ಕಾಂಗ್ರೆಸ್‌ ಜೊತೆಗಿನ ಮೈತ್ರಿ ಹಿಂದಿನ ಸೀಕ್ರೇಟ್ ಹೇಳಿದ ಗೌಡರು

By Kannadaprabha NewsFirst Published Feb 25, 2021, 8:46 AM IST
Highlights

ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ಜೊತೆಗೆ  ಮೈತ್ರಿಯಾಗಿದ್ದು, ಈ ಮೈತ್ರಿಯ ಹಿಂದೆ ಇರುವ ಕಾರಣ ಏನೆಂದು ಮಾಜಿ ಪ್ರಧಾನಿ ಎಚ್..ಡಿ ದೇವೆಗೌಡರು ಹೇಳಿದ್ದಾರೆ. 

 ತುಮಕೂರು (ಫೆ.25):  ಕಳೆದ ಮೂರು ವರ್ಷಗಳಿಂದ ಮೈಸೂರು ಮಹಾನಗರಪಾಲಿಕೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಇದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸ್ಪಷ್ಟಪಡಿಸಿದರು.

"

ಅವರು ತುಮಕೂರಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೈತ್ರಿ ಹೊಸದೇನೂ ಅಲ್ಲ. ಇದರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಅಂತಾ ಏನು ಇಲ್ಲ. ಇದರ ಬದಲಾಗಿ ಎರಡು ಪಕ್ಷಗಳಿಗೂ ಒಂದು ಕಮಿಟ್‌ಮೆಂಟ್‌ ಇದೆ ಎಂದರು.

ರಾಜಕೀಯವಾಗಿ,ಸಾಮಾಜಿಕವಾಗಿ ಹಿಂದುಳಿದ ಸಮುದಾಯದವರನ್ನ ಮೇಲೆತ್ತುವ ಸಲುವಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ. ಕುಮಾರಸ್ವಾಮಿಗೆ ಕಾಂಗ್ರೆಸ್‌ ನಿಂದ ಈ ಬಗ್ಗೆ ಯಾರು ಮಾತನಾಡಿದರೋ ಗೊತ್ತಿಲ್ಲ.ಅವರು ಕೂಡ ಅಭ್ಯರ್ಥಿಗಳನ್ನ ಹಾಕಿದ್ದರು. ಸದ್ಯ ಮೈತ್ರಿಯಾಗಿದೆ ಎಂದು ತಿಳಿಸಿದರು.

ದೇವೇಗೌಡ್ರ ಹೇಳಿಕೆಯಿಂದ ಬದಲಾದ ರಾಜಕೀಯ: ಬಿಜೆಪಿ ಕನಸಿಗೆ ಕೊಳ್ಳಿ ಇಟ್ಟ ದೊಡ್ಡಗೌಡ್ರು..!

ಮೈಸೂರು ಮಹಾನಗರ ಪಾಲಿಕೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗಲಿಲ್ಲ. ಬಿಜೆಪಿ 26 ಸದಸ್ಯರ ಬಲ ಹೊಂದಿದ್ದರೆ ಜೆಡಿಎಸ್‌ 25 ಹಾಗೂ ಕಾಂಗ್ರೆಸ್‌ 18 ಸದಸ್ಯರ ಬಲ ಹೊಂದಿತ್ತು. ಸಿದ್ದರಾಮಯ್ಯ ಅವರು ಪಕ್ಷೇತರ ಸದಸ್ಯರೊಬ್ಬರನ್ನು ಸೆಳೆದುಕೊಂಡಿದ್ದರಿಂದ ಕಾಂಗ್ರೆಸ್‌ ಬಲ 19 ಕ್ಕೆ ಏರಿತು ಎಂದರು.

ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಾನು ಮೊದಲ ವರ್ಷ ನಮ್ಮ ಪಕ್ಷದ ಮುಖಂಡರಿಗೆ ಸಿದ್ದರಾಮಯ್ಯ ಅವರಿಗೆ ಮೇಯರ್‌ ಮಾಡುವ ಆಸೆ ಇದೆ ಅವರಿಗೆ ಬಿಟ್ಟು ಬಿಡಿ ಎಂದಿದ್ದೆ. ಹಾಗಾಗಿ ಮೊದಲ ವರ್ಷ ಕಾಂಗ್ರೆಸ್‌ನವರೇ ಆದರು. ಎರಡನೇ ವರ್ಷ ಅವರೇ ನಮಗೆ ಮೇಯರ್‌ ಸ್ಥಾನ ನೀಡಿದರು. ಮುಸ್ಲಿಂ ಮಹಿಳೆಯನ್ನು ಮೇಯರ್‌ ಮಾಡಿದೆವು ಎಂದರು.

ಈಗ ಕಾಂಗ್ರೆಸ್‌, ಬಿಜೆಪಿ ಮೇಯರ್‌, ಉಪಮೇಯರ್‌ಗೆ ಹಾಕಿದ್ದರು. ನಮ್ಮ ಪಕ್ಷದಿಂದಲೂ ಕೂಡ ಹಾಕಲಾಗಿತ್ತು. ಕಡೇ ಗಳಿಗೆಯಲ್ಲಿ ಕಾಂಗ್ರೆಸ್‌ ತಮ್ಮ ಬೆಂಬಲ ವ್ಯಕ್ತಪಡಿಸಿ ಮೇಯರ್‌ ಸ್ಥಾನವನ್ನು ನಮಗೆ ಬಿಟ್ಟುಕೊಟ್ಟಿದ್ದಾರೆ. ಅವರು ಉಪಮೇಯರ್‌ ತೆಗೆದುಕೊಂಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮಾಂತರ ಶಾಸಕ ಗೌರಿಶಂಕರ್‌, ಮಾಜಿ ಶಾಸಕ ತಿಮ್ಮರಾಯಪ್ಪ, ನಂಜಾವಧೂತ ಸ್ವಾಮೀಜಿ ಮತ್ತಿತರರು ಇದ್ದರು.

click me!