ಇನಾಂ ಭೂಮಿ ಸಾಗುವಳಿದಾರರು ಹಲವು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಅಲೆದಾಡುತ್ತಿದ್ದು,ಕೂಡಲೇ ಸಾಗುವಳಿದಾರರು ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಶಿಕಾರಿಪುರ (ಆ.25): ಇನಾಂ ಭೂಮಿ ಸಾಗುವಳಿದಾರರು ಹಲವು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಅಲೆದಾಡುತ್ತಿದ್ದು, ಶೀಘ್ರದಲ್ಲಿಯೇ ಮಂಜೂರಾತಿಗಾಗಿ ನೂತನ ಕಾಯ್ದೆ ಜಾರಿಗೊಳಿಸಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚಿಸಿದ್ದಾರೆ. ಕೂಡಲೇ ಸಾಗುವಳಿದಾರರು ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಬೆಂಡೆಕಟ್ಟೆಗ್ರಾಮದ ನೂರಾರು ಇನಾಂ ಭೂಮಿ ಸಾಗುವಳಿದಾರರು ಮಂಜೂರಾತಿಗಾಗಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಸರ್ಕಾರ ಸಾಗುವಳಿದಾರರ ಹಿತರಕ್ಷಣೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತೀವ್ರ ಚಿಂತನೆ ನಡೆಸುತ್ತಿದೆ ಸಾಗುವಳಿದಾರರು ಆತಂಕಪಡದಂತೆ ತಿಳಿಸಿದರು. ಹಲವು ವರ್ಷಗಳಿಂದ ತಾಲೂಕಿನ ಬೆಂಡೆಕಟ್ಟೆಗ್ರಾಮದಲ್ಲಿನ ಕೂಡಲಿ ಶೃಂಗೇರಿ ಮಠದ ನೂರಾರು ಎಕರೆ ಇನಾಂ ಭೂಮಿ ಜತೆಗೆ ತಾಲೂಕಿನ ವಿವಿಧೆಡೆ ಹಲವು ಸಾಗುವಳಿದಾರರು ಕುಟುಂಬ ಜೀವನ ಭದ್ರತೆ ಕಂಡುಕೊಂಡಿದ್ದಾರೆ. ಸಾಗುವಳಿದಾರರಿಗೆ ಹಕ್ಕುಪತ್ರಕ್ಕಾಗಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಂದಾಯ ಸಚಿವ ಅಶೋಕ್ ಜತೆ ಚರ್ಚಿಸಿದ್ದರು. ಈ ಹಿಂದೆ ಫಾರಂ ನಂ.7ರಲ್ಲಿ ಅರ್ಜಿ ಸಲ್ಲಿಸಿದ ಸಾಗುವಳಿದಾರರು ಪುನಃ ತಹಸೀಲ್ದಾರ್‌ಗೆ ಸಲ್ಲಿಸಿದಲ್ಲಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ರೈತರ ಒಕ್ಕಲೆಬ್ಬಿಸಲು ಬಿಡುವುದಿಲ್ಲ: ಕೆಲ ಅಧಿಕಾರಿಗಳ ತಪ್ಪು ಮಾಹಿತಿ, ಗೊಂದಲದಿಂದಾಗಿ ಹಲವು ರೈತರು ಬೆಂಗಳೂರಿನ ಭೂಕಬಳಿಕೆ ನ್ಯಾಯಾಲಯಕ್ಕೆ ಅಲೆದಾಡುವಂತಾಗಿದ್ದು ಸರ್ಕಾರ ರೈತರ ಪರವಾಗಿದೆ. ಅಧಿಕಾರಿಗಳು ವಿನಾ ಕಾರಣ ಸಾಗುವಳಿದಾರರಿಗೆ ಕಿರುಕುಳ ನೀಡುವುದನ್ನು ಸಹಿಸಲಾಗುವುದಿಲ್ಲ. ಎಂತಹ ಸಂದರ್ಭದಲ್ಲಿಯೂ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದರು.
ಕಳೆದ ಶನಿವಾರ ಮುಖ್ಯಮಂತ್ರಿ ಬೊಮ್ಮಾಯಿ ಅವರು ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದು, ವಾರದ ಕಾಲಾವಧಿಯಲ್ಲಿ ಕಾನೂನು ಸೂಕ್ತ ತಿದ್ದುಪಡಿ ಮೂಲಕ ನ್ಯಾಯ ದೊರಕಿಸುವ ವಾಗ್ದಾನ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಾಗುವಳಿದಾರರಿಗೆ ಕಿರುಕುಳ ನೀಡದಂತೆ ಸೂಕ್ತ ಸಂದೇಶ ರವಾನಿಸಿದ್ದಾರೆ ಎಂದು ತಿಳಿಸಿದರು.
ತಹಸೀಲ್ದಾರ್‌ಗೆ ಬೆಂಡೆಕಟ್ಟೆಗ್ರಾಮದ ನೂರಾರು ಇನಾಂ ಭೂಮಿ ಸಾಗುವಳಿದಾರರು ಅರ್ಜಿ ಸಲ್ಲಿಸಿದರು. ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಎಸಿಎಫ್ ಗೋಪ್ಯಾ ನಾಯ್ಕ, ಕಂದಾಯ ಇಲಾಖೆಯ ಹಿರಿಯ ಅಧಿಕಾರಿ ಮುಖಂಡ ಬಸವರಾಜ ರೋತೆ, ಕಬಾಡಿ ರಾಜಣ್ಣ, ನಾಗೀಹಳ್ಳಿ ಗಣೇಶ್ ಮತ್ತಿತರರು ಇದ್ದರು.
ಶಿರಕರಡಿ ಗ್ರಾಮದ ಇನಾಂ ಭೂಮಿ ಸಮಸ್ಯೆ ಇತ್ಯರ್ಥ: ಕೊಪ್ಪ ತಾಲೂಕಿನ ಕಮ್ಮರಡಿಯ ಚಾವಲ್ಮನೆ ಗ್ರಾ.ಪಂ ಸಭಾಂಗಣದಲ್ಲಿ ಶನಿವಾರ ಅಧಿಕಾರಿಗಳ ಗ್ರಾಮ ವಾಸ್ತವ್ಯ ನಡೆಯಿತು. ಕಾರ್ಯಕ್ರಮದಲ್ಲಿ ಚಾವಲ್ಮನೆ ಗ್ರಾ.ಪಂ ವ್ಯಾಪ್ತಿಯ ಶಿರಕರಡಿ ಗ್ರಾಮದ ಇನಾಂ ಜಮೀನಿಗೆ ಬಾಕಿ ಉಳಿದಿದ್ದ 16 ಕಡತಗಳ ಆದೇಶ ಪ್ರತಿ ಪೂರ್ಣಗೊಳಿಸಿ ಗ್ರಾಮಸ್ಥರಿಗೆ ವಿತರಿಸಲಾಯಿತು. ನಾಲ್ವರು ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯದ ಆದೇಶ ಪ್ರತಿ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಚಿಕ್ಕಮಗಳೂರು ಕಂದಾಯ ಉಪವಿಭಾಗಾಧಿಕಾರಿ ರಾಜೇಶ್ ಮಾತನಾಡಿ, ಗ್ರಾಮೀಣ ಭಾಗದ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದನೆ ದೊರಕಿಸುವ ಉದ್ದೇಶದಿಂದ ಸರ್ಕಾರದ ಆದೇಶದಂತೆ ಪ್ರತಿ ತಿಂಗಳ 3ನೇ ಶನಿವಾರ ಅಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.\
ಬೆಳಗಾವಿ: ಬೆಕ್ಕೇರಿಯಲ್ಲಿ ಸ್ಮಶಾನಭೂಮಿಯೇ ಕಾಣೆ..!
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 17, ಗ್ರಾ.ಪಂ.ಗೆ 5, ಜಿ.ಪಂ.ಗೆ 7, ಮೆಸ್ಕಾಂ ಇಲಾಖೆಗೆ 6, ಭೂ ದಾಖಲೆ (ಸರ್ವೆ ಇಲಾಖೆ)ಗೆ ಬಂದಿರುವ 2 ಅರ್ಜಿಗಳು ಸೇರಿದಂತೆ ಒಟ್ಟು 39 ಅರ್ಜಿಗಳು ಸ್ವೀಕೃತಗೊಂಡವು.
Farmers Land ಇನಾಂ ಜಮೀನುಗಳಲ್ಲಿ ಕೃಷಿ ಮಾಡುವ ರೈತರಿಗೆ ಪಹಣಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದು ತಮ್ಮ ಇಲಾಖೆಯಿಂದ ಲಭ್ಯವಿರುವ ಸೌಲಭ್ಯಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಕೊಪ್ಪ ತಹಸೀಲ್ದಾರ್ ವಿಮಲಾ ಸುಪ್ರಿಯ, ಉಪ ತಹಸೀಲ್ದಾರ್ ನಾಗರಾಜ್, ಕಂದಾಯ ನಿರೀಕ್ಷಕ ಸುಧೀರ್, ದ್ವಿತೀಯ ದರ್ಜೆ ಸಹಾಯಕ ಅಭಿಷೇಕ್, ಚಾವಲ್ಮನೆ ಗ್ರಾ.ಪಂ. ಅಧ್ಯಕ್ಷ ವಾಸುದೇವಾಚಾರ್ ಮತ್ತಿತರರು ಇದ್ದರು.