ಬಿಜೆಪಿ ಅಧಿ​ಕಾ​ರಕ್ಕೆ ಬಂದಾ​ಗ​ಲೆಲ್ಲ ಶ್ರೀರಾಮುಲುಗೆ ಮಂತ್ರಿ ಭಾಗ್ಯ..!

By Kannadaprabha News  |  First Published Aug 5, 2021, 10:38 AM IST

* ನಿರಾಯಾಸ ಮಂತ್ರಿ ಪಟ್ಟ; ಡಿಸಿಎಂ ಆಗೋದು ಬಲುಕಷ್ಟ
* ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಯಾಗುವ ಅವಕಾಶ ಪಡೆದ ಶ್ರೀರಾಮುಲು
* ಪ್ರಮುಖ ಖಾತೆಗಳನ್ನು ಶ್ರೀರಾಮುಲುಗೆ ನೀಡಲಾಗಿದೆ ಎಂಬುದು ಗಮನಾರ್ಹ
 


ಕೆ.ಎಂ. ಮಂಜುನಾಥ್‌

ಬಳ್ಳಾರಿ(ಆ.05): ಬಿಜೆಪಿಯಲ್ಲಿನ ಎಸ್ಟಿ ಸಮುದಾಯದ ಪ್ರಭಾವಿ ನಾಯಕ ಬಿ.ಶ್ರೀರಾಮುಲುಗೆ ನಿರಾಯಾಸವಾಗಿ ಸಚಿವ ಸ್ಥಾನ ಒಲಿದು ಬಂದಿದೆ. ಆದರೆ, ಉಪ ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಇನ್ನೂ ಸಾಕಾರಗೊಂಡಿಲ್ಲ.
ಸಾಮಾನ್ಯ ಕುಟುಂಬದಿಂದ ಬಂದಿರುವ ಶ್ರೀರಾಮುಲುಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಮಂತ್ರಿಪಟ್ಟಸಿಕ್ಕಿದೆ. ಅಷ್ಟೇ ಅಲ್ಲ; ಪ್ರಮುಖ ಖಾತೆಗಳನ್ನು ಶ್ರೀರಾಮುಲುಗೆ ನೀಡಲಾಗಿದೆ ಎಂಬುದು ಗಮನಾರ್ಹ.

Latest Videos

undefined

ಶ್ರೀರಾಮುಲು ಬಿಜೆಪಿಗೆ ಬಂದಿದ್ದೇ ಅನಿರೀಕ್ಷಿತ ಗಳಿಗೆಯಲ್ಲಿ. ಹಾಗೆ ನೋಡಿದರೆ ಇವರ ಕುಟುಂಬಕ್ಕೆ ಯಾವ ರಾಜಕೀಯ ಹಿನ್ನೆಲೆ ಇಲ್ಲ. ಆ ಕಾಲದಲ್ಲಿ ಹೆಚ್ಚು ಹೆಸರು ಮಾಡಿದ್ದ ಇವರ ಮಾವ ರೈಲ್ವೆ ಬಾಬು ಅವರ ಪ್ರೇರಣೆಯಿಂದ 1996ರಲ್ಲಿ ಕಾಂಗ್ರೆಸ್‌ನಿಂದ ನಗರಸಭೆಗೆ ಸ್ಪರ್ಧಿಸಿ ಗೆಲುವು ಪಡೆದ, ಶ್ರೀರಾಮುಲು, ಬಳಿಕ ಸ್ಥಾನಕ್ಕೆ ರಾಜಿನಾಮೆ ನೀಡಿದರು. 1999ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಬಿಜೆಪಿಯ ಸುಷ್ಮಾ ಸ್ವರಾಜ್‌ ಬಳ್ಳಾರಿಯಿಂದ ಸ್ಪರ್ಧಿಸಿದಾಗ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಅವರ ಸಂಪರ್ಕ ಬೆಳೆದು, ಬಿಜೆಪಿಗೆ ವಾಲಿದರು.

ರಾಮುಲು ಡಿಸಿಎಂ ಕನಸಿಗೆ ಅಡ್ಡಗಾಲು ಹಾಕಿದ್ರಾ ಬೆಳಗಾವಿ ಸಾಹುಕಾರ್?

ಏಕಕಾಲಕ್ಕೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಸೋಲುಂಡರು. ಚುನಾವಣೆ ಪರಾಭವದಿಂದ ವಿಚಲಿತರಾಗದೆ ರೆಡ್ಡಿ ಸಹೋದರರ ಜತೆಗೂಡಿ ಪಕ್ಷ ಸಂಘಟಿಸಿದರು. ಪರಿಣಾಮ; 2004ರಲ್ಲಿ ನಡೆದ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್‌ನ ಪ್ರಭಾವಿ ನಾಯಕ ಮುಂಡ್ಲೂರು ದಿವಾಕರ ಬಾಬು ವಿರುದ್ಧ ಗೆಲುವು ಸಾಧಿಸಿ, ಮೊದಲ ಬಾರಿಗೆ ವಿಧಾನಸ​ಭೆ ಪ್ರವೇ​ಶಿ​ಸಿದರು. ಇಲ್ಲಿಂದ ಶುರುವಾದ ಶ್ರೀರಾಮುಲು ಗೆಲುವಿನ ಓಟ. 2006ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿ ಗದಗ ಜಿಲ್ಲಾ ಉಸ್ತುವಾರಿಯಾದರು. ಕ್ಷೇತ್ರ ಪುನರ್‌ ವಿಂಗಡಣೆಯಿಂದಾಗಿ 2008ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಜಯ ದಾಖಲಿಸಿದರಲ್ಲದೆ, ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಮಂತ್ರಿಯಾದರು. ಅಕ್ರಮ ಗಣಿಗಾರಿಕೆಯಲ್ಲಿ ತಮ್ಮ ಹೆಸರು ಪ್ರಸ್ತಾಪಗೊಂಡು ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಸಚಿವ-ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದರಲ್ಲದೆ, ಬಿಎಸ್ಸಾರ್‌ ಪಕ್ಷ ಸ್ಥಾಪಿಸಿ ಉಪ ಚುನಾವಣೆಯಲ್ಲಿ ಮತ್ತೆ ಜಯ ಗಳಿಸಿದರು. 

2013ರಲ್ಲಿ ಬಿಎಸ್ಸಾರ್‌ನಿಂದ ಮತ್ತೆ ಗೆಲುವು ಪಡೆದ ಶ್ರೀರಾಮುಲು, ನಂತರದಲ್ಲಿ ಸ್ವಂತ ಪಕ್ಷವನ್ನು ಮುನ್ನಡೆಸಲು ಸಾಧ್ಯವಾಗದೆ ಮತ್ತೆ 2014ರಲ್ಲಿ ಕಮಲ ಪಕ್ಷದ ಮನೆ ಹೊಕ್ಕರು. ಇದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದರು. ಸಂಸದನ ಅವಧಿ ಇರುವಾಗಲೇ ರಾಜಿನಾಮೆ ನೀಡಿ, 2018ರಲ್ಲಿ ನಡೆದ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಬದಾಮಿ ಕ್ಷೇತ್ರದಿಂದ ಸ್ಪರ್ಧಿಸಿ, ಬದಾಮಿಯಲ್ಲಿ ಸೋಲುಂಡು, ಮೊಳಕಾಲ್ಮುರು ಕ್ಷೇತ್ರದಲ್ಲಿ ಜಯ ಗಳಿಸಿದರಲ್ಲದೆ, ಯಡಿಯೂರಪ್ಪ ಸರ್ಕಾರದಲ್ಲಿ ಆರೋಗ್ಯಮಂತ್ರಿಯಾದರು. ಬಳಿಕ ಖಾತೆ ಬದಲಾಗಿ ಸಮಾಜ ಕಲ್ಯಾಣ ಇಲಾಖೆ ವಹಿಸಿಕೊಂಡರು. 

ಇದೀಗ ಮತ್ತೆ ಅವರ ಸಂಪುಟದಲ್ಲಿ ಸ್ಥಾನ ಪಡೆದಿರುವ ಶ್ರೀರಾಮುಲು ಮಂತ್ರಿಯಾಗುವ ಅವಕಾಶ ಪಡೆದಿದ್ದಾರೆ. ಒಟ್ಟು ನಾಲ್ಕು ಬಾರಿ ಮಂತ್ರಿಯಾಗುವ ಭಾಗ್ಯ ಪಡೆದ ಶ್ರೀರಾಮುಲು, ಉಪ ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಮಾತ್ರ ಜೀವಂತವಾಗಿಟ್ಟುಕೊಂಡಿದ್ದಾರೆ!
 

click me!