ಗೌರಿಗದ್ದೆ ಪೀಠದ ಅವಧೂತರಾದ ವಿನಯ್ ಗುರೂಜಿ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಶ್ರೀಗಳಪಾದಪೂಜೆ ಮಾಡಿದ್ದು, ಇದೇ ವೇಳೆಕಾಲಜ್ಞಾನ ಒಂದು ನುಡಿದಿದ್ದಾರೆ.
ಬಾಳೆಹೊನ್ನೂರು (ಆ.14) : ಇಲ್ಲಿನ ರಂಭಾಪುರಿ ಪೀಠಕ್ಕೆ ಕೊಪ್ಪ ತಾಲೂಕಿನ ಹರಿಹರಪುರದ ಗೌರಿಗದ್ದೆ ದತ್ತಾಶ್ರಮ ಸ್ವರ್ಣಪೀಠಿಕಾಪುರದ ವಿನಯ್ ಗುರೂಜಿ ಗುರುವಾರ ಭೇಟಿ ನೀಡಿ ಕ್ಷೇತ್ರ ದರ್ಶನ ಮಾಡಿ, ರಂಭಾಪುರಿ ಜಗದ್ಗುರುಗಳನ್ನು ಭೇಟಿ ಮಾಡಿದರು. ಇದೇ ಮೊದಲ ಬಾರಿಗೆ ರಂಭಾಪುರಿ ಶ್ರೀಗಳು ಹಾಗೂ ವಿನಯ್ ಗುರೂಜಿ ಭೇಟಿಯಾಗಿದ್ದು, ಈ ಸಂದರ್ಭ ಹಲವು ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾಯಿತು.
ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ವಿನಯ್ ಗುರೂಜಿ ಪೀಠದ ಕ್ಷೇತ್ರನಾಥ ವೀರಭದ್ರಸ್ವಾಮಿ ದೇವಾಲಯ, ರೇಣುಕಾಚಾರ್ಯ ಮಂದಿರ, ಶಕ್ತಿಮಾತೆ ಚೌಡೇಶ್ವರಿ ದೇಗುಲ, ಭೂಗರ್ಭ ಸಂಜಾತರಾದ ರುದ್ರಮುನಿ ಜಗದ್ಗುರುಗಳ ಶಿವಯೋಗ ಮಂದಿರ ಹಾಗೂ ಪೀಠದ ಲಿಂಗೈಕ್ಯ ಜಗದ್ಗುರುಗಳ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಿನಯ್ ಗುರೂಜಿಯಿಂದ ಮರಳು ರವಾನೆ
ಬಳಿಕ ರಂಭಾಪುರಿ ಜಗದ್ಗುರುಗಳನ್ನು ಭೇಟಿ ಮಾಡಿದ ವಿನಯ್ ಗುರೂಜಿ ರಂಭಾಪುರಿ ಶ್ರೀಗಳಿಗೆ ಫಲ ತಾಂಬೂಲ ಪುಷ್ಪ, ಕೇಸರಿ ವಸ್ತ್ರ ಸಮರ್ಪಣೆ ಮಾಡಿ ರಂಭಾಪುರಿ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು. ಈ ವೇಳೆ ಜಗದ್ಗುರುಗಳಿಗೆ ಗುರೂಜಿ ಬೆಳ್ಳಿ ನಾಣ್ಯ ಅರ್ಪಿಸಿ ವಿವಿಧ ಪುಷ್ಪಗಳಿಂದ ಅರ್ಚನೆ ಮಾಡಿದರು.
ಆ.17ರಂದು ಪೀಠದಲ್ಲಿ ನಡೆಯಲಿರುವ 51 ಅಡಿ ಎತ್ತರದ ರೇಣುಕಾಚಾರ್ಯರ ಶಿಲಾಮೂರ್ತಿ ಸ್ಥಾಪನೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅಡಿಗಲ್ಲನ್ನಾಗಿ ಇಡಲು ವಿನಯ್ ಗುರೂಜಿ ಅವರು ರಂಭಾಪುರಿ ಶ್ರೀಗಳಿಗೆ ಕಾಶಿಯಿಂದ ತಂದಿದ್ದ ಶ್ರೀಚಕ್ರದ ಯಂತ್ರ ಹಾಗೂ ಶ್ರೀಶೈಲದಲ್ಲಿ ಅರ್ಚನೆ ಮಾಡಿದ ರುದ್ರಾಕ್ಷಿ ಕಾಯಿಗಳನ್ನು ನೀಡಿದರು. ಇದರೊಂದಿಗೆ ಕಾಶಿಯಿಂದ ತಂದಿದ್ದ ಎರಡು ಸ್ಪಟಿಕ ಲಿಂಗವನ್ನು ಜಗದ್ಗುರುಗಳಿಗೆ ನೀಡಿ ಒಂದು ಸ್ಪಟಿಕ ಲಿಂಗವನ್ನು ಪೀಠದಲ್ಲಿ ಇರಿಸಿಕೊಳ್ಳಲು ಹಾಗೂ ಇನ್ನೊಂದನ್ನು ಆಶೀರ್ವದಿಸಿ ಗೌರಿಗದ್ದೆ ಆಶ್ರಮಕ್ಕೆ ಹಿಂಪಡೆದರು.
ಈ ವೇಳೆ ರಂಭಾಪುರಿ ಶ್ರೀಗಳು, ವಿನಯ್ ಗುರೂಜಿ ಅವರಿಗೆ ವೀರಗಂಗಾಧರ ಜಗದ್ಗುರುಗಳ ಭಾವಚಿತ್ರ, ರಂಭಾಪುರಿ ಪೀಠದ ಇತಿಹಾಸವುಳ್ಳ ವಿವಿಧ ಗ್ರಂಥ ಹಾಗೂ ಶಾಲು, ಫಲತಾಂಬೂಲ ನೀಡಿ ಗೌರವಿಸಿದರು.
ಕುತೂಹಲ ಮೂಡಿಸಿದ ಸಿಎಂ-ವಿನಯ್ ಗುರೂಜಿ ಭೇಟಿ..
ಮಳಲೀಮಠದ ನಾಗಭೂಷಣ ಶಿವಾಚಾರ್ಯರು, ಗೌರಿಗದ್ದೆ ದತ್ತಾಶ್ರಮದ ಟ್ರಸ್ಟಿಜಯಪುರದ ಚಂದ್ರಣ್ಣ, ಕೋಣಂದೂರಿನ ಉದ್ಯಮಿ ಪ್ರಕಾಶ್, ಬಿಜೆಪಿ ರಾಜ್ಯಪರಿಷತ್ ಸದಸ್ಯ ಟಿ.ಎಂ.ಉಮೇಶ್ ಕಲ್ಮಕ್ಕಿ, ಎನ್.ಆರ್.ಪುರ ತಾಪಂ ಪ್ರಭಾರಿ ಅಧ್ಯಕ್ಷ ಮಂಜು ಹೊಳೆಬಾಗಿಲು, ಗ್ರಾಪಂ ಮಾಜಿ ಸದಸ್ಯ ಬಿ.ಕೆ.ಮಧುಸೂದನ್ ಮತ್ತಿತರರು ಹಾಜರಿದ್ದರು.
ವಿನಯ್ ಹೃದಯದ ಭಾವನೆ ಹಂಚಿಕೊಂಡಿದ್ದಾರೆ: ರಂಭಾಪುರಿ ಶ್ರೀ
ಉಭಯರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಂಭಾಪುರಿ ಶ್ರೀಗಳು, ಪಂಚಪೀಠಗಳಲ್ಲಿ ಒಂದಾಗಿರುವ ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ವಿನಯ್ ಗುರೂಜಿ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿ ಕ್ಷೇತ್ರದರ್ಶನ ಮಾಡಿ, ಭಕ್ತಿ, ಶ್ರದ್ಧೆಯಿಂದ ಜಗದ್ಗುರುಗಳನ್ನು ಸಂದರ್ಶನ ಮಾಡಿ ತಮ್ಮ ಹೃದಯದ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅವರ ಭಕ್ತಿ, ಭಾವನೆಗಳು ಮೆಚ್ಚುಗೆಗೆ ಅರ್ಹವಾಗಿವೆ. ಅವರ ಮನೋಭಾವನೆಗಳು, ಸನಾತನ ಗುರುಪೀಠಗಳು ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸದ್ಭಾವನೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಏನು ಕೆಲಸ ಮಾಡುತ್ತಿವೆಯೋ ಅವೆಲ್ಲವೂ ಅವರ ಮನಸ್ಸಿಗೆ ಹಿಡಿಸಿವೆ. ಈ ನಿಟ್ಟಿನಲ್ಲಿ ವಿನಯ್ ಅವರು ವಿಶೇಷ ಕೊಡುಗೆಗಳನ್ನು ಶ್ರೀಪೀಠಕ್ಕೆ ಅರ್ಪಣೆ ಮಾಡುವ ಜೊತೆಗೆ ಅವರನ್ನೇ ಅವರು ಅರ್ಪಿಸಿಕೊಂಡಿದ್ದಾರೆ.
ಇದರೊಂದಿಗೆ ಜಗದ್ಗುರು ರೇಣುಕಾಚಾರ್ಯರ ಮಹಿಮೆಯನ್ನು ಅರ್ಥಪೂರ್ಣವಾಗಿ ತಿಳಿದುಕೊಂಡು ಸಮಾಜದ ಎಲ್ಲ ವರ್ಗದ ಜನರಿಗೆ ಮುಟ್ಟಿಸುವಂತಹ ಕೆಲಸ ಆಗಬೇಕು ಎನ್ನುವಂತಹ ಅವರ ಅನಿಸಿಕೆ ಎಲ್ಲರ ಮನಸ್ಸನ್ನು ಮುಟ್ಟಿದೆ. ಯಾವುದೇ ಜಾತಿ, ಮತ, ಪಂಥಗಳಿಗಿಂತ ಮಿಗಿಲಾಗಿ ಮಾನವೀಯತೆ ಏನಿದೆ ಅದು ದೊಡ್ಡದು. ಧರ್ಮ ಮಾರ್ಗಗಳಿಂದ ಎಲ್ಲರೂ ನಡೆದಿದ್ದಾರೆ. ಪ್ರತಿಯೊಬ್ಬರೂ ಉತ್ತಮವಾಗಿ ಇರಲು, ಸಾಮರಸ್ಯ, ಸೌಹಾರ್ಧತೆ ಬೆಳಸಲು ಸಾಧ್ಯವಿದೆ.
ವಿನಯ್ ಗುರೂಜಿ, ರೇಣುಕಾಚಾರ್ಯರ ವಿಶ್ವಬಂಧುತ್ವದ ಚಿಂತನೆಗಳನ್ನು ಮನೆ ಮನೆಗೆ ಮುಟ್ಟಿಸುವಂತಹ ಸಂಕಲ್ಪ ತೊಟ್ಟು ಕಾರ್ಯ ಮಾಡಿದಲ್ಲಿ ಅವರ ಆದರ್ಶಗಳು ಎಲ್ಲ ಮನೆ, ಮನಗಳಲ್ಲಿ ಸ್ಥಿರವಾಗಿ ನಿಂತು ಆದರ್ಶವಾದವನ್ನು ಕೊಡುತ್ತವೆ. ಮುಂದಿನ ದಿನಗಳಲ್ಲಿ ಶ್ರೀಪೀಠಕ್ಕೂ ಹಾಗೂ ದತ್ತಾಶ್ರಮಕ್ಕೂ ಇದೇ ರೀತಿಯ ಗಾಢವಾದ ಸಂಬಂಧ ಬೆಳೆದುಕೊಂಡುಬರಲಿ ಎಂದು ಆಶಿಸಿದರು.
ಪ್ರಪಂಚ ಪುನಃ ಭಾರತವನ್ನು ಜಗದ್ಗುರು ಎನ್ನಲಿದೆ: ವಿನಯ್ ಗುರೂಜಿ
ದತ್ತಾಶ್ರಮದ ವಿನಯ್ ಗುರೂಜಿ ಮಾತನಾಡಿ, ಕಾಲಜ್ಞಾನದಲ್ಲಿ ಸನಾತನ ಧರ್ಮ ಮತ್ತೆ ಬೆಳಗಲಿದೆ ಎಂದು ಬರೆದಿದ್ದು, ಪ್ರಪಂಚ ಪುನಃ ಭಾರತವನ್ನು ಜಗದ್ಗುರು ಎಂದು ಕರೆಯಲಿದೆ. ಕೊರೋನಾದಿಂದಾಗಿ ಇಡೀ ಜಗತ್ತು ಭಾರತವನ್ನು ಸನಾತನ ಧರ್ಮ ಎಂದು ಒಪ್ಪಿದೆ. ಯಾವ ಆಯುರ್ವೇದವನ್ನು ತುಚ್ಛ ಎಂದು ಕರೆದಿದ್ದರೋ ಅದನ್ನೇ ಇಂದು ಎಲ್ಲರೂ ಅವಲಂಭಿಸಿದ್ದಾರೆ.
ಪ್ರಕೃತಿಯೇ ಕಾಯಿಲೆಯನ್ನು ಸೃಷ್ಟಿಮಾಡುತ್ತದೆ ಹಾಗೂ ಸರಿಪಡಿಸುತ್ತದೆ. ಇದು ಆಯುರ್ವೇದದ ಧರ್ಮವಾಗಿದೆ. ಇಂದು ಇಡೀ ವಿಶ್ವವೇ ಆಯುರ್ವೇದ ಪದ್ಧತಿಯನ್ನು ಒಪ್ಪುತ್ತಿದೆ. ಕೊರೋನಾ ಸಂದರ್ಭದಲ್ಲಿ ಮೂಲಿಕಾ ಕಷಾಯಗಳನ್ನು ಬಳಸುವ ಬಗ್ಗೆ ಭಾರತ ತೋರಿಸಿಕೊಟ್ಟಿದೆ. ಸನಾತನ ಧರ್ಮದಲ್ಲಿ ಕಲ್ಮಷಗಳು ತೊಲಗಿ ಇಂದು ಶುದ್ಧವಾಗುತ್ತಿದ್ದು, ರಾಮ ಪಟ್ಟಾಭಿಷೇಕವು ಇದೇ ತಿಂಗಳಲ್ಲಿ ನಡೆದಿದ್ದು, ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾಪನೆಗೆ ಅಡಿಗಲ್ಲು ಸಮಾರಂಭವು ಇದೇ ತಿಂಗಳಲ್ಲಿ ನಡೆಯುತ್ತಿದೆ. ನಾವೆಲ್ಲರೂ ಶಿವನ ಪುತ್ರರಾಗಿದ್ದು, ಶೈವ ಸಿದ್ಧಾಂತವನ್ನು ಅರಿತರೆ ಬಾಳಲ್ಲಿ ಸುಖವಾಗಿರುತ್ತೇವೆ ಎಂದು ಹೇಳಿದರು.
ಜ್ಞಾನದ ಜೊತೆಗೆ ಧರ್ಮ ಕೂಡಿದರೆ ಧರ್ಮ ಸಂಘರ್ಷ ಎಂದಿಗೂ ಆಗುವುದಿಲ್ಲ. ಅದರ ಅರಿವು ರಾಜಕೀಯದವರಿಗೆ ಆಗಬೇಕಿದೆ. ಧರ್ಮದಿಂದ ಇಂದು ಧರಣಿ ನಡೆಯುತ್ತಿದ್ದು, ಜನ ಪಾಶ್ಚಾತ್ಯ ಸಂಸ್ಕೃತಿಯಿಂದ ಹೊರ ಬರಬೇಕಿದೆ. ಭಾರತದಲ್ಲಿ ಡಿಸೆಂಬರ್‌ವರೆಗೆ ಕೊರೋನಾ ಇರಲಿದ್ದು, ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ. ಇದರ ಫಲ ಗುರುಗಳು, ಸನಾತನ ಪೀಠಗಳು, ಜ್ಯೋತಿರ್ ಲಿಂಗಗಳಲ್ಲಿ ಮಾಡಿದ ಅನುಷ್ಠಾನ, ತ್ರಿಕಾಲ ಬಿಲ್ವಾರ್ಚನೆ, ಹಿಂದಿನವರು ಮಾಡಿದ ಧರ್ಮ, ತ್ಯಾಗ. ಇದು ನಮ್ಮ ದೇಶವನ್ನು ಕಾಯುತ್ತಿದೆ. ಇದಕ್ಕೆ ದೊಡ್ಡ ಸಾಕ್ಷಿಯನ್ನು ಭಾರತ ಈಗಾಗಲೇ ನೀಡಿದೆ. ಅದಕ್ಕಾಗಿ ನಾವೆಲ್ಲ ಧರ್ಮ ಉಳಿಸುವ ಕಾರ್ಯ ಮಾಡಬೇಕಿದೆ.
ಹಿಂದಿನ ಋುಷಿಮುನಿಗಳು ಹೇಳಿದ ಅಗ್ನಿಹೋತ್ರ, ಗೋಸೇವೆ, ಇಷ್ಟಲಿಂಗ ಪೂಜೆ ಮುಂತಾದವು ವಾತಾವರಣವನ್ನು ಶುದ್ಧಿ ಮಾಡುವ ಕಾರ್ಯಗಳಾಗಿವೆ. ರೇಣುಕಾಚಾರ್ಯರ ಬಗ್ಗೆ ಎಲ್ಲರಲ್ಲೂ ಇನ್ನೂ ಮಾಹಿತಿ ಕೊರತೆಯಿದ್ದು, ಅದರ ಮಹತ್ವ ತಿಳಿಸಬೇಕಿದೆ. ಶಿವ ಬಿಟ್ಟು ಪ್ರಪಂಚದಲ್ಲಿ ಏನೂ ಇಲ್ಲ ಎಂದು ಶೈವ ಸಿದ್ಧಾಂತ ಹೇಳಿದೆ. ಆ ಸತ್ಯ ಮನೆಮನೆಗೆ ಮುಟ್ಟಬೇಕಿದೆ.
ದತ್ತಾಶ್ರಮದಲ್ಲಿ ಆರು ತಿಂಗಳ ಹಿಂದೆಯೇ ಕಾಶಿಯಿಂದ ತಂದಿದ್ದ ಸ್ಪಟಿಕ ಲಿಂಗ, ಶ್ರೀಚಕ್ರವನ್ನು ತಂದಿಟ್ಟಿದ್ದು, ಇಂದು ನನಗೆ ಗುರುಗಳ ಪ್ರೇರಣೆಯಾಗಿದ್ದು, ಆ ಬಳಿಕ ಉಭಯ ಪೀಠಗಳು ಅನಿರೀಕ್ಷಿತವಾಗಿ ಭೇಟಿಯಾಗಿದ್ದೇವೆ. ಆದರೆ, ಇದು ಪರಮಾತ್ಮನಿಗೆ ನಿರೀಕ್ಷಿತ. ಶ್ರೀಪೀಠದಲ್ಲಿ ಆ.17ರಂದು ರೇಣುಕಾಚಾರ್ಯರ ಮೂರ್ತಿ ಸ್ಥಾಪನೆಗೆ ಅಡಿಗಲ್ಲು ನಡೆಯುತ್ತಿದ್ದು, ಇದು ಪ್ರಪಂಚಕ್ಕೆ ಬಹಳ ಒಳಿತನ್ನು ಮಾಡಲಿದೆ.