ಹಣದ ಸಮೇತ ಎಟಿಎಮ ಯಂತ್ರವನ್ನೇ ಕಳ್ಳರು ಹೊತ್ತೊಯ್ದ ಘಟನೆ ನಡೆದಿದೆ.
ಇಂಡಿಯನ್ ಓವರ್‌ಸಿಸ್ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ಖದೀಮರು ಈ ಕೈಚಳಕ ತೋರಿದ್ದಾರೆ.
ತುಮಕೂರು (ಜ.19): ಈವರೆಗೆ ಎಟಿಎಂ ಹಣಕ್ಕೆ ಕನ್ನ ಹಾಕುತ್ತಿದ್ದ ಖದೀಮರು ಇದೀಗ ಎಟಿಎಂ ಯಂತ್ರಗಳನ್ನೇ ಹೊತ್ತೊಯ್ಯುವ ಕೆಲಸಕ್ಕೆ ಕೈಹಾಕಿದ್ದಾರೆ. ತುಮಕೂರಿನ ಹೆಗ್ಗೆರೆಯಲ್ಲಿ ಇಂಥದ್ದೊಂದು ಕೃತ್ಯ ಬೆಳಕಿಗೆ ಬಂದಿದೆ.
ಹೆಗ್ಗೆರೆಯಲ್ಲಿರುವ ಇಂಡಿಯನ್ ಓವರ್‌ಸಿಸ್ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ಖದೀಮರು ಈ ಕೈಚಳಕ ತೋರಿದ್ದಾರೆ. ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದ ಖದೀಮರು ಮಧ್ಯರಾತ್ರಿ ವಾಹನದೊಂದಿಗೆ ಬಂದು ಚಾಣಾಕ್ಷ್ಯತನದಿಂದ ಯಾರಿಗೂ ಸಣ್ಣ ಸುಳಿವೂ ಸಿಗದಂತೆ ಎಟಿಎಂ ಯಂತ್ರ ಎತ್ತೊಯ್ದಿದ್ದಾರೆ. ಈ ಎಟಿಯಂ ಯಂತ್ರದಲ್ಲಿ 83 ಸಾವಿರ ರುಪಾಯಿ ನಗದು ಇತ್ತೆಂದು ಹೇಳಲಾಗಿದೆ.
ಎಟಿಎಂಗೆ ಒಂಚೂರು ಹಾನಿ ಮಾಡದೆ 1 5 ಲಕ್ಷ ದೋಚಿದ್ರು ...
ಇಂಡಿಯನ್ ಓವರ್‌ಸಿಸ್ ಬ್ಯಾಂಕ್ ಬಳಿಯೇ ಎಟಿಎಂ ಕೇಂದ್ರ ಹಾಗೂ ಜಿಮ್ ಇದೆ. ಮುಂಜಾನೆ ಜಿಮ್‌ಗೆ ಬಂದ ಸ್ಥಳೀಯರು ಎಟಿಎಂ ಕೇಂದ್ರದಲ್ಲಿ ಎಟಿಎಂ ಯಂತ್ರ ಕಳುವಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ಪರಿಶೀಲಿಸಿದಾಗ ಖದೀಮರು ಎಟಿಯಂ ಯಂತ್ರ ಕದ್ದಿರುವುದು ಸ್ಪಷ್ಟವಾಗಿದೆ.
ಬ್ಯಾಂಕ್‌ನ ಪಕ್ಕದಲ್ಲೇ ಇದ್ದ ಈ ಎಟಿಎಂ ಭದ್ರತೆಗೆ ಯಾವುದೇ ಸಿಬ್ಬಂದಿ ನಿಯೋಜಿಸಿಲ್ಲ ಎನ್ನಲಾಗಿದೆ. ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.