಾತ ಜಂಬೂಸವಾರಿಯನ್ನು ಹೊತ್ತಿದ್ದ ಅರ್ಜುನ ಆನೆಗೆ ಗೌರವ ಸಮರ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಗೌರವ ಸಲ್ಲಿಸಿ ಕಾಡಿನಲ್ಲಿಯೇ ಅಂತ್ಯಕ್ರಿಯೆ ಮಾಡಲಾಗಿತ್ತು. ಇದಾದ ನಂತರವೂ ಅರ್ಜುನ ಆನೆಗೆ ಸಮಾಧಿ ನಿರ್ಮಾಣ ಮಾಡಬೇಕು ಎಂದು ಹಲವು ಒತ್ತಡಗಳು ಕೇಳಿಬಂದವು. ಇದಕ್ಕೆ ಅರಣ್ಯ ಇಲಾಖೆ ನಿಯಮಾವಳಿಗಳಲ್ಲಿ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಯಾವುದೇ ಸಮಾಧಿ ನಿರ್ಮಿಸದೇ ಕೈಬಿಡಲಾಗಿದೆ.

click me!