ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡುವ ಆಕಾಶವಾಣಿಯ ‘ಮನ್ ಕೀ ಬಾತ್’ ಬಾನುಲಿ ಸರಣಿ ಇತ್ತೀಚಿಗೆ ಶತಕದ ಗಡಿ ದಾಟಿದೆ. ಈ ಸಂಭ್ರಮದ ಹಿನ್ನೆಲೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯವು ರಾಷ್ಟ್ರದ ಆಯ್ದ ಕಲಾವಿದರನ್ನು ಆಹ್ವಾನಿಸಿ ಮನ್‌ಕೀ ಬಾತ್ ನೂರು ಆವೃತ್ತಿಯ ಸಾರಾಂಶವನ್ನು ಕಲಾಕೃತಿಗಳಲ್ಲಿ ಅರಳಿಸಿಡುವ ಸಾಹಸಕ್ಕೆ ಮುಂದಾಗಿತ್ತು. ಈ ಮಹತ್ವದ ಅವಕಾಶ ಪಡೆದ ರಾಷ್ಟ್ರದ 13 ಕಲಾವಿದರ ಪೈಕಿ ಒಬ್ಬರು ಕರಾವಳಿ ಮೂಲದ ಮೂಡುಬಿದಿರೆ ಬಿ.ಮಂಜುನಾಥ್ ಕಾಮತ್.
ಗಣೇಶ್ ಕಾಮತ್
ಮೂಡುಬಿದಿರೆ (ಮೇ.22) : ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡುವ ಆಕಾಶವಾಣಿಯ ‘ಮನ್ ಕೀ ಬಾತ್’ ಬಾನುಲಿ ಸರಣಿ ಇತ್ತೀಚಿಗೆ ಶತಕದ ಗಡಿ ದಾಟಿದೆ. ಈ ಸಂಭ್ರಮದ ಹಿನ್ನೆಲೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯವು ರಾಷ್ಟ್ರದ ಆಯ್ದ ಕಲಾವಿದರನ್ನು ಆಹ್ವಾನಿಸಿ ಮನ್‌ಕೀ ಬಾತ್ ನೂರು ಆವೃತ್ತಿಯ ಸಾರಾಂಶವನ್ನು ಕಲಾಕೃತಿಗಳಲ್ಲಿ ಅರಳಿಸಿಡುವ ಸಾಹಸಕ್ಕೆ ಮುಂದಾಗಿತ್ತು. ಈ ಮಹತ್ವದ ಅವಕಾಶ ಪಡೆದ ರಾಷ್ಟ್ರದ 13 ಕಲಾವಿದರ ಪೈಕಿ ಒಬ್ಬರು ಕರಾವಳಿ ಮೂಲದ ಮೂಡುಬಿದಿರೆ ಬಿ.ಮಂಜುನಾಥ್ ಕಾಮತ್.
ಪ್ರಧಾನಿಯವರ ವಸುದೈವ ಕುಟುಂಬಕಂ ಚಿಂತನೆಯ ವಿಶ್ವಭಾರತ ಕಲ್ಪನೆಯನ್ನು ತನ್ನ ಕಲಾಕೃತಿಯಲ್ಲಿ ಅರಳಿಸಿ ಮೋದಿಯವರ ಮನಗೆದ್ದವರು ಅವರು.
ಮೋದಿ ಮನ್ ಕೀ ಬಾತ್ ಕೇಳದ ಮಕ್ಕಳಿಗೆ ದಂಡದ ಬರೆ ಹಾಕಿದ ಶಾಲಾ ಆಡಳಿತ!
ಕಳೆದ ಮೂರು ತಿಂಗಳಿಂದ ಈ ಕಾರ್ಯ ಯೋಜನೆ ನಡೆದಿದ್ದು ಕಲಾಕಾರರಿಗೆ ಮನ್ ಕೀ ಬಾತ್(Mann ki Baat) ಸರಣಿಯ ಚಿಂತನೆಗಳ ಸಾರಾಂಶವನ್ನು 13 ಚಿಂತನೆಗಳಾಗಿ ನೀಡಲಾಗಿತ್ತು. ಇದೀಗ ಕಳೆದ ಕೆಲವು ದಿನಗಳ ಹಿಂದೆ ಕಲಾವಿದರ ಕಲಾಕೃತಿಗಳನ್ನೆಲ್ಲ ದೆಹಲಿಯ ನ್ಯಾಶನಲ್ ಗ್ಯಾಲರಿ ಆಫ್ ಮೋಡರ್ನ್ ಆರ್ಟ್(National Gallery of Modern Art)ನಲ್ಲಿ ‘ಜನಶಕ್ತಿ ಒಂದು ಸಾಂಘಿಕ ಸಾಮರ್ಥ್ಯ ’ ಹೆಸರಲ್ಲಿ ಪ್ರದರ್ಶನಕ್ಕೆ ಇರಿಸಿದ್ದು ಸ್ವಚ್ಛತೆ, ಜಲ ಸಂರಕ್ಷಣೆ, ಕೃಷಿ, ಬಾಹ್ಯಾಕಾಶ, ಈಶಾನ್ಯ ಭಾರತ, ನಾರೀಶಕ್ತಿ, ಯೋಗ, ಆಯುರ್ವೇದ ಹೀಗೆ ವಿವಿಧ ಪರಿಕಲ್ಪನೆಯ ಕಲಾಕೃತಿಗಳು ಈ ಪ್ರದರ್ಶನ ವೀಕ್ಷಣೆಗೆಂದು ಮ್ಯೂಸಿಯಂನತ್ತ ಹೆಜ್ಜೆ ಹಾಕಿದ ಪ್ರಧಾನಿ ಮೋದಿಯವರನ್ನೇ ಮೋಡಿ ಮಾಡಿವೆ. ಕಲಾವಿದರ ಸಹಿಗಳಿರುವ ಕ್ಯಾಟಲಾಗ್‌ಗೆ ಹಸ್ತಾಕ್ಷರ ನೀಡಿರುವ ಪ್ರಧಾನಿ(PM Narendra Modi) ಮನದ ಯಾತ್ರೆಯು ಸಂತಸಮಯವಾಗಿರಲಿ ಎಂದು ಹಾರೈಸಿದ್ದಾರೆ.
ವಿಶ್ವಕ್ಕೆ ಭಾರತ ಹೇಗೆ ಮಹತ್ವದ್ದು ಎನ್ನುವ ಮೋದಿಜಿಯವರ ಚಿಂತನೆ, ನಮ್ಮ ಐತಿಹಾಸಿಕ ಹಿನ್ನೆಲೆಯ ಥೀಮ್ ಆಯ್ದುಕೊಂಡು ಕಲಾಕೃತಿ ರಚಿಸಿದ್ದೆ. ಕಲೆಯಲ್ಲಿ ವಿಶೇಷ ಆಸಕ್ತಿಯಿರುವ ಮೋದೀಜಿ ಸಾಕಷ್ಟುಕುತೂಹಲದಿಂದಲೇ ನನ್ನ ಕಲಾಕೃತಿಯಲ್ಲಿ ಅಡಗಿರುವ ಸೂಕ್ಷ್ಮಗಳನ್ನು ವಿಚಾರಿಸಿ ತಿಳಿದುಕೊಂಡು ಸಂತಸಪಟ್ಟರು ಎಂದು ಮಂಜುನಾಥ್ ವಿವರಿಸಿದರು.
ಓಡಿ ಹೋಗಿದ್ದ ಪ್ರತಿಭೆ!
ಬಾಲ್ಯದಲ್ಲೇ ತಾನೋರ್ವ ಕಲಾಕಾರನಾಗಬೇಕೆಂಬ ತುಡಿತವಿದ್ದ ಮೂಡುಬಿದಿರೆಯ ಮಂಜುನಾಥ್ ಕಾಮತ್ ಆಗ ಮೃಣ್ಮಯ ಗಣಪತಿ, ಪೋಸ್ಟರ್ ಬರೆಯುವಲ್ಲಿ ಪಳಗಿದ್ದ ವೇದವ್ಯಾಸ ಭಟ್ಟರಲ್ಲಿಂದ ಆವೆಮಣ್ಣು ತಂದು ಆಕೃತಿ ಮೂಡಿಸುತ್ತಿದ್ದ ಎಳೆಯ ಪ್ರತಿಭೆ. ಕಲೆ ಎಂದರೆ ಕೇಳುವವರಿಲ್ಲದ ಅಂದಿನ ವಾತಾವರಣದಲ್ಲೂ ಕನಸಿನ ಬೆನ್ನೇರಿ ಮೈಸೂರಿನಲ್ಲಿ 5 ವರ್ಷಗಳ ಬಿಎಫ್‌ಸಿ ಪದವಿ ಪೂರೈಸಿ ಹೆತ್ತವರಿಗೂ ಹೇಳದೇ ದೆಹಲಿಗೆ ಹಾರಿದ್ದೇ ಮಂಜು ಬದುಕಿನ ತಿರುವು. ಅಲ್ಲಿ ಮಂಡಿ ಹೌಸ್ ಒಡನಾಟ, ಇಕಾನಮಿಕ್ ಟೈಮ್ಸ್‌ಗೆ ರೇಖಾಚಿತ್ರಕಾರನಾಗಿ ಬದುಕು ಕಟ್ಟಿಕೊಂಡು ಬ್ರಿಟೀಷ್ ಸ್ಕಾಲರ್‌ಶಿಪ್ ಸೆಳೆದು ಲಂಡನ್‌ನಲ್ಲೂ ಒಂದು ವರ್ಷದ ಕಲಿಕೆಯಲ್ಲಿ ಕಲಾಕಾರನೋರ್ವ ಅರಳಿದ್ದ.
ಮಂಜು ಮಾರ್ಡನ್ ಆರ್ಚ್‌ನಲ್ಲಿಂದು ಹೆಸರಾಂತ ಕಲಾವಿದ. ದೆಹಲಿಯ ಎಸ್‌ಸ್ಪೇಸ್, ಮುಂಬೈನ ಸಾಕ್ಷಿ ಗ್ಯಾಲರಿಗಳ ಮೂಲಕ ಅವರ ಕಲಾಕೃತಿಗಳು ಜಗದಗಲ ಹರಿದಾಡುತ್ತಿವೆ. ಚಿತ್ರಕಾರ, ಕಲಾವಿದರು ಬದುಕು ಕಟ್ಟಿಕೊಳ್ಳುವುದು ಕನಸಿನ ಮಾತು ಎಂಬ ಆ ಪರಿಸ್ಥಿತಿಯಲ್ಲೂ ಬಾಳ ಸಂಗಾತಿಯಾದ ಸೂರ್ಯಪ್ರದ, ಹೆಣ್ಣು ಕೊಟ್ಟಮಾವ ಮೂಡುಬಿದಿರೆಯ ಹಿರಿಯ ಪತ್ರಿಕಾ ವಿತರಕ ಸಹಕಾರಿ ಧುರೀಣ ದಯಾನಂದ ಪೈ ಅವರ ಪ್ರೋತ್ಸಾಹವನ್ನೂ ಮರೆಯಲಾಗದು ಅಂತಾರೆ ಮಂಜುನಾಥ್.
ಮೂಲತಃ ಬಂಟ್ವಾಳದವರಾದ ಪುಂಡಲೀಕ ಕಾಮತ್- ಪ್ರಫುಲ್ಲಾ ದಂಪತಿಯ ಓರ್ವ ಪುತ್ರಿ, ಪುತ್ರನ ಪೈಕಿ ಮಂಜು ಸಾಗಿ ಬಂದ ಸಾಧನೆ ವಿಶೇಷ. ಬಾಲ್ಯದಲ್ಲಿ ಕಲಿತ ಮೂಡುಬಿದಿರೆಯ ಡಿಜೆ ಶಾಲೆ, ಮಹಾವೀರ ಕಾಲೇಜು,ರೋಶನ್ ಲೈಬ್ರರಿಯ ಅಬ್ದುಲ್ ಸಲಾಂರಂತಹ ಹಿತೈಶಿಗಳ ಮಾರ್ಗದರ್ಶನ, ಮಂಗಳೂರಿನ ಕೆನರಾ ಹೈಸ್ಕೂಲ್‌ನ ಆ ದಿನಗಳು ಎಲ್ಲವೂ ಬದುಕಿನ ವಿಶೇಷ ಕ್ಷಣಗಳು ಎನ್ನುತ್ತಾರೆ ಅವರು.
9 ಲಕ್ಷ ಟ್ವೀಟ್, 11 ಲಕ್ಷ ಫೋಟೋ ಪೋಸ್ಟ್, ದಾಖಲೆ ಬರೆದ ಮನ್ ಕಿ ಬಾತ್ 100ನೇ ಕಂತು!
ಮೇ 22ರ ಸೋಮವಾರ ಈ ದಿನ 52ರ ಜನ್ಮದಿನ ಸಂಭ್ರಮದಲ್ಲಿರುವ ಮಂಜುನಾಥ್ ಹುಟ್ಟೂರಿನ ಭಾಗದಲ್ಲಿ ಕಲೆ, ಸಾಹಿತ್ಯ, ಆಡಳಿತ ಸೇವೆ, ಸಂಸ್ಕೃತಿ ಹೀಗೆ ಯುವ ಪ್ರತಿಭೆಗಳಿಗೆ ವೇದಿಕೆಯಾಗಿ ಆರ್ಟಿಸ್ಟ್$್ಸ ರೆಸಿಡೆನ್ಸಿ ಮಾದರಿಯಲ್ಲಿ ಸ್ಫೂರ್ತಿ ಕೇಂದ್ರವೊಂದನ್ನು ಕಟ್ಟಬೇಕೆಂಬ ಚಿಂತನೆಯನ್ನೂ ಹೊಂದಿದ್ದಾರೆ.