ಗವಿಮಠ ರಥೋತ್ಸವಕ್ಕೆ ಚಾಲನೆ: ನನ್ನ ಜನ್ಮ ಸಾರ್ಥಕವಾಯಿತು, ಮಾಲತಿ ಹೊಳ್ಳ

By Kannadaprabha News  |  First Published Jan 13, 2020, 8:29 AM IST

ಗವಿಮಠ ಜಾತ್ರೆ ಭಾರತೀಯ ಸಂಸ್ಕೃತೀಯ ಪ್ರತೀಕ| ಮಠದ ದಾಸೋಹ ವ್ಯವಸ್ಥೆ ನೋಡಿ ಬೆರಗಾದ ಕ್ರೀಡಾಪಟು ಮಾಲತಿ ಹೊಳ್ಳ|ಲಕ್ಷ ಲಕ್ಷ ರೊಟ್ಟಿಗಳು ಜಾತ್ರಾಮಹೋತ್ಸವಕ್ಕೆ ಬಂದಿರುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಇಂಥ ಮತ್ತೊಂದು ಜಾತ್ರೆಯನ್ನು ನಾನು ನೋಡಿಯೇ ಇಲ್ಲ ಎಂದ ಮಾಲತಿ ಹೊಳ್ಳ|


ಕೊಪ್ಪಳ(ಜ.13): ಮಾಲತಿ ಹೊಳ್ಳ ಒಬ್ಬ ಮಹಿಳೆ, ಅಂಗವಿಕಲೆಯಾದ ನನಗೆ ರಥೋತ್ಸವಕ್ಕೆ ಚಾಲನೆ ನೀಡುವ ದೊಡ್ಡ ಅವಕಾಶ ನೀಡಲಾಗಿದೆ. ಇದರಿಂದ ನನ್ನ ಜನ್ಮ ಸಾರ್ಥಕವಾಯಿತು. ಇಂಥ ಅವಕಾಶ ಹಿಂದೆ ಬಂದಿಲ್ಲ, ಮುಂದೆ ಬರುವುದಿಲ್ಲ, ಇದುವೇ ಶ್ರೇಷ್ಠ ಅವಕಾಶವಾಗಿದ್ದು, ನಾನು ಪುನೀತಳಾಗಿದ್ದೇನೆ ಎಂದು ಖ್ಯಾತ ಕ್ರೀಡಾಪಟು ಡಾ. ಮಾಲತಿ ಹೊಳ್ಳ ಹೇಳಿದ್ದಾರೆ. 

"

Latest Videos

undefined

ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಇಂಥ ಜಾತ್ರೆಯನ್ನು ನಾನು ನೋಡಿಯೇ ಇಲ್ಲ. ಸಾಗರದಂತೆ ಜನಸ್ತೋಮ ಇಲ್ಲಿ ಸೇರಿದೆ. ಇಂಥ ಜಾತ್ರಾಮಹೋತ್ಸವಕ್ಕೆ ನಾನು ಚಾಲನೆ ನೀಡಿದ್ದು, ಬದುಕಿನ ಸಾರ್ಥಕತೆಯ ಕ್ಷಣಗಳು ಎಂದು ಸ್ಮರಿಸಿದರು. ಇಂಥ ಅವಕಾಶ ನೀಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ ಎಂದರು.

ದಕ್ಷಿಣ ಭಾರತದ ಕುಂಭಮೇಳ ಕೊಪ್ಪಳದ ಅಜ್ಜನ ಮಹಾರಥೋತ್ಸವ ನೋಡಲು ಎರಡು ಕಣ್ಣು ಸಾಲದು..!

ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ ಭಾರತೀಯ ಸಂಸ್ಕೃತಿಯ ಪ್ರತೀಕದಂತೆ ಇದೆ. ಇಡೀ ಭಾರತೀಯ ಸಂಸ್ಕೃತಿಯನ್ನು ಇಲ್ಲಿ ಕಾಣಬಹುದಾಗಿದೆ ಎಂದು ಹೇಳಿದ್ದಾರೆ. ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ಚಾಲನೆ ನೀಡಲು ಆಗಮಿಸಿದ್ದ ಅವರು ದಾಸೋಹದ ಸ್ಥಳಕ್ಕೆ ಭೇಟಿ ನೀಡಿ ದಾಸೋಹದ ಅಚ್ಚುಕಟ್ಟಾದ ವ್ಯವಸ್ಥೆ ನೋಡಿ ಭಾವಪರವಶರಾಗಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಜಕ್ಕೂ ಭಾರತದ ಸಂಸ್ಕೃತಿಯನ್ನು ಗವಿಮಠ ಜಾತ್ರೆಯಲ್ಲಿ ಕಣ್ಣಾರೆ ಕಂಡಿದ್ದೇನೆ. ಎಲ್ಲೋ ಇದ್ದ ನನ್ನನ್ನು ಆ ಭಗವಂತ ಇಲ್ಲಿಗೆ ಕರೆಸಿದ್ದಾನೆ. ಇದು ನನ್ನ ಜನ್ಮದ ಪುಣ್ಯವೇ ಸರಿ. ದೇಶದಲ್ಲಿ ಇರುವಷ್ಟು ಸಂಸ್ಕೃತಿ ಮತ್ತ್ಯಾವ ದೇಶದಲ್ಲೂ ಇಲ್ಲ. ಭಗವಂತನ ಬಗ್ಗೆ ನಮ್ಮಲ್ಲಿ ಇರುವ ನಂಬಿಕೆ ಪ್ರಪಂಚದಲ್ಲಿ ಮತ್ತೆಲ್ಲೂ ಇಲ್ಲ. ಮಹಾ ರಥೋತ್ಸವದ ಬಗ್ಗೆ ನನಗೆ ಸ್ವಲ್ಪ ಗೊತ್ತಿದೆ. ನಾನು ಎಲ್ಲೋ ಇದ್ದೆ. ಆದರೆ ಭಗವಂತ ನನ್ನನ್ನು ಈ ಮಠಕ್ಕೆ ಕರೆಸಿದ್ದಾನೆ. ಮಹಾರಥೋತ್ಸವದ ಅತಿಥಿಯಾಗಿದ್ದು ಇದು ನನ್ನ ಜನ್ಮದ ಪುಣ್ಯವೇ ಸರಿ. ಜಗತ್ತಿನ ಅದ್ಭುತ, ಸನ್ನಿವೇಶಗಳನ್ನು ಮಠದಲ್ಲಿ ಕಣ್ಣಾರೆ ನೋಡುತ್ತಿದ್ದೇನೆ ಎಂದರು.

ಮಹಾ ದಾಸೋಹ ಮಂಟಪದಲ್ಲಿ ನೋಡಿ ನನಗೆ ಆಶ್ಚರ್ಯ ಮೂಡಿಸಿತು. ನಾವೆಲ್ಲ 100-150  ಜನರಿಗೆ ಊಟ ಮಾಡಿಸಿ ಬಡಿಸಿದಂಥವರು. ಆದರೆ ಇಲ್ಲಿ ಲಕ್ಷಾಂತರ ಭಕ್ತ ಸಮೂಹ ಜಾತ್ರೋತ್ಸವಕ್ಕೆ ಬಂದು ಪ್ರಸಾದ ಸವಿಯುತ್ತಿದ್ದಾರೆ. ಎಷ್ಟೋ ಜನರು ಸ್ವಯಂಪ್ರೇರಿತವಾಗಿ ಇಲ್ಲಿ ಸೇವೆ ಮಾಡಲು ಬರುತ್ತಿದ್ದಾರೆ. ಅವರೇ ಸ್ವಯಂಪ್ರೇರಣೆಯಿಂದ ಬರುತ್ತಿರುವುದು ನಿಜಕ್ಕೂ ಸಂತಸ ತಂದಿದೆ. ಈ ದೇಹದಲ್ಲಿ ಹೊಟ್ಟೆಯೊಂದನ್ನು ಬಿಟ್ಟು ಯಾವ ದೇಹವೂ ತೃಪ್ತಿಯಾಗಿರುವುದಿಲ್ಲ. ಎಷ್ಟುನೋಡಿದರೂ ಎಷ್ಟುಕೇಳಿದರೂ ಕಡಿಮೆಯೇ, ಅದರಲ್ಲಿ ಕೊಪ್ಪಳದ ಗವಿಮಠದ ವಿಸ್ಮಯಗಳನ್ನು ನೋಡಿದರೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ಭಗವಂತ ಯಾರಿಗೂ ನೇರ ದರ್ಶನ ನೀಡುವುದಿಲ್ಲ. ಯಾರೋ ಒಬ್ಬ ಪುಣ್ಯಾತ್ಮನ ಮೂಲಕ ಸಮಾಜ ಉದ್ಧರಿಸುವ ಕೆಲಸ ಮಾಡುತ್ತಾನೆ. ಜನತೆಗೆ ಒಬ್ಬ ಪ್ರೇರಕಶಕ್ತಿಯಾಗಬೇಕು. ಗವಿಸಿದ್ಧೇಶ್ವರ ಸ್ವಾಮೀಜಿ ಪ್ರೇರಕಶಕ್ತಿಯಾಗಿದ್ದಾರೆ. ನನಗೆ ಇಲ್ಲಿಯ ವ್ಯವಸ್ಥೆ, ಜನರು ಹರಿದು ಬರುತ್ತಿರುವ ನೋಡಿ ಮೂಕವಿಸ್ಮಿತವಾಗಿದ್ದೇನೆ. ನನಗೆ ನೂರು ಪ್ರಶಸ್ತಿಗಳು ಬಂದಿದ್ದಕ್ಕಿಂತ ಮಿಗಿಲಾದ ಆನಂದ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಿದ್ದು ಅತೀವ ಸಂತೋಷವಾಗಿದೆ. ಲಕ್ಷ ಲಕ್ಷ ರೊಟ್ಟಿಗಳು ಜಾತ್ರಾಮಹೋತ್ಸವಕ್ಕೆ ಬಂದಿರುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಇಂಥ ಮತ್ತೊಂದು ಜಾತ್ರೆಯನ್ನು ನಾನು ನೋಡಿಯೇ ಇಲ್ಲ ಎಂದು ಹೇಳಿದರು.
 

click me!