ಕೊರೋನಾ ಕಾಲದಲ್ಲಿ ಕೆಲ್ಸ ಹೋದ್ರೂ ಧೃತಿಗೆಡದ ಸಾಧಕಿ| ಸಚಿವ ಆನಂದ್ ಸಿಂಗ್‌ರಿಂದ ಆಟೋ ಕಾಣಿಕೆ| ದಿನಕ್ಕೆ 300ರಿಂದ 400 ವರೆಗೆ ದುಡಿಯುತ್ತಿರುವ ನಂದಿನಿ| ಆಟೋ ಗ್ಯಾಸ್ ಖರ್ಚು ತೆಗೆದು ಸ್ವಲ್ಪ ಪ್ರಮಾಣದ ಹಣ ಉಳಿತಾಯ| ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾಗಿರುವ ನಂದಿನಿ ಜೀವನದಲ್ಲಿ ಮಾತ್ರ ಫೇಲ್ ಆಗಿಲ್ಲ|
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಮಾ.08): ಕೊರೋನಾ ಕಾಲದಲ್ಲಿ ಕೆಲಸ ಕಳೆದುಕೊಂಡು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳದೇ ಇಲ್ಲೊಬ್ಬ ಸಾಧಕಿ ಮಹಿಳೆ ಆಟೋ ಓಡಿಸುವ ಮೂಲಕ ಬದುಕು ಕಟ್ಟಿಕೊಂಡು, ಸೈ ಎನಿಸಿಕೊಂಡಿದ್ದಾರೆ.
ಹೌದು, ನಗರದ ಚಪ್ಪರದಹಳ್ಳಿ ನಿವಾಸಿ ಕೆ. ನಂದಿನಿ ಅವರು ನಗರದ ಕಂಪನಿಯೊಂದರಲ್ಲಿ ಕಾರು ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಕೊರೋನಾ ಸಂಕಷ್ಟದಲ್ಲಿ ಕೆಲಸ ಕಳೆದುಕೊಂಡರು. ಈಗ ಆಟೋ ಚಲಾಯಿಸಿ ಬದುಕು ಕಟ್ಟಿಕೊಂಡಿದ್ದಾರೆ.
ರೋಚಕ ಬದುಕು:
ಬಡತನದಲ್ಲೇ ಹುಟ್ಟಿ ಬೆಳೆದಿರುವ ಕೆ. ನಂದಿನಿ ಅವರ ಮೂಲ ಊರು ಕೊಪ್ಪಳ. ನಗರದ ಚಪ್ಪರದಹಳ್ಳಿ ನಿವಾಸಿ ಕೆ. ರಾಜು ಅವರನ್ನು ಮದುವೆಯಾಗಿರುವ ನಂದಿನಿ ಅವರಿಗೆ ಧನುಷ್ ಎಂಬ 8 ವರ್ಷದ ಬುದ್ಧಿಮಾಂದ್ಯ ಪುತ್ರನಿದ್ದು, ಅವನು ಬೆಳವಣಿಗೆಯಾದಂತೆಲ್ಲ ಸರಿಯಾಗುತ್ತಾನೆ ಎಂದು ವೈದ್ಯರು ಹೇಳಿದ್ದಾರೆ ಎಂದು ನಂದಿನಿ ಆಶಾಭಾವದೊಂದಿಗೆ ನುಡಿಯುತ್ತಾರೆ.
2006ರಲ್ಲೇ ಕಾರು ಡ್ರೈವಿಂಗ್ ಕಲಿತಿದ್ದ ನಂದಿನಿ ಅವರು ಬಳಿಕ ನಗರದ ಶ್ರೀಮಂತ ಕುಟುಂಬಗಳ ಕಾರುಗಳನ್ನು ಓಡಿಸುತ್ತಿದ್ದರು. ಬಳಿಕ ಅವರು ಕಂಪನಿಯೊಂದರಲ್ಲಿ ಡ್ರೈವಿಂಗ್‌ಗೆ ಸೇರಿಕೊಂಡಿದ್ದರು. ಕೊರೋನಾ ಸಂಕಷ್ಟ ಕಾಲದಲ್ಲೇ ಕೆಲಸ ಹೋಗಿದ್ದರಿಂದ ಅನಿವಾರ್ಯವಾಗಿ ಆಟೋ ಚಾಲನೆಯತ್ತ ಮುಖ ಮಾಡಿದ್ದಾರೆ. ನಂದಿನಿ ಅವರ ಪತಿ ಕೆ. ರಾಜು ಗದ್ದೆಗಳಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಾರೆ.
ಸತತ ಮೂರು ವರ್ಷದಿಂದ ಮಹಿಳೆಯರ ದರ್ಬಾರ್
ಬಾಡಿಗೆ ಮನೆ ವಾಸ:
ನಗರದಲ್ಲಿ ಸ್ವಂತಕ್ಕೊಂದು ತುಂಡು ಜಮೀನು ಕೂಡ ನಂದಿನಿ ಅವರ ಕುಟುಂಬಕ್ಕಿಲ್ಲ. ಸ್ವಂತ ಗದ್ದೆಯೂ ಇಲ್ಲ. ದಂಪತಿ ಪುಟ್ಟದೊಂದು ಬಾಡಿಗೆ ಮನೆಯಲ್ಲೇ ವಾಸವಾಗಿದ್ದಾರೆ. ಮಗನ ಪಾಲನೆಯೊಂದಿಗೆ ಆಟೋ ಓಡಿಸುತ್ತಾ ಜೀವನ ಸಾಗಿಸುತ್ತಿದ್ದಾರೆ.
ಧೈರ್ಯವೇ ಮೇಲು:
ಲಾಕ್‌ಡೌನ್‌ನಲ್ಲಿ ಕೆಲಸ ಇಲ್ಲದೇ ಸಂಕಷ್ಟ ಅನುಭವಿಸಿದರು. ಬಳಿಕ ಆಟೋ ಓಡಿಸುವುದನ್ನು ಕಲಿತು, 2020ರ ಜೂನ್ 15ರಿಂದ ನಂದಿನಿ ಅವರು ಆಟೋ ಚಲಾಯಿಸುತ್ತಿದ್ದಾರೆ. ನಗರದಿಂದ ಕೊಪ್ಪಳ, ಗಂಗಾವತಿ, ಬಳ್ಳಾರಿ, ಹಂಪಿಯ ವರೆಗೂ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಾರೆ. ದೂರದ ಬಾಡಿಗೆ ದೊರೆಯದಿದ್ದರೆ, ನಗರದಲ್ಲೇ ನಿತ್ಯ ಆಟೋ ಚಲಾಯಿಸುತ್ತಾರೆ. ಧೈರ್ಯವೇ ಎಲ್ಲದಕ್ಕೂ ಪರಿಹಾರ ಎನ್ನುತ್ತಾರೆ ನಂದಿನಿ.
ಸ್ವಲ್ಪ ಉಳಿತಾಯ:
ನಂದಿನಿ ಅವರು ದಿನಕ್ಕೆ 300ರಿಂದ 400 ವರೆಗೆ ದುಡಿಯುತ್ತಿದ್ದು, ಆಟೋ ಗ್ಯಾಸ್ ಖರ್ಚು ತೆಗೆದು ಸ್ವಲ್ಪ ಪ್ರಮಾಣದ ಹಣ ಉಳಿಯುತ್ತದೆ. ಜೀವನದಲ್ಲಿ ಛಲ ಬಿಡದೇ ಮುನ್ನಡೆಯಬೇಕು ಎಂದು ಹೇಳುವ ನಂದಿನಿ ಅವರು, ಸಂಕಷ್ಟ ದಾಗ ಹಿಂಜರಿಯಬಾರದು ಎಂದೂ ಹೇಳುತ್ತಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾಗಿರುವ ನಂದಿನಿ ಅವರು ಜೀವನದಲ್ಲಿ ಮಾತ್ರ ಫೇಲ್ ಆಗಿಲ್ಲ. ಸಂಕಷ್ಟವನ್ನು ಎದುರಿಸಿ ಅದನ್ನು ದಾಟಿ ಹೋಗುವ ಛಲಗಾತಿಯಾಗಿ ಹೊರ ಹೊಮ್ಮಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನ; ಮಹಿಳೆಯರಿಗಾಗಿ ಡಿಜಿಟಲ್ ವೇದಿಕೆ ಹರ್ ಸರ್ಕಲ್ ಆರಂಭ!
ಆಟೋ ಕೊಡಿಸಿದ ಆನಂದ್ ಸಿಂಗ್:
ನಂದಿನಿ ಅವರು ಬದುಕಿನಲ್ಲಿ ಮುನ್ನಡೆಯುವ ಛಲ ಹೊಂದಿರುವುದನ್ನು ಮೆಚ್ಚಿದ ಸಚಿವ ಆನಂದ್ ಸಿಂಗ್ ಅವರು 2.50 ಲಕ್ಷ ಮೊತ್ತದ ಆಟೋ ಕೊಡಿಸಿದ್ದಾರೆ. ಇದಕ್ಕೆ ಕೃತಜ್ಞತೆಯಾಗಿ ಆನಂದಲಕ್ಷ್ಮಿ ಕೊಡುಗೆ ಎಂದು ತಮ್ಮ ಆಟೋ ಮೇಲೆ ನಂದಿನಿ ಅವರು ಬರೆಸಿಕೊಂಡಿದ್ದಾರೆ.
ಕೊರೋನಾ ಹಿನ್ನೆಲೆ ಕೆಲಸ ಕಳೆದುಕೊಂಡೆ. ಎಲ್ಲೂ ಕೆಲ್ಸ ಇಲ್ಲದ್ದರಿಂದ ಆಟೋ ಚಲಾಯಿಸುತ್ತಿರುವೆ. ಸಚಿವ ಆನಂದ್ ಸಿಂಗ್ ಅವರು ಹೊಸ ಆಟೋ ಕೊಡಿಸಿದ್ದಾರೆ. ಅವರಿಂದ ಬದುಕಿನ ಬಂಡಿ ಸಾಗುತ್ತಿದೆ ಎಂದು ಆಟೋ ಚಾಲಕಿಕೆ. ನಂದಿನಿ ತಿಳಿಸಿದ್ದಾರೆ.