
ಬೆಂಗಳೂರು: ಶ್ರೀರಾಮನು ರಾಜ ದಶರಥನ ಮಗನೇ ಅಲ್ಲ. ಎಂದು ಹೇಳಿಕೆ ನೀಡಿರುವ ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ದೂರುದಾಖಲಾಗಿದೆ.
ಇದೀಗ ಕೆಎಸ್ ಭಗವಾನ್ ವಿರುದ್ಧ ಸಿ. ಕೆ ಅಚ್ಚುಕಟ್ಟು ಠಾಣೆಗೆ ದೂರು ದಾಖಲಾಗಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿಸಿದ) ಜೂ.9ರಂದು ಹರಿಹರದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಹಬ್ಬ-2026 ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೈಸೂರಿನ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಶ್ರೀರಾಮನು ದಶರಥನ ಮಗನಲ್ಲ. ತಂದೆ ದಶರಥನಿಗೆ ಶ್ರೀರಾಮಚಂದ್ರ ಹುಟ್ಟಿದವನಲ್ಲ. ಪುತ್ರಕಾಮೆಷ್ಟಿಯಾಗದಲ್ಲಿ ರಾಣಿಯರು ಪುರೋಹಿತರ ಜೊತೆ ಮಲಗಬೇಕಿತ್ತು. ಶ್ರಿರಾಮನು ಪುರೋಹಿತರಿಗೆ ಹುಟ್ಟಿದವನು ಎಂದಿದ್ದಾರೆ. ಹಿಂದೂ ದೇವರಿಗೆ ಪೂಜೆ ಮಾಡಬಾರದು ಎಂದು ಹೇಳಿಕೆ ನೀಡಿದ್ದಾರೆ.ಹಿಂದೂ ಧರ್ಮಗ್ರಂಥಗಳ ಕುರಿತು ಅವಹೇಳನಕಾರಿ, ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಈ ಹೇಳಿಕೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಈ ಹಿಂದೆಯೂ ಭಗವಾನ್, ಶ್ರೀರಾಮ, ಶ್ರೀಕೃಷ್ಣ, ಭಗವದ್ಗೀತೆ ಹಾಗೂ ಹಿಂದೂ ಧರ್ಮಗ್ರಂಥಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ಮತ್ತದೆ ರೀತಿಯ ಹೇಳಿಕೆಗಳನ್ನು ನೀಡಿದ್ದು, ಧಾರ್ಮಿಕ ಭಾವನೆಗೆ ಉದ್ದೇಶಪೂರ್ವಾಗಿ ಧಕ್ಕೆ ತರಲು ಮಾಡಿರುವ ಪ್ರಯತ್ನವಿದು. ಆದ್ದರಿಂದ ಅವರ ವಿರುದ್ಧ ಕಾನೂನು ವಿಧಿಗಳ ಅಡಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಎಚ್ ಎಂ ಸುರೇಶ್ ಎನ್ನುವವರು ದೂರು ನೀಡಿದ್ದಾರೆ.
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್, ಕರ್ನಾಟಕ ರಾಜ್ಯ ಕ್ಷತ್ರಿಯ ಯುವ ಬ್ರಿಗೇಡ್ ರಾಜ್ಯ ಕಾರ್ಯದರ್ಶಿ ಸಂತೋಷ ಪೂಜಾರ ಸೇರಿದಂತೆ ಹಲವರು ಖಂಡಿಸಿದ್ದಾರೆ. ಇನ್ನು ಸಾಹಿತಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಶಿವಸೇನಾ ಪಕ್ಷದ ಪದಾಧಿಕಾರಿಗಳು ಶುಕ್ರವಾರ ಧಾರವಾಡದ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಒಂದು ವಾರದಲ್ಲಿ ಬಂಧಿಸದೆ ಹೋದಲ್ಲಿ ಮೈಸೂರಿನ ಅವರ ಮನೆ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.