ಇಂಥ ಕೆಟ್ಟ ಪರಿಸ್ಥಿತಿಯಲ್ಲಿಯೂ 2 ದಿನದಲ್ಲಿ ಪರಿಹಾರ ಘೋಷಣೆ|ಆನ್‌ಲೈನ್ ಮೂಲಕ ರೈತರು ಮಾರಾಟ ಮಾಡಿಕೊಳ್ಳಬೇಕು| ರಾಜ್ಯ ಕೊರೋನಾ ಅಟ್ಟಹಾಸದಿಂದ ತೀವ್ರ ಸಂಕಷ್ಟದಲ್ಲಿದೆ| ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರಿಹಾರ ಕೋರಿದ ಎರಡೇ ದಿನಗಳಲ್ಲಿ ಪರಿಹಾರಕ್ಕೆ ಆದೇಶ ಮಾಡಿದ್ದಾರೆ|
ಕೊಪ್ಪಳ(ಏ.19): ಡೋಂಗಿ ರಾಜಕಾರಣ ಎಂದರೆ ಏನು? ಹಾಗೆಂದರೆ ನನಗೆ ಏನು ಅಂತಾ ಗೊತ್ತಿಲ್ಲದಿರುವಾಗ ನಾನು ಅದನ್ನು ಮಾಡಲು ಹೇಗೆ ಸಾಧ್ಯ? ಅದು ಪ್ರತಿಪಕ್ಷದವರಿಗೆ ಗೊತ್ತಿರಬೇಕು. ಇದು, ಕೃಷಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರ ತಿರುಗೇಟು.
ಬಿಜೆಪಿ ನಾಯಕರು ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ ಎನ್ನುವ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪತ್ರಿಕಾಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅವರು ಇಂಥ ಸ್ಥಿತಿಯಲ್ಲಿಯೂ ರಾಜಕೀಯ ಮಾತುಗಳನ್ನಾಡುತ್ತಾರೆ ಎಂದರೆ ಏನರ್ಥ? ಎಂದರು.
'ಕಾಂಗ್ರೆಸ್‌ನವರು ಡೋಂಗಿ ರಾಜಕಾರಣಿಗಳು'
ಬತ್ತ ಬೆಳೆಗೆ ನೀಡಿರುವ ಪರಿಹಾರ ಕಡಿಮೆಯಾಗಿದೆ, ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಹೆಕ್ಟೇರ್‌ಗೆ 25 ಸಾವಿರ ನೀಡಲಾಗಿದೆ. ಈಗ ಕೇವಲ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 13,500 ನೀಡುತ್ತಿದ್ದಾರೆ. ಇದ್ಯಾವ ನ್ಯಾಯ ಎಂದು ಕಾಂಗ್ರೆಸ್‌ನವರು ಪ್ರಶ್ನೆ ಮಾಡಿದ್ದಾರೆ ಎನ್ನುವುದಕ್ಕೆ ಉತ್ತರಿಸಿದ ಬಿ.ಸಿ. ಪಾಟೀಲ ಅವರು, ಅಂದಿನ ಸ್ಥಿತಿಗೂ ಇಂದಿಗೂ ಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಈಗ ರಾಜ್ಯ ಕೊರೋನಾ ಅಟ್ಟಹಾಸದಿಂದ ತೀವ್ರ ಸಂಕಷ್ಟದಲ್ಲಿದೆ. ಆದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪರಿಹಾರ ಕೋರಿದ ಎರಡೇ ದಿನಗಳಲ್ಲಿ ಪರಿಹಾರಕ್ಕೆ ಆದೇಶ ಮಾಡಿದರು. ಇದನ್ನಾದರೂ ಅರ್ಥ ಮಾಡಿಕೊಳ್ಳದೆ ಕಾಂಗ್ರೆಸ್‌ನವರು ಹಾಗೆ ಮಾತನಾಡಿದರೆ ಏನು ಮಾಡೋದು ಎಂದು ಪ್ರಶ್ನೆ ಮಾಡಿದರು.
ಆನ್‌ಲೈನ್‌ನಲ್ಲಿ ಮಾರಿಕೊಳ್ಳಲಿ
ರೈತರು ಕಟಾವಿಗೆ ಬಂದ ಬೆಳೆಯನ್ನು ಹರಗುವುದು ತಪ್ಪಾಗುತ್ತದೆ. ಹಾಗೆ ಮಾಡುವುದು ಸರಿಯಲ್ಲ. ಅವರು ಆನ್‌ಲೈನ್ ಮಾರುಕಟ್ಟೆಯ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಿಕೊಳ್ಳಬಹುದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಲ್ಲದನ್ನೂ ಸರ್ಕಾರವೇ ಮಾಡುವುದು ಎಂದರೆ ಆಗುವುದಿಲ್ಲ. ಆದ್ದರಿಂದ ಈಗಾಗಲೇ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮತ್ತು ಸಾಗಾಟಕ್ಕೆ ಯಾವುದೇ ಅಡೆತಡೆ ಇಲ್ಲದಂತೆ ಮಾಡಿದ್ದೇವೆ. ಇದಲ್ಲದೆ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಸರ್ಕಾರ ಅನೇಕ ನಿಯಮಗಳನ್ನು ಜಾರಿ ಮಾಡಿದೆ. ರೈತರು ಸಹ ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ನಾನಾ ರೀತಿಯ ಹೊಸತನ ರೂಢಿಸಿಕೊಳ್ಳಬೇಕು. ಯಾರೋ ಒಬ್ಬ ರೈತರು ಕಲ್ಲಂಗಡಿ ಬೆಳೆಯನ್ನು ಆನ್‌ಲೈನ್‌ನಲ್ಲಿಯೇ ಮಾರಾಟ ಮಾಡಿ, ಅತ್ಯಧಿಕ ಲಾಭ ಮಾಡಿಕೊಂಡಿದ್ದನ್ನು ಕೇಳಿದ್ದೇನೆ. ಆದ್ದರಿಂದ ರೈತರು ತಮ್ಮ ಉತ್ಪನ್ನಗಳನ್ನು ಹರಗಿ ಹಾಳು ಮಾಡಿಕೊಳ್ಳುವುದಕ್ಕಿಂತ ನಾನಾ ರೀತಿಯಾಗಿ ಮಾರಾಟ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೀಗತನಕ್ಕೆ ಬಂದಿರಲಿಲ್ಲ...
ರೈತರು ಬೆಳೆ ಹಾನಿಯಾದ ಸ್ಥಳಕ್ಕೆ ನಾನೇ ಬಂದಿರುವಾಗ ಡಿಸಿ ಬಂದಿರಲಿಲ್ಲ. ಹೀಗಾಗಿ ಕೇಳಿದ್ದೇನೆ, ಇದರಲ್ಲಿ ತಪ್ಪೇನು? ಅಷ್ಟಕ್ಕೂ ನಾನು ಕೊಪ್ಪಳಕ್ಕೆ ಬೀಗತನ ಮಾಡಲು ಬಂದಿರಲಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಕಾರವಾಗಿ ಪ್ರಶ್ನೆ ಮಾಡಿದ್ದಾರೆ.
ಕೊಪ್ಪಳ ಡಿಸಿ ವಿರುದ್ಧ ಹರಿಹಾಯ್ದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ ಎನ್ನುವ ಪ್ರಶ್ನೆಗೆ ಕಾರವಾಗಿಯೇ ಉತ್ತರಿಸಿದರು. ಈಗಾಗಲೇ ಈ ಕುರಿತು ಅವರೊಂದಿಗೆ ಮಾತನಾಡಿದ್ದೇನೆ, ಅದು ಮುಗಿದು ಹೋಗಿದೆ. ಈಗ ಮತ್ಯಾಕೆ ಆ ವಿಷಯ ಎಂದರು. ಅಂದು ಅವರು ರೈತರ ಬೆಳೆ ಹಾನಿ ಸ್ಥಳಕ್ಕೆ ಆಗಮಿಸದೆ ಇರುವುದನ್ನು ಕೇಳಿದ್ದೇನೆ ಹೊರತು ನಾನೇನು ವೈಯಕ್ತಿಕ ಕೆಲಸಕ್ಕೆ ಅಲ್ಲವಲ್ಲ ಎಂದರು.
ಶಾಸಕ ಹಾಲಪ್ಪ ಆಚಾರ, ಜಿಪಂ ಅಧ್ಯಕ್ಷ ವಿಶ್ವನಾಥ ರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಮೈನಳ್ಳಿ, ಅಮರೇಶ ಕರಡಿ ಇದ್ದರು.